ಝುಬೀನ್ ಗರ್ಗ್ ಸಾವಿನಲ್ಲಿ ಇದುವರೆಗೂ ಯಾವುದೇ ಅನುಮಾನಾಸ್ಪದ ಸಂಗತಿ ಪತ್ತೆಯಾಗಿಲ್ಲ: ಸಿಂಗಾಪುರ ಪೊಲೀಸರು
Photo credit: PTI
ಸಿಂಗಾಪುರ: ಖ್ಯಾತ ಗಾಯಕ ಝುಬೀನ್ ಗರ್ಗ್ ಸಾವಿನಲ್ಲಿ ಇದುವರೆಗೆ ಯಾವುದೇ ಅನುಮಾನಾಸ್ಪದ ಸಂಗತಿ ಪತ್ತೆಯಾಗಿಲ್ಲ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಂಗಾಪುರ ಪೊಲೀಸ್ ಪಡೆ ಹೇಳಿದೆ.
ಸೆಪ್ಟೆಂಬರ್ 19ರಂದು ಅಸ್ಸಾಮಿ ಗಾಯಕ ಝಬೀನ್ ಗರ್ಗ್ ಸಿಂಗಾಪುರದ ಸಮುದ್ರದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ಸಿಂಗಾಪೂರ ಪೊಲೀಸರು ತಿಳಿಸಿದ್ದಾರೆ.
ಸಿಂಗಾಪುರ ಕೊನೊರ್ಸ್ ಕಾಯ್ದೆ 2010ರ ಅಡಿ ಈ ಪ್ರಕರಣದ ತನಿಖೆಯನ್ನು ಸದ್ಯ ಸಿಂಗಾಪುರ ಪೊಲೀಸ್ ಪಡೆ ನಡೆಸುತ್ತಿದೆ ಎಂದು ಗುರುವಾರ ಸಿಂಗಾಪುರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿರುವ ಸಿಂಗಾಪುರ ಪೊಲೀಸರು, “ನಮ್ಮ ಇಲ್ಲಿಯವರೆಗಿನ ತನಿಖೆಯ ಪ್ರಕಾರ, ಝುಬೀನ್ ಗರ್ಗ್ ಸಾವಿನಲ್ಲಿ ಯಾವುದೇ ಸಂಶಯಾಸ್ಪದ ಸಂಗತಿ ಪತ್ತೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖೆ ಸಂಪೂರ್ಣಗೊಂಡ ನಂತರ, ತನಿಖೆಯಲ್ಲಿ ಪತ್ತೆಯಾದ ವಿವರಗಳನ್ನು ಸಿಂಗಾಪುರದಲ್ಲಿನ ರಾಜ್ಯ ಕೊರೊನೊರ್ ಗೆ ಸಲ್ಲಿಸಲಾಗುವುದು. ಅದು ಕೊರೊನರ್ ತನಿಖೆಯನ್ನು ನಡೆಸಲಿದೆ. ಸದ್ಯ ಈ ತನಿಖೆಯು 2026ರ ಜನವರಿ ಮತ್ತು ಫೆಬ್ರವರಿ ತಿಂಗಳಿಗೆ ನಿಗದಿಯಾಗಿದೆ.
ಗಾಯಕ ಝುಬೀನ್ ಗರ್ಗ್ ಅವರ ಸಾವಿನ ಪ್ರಕರಣ ಅಸ್ಸಾಂನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಈ ಕುರಿತು ತನಿಖೆ ನಡೆಸುವಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಈ ದೂರುಗಳನ್ನು ಆಧರಿಸಿ, ಅಸ್ಸಾಂ ಸರಕಾರ ತನಿಖೆಗೆ ಆದೇಶಿಸಿದೆ.