ಬೀದರ್ ಹೇಳಿದ ಉತ್ತರ: ಓದುಗರಿಲ್ಲ ಅನ್ನುವುದು ಸುಳ್ಳು!
ವೀರಕಪುತ್ರ ಶ್ರೀನಿವಾಸ್ ಬೆಂಗಳೂರು ಮತ್ತು ಬೀದರ್‌ನಲ್ಲಿ ಆಯೋಜಿಸಿದ ಪುಸ್ತಕ ಸಂತೆಯನ್ನು ನಾನು ಬರೀ ಹಬ್ಬ, ಜಾತ್ರೆ, ಸಾಹಿತ್ಯೋತ್ಸವ ಎಂದು ಕರೆಯುವುದಿಲ್ಲ. ಅದು ಕೇವಲ ಪ್ರದರ್ಶನವೂ ಅಲ್ಲ, ಜಾತ್ರೆಯೂ ಅಲ್ಲ. ಅದು ಪುಸ್ತಕದ ಒಳಗೂ ಹೊರಗೂ ನಡೆಯುವ ಒಂದು ಗಂಭೀರ ಬೌದ್ಧಿಕ ಚಳುವಳಿ. ಈ ಕಾಲದಲ್ಲಿ, ಓದುಗನನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಸಾಹಿತ್ಯವನ್ನು ಮತ್ತೆ ಸಮಾಜದೊಳಗೆ ತರುವ ಇಂತಹ ಪ್ರಯತ್ನಗಳು ವಿರಳ. ಇಲ್ಲಿ ಸೇರಿದ ಜನಸಂಖ್ಯೆ ನನಗೆ ಮುಖ್ಯವಲ್ಲ; ಎಷ್ಟು ಮನಸ್ಸುಗಳು ಚಿಂತನೆಗೆ ಒಳಗಾದವು, ಎಷ್ಟು ಪ್ರಶ್ನೆಗಳು ಹುಟ್ಟಿದವು ಎಂಬುದೇ ಮುಖ್ಯ.
ಸಾಮಾನ್ಯವಾಗಿ ನಮ್ಮಲ್ಲಿ ನಡೆಯುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳು ಇರುತ್ತವೆ, ಅವುಗಳನ್ನು ಬರೆದವರು ಇರುವುದಿಲ್ಲ. ಅಲ್ಲಿರುವ ಮಾರಾಟಗಾರರ ಮಾತುಗಳಲ್ಲಿ ಕಾಗದದ ದರ, ಮುದ್ರಣ ವೆಚ್ಚ, ರಿಯಾಯಿತಿ, ಲೆಕ್ಕಾಚಾರಗಳೇ ಹೆಚ್ಚಿರುತ್ತವೆ. ಪುಸ್ತಕದೊಳಗಿನ ಭಾಷೆ, ಆಲೋಚನೆ, ಕಾಲದ ನೋವು ಇವೆಲ್ಲವೂ ಅದೇ ಮೇಜಿನ ಮೇಲೆ ಮೌನವಾಗಿ ಮಲಗಿರುತ್ತವೆ.
ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನಗಳೂ ಹೀಗೆಯೇ. ಅಲ್ಲಿ ಪ್ರಬಂಧ ಮಂಡಿಸುವವರು ಇರುತ್ತಾರೆ, ಸಂಜೆ ಸನ್ಮಾನ ಪಡೆಯುವವರೂ ಇರುತ್ತಾರೆ. ಆದರೆ ಓದುಗರ ಮಧ್ಯೆ ಬೆರೆತು ಕುಳಿತುಕೊಳ್ಳುವ, ಬೇರೆಯವರ ಮಾತು ಕೇಳಲು ಕರೆಯದೇ ಬಂದ ಸಾಹಿತಿಗಳು, ತಮ್ಮ ಪುಸ್ತಕದ ಕುರಿತು ಪ್ರಶ್ನೆ ಕೇಳಿಸಿಕೊಳ್ಳಲು ಸಿದ್ಧರಾಗಿರುವ ಬರಹಗಾರರು ಕಾಣುವುದೇ ಇಲ್ಲ. ಸಾಹಿತ್ಯ ಅಲ್ಲಿ ವೇದಿಕೆಯ ಮೇಲಕ್ಕೆ ಏರುತ್ತದೆ, ಓದುಗ ಕೆಳಗೆ ಕುಳಿತುಕೊಳ್ಳುತ್ತಾನೆ. ಈ ಮೇಲ್ಮಟ್ಟ-ಕೆಳಮಟ್ಟದ ವ್ಯವಸ್ಥೆಯೇ ಸಾಹಿತ್ಯವನ್ನು ನಿಧಾನವಾಗಿ ಜನಜೀವನದಿಂದ ದೂರ ಸರಿಸುತ್ತದೆ.
ಇಂತಹ ಸ್ಥಾಪಿತ ರೂಢಿಗಳಿಗೆ ವಿರುದ್ಧವಾಗಿ ನಿಂತದ್ದೇ ಈ ವೀರಕಪುತ್ರನ ಪುಸ್ತಕ ಸಂತೆ! ಇಲ್ಲಿ ಓದುಗರ ಎದುರುಗಡೆ ನೇರವಾಗಿ ಬರಹಗಾರನೇ ಕೂತಿರುತ್ತಾನೆ. ಅವನದ್ದೇ ಪುಸ್ತಕ ಕೈಯಲ್ಲಿ ಹಿಡಿದು ಓದುಗ ಕೇಳುವ ಪ್ರಶ್ನೆಗೆ, ಅದೇ ಪುಸ್ತಕ ಬರೆದ ವ್ಯಕ್ತಿಯೇ ಉತ್ತರಿಸುವ ವ್ಯವಸ್ಥೆಯಿದೆ. ‘ಪ್ರೀತಿಯಿಂದ....’ ಎಂದು ಷರಾ ಬರೆಯುವ ಕವಿ ಕಾಗದದೆಡೆಯಿಂದ ಬೆರಳು ತೆಗೆದು ಪಟ್ಟಂತ ಒಂದು ಕವನವನ್ನು ವಾಚಿಸಬಲ್ಲರು, ಅಷ್ಟರ ಮಟ್ಟಿಗೆ ಕವಿ ಮತ್ತು ಓದುಗ ಅಲ್ಲಿ ಮುಖಾಮುಖಿಯಾಗಬಲ್ಲರು. ಅದೇ ಹಾಡು ಕತೆ ಹುಟ್ಟಿದ ಸಮಯದ ಬಗ್ಗೆ ಚರ್ಚಿಸಬಲ್ಲರು. ಈ ಸಮ್ಮುಖದಲ್ಲಿ ದೊಡ್ಡ ಬೌದ್ಧಿಕ ತಿರುವಿದೆ. ಇಲ್ಲಿ ಓದುಗನಿಗೆ ಕೇವಲ ಪುಸ್ತಕ ಮಾತ್ರ ಸಿಗುವುದಿಲ್ಲ; ಪುಸ್ತಕ ಹುಟ್ಟಿದ ಹಿನ್ನೆಲೆ, ಬರಹಗಾರನ ಒಳತಲ್ಲಣ, ಭಾಷೆಯ ಆಯ್ಕೆ, ಬರಹದೊಡನೆಯ ಮೌನಗಳು, ಹೊಸ ಹೊಳಹು, ಸಂವೇದನೆ-ಎಲ್ಲವೂ ಮಾತಿನೊಳಗೆ ಬರುತ್ತವೆ.
ಇನ್ನೊಂದು ಮಹತ್ವದ ಅಂಶವೆಂದರೆ, ಈ ಹಬ್ಬದಲ್ಲಿ ಸಾಹಿತ್ಯವನ್ನು ಕೇವಲ ‘ಓದುವ ವಸ್ತು’ವನ್ನಾಗಿ ಮಾತ್ರ ಸೀಮಿತಗೊಳಿಸಿಲ್ಲ. ಸಾಹಿತ್ಯದ ಸುತ್ತಲೂ ಇರುವ, ಅದು ಹುಟ್ಟುವ ಸಂಪೂರ್ಣ ಜಗತ್ತನ್ನೇ ಇಲ್ಲಿ ತೆರೆದಿಡಲಾಗಿದೆ. ಸಾಹಿತ್ಯ ಮತ್ತು ಸಮಾಜದ ಸಂಬಂಧ, ಸಾಹಿತ್ಯ ಮತ್ತು ಮಾಧ್ಯಮದ ಒತ್ತಡಗಳು, ಸಾಹಿತ್ಯ ಪ್ರಕಾರಗಳ ಬೆಳವಣಿಗೆ, ಪುಸ್ತಕ ಪ್ರಕಾಶನದ ರಾಜಕೀಯ, ಮಾರಾಟದ ಸಂಕಷ್ಟ, ಬಿಡುಗಡೆಗಳ ಅರ್ಥ, ಮುನ್ನುಡಿ-ಬೆನ್ನುಡಿಯ ಹಿಂದೆ ಕೆಲಸ ಮಾಡುವ ಶಕ್ತಿ ಸಮೀಕರಣಗಳು, ನವಮಾಧ್ಯಮದಲ್ಲಿ ಪುಸ್ತಕ ಮಾರಾಟ ಜಾಲ -ಇವೆಲ್ಲವೂ ಇಲ್ಲಿ ಚರ್ಚೆಗೆ ಬರುತ್ತವೆ. ಅಷ್ಟೇ ಅಲ್ಲ, ಪುಸ್ತಕದೊಳಗಿನ ಬೌದ್ಧಿಕತೆ ಜೊತೆಗೆ ಪುಸ್ತಕದ ಹೊರಗಿನ ಶ್ರಮವೂ ಓದುಗರಿಗೆ ಗೋಚರವಾಗುತ್ತದೆ.
ಒಂದು ಪುಸ್ತಕವು ಬರಹಗಾರನ ಕೈಯಲ್ಲಿ ಹುಟ್ಟಿ, ಸಂಪಾದಕನ ಕಣ್ಣಲ್ಲಿ ತಿದ್ದಿಸಿಕೊಂಡು, ವಿನ್ಯಾಸಕಾರನ ಮನಸ್ಸಿನಲ್ಲಿ ರೂಪ ಪಡೆದು, ಮುದ್ರಣಾಲಯದ ಯಂತ್ರದಲ್ಲಿ ಜನ್ಮ ಪಡೆದು, ಕೊನೆಗೆ ಓದುಗನ ಕೈ ಸೇರುವವರೆಗಿನ ಸಂಪೂರ್ಣ ಪಯಣ ಇಲ್ಲಿ ಮಾತಿನ ವಿಷಯವಾಗುತ್ತದೆ. ಇದರಿಂದ ಓದುಗನ ದೃಷ್ಟಿ ಬದಲಾಗುತ್ತದೆ. ಪುಸ್ತಕವನ್ನು ತಿಳಿಯುವವನು ಅದನ್ನು ಸಂರಕ್ಷಿಸುವುದನ್ನೂ ಕಲಿಯುತ್ತಾನೆ. ವಿನ್ಯಾಸವನ್ನು ಅರ್ಥಮಾಡಿಕೊಂಡವನು ಕಾಗದವನ್ನು ಕಾಪಾಡುತ್ತಾನೆ. ಮುದ್ರಣದ ಕಷ್ಟ ಅರಿತವನು ಯಾವತ್ತೂ ಪುಸ್ತಕವನ್ನು ನಿರ್ಲಕ್ಷ್ಯವಾಗಿ ಎಸೆದುಹೋಗುವುದಿಲ್ಲ.
ಇಂತಹ ಪುಸ್ತಕ ಸಂತೆಯಲ್ಲಿ ಓದುಗನಾಗಲೀ ಲೇಖಕನಾಗಲೀ ಎಂದಿಗೂ ಒಬ್ಬಂಟಿಯಾಗುವುದಿಲ್ಲ, ಓದುಗ ಮೌನವಾಗುವುದಿಲ್ಲ, ಸಾಹಿತ್ಯವೂ ದೇವಾಲಯವಾಗುವುದಿಲ್ಲ. ಅದು ನಿರಂತರ ಪ್ರಶ್ನೆ-ಉತ್ತರಗಳ ಮೂಲಕ ಜೀವಂತವಾಗುವ ಪ್ರಕ್ರಿಯೆಯಾಗುತ್ತದೆ.
ಆದ್ದರಿಂದ ವೀರಕಪುತ್ರ ಶ್ರೀನಿವಾಸ್ ಬೆಂಗಳೂರು ಮತ್ತು ಬೀದರ್‌ನಲ್ಲಿ ಆಯೋಜಿಸಿದ ಪುಸ್ತಕ ಸಂತೆಯನ್ನು ನಾನು ಬರೀ ಹಬ್ಬ, ಜಾತ್ರೆ, ಸಾಹಿತ್ಯೋತ್ಸವ ಎಂದು ಕರೆಯುವುದಿಲ್ಲ. ಅದು ಕೇವಲ ಪ್ರದರ್ಶನವೂ ಅಲ್ಲ, ಜಾತ್ರೆಯೂ ಅಲ್ಲ. ಅದು ಪುಸ್ತಕದ ಒಳಗೂ ಹೊರಗೂ ನಡೆಯುವ ಒಂದು ಗಂಭೀರ ಬೌದ್ಧಿಕ ಚಳವಳಿ. ಈ ಕಾಲದಲ್ಲಿ, ಓದುಗನನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಸಾಹಿತ್ಯವನ್ನು ಮತ್ತೆ ಸಮಾಜದೊಳಗೆ ತರುವ ಇಂತಹ ಪ್ರಯತ್ನಗಳು ವಿರಳ. ಇಲ್ಲಿ ಸೇರಿದ ಜನಸಂಖ್ಯೆ ನನಗೆ ಮುಖ್ಯವಲ್ಲ; ಎಷ್ಟು ಮನಸ್ಸುಗಳು ಚಿಂತನೆಗೆ ಒಳಗಾದವು, ಎಷ್ಟು ಪ್ರಶ್ನೆಗಳು ಹುಟ್ಟಿದವು ಎಂಬುದೇ ಮುಖ್ಯ.
ಬುದ್ಧಿ ಚಲಿಸಿದ ಜಾಗದಲ್ಲಿ ಸಾಹಿತ್ಯ ಚಲಿಸುತ್ತದೆ. ಸಾಹಿತ್ಯ ಉಳಿದ ಜಾಗದಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿರುತ್ತದೆ ಎಂದು ನಂಬಿದವ ನಾನು. ಬೆಂಗಳೂರಿನಲ್ಲಿ ಎರಡು ಬಾರಿ ಪುಸ್ತಕ ಸಂತೆ ಏರ್ಪಡಿಸಿ ಲಕ್ಷಾಂತರ ಓದುಗರಿಗೆ ತಲುಪಿದ ವೀರಕಪುತ್ರ ಅದನ್ನು ಮೊನ್ನೆ ಕರ್ನಾಟಕದ ತುತ್ತತುದಿಯಾದ ಬೀದರ್‌ವರೆಗೆ ವಿಸ್ತರಿಸಿದರು.
ಒಂದೇ ಒಂದು ಪುಸ್ತಕದ ಅಂಗಡಿಯಿಲ್ಲದ ಊರಲ್ಲಿ ಪುಸ್ತಕ ಮೇಳವನ್ನು ಆಯೋಜಿಸುವುದು ಎಷ್ಟು ಸಂಕಟದ ಕೆಲಸ ಅನ್ನುವುದು ಯಾರಿಗೂ ವಿವರಿಸಿ ಹೇಳಬೇಕಾದ ವಿಷಯವಲ್ಲ. ಇಂಥ ಹಿನ್ನೆಲೆಯಲ್ಲೇ ಪುಸ್ತಕ ಸಂತೆಯನ್ನು ಕನ್ನಡದ ತುತ್ತ ತುದಿಗೆ ವಿಸ್ತರಿಸುವುದೆಂದರೆ ಅದು ಯೋಜನೆಯ ವಿಷಯವಲ್ಲ, ಅದು ಅಪರೂಪದ ಬಂಡು ಧೈರ್ಯ. 2006ರಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಹೊರತುಪಡಿಸಿದರೆ, ನಂತರದ ವರ್ಷಗಳಲ್ಲಿ ಬೀದರ್‌ನಲ್ಲಿ ಕನ್ನಡದ ಓದುಗರಿಗೆ, ಸಾಹಿತ್ಯಕ್ಕೆ ಸಂಬಂಧಪಟ್ಟ ದೊಡ್ಡ ಕಾರ್ಯಕ್ರಮಗಳೇ ನಡೆದಿಲ್ಲ ಎನ್ನುವುದು ವಾಸ್ತವ. ಹಾಗಂತ ಸಂಗೀತ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಜನ ಸೇರುವುದಿಲ್ಲ ಎಂದೇನಿಲ್ಲ. ಸಾವಿರಾರು ಜನ ಸೇರುವುದು ಬೀದರ್‌ನ ವೈಶಿಷ್ಟ್ಯ. ಅಲ್ಲಿ ಜನರ ಆಸಕ್ತಿಯ ಕೊರತೆ ಇರಲಿಲ್ಲ, ಪುಸ್ತಕಗಳ ಕೊರತೆ ಮಾತ್ರ ಇತ್ತು. ಓದಲು ಬೇಕಿತ್ತು, ಆದರೆ ಕೊಡುವವರು ಇರಲಿಲ್ಲ. ಅಕಾಡಮಿ, ಪುಸ್ತಕ ಪ್ರಾಧಿಕಾರ ಇವು ಆ ವಿಚಾರದ ಬಗ್ಗೆ ಯೋಚನೆ ಮಾಡಲಿಲ್ಲ.
ಇಂಥ ಸಂದರ್ಭದಲ್ಲಿ ವೀರಲೋಕದ ಶ್ರೀನಿವಾಸ್ ಬೀದರ್ ಕಡೆ ಹೆಜ್ಜೆ ಇಟ್ಟದ್ದು ಅನೇಕರಿಗೆ ಅಚ್ಚರಿ ತಂದಿತ್ತು. ಬೆಂಗಳೂರಿನಂತಹ ರಾಜಧಾನಿಯಲ್ಲಿ ಎರಡು ಬಾರಿ ಪುಸ್ತಕ ಸಂತೆಯನ್ನು ಯಶಸ್ವಿಯಾಗಿ ಆಯೋಜಿಸಿ, ಲಕ್ಷಾಂತರ ಜನರಿಗೆ ಸಾವಿರಾರು ಪುಸ್ತಕಗಳನ್ನು ಪರಿಚಯಿಸಿದ ಅನುಭವ ಅವರಿಗಿತ್ತು. ಆದರೂ ಬೀದರ್ ವಿಷಯದಲ್ಲಿ ಒಂದು ಗೊಂದಲ ಇದ್ದದ್ದು ನಿಜ. ಜನ ಮೇಳಕ್ಕೆ ಬರುತ್ತಾರೆ ಎಂಬ ವಿಶ್ವಾಸ ಇದ್ದರೂ, ಅವರು ಪುಸ್ತಕ ಖರೀದಿಸುತ್ತಾರೋ ಇಲ್ಲವೋ ಎಂಬ ಅನುಮಾನ ಸಹಜವಾಗಿತ್ತು. ಆ ಅನುಮಾನವನ್ನೇ ಜೊತೆಯಾಗಿ ಕೊಂಡು ಅವರು ಬೀದರ್‌ಗೆ ಬಂದರು. ಅವರ ಜೊತೆಗೆ ಬಾಲ್ಕೀ ಮಠ ನಿಂತಿತು, ಗುರುನಾಥ್ ರಾಜಗೀರ ಬೆನ್ನಿಗೆ ನಿಂತರು, ಸಂತೆ ಆರಂಭವಾಯಿತು. ನಂತರ ನಡೆದದ್ದು ಎಲ್ಲ ನಿರೀಕ್ಷೆಗಳನ್ನು ಮೀರಿದ್ದು. ಬೀದರ್ ಜನರು ಮೇಳಕ್ಕೆ ಬಂದರು, ಪುಸ್ತಕ ನೋಡಿದರು, ಪುಸ್ತಕ ಖರೀದಿಸಿದರು. ಪುಸ್ತಕದ ಹಸಿವು ಅಲ್ಲಿ ಜೀವಂತವಾಗಿದೆ ಅನ್ನೋದನ್ನು ಆ ಮೇಳ ಸ್ಪಷ್ಟವಾಗಿ ತೋರಿಸಿತು.
ಈ ರೀತಿಯ ‘ಹುಚ್ಚು ಸಾಹಸ’ ಮಾಡಿದ ಶ್ರೀನಿವಾಸ್ ಅವರನ್ನು ನಾನು ಕೇಳದೇ ಇರಲಿಲ್ಲ - ಲಾಭವಿಲ್ಲದ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರ ಪ್ರಯೋಜನ ಏನು ಎಂದು. ಅವರ ಉತ್ತರದಲ್ಲಿ ಲೌಕಿಕ ಲಾಭಕ್ಕಿಂತ ಹೆಚ್ಚು ಸಾಹಿತ್ಯದ ಮೌಲ್ಯ ಮತ್ತು ಓದುಗನ ಮನಸ್ಸು ಕಾಣಿಸಿತು. ‘‘ಮೂರುವರೆ ವರ್ಷಗಳ ಹಿಂದೆ ನಾನು ಪ್ರಕಾಶಕನಾಗಿ ಈ ಹೊಸ ಕ್ಷೇತ್ರಕ್ಕೆ ಕಾಲಿಟ್ಟಾಗ, ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಕೇವಲ ಐದಾರು ಪುಸ್ತಕ ಅಂಗಡಿಗಳು ಮಾತ್ರ ಸಾಹಿತ್ಯ ಕೃತಿಗಳನ್ನು ಮಾರುತ್ತಿದ್ದವು. ಜನ ಪುಸ್ತಕದ ಕಡೆ ಬರ್ತಿಲ್ಲ ಅಂದ್ರೆ, ಪುಸ್ತಕವನ್ನೇ ಜನರ ಕಡೆ ಕೊಂಡೊಯ್ಯಬೇಕು ಅನ್ನೋ ನಿರ್ಧಾರಕ್ಕೆ ಬಂದೆ. ಹೋಟೆಲ್‌ಗಳ ಮುಂದೆ, ಆಸ್ಪತ್ರೆಗಳ ಎದುರು, ಮಾಲ್‌ಗಳ ಬಳಿ ಪುಸ್ತಕಗಳನ್ನು ಮಾರಾಟ ಮಾಡುವ ಪ್ರಯತ್ನ ಮಾಡಿದೆ. ಅದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ನಂತರ ಕೆಲವು ವಿದ್ಯಾರ್ಥಿ -ಯುವಕರನ್ನು ಆಯ್ಕೆ ಮಾಡಿ, ವಿವಿಧ ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ನಿಯೋಜಿಸಲಾಯಿತು. ಈ ಸ್ವಯಂಕೃಷಿ ಅನ್ನುವ ಪುಸ್ತಕ ಪರಿಚಯ ಕಾರ್ಯಕ್ರಮ ಬೆಳಗ್ಗೆ ಏಳರಿಂದ ಹನ್ನೊಂದು ಗಂಟೆಯವರೆಗೆ ನಡೆಯುತ್ತಿತ್ತು. ಕೆಲಸ ಮಾಡಿದ ಯುವಕರಿಗೆ ಆ ಅವಧಿಗೆ ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು. ಈ ವ್ಯವಸ್ಥೆ ನಿಧಾನವಾಗಿ ಯಶಸ್ವಿಯಾಯಿತು. ಜನ ಪುಸ್ತಕ ನೋಡತೊಡಗಿದರು, ಪ್ರಶ್ನೆ ಕೇಳತೊಡಗಿದರು, ಖರೀದಿಸಲೂ ಆರಂಭಿಸಿದರು. ಅಲ್ಲಿಯೇ ‘ಪುಸ್ತಕ ಸಂತೆ’ ಅನ್ನುವ ಪರಿಕಲ್ಪನೆ ಹುಟ್ಟಿಕೊಂಡಿತು. ಇದ್ದಕ್ಕಿದ್ದಂತೆ ಲಕ್ಷಾಂತರ ಪುಸ್ತಕಗಳು ಮಾರಾಟವಾಗಬೇಕು, ಅಷ್ಟೇ ಓದುಗರು ಸೃಷ್ಟಿಯಾಗಬೇಕು ಅನ್ನೋದು ನನ್ನ ಉದ್ದೇಶವೇ ಅಲ್ಲ. ಇದು ಸರಕಾರದ ವಿರುದ್ಧದ ಹೋರಾಟವೂ ಅಲ್ಲ. ಓದುಗರೇ ಇಲ್ಲ ಎನ್ನುವ ಕೊರಗು ಸಮಸ್ಯೆಯ ಭಾಗವಾಗುವುದಕ್ಕಿಂತ, ಅದಕ್ಕೆ ಪರಿಹಾರವಾಗುವುದು ನನ್ನ ಆದ್ಯತೆ. ಈ ಕ್ಷೇತ್ರಕ್ಕೆ ಹೂಡಿಕೆ ಮಾಡುವಾಗ ತಕ್ಷಣಕ್ಕೆ ಮರಳಿ ಬರುವ ಲಾಭವನ್ನು ನಾನು ಎಂದಿಗೂ ಪರಿಗಣಿಸಿಲ್ಲ. ಸ್ವಲ್ಪ ಕಳೆದುಕೊಳ್ಳುವ ಉದ್ದೇಶದಿಂದಲೇ ಈ ನಿರ್ಧಾರಕ್ಕೆ ಬಂದೆ. ಅದು ಹಣವಾಗಿ ಮರಳಿ ಬರದಿದ್ದರೂ, ಭವಿಷ್ಯದಲ್ಲಿ ಬುದ್ಧಿಯ ರೂಪದಲ್ಲಿ ಮರಳಿ ಬರಬಹುದು ಅನ್ನೋ ನಿರೀಕ್ಷೆ, ದೂರದೃಷ್ಟಿ ನನ್ನದು’’ ಎನ್ನುತ್ತಾರೆ ವೀರಕಪುತ್ರ.
ಯುವಕರು ಪುಸ್ತಕ ಓದುವುದಿಲ್ಲ, ಸಾಹಿತ್ಯಕ್ಕೆ ಭವಿಷ್ಯ
ಇಲ್ಲ ಅನ್ನೋ ಮಾತು ಸಂಪೂರ್ಣ ಸುಳ್ಳು.
ಒಮ್ಮೆ ಬೆಂಗಳೂರಿನ ಮೆಟ್ರೊದಲ್ಲಿ ಪ್ರಯಾಣಿಸಿ ನೋಡಿ, ಇವತ್ತಿಗೂ ಯುವಕರು ಬಹು ಮುಖ್ಯವಾಗಿ ಟೆಕ್ಕಿಗಳು, ವಿದ್ಯಾರ್ಥಿಗಳು ಅಲ್ಲಿ ಗಂಭೀರವಾಗಿ ಪುಸ್ತಕ ಓದುತ್ತಿರುವುದನ್ನು ಕಾಣಬಹುದು. ಆದರೆ ಅವರು ಓದುತ್ತಿರುವ ಪುಸ್ತಕಗಳು ನಮ್ಮ ಕಾಲದ ಕ್ಲಾಸಿಕ್ ಸಾಹಿತ್ಯವಾಗಿರದೆ, ಅಂತರ್‌ರಾಷ್ಟ್ರೀಯ ಮಟ್ಟದ ಆಂಗ್ಲ ಸಾಹಿತ್ಯವಾಗಿವೆ. ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಹೊಸ ತಲೆಮಾರು ಸ್ಥಳೀಯತೆಯಿಂದ ಜಾಗತಿಕತೆಯ ಕಡೆಗೆ ಸರಿದಿರುವುದನ್ನು ನಾವು ಒಪ್ಪಿಕೊಳ್ಳಬೇಕು. ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳದೆ, ಅವರಿಗೆ ಬೇಕಾದ ಬೌದ್ಧಿಕ, ಸಾಹಿತಿಕ ಒಳಸುರಿಗಳನ್ನು ಸಿದ್ಧಗೊಳಿಸದೆ, ಅವರು ಓದುವುದೇ ಇಲ್ಲ ಎಂದು ಆರೋಪಿಸುವುದು
ಅಕ್ಷಮ್ಯ
ಹೌದು, ಸಾಹಿತ್ಯ, ಓದು, ಸಂಸ್ಕೃತಿ, ಬೌದ್ಧಿಕ ವಿಕಸನಕ್ಕಾಗಿ ಅನುದಾನ ಪಡೆಯುತ್ತಿರುವ ಪ್ರಭುತ್ವ ಪ್ರತಿನಿಧಿಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕೆಲಸಗಳನ್ನು ಶ್ರೀನಿವಾಸ್ ಮಾಡುತ್ತಿದ್ದಾರೆ ಅನ್ನುವುದು ಅಭಿನಂದನೀಯ. ಇಷ್ಟಾದರೂ ತಪ್ಪು ಹಿಡಿಯುವ, ಟೀಕಿಸುವ ಸಹಿಸಲಾರದ ವಿಕೃತ ಮನಸ್ಸುಗಳು ಇದ್ದೇ ಇರುತ್ತವೆ. ಇಂಥ ಸಂದರ್ಭದಲ್ಲಾದರೂ ಓದುಗ, ಬರಹಗಾರರು ಇವೆಲ್ಲವನ್ನು ಕ್ಯಾರೆ ಅನ್ನದೆ ಶ್ರೀನಿವಾಸರಂಥ ಮುನ್ನುಗುವವರ ಜೊತೆ ನಿಲ್ಲುವುದು, ಅವರ ಪ್ರಯತ್ನಗಳಿಗೆ ಬೆಂಬಲ ನೀಡುವುದು, ಅವರ ಹಾದಿಯಲ್ಲಿ ಕೈಜೋಡಿಸುವುದು ನಮ್ಮಂತಹ ಕನ್ನಡಿಗರ ನಿಜವಾದ ಹೊಣೆ.
ವೀರಕಪುತ್ರ ಶ್ರೀನಿವಾಸ್ ಅವರನ್ನು ನಾನು ಹೊಸ ಕಾಲದ, ಪುಸ್ತಕಸಂತೆಯ ಪಿತಾಮಹ ಎಂದು ಮಾತ್ರ ನೋಡಲು ಸಾಧ್ಯವಿಲ್ಲ. ಲೇಖಕ ಮತ್ತು ಒಬ್ಬ ಪ್ರಕಾಶಕನಾಗಿ ಅವರು ಬರಹಗಾರರಿಗೆ ಕೊಟ್ಟ ಗೌರವವನ್ನು ನಾನೂ ಅನುಭವಿಸಿದವ. ಬಿಡುಗಡೆಯ ದಿನವೇ ಕೈತುಂಬ ಪುಸ್ತಕದ ಪ್ರತಿಗಳೊಂದಿಗೆ ರಾಯಲ್ಟಿ ನೀಡಿದವರು. ಆ ಇಡೀ ಕಾರ್ಯಕ್ರಮವನ್ನು ಲೇಖಕನ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ರೂಪಿಸಿದರು.
ವೀರಲೋಕ ಪ್ರಕಾಶನದ ಮೂಲಕ ಒಂದು ಪುಸ್ತಕ ಹೊರಬಂದ ನಂತರ, ಆ ಲೇಖಕನ ಪ್ರಭೆ ಮೊದಲಿಗಿಂತ ಹೆಚ್ಚಾಗಿ ವಿಸ್ತಾರಗೊಂಡಿರುವುದನ್ನು ನಾನು ಕಂಡಿದ್ದೇನೆ.ಅವರು ಸಾಹಿತ್ಯ, ಸಾಹಿತಿ, ಓದುಗನ ನಡುವೆ ಪುಸ್ತಕವನ್ನೇ ಕೇಂದ್ರದಲ್ಲಿ ಇಟ್ಟವರು. ಪುಸ್ತಕವನ್ನು ಸಂಸ್ಕೃತಿಯ ಸಾಧನವಾಗಿ ನೋಡುವ ದೃಷ್ಟಿ ಉಳ್ಳವರು ಮಾತ್ರ ಪುಸ್ತಕ ಮುದ್ರಿತವಾದರೆ ಸಾಲದು, ಅದು ಹೇಗಾದರೂ ಓದುಗರ ಕೈ ಸೇರಬೇಕೆಂದು ಹಪಹಪಿಸುತ್ತಾರೆ. ಬೀದರ್‌ನಲ್ಲಿ ನಡೆದದ್ದು ಪುಸ್ತಕಕ್ಕೆ ನೆಲ ಇಲ್ಲವೆಂದುಕೊಂಡಿದ್ದ ಊರುಗಳಿಗೆ, ಓದುಗರಿಲ್ಲವೆಂದುಕೊಂಡಿದ್ದ ಕಾಲಕ್ಕೆ ಕೊಟ್ಟ ಸ್ಪಷ್ಟ ಉತ್ತರ. ರಾಜಧಾನಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಪುಸ್ತಕ ಮೇಳವನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಬೀದರ್‌ನಲ್ಲಿ ಗೆದ್ದವರಿಗೆ ಮುಂದೆ ಚಾಮರಾಜನಗರದಲ್ಲಿ ಗೆಲ್ಲುವುದು ಅಷ್ಟು ಕಷ್ಟವಾಗದು. ಗೆಳೆಯ, ಯಶಸ್ಸು ನಿಮ್ಮದಾಗಲಿ.