ಗಾಯಕ ಝುಬೀನ್ ಗರ್ಗ್ ಗೆ ಸಿಂಗಾಪುರದಲ್ಲಿ ವಿಷಪ್ರಾಶನ: ಮ್ಯಾನೇಜರ್ ವಿರುದ್ಧ ಬಂಧಿತ ಬ್ಯಾಂಡ್‌ಮೇಟ್ ಗಂಭೀರ ಆರೋಪ
ಝುಬೀನ್ ಗರ್ಗ್ (Photo: PTI)
ಗುವಾಹಟಿ: ಝುಬೀನ್ ಗರ್ಗ್ ಅವರಿಗೆ ಸಿಂಗಾಪುರದಲ್ಲಿ ವಿಷಪ್ರಾಶನ ಮಾಡಲಾಗಿದೆ. ಇದು ಅವರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಝುಬೀನ್ ಗರ್ಗ್ ಅವರ ಬ್ಯಾಂಡ್‌ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಆರೋಪಿಸಿದ್ದಾರೆ.
ಝುಬೀನ್ ಗರ್ಗ್ ಮೃತಪಟ್ಟ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿತನಾಗಿರುವ ಶೇಖರ್ ಜ್ಯೋತಿ ಗೋಸ್ವಾಮಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಝುಬೀನ್ ಮ್ಯಾನೇಜರ್ ಸಿದ್ದಾರ್ಥ್ ಶರ್ಮಾ ಮತ್ತು ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ವಿರುದ್ಧ ವಿಷಪ್ರಾಶನದ ಆರೋಪ ಮಾಡಿದ್ದಾರೆ.
ಸಿಂಗಾಪುರದಲ್ಲಿ ಆಯೋಜನೆಗೊಂಡಿದ್ದ ಈಶಾನ್ಯ ಭಾರತ ಹಬ್ಬದಲ್ಲಿ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸುವುದಕ್ಕೂ ಹಿಂದಿನ ದಿನ ನೀರಿನಲ್ಲಿ ಮುಳುಗಿ 52 ವರ್ಷದ ಅಸ್ಸಾಮಿ ಗಾಯಕ ಝುಬೀನ್ ಗರ್ಗ್ ಮೃತಪಟ್ಟಿದ್ದರು. ಪ್ರಕರಣಕ್ಕೆ ಅಸ್ಸಾಂ ಪೊಲೀಸರು, ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕಿ ಅಮೃತಪರ್ವ ಮಹಾಂತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.
"ಸಿದ್ದಾರ್ಥ್ ಶರ್ಮಾ ಮತ್ತು ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ಅವರು ಝುಬೀನ್‌ಗೆ ವಿಷಪ್ರಾಶನ ಮಾಡಿದ್ದಾರೆ. ಅವರು ತಮ್ಮ ಕೃತ್ಯವನ್ನು ಮರೆಮಾಡಲು ಉದ್ದೇಶಪೂರ್ವಕವಾಗಿ ಸಿಂಗಾಪುರವನ್ನು ಆಯ್ಕೆ ಮಾಡಿದ್ದಾರೆ. ಝುಬೀನ್ ಗರ್ಗ್ ಉಸಿರಾಡಲು ಕಷ್ಟಪಡುತ್ತಿದ್ದರು. ಮುಳುಗುವ ಹಂತಕ್ಕೆ ತಲುಪಿದ್ದ ಕ್ಷಣಗಳಲ್ಲಿ ಸಿದ್ಧಾರ್ಥ್ ಶರ್ಮಾ ಅವನು ಹೋಗಲಿ ಎಂದು ಕೂಗುತ್ತಿರುವುದು ಕೇಳಿಸಿತು. ಝುಬೀನ್ ಗರ್ಗ್ ಒಬ್ಬ ಪರಿಣಿತ ಈಜುಗಾರರಾಗಿದ್ದರು. ಆದ್ದರಿಂದ ಅವರು ಮುಳುಗಿ ಮೃತಪಡಲು ಸಾಧ್ಯವಿಲ್ಲ" ಎಂದು ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹೇಳಿದ್ದಾರೆ.
ಸಿಐಡಿಯ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡ ಪ್ರಸ್ತುತ ಸಿಂಗಾಪುರದಲ್ಲಿ ಗರ್ಗ್ ಸಾವಿನ ಕುರಿತು ತನಿಖೆ ನಡೆಸುತ್ತಿದೆ.