ಕೋಲು ಕೊಟ್ಟು ಬಡಿಸಿಕೊಳ್ಳುತ್ತಿರುವ ಕಾಂಗ್ರೆಸ್!
ವಿಧಾನಸಭೆಯಲ್ಲಿ 15ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವುಗಳಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಒಂದರಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮಾಜದ ಸದಸ್ಯರು ಚುನಾಯಿತರಾಗಿದ್ದಾರೆ. ವಿಧಾನ ಪರಿಷತ್ತಿನಲ್ಲೂ ಎಸ್‌ಟಿ ಸಮಾಜದ ಸದಸ್ಯರು ಇದ್ದಾರೆ. ಹೀಗಿದ್ದಾಗ, ‘ನಾಗೇಂದ್ರ ಅವರನ್ನೇ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಏಕೆ?’ ಎಂಬುದು ಮಾತ್ರ ನಿಗೂಢ.
ಅದೇ ಕೂಗಾಟ; ಅದೇ ಗದ್ದಲ. ಒಂದಿಲ್ಲೊಂದು ಕಾರಣಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತಿಕ್ಕಾಟ. ವಾಗ್ಯುದ್ಧ. ಸಂಘರ್ಷ. ಬೇಡಿಕೆಗೆ ಮಣಿಯದ ಆಡಳಿತ ಪಕ್ಷದ ಧೋರಣೆ ಖಂಡಿಸಿ ವಿರೋಧ ಪಕ್ಷಗಳ ಪ್ರತಿಭಟನೆ, ಧರಣಿ, ಸಭಾತ್ಯಾಗ. ನಡೆಯದ ಕಲಾಪ. ‘ಪ್ರಜಾಪ್ರಭುತ್ವದ ದೇಗುಲ’ (ಟೆಂಪಲ್ ಆಫ್ ಡೆಮಾಕ್ರಸಿ) ಎಂದು ಕರೆಯುವ ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಈಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯಗಳಿವು. ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ; ಚಳಿಗಾಲದ ಅಧಿವೇಶನ ಯಾವುದೇ ಇರಲಿ, ಗಂಭೀರ ಚರ್ಚೆಗಳು ನಡೆಯುವುದೇ ಅಪರೂಪ. ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಪ್ರತೀ ಸಲ ಸಂಸತ್ ಅಥವಾ ಶಾಸನ ಸಭೆ ಸೇರಿದಾಗ ಇಲ್ಲವೇ ಮುಗಿದಾಗ, ‘ಗುಣಮಟ್ಟದ ಗಂಭೀರ ಚರ್ಚೆಗಳು ನಡೆಯಬೇಕು’ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಆದರೆ, ಈ ಅಭಿಪ್ರಾಯಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಗುವುದಿಲ್ಲ. ಈ ಮಾತು ಬಿಜೆಪಿ, ಕಾಂಗ್ರೆಸ್‌ಗಷ್ಟೇ ಅಲ್ಲ, ಎಲ್ಲ ಪಕ್ಷಗಳಿಗೂ ಅನ್ವಯ.
ಕಳೆದ ವಾರ ಮುಗಿದ ಸಂಸತ್ ಅಧಿವೇಶನದಲ್ಲಿ ಚರ್ಚೆಗಳೇ ನಡೆಯಲಿಲ್ಲ. ಅನೇಕ ಮಹತ್ವದ ಮಸೂದೆಗಳು ಸುಲಭವಾಗಿ ಒಪ್ಪಿಗೆ ಪಡೆದವು. ‘ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ’ ಹಗರಣದಲ್ಲಿ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆ, ಅದಕ್ಕಾಗಿ ಪ್ರತಿಭಟನೆಗಿಳಿದ ವಿದ್ಯಾರ್ಥಿ, ಯುವಕರ ಮೇಲೆ ಲಾಠಿ, ಪೆಲೆಟ್ ಗನ್ ಬಳಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಯಾಚಿಸಬೇಕೆಂಬ ಗದ್ದಲದಲ್ಲೇ ಬಹುಪಾಲು ಕಲಾಪ ಕೊಚ್ಚಿಹೋಯಿತು.
ಒತ್ತಡಕ್ಕೆ ಮಣಿದು, ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ಕೊಟ್ಟರು. ಆದರೆ, ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಕುರಿತು ಉತ್ತರ ಹೇಳಬೇಕಾದ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಬರಲಿಲ್ಲ. ಕಡೇ ದಿನ ಕಾಣಿಸಿಕೊಂಡರು. ಬಹುಶಃ ಸರಕಾರದ ಒಂದು ಹಾಗೂ ಎರಡನೇ ಸ್ಥಾನದಲ್ಲಿರುವ ನಾಯಕರಿಬ್ಬರು ಕಲಾಪಕ್ಕೆ ಗೈರಾಗಿದ್ದು ದೇಶದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಸಲ ಇರಬಹುದೇನೊ!
ಮಾಜಿ ಸಂಸದ, ಹಿರಿಯ ರಾಜಕಾರಣಿ ಡಾ. ಕರಣ್ ಸಿಂಗ್, ಖಾಸಗಿ ಇಂಗ್ಲಿಷ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ‘ಸರಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಗದ್ದಲಕ್ಕೆ ಸಂಸತ್ ಕಲಾಪ ಬಲಿ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ‘ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಬೆಳಗ್ಗೆ 11 ಗಂಟೆಗೆ ಸಂಸತ್ ಕಲಾಪ ಆರಂಭವಾಗುವ ಸಮಯಕ್ಕೆ ಸದನದಲ್ಲಿ ಹಾಜರಿರುತ್ತಿದ್ದರು’ ಎಂದು ನೆನಪು ಮಾಡಿಕೊಂಡಿದ್ದಾರೆ. ಈಗಿನ ರಾಜಕಾರಣಿಗಳಿಗೆ ಸಂಸತ್ ಹಾಗೂ ಶಾಸನಸಭೆ ಕಲಾಪಗಳು ಮಹತ್ವದ್ದೆಂದು ಕಾಣುತ್ತಿಲ್ಲ. ಅಧಿವೇಶನದ ವೇಳೆ ವಿದೇಶ ಸುತ್ತಲು ಹೋಗುವುದು ಅಥವಾ ಊರಿನಲ್ಲಿದ್ದರೂ ಸದನದ ಕಡೆ ತಲೆ ಹಾಕದಿರುವುದು ಮಾಮೂಲಾಗಿದೆ. ಕಲಾಪಕ್ಕಿಂತ ಘನಂದಾರಿ ಕೆಲಸ ಏನಿರುವುದೋ?
ಪ್ರಧಾನ್, ಆರೋಪ ಬಂದ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೆ ‘ಕಾಕ್ರೋಚ್ ಜನತಾ ಪಾರ್ಟಿ’ಯ (ಸಿಜೆಪಿ) ಸದಸ್ಯರು ಬೀದಿಗೆ ಬರುತ್ತಿರಲಿಲ್ಲ. ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿರಲಿಲ್ಲ. ಅವರಿಗೆ ಆ ಮನಸ್ಸು ಹೇಗೆ ಬರಬೇಕು?, ಜೆನ್ ಝಿಗಳು ಬೀದಿಗೆ ಬರದಿದ್ದರೆ ಅವರು ರಾಜೀನಾಮೆ ಕೊಡುತ್ತಿರಲಿಲ್ಲ. ವಿರೋಧ ಪಕ್ಷ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಎನ್‌ಡಿಎ ಸರಕಾರ ಬಗ್ಗುತ್ತಿರಲಿಲ್ಲ. ವಾಸ್ತವವಾಗಿ ಸರಕಾರ ಹೆದರಿದ್ದೇ ಈ ಪ್ರತಿಭಟನೆಗೆ. ಇದು ಎಷ್ಟು ದೊಡ್ಡ ಪರಿಣಾಮ ಬೀರಿದೆಯೆಂದರೆ ಸರಕಾರ ಮತ್ತು ವಿರೋಧ ಪಕ್ಷಗಳಿಗೆ ಅದನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಈ ತಿಂಗಳ 13ರಿಂದ ಆರಂಭವಾಗಿರುವ ರಾಜ್ಯ ವಿಧಾನಮಂಡಲದ ಅಧಿವೇಶನ ಇಂತಹದೇ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿದೆ. ‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ’ದಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು ಡಿ.ಕೆ. ಶಿವಕುಮಾರ್ ಅವರ ಸಂಪುಟಕ್ಕೆ ತೆಗೆದುಕೊಂಡಿದ್ದನ್ನು ವಿರೋಧಿಸಿ ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ‘ಸಚಿವರು ರಾಜೀನಾಮೆ ಕೊಡುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ. ವಿಧಾನಸಭೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಭಾಪತಿ, ಉಪ ಸಭಾಪತಿ ಆಯ್ಕೆ, ಹನೂರು ತಾಲೂಕಿನ ಅರಣ್ಯದಲ್ಲಿ ನಡೆದ ಎನ್‌ಕೌಂಟರ್ ಕುರಿತ ಚರ್ಚೆ ಬಿಟ್ಟರೆ ಮತ್ತೇನೂ ಉಭಯ ಸದನಗಳಲ್ಲಿ ನಡೆದಿಲ್ಲ.
ರಾಜ್ಯದ ಹಲವೆಡೆ ಬರಗಾಲವಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಭುಗಿಲೆದ್ದಿದೆ. ಬಿಡದಿ ಟೌನ್‌ಶಿಪ್ ಬಿಕ್ಕಟ್ಟಿದೆ. ನೈಸ್ ಯೋಜನೆ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಯಾವ ವಿಷಯಗಳೂ ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ಮುಖ್ಯವಾದಂತೆ ಕಾಣುತ್ತಿಲ್ಲ. ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷ ಮಾಡಿದಂತೆ, ವಿಧಾನ ಮಂಡಲದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡೆದುಕೊಳ್ಳುತ್ತಿವೆ.
ಒಂದು ದಿನದ ಸಂಸತ್ ಅಧಿವೇಶನಕ್ಕೆ ಸುಮಾರು 9ರಿಂದ 10 ಕೋಟಿ ರೂಪಾಯಿ ಖರ್ಚಾಗಲಿದೆ. ಇದನ್ನು ವಿಭಜಿಸಿದರೆ ನಿಮಿಷಕ್ಕೆ 2.5ಲಕ್ಷ ರೂ., ಗಂಟೆಗೆ 1.5 ಕೋಟಿ ರೂ. ಆಗಲಿದೆ. ವಿಧಾನ ಮಂಡಲ ಅಧಿವೇಶನ ಬೆಂಗಳೂರಲ್ಲಿ ನಡೆದರೆ ದಿನಕ್ಕೆ ಸುಮಾರು 1ಕೋಟಿ ರೂ. ವೆಚ್ಚವಾಗಲಿದೆ. ಬೆಳಗಾವಿಯಲ್ಲಿ ಸುಮಾರು 2.25 ಕೋಟಿ ರೂ. ವ್ಯಯಿಸಬೇಕು. ಜನರ ತೆರಿಗೆ ಹಣಕ್ಕೆ ಹೊಣೆ ಯಾರು? ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವ!!
ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವಸರಕ್ಕೆ ಬಿದ್ದಿದೆ. ಅವರು ಆರೋಪ ಮುಕ್ತರಾಗುವವರೆಗೆ ಕಾಯಬಹುದಿತ್ತು. ಅದು ಮಾಡಿದ ಸಣ್ಣ ಎಡವಟ್ಟಿನಿಂದ ಮುಜುಗರಕ್ಕೆ ಸಿಕ್ಕಿಕೊಂಡಿದೆ. ‘ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಿದೆ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ. ಯಾವುದೇ ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿಲ್ಲ. ಬಿಡದಿ ಟೌನ್‌ಶಿಪ್ ವಿಷಯದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ತಾಳಮೇಳವಿಲ್ಲ. ಹೊಂದಾಣಿಕೆ ಇಲ್ಲ. ರೈತರ ಹೋರಾಟವನ್ನು ಜೆಡಿಎಸ್ ಟೇಕಾಫ್ ಮಾಡಿದ್ದು ಬಿಜೆಪಿ ನಾಯಕರಿಗೆ ಇಷ್ಟವಿರಲಿಲ್ಲ’ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. ಒಟ್ಟಿನಲ್ಲಿ, ಮಕಾಡೆ ಮಲಗಿದ್ದ ಬಿಜೆಪಿ ಕೈಗೀಗ ಕೋಲು ಕೊಟ್ಟು ಕಾಂಗ್ರೆಸ್ ಹೊಡೆಸಿಕೊಳ್ಳುತ್ತಿದೆ. ನಾಗೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ವಿಷಯ ಮುಂದಿಟ್ಟುಕೊಂಡು ಬಿಜೆಪಿ ಹೋರಾಟ ಮಾಡುತ್ತಿದೆ.
ನಾಗೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರಿಗೂ ಇಷ್ಟವಿದ್ದಂತಿಲ್ಲ. ಹಲವರು ಖಾಸಗಿಯಾಗಿ ಈ ಕುರಿತು ಮಾತಾಡುತ್ತಾರೆ. ‘ಆರೋಪ ಮುಕ್ತರಾದ ಮೇಲೆ ಸಚಿವ ಸ್ಥಾನ ಕೊಡಬಹುದಿತ್ತು. ಹಾಗಾಗಿದ್ದರೆ ಪಕ್ಷಕ್ಕೂ ಗೌರವ ಇರುತ್ತಿತ್ತು. ವಾಲ್ಮೀಕಿ ನಾಯಕರೇ ಬೇಕೆಂದಿದ್ದರೆ ಬೇರೆ ಯಾರಿಗಾದರೂ ಕೊಡಬಹುದಿತ್ತು. ಈಗಾಗಲೇ ಸತೀಶ್ ಜಾರಕಿಹೊಳಿ, ರಘುಮೂರ್ತಿ ಇದ್ದಾರೆ ಇಬ್ಬರೇ ಸಾಕಾಗಿತ್ತು’ ಎಂದು ವಾದಿಸುವವರಿದ್ದಾರೆ.
ವಿಧಾನಸಭೆಯಲ್ಲಿ 15ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವುಗಳಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಒಂದರಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮಾಜದ ಸದಸ್ಯರು ಚುನಾಯಿತರಾಗಿದ್ದಾರೆ. ವಿಧಾನ ಪರಿಷತ್ತಿನಲ್ಲೂ ಎಸ್‌ಟಿ ಸಮಾಜದ ಸದಸ್ಯರು ಇದ್ದಾರೆ. ಹೀಗಿದ್ದಾಗ, ‘ನಾಗೇಂದ್ರ ಅವರನ್ನೇ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಏಕೆ?’ ಎಂಬುದು ಮಾತ್ರ ನಿಗೂಢ.
ಕಾಂಗ್ರೆಸ್ ಸರಕಾರಕ್ಕೆ ನಾಗೇಂದ್ರ ಅಷ್ಟೊಂದು ಅನಿವಾರ್ಯವೇ? ಅವರು ಇಲ್ಲದಿದ್ದರೆ ಸರಕಾರ ನಡೆಯುವುದಿಲ್ಲವೇ? ಅವರನ್ನು ಮರಳಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಏನಿತ್ತು? ಎಂದು ಕೇಳುವವರ ಸಂಖ್ಯೆ ಕಡಿಮೆಯಿಲ್ಲ. ಈ ಪ್ರಶ್ನೆಗಳಿಗೆ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ನಾಯಕರು ಉತ್ತರಿಸಬೇಕು. ಬೇಕಿದ್ದರೆ ಅವರಿಗೆ ಪಕ್ಷದೊಳಗೆ ದೊಡ್ಡ ಜವಾಬ್ದಾರಿ ಕೊಡಬಹುದಿತ್ತು. ಸಚಿವ ಸ್ಥಾನ ಕೊಟ್ಟು ಬಾಲ ಸುಟ್ಟ ಬೆಕ್ಕಿನಂತಾಗಿದೆ.
ಕಾಂಗ್ರೆಸ್ ಪಕ್ಷ ಹಾಗೂ ಸರಕಾರ 2023ರ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಬಳಿಕ ಬರೀ ಬಿಕ್ಕಟ್ಟುಗಳನ್ನೇ ಎದುರಿಸುತ್ತಿದೆ. 2013ರಿಂದ 2018ರವರೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದರು. 2023ರ ಸಿದ್ದರಾಮಯ್ಯನವರ ಆಡಳಿತ ಬಿಗಿ ಕಳೆದುಕೊಂಡಿತ್ತು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇಲ್ಲದೇ ಇದ್ದುದು ಕಾರಣವಾಗಿತ್ತು. ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಸುತ್ತಲೇ ಸರಕಾರ ಗಿರಕಿ ಹೊಡೆಯಿತು. ನಾಯಕತ್ವ ಬದಲಾವಣೆ ಪ್ರಕ್ರಿಯೆ; ಸಂಪುಟ ವಿಸ್ತರಣೆ ಕಗ್ಗಂಟು; ಖಾತೆ ಹಂಚಿಕೆ ಕ್ಯಾತೆ ಇದರಲ್ಲೇ ಹೈಕಮಾಂಡ್ ಎರಡು ತಿಂಗಳು ಕಳೆಯಿತು. ಅಳೆದು, ತೂಗಿ ಮಾಡಿದ ಎರಡನೇ ಕಂತಿನ ಸಂಪುಟ ವಿಸ್ತರಣೆ ಯಾರಿಗೂ ಸಮಾಧಾನ ಕೊಟ್ಟಿಲ್ಲ. ಒಂದೆಡೆ, ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರೆ. ಇನ್ನೊಂದೆಡೆ, ಜಾರಕಿಹೊಳಿ ಅತೃಪ್ತರಾಗಿದ್ದಾರೆ. ಅಷ್ಟೇ ಏಕೆ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ತೃಪ್ತಿ ಆದಂತಿಲ್ಲ. ಸರಕಾರದಲ್ಲಿ, ಸಂಪುಟದಲ್ಲಿ ಹೊಸತನವಿಲ್ಲ. ಏಳೆಂಟು ಸಚಿವರನ್ನು ಬಿಟ್ಟರೆ ಉಳಿದವರು ಹಳಬರು.
ಕಳಂಕಿತರ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲವೂ ಸೂಕ್ಷ್ಮತೆ ಕಳೆದುಕೊಂಡಿವೆ. ಸಂವೇದನಾರಹಿತವಾಗಿ ವರ್ತಿಸುತ್ತಿವೆ. ಡಾ. ಮನಮೋಹನ್‌ಸಿಂಗ್ ಸರಕಾರದ 10 ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಬೇರೆ ಬೇರೆ ಹಗರಣಗಳಲ್ಲಿ ಅನೇಕ ಸಚಿವರು ರಾಜೀನಾಮೆ ನೀಡಿದ್ದರು. ಆದರೆ, 2014ರ ಬಳಿಕ ಹಲವು ಆರೋಪ ಬಂದರೂ ಎನ್‌ಡಿಎ ಸರಕಾರದ ಸಚಿವರು ರಾಜೀನಾಮೆ ಕೊಡಲಿಲ್ಲ. ಇದು ರಾಜಕಾರಣ ಅಪಮೌಲ್ಯಗೊಳ್ಳುತ್ತಿರುವ ಸಂಕೇತ.
ಒಟ್ಟಾರೆ ಸಚಿವ ನಾಗೇಂದ್ರ ಅವರ ವಿಷಯ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.