Photo: Canva

ತುಪ್ಪದ ಆರೋಗ್ಯ ಪ್ರಯೋಜನಗಳು ಮತ್ತು ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಹೇಗೆ ಎಂಬ ಬಗ್ಗೆ ಸೂರತ್ ನ ಬ್ಯಾಲೆನ್ಸ್ ಡಯಟ್ ಆ್ಯಂಡ್ ಲೈಫ್ಸ್ಟೈಲ್ ಮಾಡಿಫಿಕೇಶನ್ ಕ್ಲಿನಿಕ್ ನ ಸಂಸ್ಥಾಪಕ ನಿರ್ದೇಶಕಿ ಹಾಗೂ ರಿವರ್ಸ್ ಡಿಸೀಸ್ನ ಹಿರಿಯ ಆಹಾರ ತಜ್ಞೆ ಡಾ. ದಿವ್ಯಾ ಪಟೇಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ಆಹಾರ ತಜ್ಞೆ ಡಾ. ದಿವ್ಯಾ ಪಟೇಲ್ 

ಇತ್ತೀಚೆಗೆ ಹಾಲಿನ ಉತ್ಪನ್ನಗಳು ಮತ್ತು ಮುಖ್ಯವಾಗಿ ತುಪ್ಪದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆಹಾರ ಪ್ರಾಧಿಕಾರ ತುಪ್ಪ ಮಾರಾಟಗಾರರ ಪರವಾನಗಿಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ತುಪ್ಪದ ಬಗ್ಗೆ ಸತ್ಯ ತಿಳಿದುಕೊಳ್ಳುವ ಸಮಯ ಬಂದಿದೆ. ತುಪ್ಪವು ಅನೇಕ ಭಾರತೀಯ ಮನೆಗಳಲ್ಲಿ ಉತ್ತಮ ಸುವಾಸನೆ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ಜನಪ್ರಿಯವಾಗಿದೆ. ಅನ್ನದ ಮೇಲೂ ತುಪ್ಪ ಬೆರೆಸಿ ಊಟ ಮಾಡುವ ಅಭ್ಯಾಸ ನಮ್ಮಲ್ಲಿದೆ. ಆದರೆ ತುಪ್ಪದ ಹಂಬಲ ನಮಗೆ ಏಕೆ ಉಂಟಾಗುತ್ತದೆ? ತುಪ್ಪ ಸೇವಿಸಬೇಕು ಎನ್ನುವ ಪರಿಕಲ್ಪನೆ ಹೇಗೆ ಬೆಳೆದಿದೆ? ಹಾಲಿನ ಉತ್ಪನ್ನಗಳು ನಕಲಿಯೇ ಅಥವಾ ಅಸಲಿಯೇ ಎಂದು ಗುರುತಿಸುವುದು ಹೇಗೆ?

►ನಮಗೆ ತುಪ್ಪ ಸೇವನೆಯ ಹಂಬಲವೇಕೆ?

ಸೂರತ್ ನ ಬ್ಯಾಲೆನ್ಸ್ ಡಯಟ್ ಆ್ಯಂಡ್ ಲೈಫ್ಸ್ಟೈಲ್ ಮಾಡಿಫಿಕೇಶನ್ ಕ್ಲಿನಿಕ್ ನ ಸಂಸ್ಥಾಪಕ ನಿರ್ದೇಶಕಿ ಹಾಗೂ ರಿವರ್ಸ್ ಡಿಸೀಸ್ನ ಹಿರಿಯ ಆಹಾರ ತಜ್ಞೆ ಡಾ. ದಿವ್ಯಾ ಪಟೇಲ್ ಅವರ ಪ್ರಕಾರ, “ದೇಹದಲ್ಲಿ ಆರೋಗ್ಯಕರ ಕೊಬ್ಬುಗಳ ಕೊರತೆಯಾದಾಗ, ಪೋಷಕಾಂಶಗಳ ಕೊರತೆಯಾದಾಗ ಶಕ್ತಿಯ ಅಗತ್ಯ ಕಂಡುಬರುತ್ತದೆ. ನಮ್ಮ ಶರೀರ ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತದೆ. ಯಾವುದೇ ಕೊರತೆ ಉಂಟಾದಾಗ ಅದರ ಅಗತ್ಯವನ್ನು ನಮ್ಮಲ್ಲಿ ಹಂಬಲದ ಮೂಲಕ ಸೂಚಿಸುತ್ತದೆ. ಹೀಗಾಗಿ ನಿಮ್ಮ ದೇಹದಲ್ಲಿ ಆರೋಗ್ಯಕರ ಪೋಷಕಾಂಶಗಳ ಕೊರತೆ ಕಂಡುಬಂದಾಗ ತುಪ್ಪ ಸೇವಿಸುವ ಹಂಬಲ ಬರಬಹುದು. ಬಹಳ ಕಠಿಣ ಶಿಸ್ತಿನ ಆಹಾರ ಸೇವಿಸುವವರಲ್ಲಿ ಆರೋಗ್ಯಕರ ಕೊಬ್ಬುಗಳ ಕೊರತೆ ನೀಗಿಸಲು ತುಪ್ಪದ ಹಂಬಲ ಬರಬಹುದು. ಎರಡನೆಯದಾಗಿ, ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳ ಅಗತ್ಯ ಬರಬಹುದು. ವಿಟಮಿನ್ A, D, E ಮತ್ತು K ಯಂತಹ ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳ ಅಗತ್ಯವೂ ಇರಬಹುದು. ಇಂತಹ ವಿಟಮಿನ್ ಗಳ ಕೊರತೆ ಇದ್ದಾಗಲೂ ಮೆದುಳಿನಿಂದ ತುಪ್ಪ ಸೇವಿಸುವ ಹಂಬಲದ ಸಂಕೇತ ಬರಬಹುದು.”

ಅವರ ಪ್ರಕಾರ, ತುಪ್ಪ ಯಕೃತ್ತಿಗೆ ಹೋಗಿ ನೇರವಾಗಿ ಪರಿವರ್ತನೆಯಾಗುತ್ತದೆ. ಬಹಳ ಸುಸ್ತಾದಾಗ ಮತ್ತು ಶರೀರದಲ್ಲಿ ಶಕ್ತಿಯ ಸಂಪೂರ್ಣ ಕೊರತೆ ಇರುವಾಗಲೂ ತುಪ್ಪದ ಸೇವನೆಯ ಹಂಬಲ ಬರಬಹುದು. ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನವಿದ್ದಾಗಲೂ ಹೀಗಾಗಬಹುದು. ದೇಹದಲ್ಲಿ ಕೆಲವೊಮ್ಮೆ ಕಾರ್ಟಿಸೋಲ್ (cortisol) ಹಾರ್ಮೋನ್ ಹೆಚ್ಚಾಗುತ್ತದೆ. ಕಾರ್ಟಿಸೋಲ್ ಹಾರ್ಮೋನ್ಗೆ ಅಧಿಕ ಕೊಬ್ಬು ಇರುವ ಅಥವಾ ತೃಪ್ತಿಕರ ಆಹಾರ ಸಿಕ್ಕರೆ ಖುಷಿಯಾಗುತ್ತದೆ. ತುಪ್ಪದ ರುಚಿ ಅಥವಾ ಸ್ವಾದದಿಂದ ಸಂತೋಷದ ಹಾರ್ಮೋನ್‌ ಗಳು ಬಿಡುಗಡೆಯಾಗಬಹುದು ಮತ್ತು ಅದರಿಂದ ಶಾಂತಿಯ ಅನುಭವವಾಗಬಹುದು.

►ತುಪ್ಪ ಸೇವನೆಯ ಹಂಬಲ ಅಪರೂಪ

“ಗುಜರಾತ್‌ ನಲ್ಲಿ ನಾನು ವೃತ್ತಿನಿರತಳಾಗಿರುವಾಗ ಕಂಡುಕೊಂಡ ಪ್ರಕಾರ, ಬಹಳ ಅಪರೂಪದ ಪ್ರಕರಣಗಳಲ್ಲಿ ತುಪ್ಪ ತಿನ್ನುವ ಹಂಬಲದ ಸಮಸ್ಯೆ ಇರುವವರು ದೊರೆಯುತ್ತಾರೆ. ತುಪ್ಪದ ಹಂಬಲವೇ ಇರುವುದಿಲ್ಲ. ಹೆರಿಗೆಯ ನಂತರ ಇಲ್ಲಿ ತುಪ್ಪವನ್ನು ಸೇವಿಸಲು ಹೇಳಲಾಗುತ್ತದೆ. ವೈದ್ಯರು ಸೂಚಿಸುವುದಿಲ್ಲ. ಏಕೆಂದರೆ ಹೆಚ್ಚು ಚಟುವಟಿಕೆ ಇರದ ಕಾರಣ ತುಪ್ಪ ಸೇವಿಸಲು ನಾವು ಸಲಹೆ ನೀಡುವುದಿಲ್ಲ. ಆದರೆ ಸಂಸ್ಕೃತಿಯಲ್ಲಿ ತುಪ್ಪ ಸೇವಿಸಬೇಕು ಎನ್ನುವ ಸಲಹೆ ಬೇರೂರಿದೆ. ಕುಟುಂಬದವರು ಒತ್ತಾಯಿಸಿದರೂ ಮಹಿಳೆಯರು ಸೇವನೆಗೆ ಇಷ್ಟಪಡುವುದಿಲ್ಲ” ಎಂದು ಅವರು ಅಭಿಪ್ರಾಯಪಡುತ್ತಾರೆ.

ಇತ್ತೀಚೆಗೆ ನಕಲಿ ತುಪ್ಪವನ್ನೇ ನಾವು ಹೆಚ್ಚು ಸೇವಿಸುತ್ತಿರುವ ಬಗ್ಗೆ ಹೆಚ್ಚಿನ ವರದಿಗಳು ಬರುತ್ತಿವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇತ್ತೀಚೆಗೆ ಅನೇಕ ತುಪ್ಪ ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರ ಪರವಾನಗಿಗಳನ್ನು ರದ್ದು ಮಾಡಿದೆ. ಈ ನಿಟ್ಟಿನಲ್ಲಿ ವೈದ್ಯರು, “FSSAI ವರದಿಗಳ ಪ್ರಕಾರ ಮಾರುಕಟ್ಟೆಗಳಲ್ಲಿ ನಕಲಿ ತುಪ್ಪ ಮಾರಾಟವಾಗುತ್ತಿದೆ. ಕಲಬೆರಕೆ ತುಪ್ಪದ ವರದಿಗಳು ಬಂದಿವೆ. ನನ್ನ ಪ್ರಶ್ನೆಯೆಂದರೆ, ಹಾಲಿನ ಉತ್ಪಾದನೆಗಿಂತ ಹೆಚ್ಚು ತುಪ್ಪದ ಮಾರಾಟವಾಗುತ್ತಿದೆ. ಇವೆಲ್ಲವೂ ಎಲ್ಲಿಂದ ಬರುತ್ತವೆ ಎಂದು ಯೋಚಿಸಬೇಕಿದೆ” ಎನ್ನುತ್ತಾರೆ.

►ತುಪ್ಪ ಆರೋಗ್ಯಕರವೇ ಅಥವಾ ಅನಾರೋಗ್ಯಕರವೇ?

ವೈದ್ಯರ ಪ್ರಕಾರ, ತುಪ್ಪ ಮಾಂತ್ರಿಕ ಔಷಧಿಯೂ ಅಲ್ಲ, ವಿಷವೂ ಅಲ್ಲ! ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ತುಪ್ಪ ದೇಹಕ್ಕೆ ಬಹಳ ಆರೋಗ್ಯಕರವಾಗಿರುತ್ತದೆ. “ತುಪ್ಪದಲ್ಲಿ ವಿಟಮಿನ್ A, E ಮತ್ತು K ಇರುತ್ತವೆ. ಇವು ಕಣ್ಣು, ಚರ್ಮ ಮತ್ತು ರೋಗನಿರೋಧಕ ವ್ಯವಸ್ಥೆಗಳಿಗೆ ಉತ್ತಮ. ಜೀರ್ಣಾಂಗ ವ್ಯವಸ್ಥೆಗೂ ಸಹಾಯವಾಗುವ ಬ್ಯುಟಿರೇಟ್ (Butyrate) ಹೆಸರಿನ ಫ್ಯಾಟಿ ಆಸಿಡ್ ಇರುತ್ತದೆ. ಕರುಳಿನ ಊತ (intestine swelling) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಪ್ಪದ ಸ್ಮೋಕಿಂಗ್ ಪಾಯಿಂಟ್ ಎಣ್ಣೆ ಅಥವಾ ಬೆಣ್ಣೆಗಿಂತ ಹೆಚ್ಚಿರುತ್ತದೆ. ಹೆಚ್ಚಿನ ಜ್ವಾಲೆಯಲ್ಲಿ ತುಪ್ಪವನ್ನು ಬಳಸಿದಾಗ ಬೇಗನೇ ಹಾಳಾಗುವುದಿಲ್ಲ. ಅದರಲ್ಲಿ ಹೆಚ್ಚು ಹಾನಿಕಾರಕ ತತ್ವಗಳು ಇರುವುದಿಲ್ಲ. ತುಪ್ಪ ಲ್ಯಾಕ್ಟೋಸ್ ಮುಕ್ತವಾಗಿರುತ್ತದೆ. ತುಪ್ಪ ತಯಾರಿಸುವಾಗ ಹಾಲಿನ ಘನವಸ್ತುಗಳು ಪ್ರತ್ಯೇಕವಾಗುತ್ತವೆ. ಹೀಗಾಗಿ ಲ್ಯಾಕ್ಟೋಸ್ ಅಲರ್ಜಿ ಇರುವವರೂ ಬಳಸಬಹುದಾಗಿದೆ” ಎನ್ನುತ್ತಾರೆ ಡಾ. ದಿವ್ಯಾ ಪಟೇಲ್.

“ತುಪ್ಪದಲ್ಲಿ ಶೇ. 99ರಷ್ಟು ಕೊಬ್ಬು ಇರುತ್ತದೆ. ಅಧಿಕ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಹೀಗಾಗಿ ನೀವು ದಿನವಿಡೀ ಹೆಚ್ಚು ತುಪ್ಪ ಸೇವಿಸಿದರೆ ನಿಮ್ಮ ದೇಹದಲ್ಲಿ ಎಲ್ಡಿಎಲ್ (low-density lipoprotein) ಕೊಲೆಸ್ಟರಾಲ್ ಹೆಚ್ಚಾಗಬಹುದು. ಆದರೆ, ಮಿತಿಯಲ್ಲಿ ಸೇವಿಸಿದರೆ ಸಮಸ್ಯೆಯಾಗದು. 100 ಗ್ರಾಂ ತುಪ್ಪದಲ್ಲಿ 900 ಕ್ಯಾಲರಿ ಇರುತ್ತದೆ. ಹೀಗಾಗಿ ಹೆಚ್ಚು ಚಟುವಟಿಕೆ ಇಲ್ಲದೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ತುಪ್ಪದ ಸೇವನೆಯಿಂದ ಬೊಜ್ಜಿನ ಸಮಸ್ಯೆಯೂ ಬರಬಹುದು. ಶ್ರಮಿಕ ಕೆಲಸಗಳನ್ನು ಮಾಡುವವರಿಗೆ ತುಪ್ಪ ಒಳ್ಳೆಯದು. ಕುಳಿತು ಕೆಲಸ ಮಾಡುವವರು ಹೆಚ್ಚು ತುಪ್ಪ ಸೇವಿಸುವುದು ಹಾನಿಕರ. ಹೃದ್ರೋಗದ ಸಮಸ್ಯೆ ಇರುವವರು, ಬೊಜ್ಜು ಹೊಂದಿರುವವರಿಗೆ ಅತ್ಯಧಿಕ ತುಪ್ಪದ ಸೇವನೆ ಹೃದಯಾಘಾತದ ಆತಂಕವನ್ನು ಹೆಚ್ಚಿಸಬಹುದು.

►ಅಸಲಿ ಹಾಲನ್ನು ಗುರುತಿಸುವುದು ಹೇಗೆ?

ಇತ್ತೀಚೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ನಕಲಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮೂಲತಃ ಅಸಲಿ ಹಾಲನ್ನು ಗುರುತಿಸುವುದು ಹೇಗೆ? “ಇದರಲ್ಲಿ ಪ್ರಯೋಗಾಲಯದ ಪರೀಕ್ಷೆಯನ್ನು ಹೊರತುಪಡಿಸಿ, ಮನೆಯಲ್ಲೇ ಹಾಲನ್ನು ಪರೀಕ್ಷಿಸುವುದು ಹೇಗೆ ಎಂಬುದನ್ನು ಹೇಳಬಹುದು. ಮೊದಲನೆಯದಾಗಿ, ಸಿಂಥೆಟಿಕ್ ಹಾಲನ್ನು ಮನೆಯಲ್ಲಿಯೇ ಗುರುತಿಸಬಹುದು. ಬೆರಳುಗಳ ನಡುವೆ ಉಜ್ಜಿ ಪರೀಕ್ಷಿಸಿದಾಗ ಜಾರಿದ ಅನುಭವವಾಗುವುದಿಲ್ಲ. ಆದರೆ, ಸಿಂಥೆಟಿಕ್ ಹಾಲನ್ನು ಬೆರಳುಗಳಿಂದ ಉಜ್ಜಿದಾಗ ಸಾಬೂನಿನ ರೀತಿಯ ಜಿಡ್ಡಾದ ಅನುಭವವಾಗುತ್ತದೆ. ವಾಸನೆ ನೋಡಿದಾಗ ಅಸಲಿ ಹಾಲಿನಲ್ಲಿ ಹಗುರವಾದ ಸಹಜ ಪರಿಮಳವಿರುತ್ತದೆ. ನಕಲಿ ಹಾಲಿನಲ್ಲಿ ಸಾಬೂನಿನ ರೀತಿಯ ಅಥವಾ ರಾಸಾಯನಿಕದ ವಾಸನೆ ಬರಬಹುದು. ಹಾಲನ್ನು ಕುದಿಸಿದಾಗ ಅಸಲಿ ಹಾಲು ಬಿಳಿಯಾಗಿಯೇ ಇರುತ್ತದೆ. ಆದರೆ, ನಕಲಿ ಹಾಲು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಬಹುದು. ರುಚಿಯಲ್ಲೂ ಅಸಲಿ ಹಾಲು ಸಿಹಿ, ಹಗುರವಾಗಿ ಕೆನೆಭರಿತವಾಗಿರುತ್ತದೆ. ನಕಲಿ ಹಾಲಿನಲ್ಲಿ ವಿಚಿತ್ರ ರುಚಿ ಇರುತ್ತದೆ” ಎನ್ನುತ್ತಾರೆ ಡಾ. ದಿವ್ಯಾ ಪಟೇಲ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor