×
Ad

ದಿಲ್ಲಿಯ ಆಗಸ ರಕ್ಷಣೆಗೆ ಬಂದ ದೇಸಿ ಎಸ್-400

Update: 2025-12-14 12:42 IST

ಪ್ರಾಜೆಕ್ಟ್ ಕುಶವನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ.

ಭಾರತ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್‌ಆರ್‌ಸಿ) ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ವೇಗವಾಗಿ ಚಲಿಸುವ ವೈಮಾನಿಕ ಆಯುಧಗಳಿಂದ ರಕ್ಷಿಸುವ ಸಲುವಾಗಿ ದೇಶೀಯವಾಗಿ ನಿರ್ಮಿಸಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಸಜ್ಜಾಗುತ್ತಿದೆ. ಇದು ರಾಜಧಾನಿಯ ರಕ್ಷಣೆಯ ದೃಷ್ಟಿಯಿಂದ ಭಾರತದ ಮಹತ್ವದ ಹೆಜ್ಜೆಯಾಗಬಹುದು.

ರಕ್ಷಣಾ ವಲಯದ ಹಿರಿಯ ಮೂಲಗಳ ಪ್ರಕಾರ, ನೂತನವಾಗಿ ಅಭಿವೃದ್ಧಿಪಡಿಸಿರುವ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ಹಲವು ಪದರಗಳ ರಕ್ಷಣೆಯನ್ನು ಒದಗಿಸಲಿದೆ. ಇದು ಭಾರತದ ಸ್ವಂತ ನಿರ್ಮಾಣದ ಕ್ವಿಕ್ ರಿಯಾಕ್ಷನ್ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು ಮತ್ತು ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್‌ಗಳು ಮತ್ತು ಇತರ ಬೆಂಬಲ ನೀಡುವ ವ್ಯವಸ್ಥೆಗಳನ್ನು ಒಳಗೊಳ್ಳಲಿದೆ. ಇವೆಲ್ಲವೂ ಜೊತೆಯಾಗಿ ಕಾರ್ಯಾಚರಿಸಿ, ದಿಲ್ಲಿ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಡೆಲ್ಲಿ ಎನ್‌ಸಿಆರ್) ಅನ್ನು ಯಾವುದೇ ರೀತಿಯ ವೈಮಾನಿಕ ಅಪಾಯಗಳಿಂದ ರಕ್ಷಿಸಲಿವೆ.

ಈ ವರ್ಷದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಭಾರತದ ರಾಜಧಾನಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಇಂತಹ ಗಂಭೀರ ಸಮಯದಲ್ಲಿ ರಕ್ಷಣಾ ಸಚಿವಾಲಯ ಈ ಮಹತ್ವದ ಯೋಜನೆಯನ್ನು ಮುಂದುವರಿಸುತ್ತಿರುವುದು ಗಮನಾರ್ಹ ವಿಚಾರ.

ಭಾರತ ತನ್ನ ರಾಜಧಾನಿಯ ರಕ್ಷಣೆಗೆ ದೇಶೀಯ ನಿರ್ಮಾಣದ ಆಯುಧ ವ್ಯವಸ್ಥೆಯನ್ನು ಅಳವಡಿಸಲು ಯೋಜನೆ ರೂಪಿಸಿರುವುದು ಭಾರತದ ಸ್ವಂತ ರಕ್ಷಣಾ ತಂತ್ರಜ್ಞಾನಕ್ಕೆ ಭಾರೀ ಉತ್ತೇಜನವನ್ನೇ ನೀಡಿದೆ. ಗಮನಾರ್ಹ ವಿಚಾರವೆಂದರೆ, ಇದಕ್ಕೂ ಮುನ್ನ ಭಾರತ ತನ್ನ ರಾಜ ಧಾನಿಯ ರಕ್ಷಣಾ ಉದ್ದೇಶಕ್ಕಾಗಿ ಅಮೆರಿಕ ನಿರ್ಮಿತ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್-2 (ಎನ್‌ಎಎಸ್‌ಎಎಂಎಸ್-2) ಬಳಸುವ ಉದ್ದೇಶ ಹೊಂದಿತ್ತು.

ಉಭಯ ದೇಶಗಳು ಈ ಅಮೆರಿಕನ್ ವ್ಯವಸ್ಥೆಯನ್ನು ಖರೀದಿಸುವ ಕುರಿತು ಮಾತುಕತೆಯನ್ನೂ ಆರಂಭಿಸಿದ್ದವು. ವಾಶಿಂಗ್ಟನ್ ಡಿಸಿ ಮತ್ತು ಶ್ವೇತ ಭವನದ ರಕ್ಷಣೆಗೂ ಇದೇ ಅಮೆರಿಕನ್ ಆಯುಧ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಮೂಲಗಳ ಪ್ರಕಾರ, ಅಮೆರಿಕನ್ನರು ಈ ಆಯುಧ ವ್ಯವಸ್ಥೆಗೆ ಅತಿಯಾದ ಬೆಲೆ ಕೇಳುತ್ತಿದ್ದುದರಿಂದ ಭಾರತ ಈ ಒಪ್ಪಂದವನ್ನು ಜಾರಿಗೊಳಿಸುವ ಪ್ರಯತ್ನವನ್ನೇ ಕೈ ಬಿಟ್ಟಿತು.

ಇನ್ನು ಮುಂದೆ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ದಿಲ್ಲಿ ಪ್ರದೇಶದ ಪ್ರಮುಖ ಸ್ಥಳಗಳು ಮತ್ತು ಕಟ್ಟಡಗಳನ್ನು ರಕ್ಷಿಸಲಿದೆ. ಈ ಜವಾಬ್ದಾರಿಯನ್ನು ಭಾರತೀಯ ವಾಯು ಸೇನೆ ನಿರ್ವಹಿಸಲಿದೆ.

ಈ ಸಂಕೀರ್ಣ ವಾಯು ರಕ್ಷಣಾ ವ್ಯವಸ್ಥೆಯ ನಿರ್ಮಾಣಕ್ಕೆ ಬೇಕಾದ ನೆಟ್‌ವರ್ಕಿಂಗ್ ವ್ಯವಸ್ಥೆ ಮತ್ತು ಕಮಾಂಡ್ ಆಂಡ್ ಕಂಟ್ರೋಲ್ ವ್ಯವಸ್ಥೆಗಳನ್ನು ನಿರ್ಮಿಸುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇತರ ಉತ್ಪಾದನಾ ಸಂಸ್ಥೆಗಳೊಡನೆ ಕೈ ಜೋಡಿಸಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ಹೇಳಿವೆ.

ಡಿಆರ್‌ಡಿಒ ಈಗಾಗಲೇ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್‌ಎಎಂ) ಮತ್ತು ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಂಆರ್ - ಎಸ್‌ಎಎಂ) ಸೇರಿದಂತೆ ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಡಿಆರ್‌ಡಿಒ ಈಗ ‘ಪ್ರಾಜೆಕ್ಟ್ ಕುಶ’ ಎಂಬ ಯೋಜನೆಯಡಿಯಲ್ಲಿ ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಲ್‌ಆರ್ - ಎಸ್‌ಎಎಂ) ಕ್ಷಿಪಣಿಯನ್ನೂ ಅಭಿವೃದ್ಧಿ ಪಡಿಸುತ್ತಿದೆ.

ಭಾರತ ಇನ್ನೂ ಸ್ವೀಕರಿಸಲು ಬಾಕಿಯಾಗಿರುವ ಎಸ್-400 ಸುದರ್ಶನ ವಾಯು ರಕ್ಷಣಾ ವ್ಯವಸ್ಥೆಯ ಎರಡು ಸ್ಕ್ವಾಡ್ರನ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇದೇ ವೇಳೆ, ರಶ್ಯ ಇನ್ನಷ್ಟು ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಒದಗಿಸಲು ಮುಂದೆ ಬಂದಿದ್ದು, ಭಾರತ ಈ ಒಪ್ಪಂದದ ಕುರಿತು ಅಧ್ಯಯನ ನಡೆಸುತ್ತಿದೆ. ಇದರೊಡನೆ, ಭಾರತ ನೂತನ ಎಸ್-500 ವ್ಯವಸ್ಥೆಯನ್ನು ಖರೀದಿಸುವ ಕುರಿತೂ ಆಲೋಚಿಸುವ ಸಾಧ್ಯತೆಗಳಿವೆ.

ಕುಶದ ಬತ್ತಳಿಕೆಯಲ್ಲೇನಿದೆ?

► ಈ ವ್ಯವಸ್ಥೆ ಬಹು ಹಂತಗಳ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಹೊಂದಿದೆ.

ಎಂ1 ಇಂಟರ್‌ಸೆಪ್ಟರ್: 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಪಾಯಗಳನ್ನು ನಾಶಪಡಿಸುತ್ತದೆ.

ಎಂ2 ಇಂಟರ್‌ಸೆಪ್ಟರ್: 250 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುತ್ತದೆ.

ಎಂ3 ಇಂಟರ್‌ಸೆಪ್ಟರ್: 350ರಿಂದ 400 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಾಶಪಡಿಸಬಲ್ಲದು.

► ಇದು ಆಧುನಿಕ ದೀರ್ಘ ವ್ಯಾಪ್ತಿಯ ರೇಡಾರ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಬಹಳಷ್ಟು ಗುರಿಗಳನ್ನು ಗುರುತಿಸಿ, ಹಿಂಬಾಲಿಸಬಲ್ಲದು.

► ಪ್ರಾಜೆಕ್ಟ್ ಕುಶ ಭಾರತೀಯ ವಾಯುಪಡೆಯ ಇಂಟಿಗ್ರೇಟೆಡ್ ಏರ್ ಕಮಾಂಡ್ ಆಂಡ್ ಕಂಟ್ರೋಲ್ ಸಿಸ್ಟಮ್‌ನ (ಐಎಸಿಸಿಎಸ್) ಭಾಗವಾಗಿದೆ.

ಪ್ರಾಜೆಕ್ಟ್ ಕುಶಕ್ಕೆ 2022ರ ಮೇ ತಿಂಗಳಲ್ಲಿ ನಡೆದ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.

ಪ್ರಾಜೆಕ್ಟ್ ಕುಶ ಬರಾಕ್ - 8 ವ್ಯವಸ್ಥೆ (80 ಕಿಲೋಮೀಟರ್‌ವ್ಯಾಪ್ತಿಯ ತನಕ ರಕ್ಷಣೆ ಒದಗಿಸುತ್ತದೆ) ಮತ್ತು ಎಸ್-400ರಂತಹ ದೀರ್ಘ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳ ನಡುವಿನ ಅಂತರವನ್ನು ತುಂಬಿ, ಆ ಮೂಲಕ ಭಾರತಕ್ಕೆ ವಿದೇಶೀ ವಾಯು ರಕ್ಷಣಾ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನೆರವಾಗಲಿದೆ.

 

ಪ್ರಾಜೆಕ್ಟ್ ಕುಶ

ಕುಶ ವಾಯು ರಕ್ಷಣಾ ವ್ಯವಸ್ಥೆ ಅಥವಾ ಪ್ರಾಜೆಕ್ಟ್ ಕುಶ ಎನ್ನುವುದು ಸ್ವಂತವಾಗಿ ದೀರ್ಘ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ (ಎಲ್‌ಆರ್-ಎಸ್‌ಎಎಂ) ವ್ಯವಸ್ಥೆಯನ್ನು ನಿರ್ಮಿಸುವ ಡಿಆರ್‌ಡಿಒದ ಯೋಜನೆಯಾಗಿದೆ. ಇದನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ.

ಎಸ್-400 ಎನ್ನುವುದು ರಶ್ಯನ್ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ಭಾರತ ಇದನ್ನು ಯಶಸ್ವಿಯಾಗಿ ಬಳಸಿತ್ತು.

ಪ್ರಾಜೆಕ್ಟ್ ಕುಶ ಯೋಜನೆಯಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಡಿಆರ್‌ಡಿಒ ಜೊತೆ ಪ್ರಮುಖ ಅಭಿವೃದ್ಧಿ ಸಹಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರದಿಗಳ ಪ್ರಕಾರ, ಪ್ರಾಜೆಕ್ಟ್ ಕುಶದಲ್ಲಿ ಕಾರ್ಯಾಚರಿಸಲು ಬಿಇಎಲ್‌ಗೆ ಗರಿಷ್ಠ 40,000 ಕೋಟಿ ರೂಪಾಯಿ ಮೌಲ್ಯದ ಆದೇಶ ಲಭಿಸುವ ನಿರೀಕ್ಷೆಗಳಿವೆ.

ಬಿಇಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮನೋಜ್ ಜೈನ್ ಅವರು ತಮ್ಮ ಸಂಸ್ಥೆ ಪ್ರಾಜೆಕ್ಟ್ ಕುಶದ ಸಾಕಷ್ಟು ಬಿಡಿಭಾಗಗಳನ್ನು ತಯಾರಿಸಲು, ಅದರಲ್ಲೂ ವಿವಿಧ ರಾಡಾರ್‌ಗಳು ಮತ್ತು ನಿಯಂತ್ರಣ ವ್ಯವಸ್ಥೆಗಳ ನಿರ್ಮಾಣಕ್ಕಾಗಿ ಡಿಆರ್‌ಡಿಒ ಜೊತೆ ಕಾರ್ಯಾಚರಿಸುತ್ತಿದೆ ಎಂದಿದ್ದಾರೆ.

ಮನೋಜ್ ಜೈನ್ ಅವರ ಪ್ರಕಾರ, ಬಿಇಎಲ್ ಈಗ ಅವಶ್ಯಕ ಉತ್ಪನ್ನಗಳ ನಿರ್ಮಾಣದತ್ತ ಗಮನ ಹರಿಸಿದ್ದು, ವ್ಯವಸ್ಥೆಯ ಸಿದ್ಧತೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸುವ ಉದ್ದೇಶ ಹೊಂದಿದೆ. ಇದರ ಮೂಲ ಮಾದರಿ ಮುಂದಿನ 12ರಿಂದ 18 ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಗಳಿದ್ದು, ಬಳಕೆದಾರರ ಪರೀಕ್ಷೆಗೆ ಇನ್ನೂ 12ರಿಂದ 36 ತಿಂಗಳುಗಳು ತಗಲಬಹುದು.

ವರದಿಗಳ ಪ್ರಕಾರ, ಬಿಇಎಲ್‌ಗೆ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್‌ಎಎಂ) ನಿರ್ಮಾಣಕ್ಕಾಗಿ ಇನ್ನೂ 30,000 ಕೋಟಿ ರೂಪಾಯಿಯ ಇನ್ನೊಂದು ಖರೀದಿ ಆದೇಶ ಲಭಿಸುವ ಸಾಧ್ಯತೆಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಗಿರೀಶ್ ಲಿಂಗಣ್ಣ

contributor

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Similar News