‘ಬೋನ್’ನ ಗುರಿಯೇನು?

Update: 2026-07-26 10:14 IST

ಬಿ-1 ವಿಮಾನದ ನೈಜ ಮೇಲುಗೈ ಇರುವುದು ಅದರ ಒಂದು ನಿರ್ದಿಷ್ಟ ಆಯುಧದಲ್ಲಿ. ಅದುವೇ ಗೈಡೆಡ್ ಬಾಂಬ್ ಯುನಿಟ್ 72 ಅಥವಾ ಜಿಬಿಯು-72. ಇದೇನು ಸಾಮಾನ್ಯವಾದ ಬಾಂಬ್ ಅಲ್ಲ. ಇದು ಅಂದಾಜು ಎರಡೂವರೆ ಟನ್ ತೂಕ ಹೊಂದಿದ್ದು, ಇದನ್ನು ವಿಶೇಷವಾಗಿ ಗಟ್ಟಿಗೊಳಿಸಲಾದ ಉಕ್ಕಿನಿಂದ ನಿರ್ಮಿಸಲಾಗಿದೆ. ಇದರ ಹಿಂದಿನ ಆಲೋಚನೆ ಸರಳವಾದರೂ, ಅಷ್ಟೇ ಭೀಕರವಾಗಿದೆ.

ಪಶ್ಚಿಮ ಏಶ್ಯದಲ್ಲಿ ಮೌನವಾಗಿಯೇ ದೊಡ್ಡ ಬದಲಾವಣೆ ನಡೆಯುತ್ತಿದ್ದು, ಸಂಪೂರ್ಣ ಜಗತ್ತು ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಮೆರಿಕ ಅತ್ಯಂತ ಭೀತಿದಾಯಕವಾದ ತನ್ನ ಯುದ್ಧ ಯಂತ್ರಗಳನ್ನು ಇರಾನ್ ಬಳಿಗೆ ಒಯ್ಯುತ್ತಿದ್ದು, ಅದರಲ್ಲಿ ಬಿ-1 ಲ್ಯಾನ್ಸರ್ ಬಾಂಬರ್ ಸಹ ಸೇರಿದೆ. ಈ ಬೃಹತ್ ಯುದ್ಧ ವಿಮಾನಗಳು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ವಾಯು ನೆಲೆಗಳಿಂದ ಟೇಕಾಫ್ ಆಗಿ, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕನ್ ನೆಲೆಗಳತ್ತ ಹಾರಾಟ ನಡೆಸುವುದು ಗಮನಕ್ಕೆ ಬಂದಿತ್ತು. ಇವುಗಳನ್ನು ಯಾವ ಕಾರಣಕ್ಕಾಗಿ ಕೊಲ್ಲಿಯತ್ತ ಕಳುಹಿಸಲಾಗಿದೆ ಎಂದು ಪೆಂಟಗಾನ್ ಮಾಹಿತಿ ನೀಡಿಲ್ಲ. ಆದರೆ, ಒಂದಷ್ಟು ವರದಿಗಳ ಪ್ರಕಾರ, ಇದರ ಗುರಿ ಇರಾನ್‌ನ ನೆಲದಾಳದ ಜಾಲಗಳಾದ ಕ್ಷಿಪಣಿ ಸುರಂಗಗಳು ಮತ್ತು ಅತ್ಯಂತ ಸುರಕ್ಷಿತವಾದ ಅದರ ಪರಮಾಣು ನೆಲೆಗಳಾಗಿರಬಹುದು ಎನ್ನಲಾಗಿದೆ.

ಬಿ-1 ಒಂದು ವಿಚಿತ್ರವಾದ ಅಡ್ಡ ಹೆಸರನ್ನೂ ಹೊಂದಿದೆ. ಪೈಲಟ್‌ಗಳು ಇದನ್ನು ‘ದ ಬೋನ್’ ಎಂದು ಕರೆಯುತ್ತಾರೆ. ಬಿ-1 ಅನ್ನು ಇಂಗ್ಲಿಷ್ ಭಾಷೆಯಲ್ಲಿB-one ಎಂದು ಬರೆಯಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ, ಅಮೆರಿಕನ್ ಸಿಬ್ಬಂದಿ ಇದನ್ನು ಬೋನ್ ಎಂದು ಕರೆಯಲಾರಂಭಿಸಿದರು. ಈ ವಿಮಾನ ಶೀತಲ ಸಮರ ಕಾಲದ ಹಳೆಯ ವಿಮಾನವಾದರೂ, ಅದು ಇಂದಿಗೂ ಹಾರಾಟ ನಡೆಸುತ್ತಿರುವ ಅತ್ಯಂತ ಶಕ್ತಿಶಾಲಿ ಬಾಂಬರ್‌ಗಳಲ್ಲಿ ಒಂದಾಗಿದೆ. ಇದನ್ನು ವಿಶೇಷವಾಗಿಸುವುದು ಇದರ ‘ಸ್ವೆಪ್ಟ್ ವಿಂಗ್ಸ್’ ಎನ್ನುವ ರೆಕ್ಕೆಗಳು. ಅಂದರೆ, ಇದರ ರೆಕ್ಕೆಗಳು ಹಾರಾಟದ ಸಂದರ್ಭದಲ್ಲಿ ಹಿಂದಕ್ಕೆ ಮಡಚಿಕೊಳ್ಳಬಲ್ಲವು. ಇದರಿಂದಾಗಿ, ವಿಮಾನಕ್ಕೆ ಎಳೆತ ಕಡಿಮೆಯಾಗಿ, ಅದು ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಾಗಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಕಾರ್ಯಾಚರಣೆಯಲ್ಲೂ ಇದು ಬರೋಬ್ಬರಿ 34 ಟನ್‌ಗಳಷ್ಟು ಬಾಂಬ್‌ಗಳ ಭಾರವನ್ನು ಹೊತ್ತು, ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹಾರಾಟ ನಡೆಸಬಲ್ಲದು. ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯ ವಿಮಾನಗಳು ಮಾತ್ರವೇ ಈ ಸಾಮರ್ಥ್ಯ ಗಳಿಸಿವೆ.

ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ, ಬಿ-1 ಸಾಕಷ್ಟು ಬದಲಾವಣೆಗಳಿಗೆ ಒಳಗಾಗಿದೆ. ಇದು ಈಗ ಪರಮಾಣು ಶಸ್ತ್ರಾಸ್ತ್ರಗಳನ್ನು ಒಯ್ಯುವುದೇ ಇಲ್ಲ. ಬದಲಿಗೆ, ಇದಕ್ಕೆ ಒಂದು ನಿರ್ದಿಷ್ಟವಾದ ಕೆಲಸ ನೀಡಲಾಗಿದೆ. ಅದೇನೆಂದರೆ, ಭೂಮಿಯ ಆಳದಲ್ಲಿ ಬಚ್ಚಿಟ್ಟಿರುವ ಶತ್ರುಗಳ ವಸ್ತುಗಳನ್ನು ನಾಶಪಡಿಸುವುದು. ಈಗ ಇರಾನ್‌ನಲ್ಲಿ ಅಕ್ಷರಶಃ ಅಂತಹದ್ದೇ ಕೆಲಸ ಇದರ ಪಾಲಿಗೆ ಬಂದಿದೆ. ಭೂಮಿಯ ಮೇಲ್ಭಾಗದಲ್ಲಿ ಏನನ್ನಾದರೂ ನಿರ್ಮಿಸಿದರೆ ಉಪಗ್ರಹಗಳು ಅವುಗಳ ಛಾಯಾಚಿತ್ರಗಳನ್ನು ತೆಗೆದು, ಕ್ಷಿಪಣಿಗಳು ಅವುಗಳನ್ನು ನಾಶಪಡಿಸಬಲ್ಲವು ಎನ್ನುವುದನ್ನು ಇರಾನ್ ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿತ್ತು. ಆದ್ದರಿಂದಲೇ ಇರಾನ್ ನೆಲದಾಳದತ್ತ ಮುಖ ಮಾಡಿತ್ತು. ಕ್ಷಿಪಣಿ ಸಂಗ್ರಹ ಸುರಂಗಗಳು, ಪುಷ್ಟೀಕರಣ ತಾಣಗಳು, ಪ್ರಯೋಗಾಲಯಗಳು, ಹೀಗೆ ಇರಾನಿನ ಬಹುತೇಕ ಎಲ್ಲ ಸೂಕ್ಷ್ಮ ಮಿಲಿಟರಿ ಕಾರ್ಯಗಳೂ ಈಗ ನೆಲದಾಳದಲ್ಲಿ ಕಲ್ಲುಗಳು ಮತ್ತು ಕಾಂಕ್ರಿಟ್ ಅಡಿಯಲ್ಲಿ ಕುಳಿತಿವೆ.

ಬಿ-1 ವಿಮಾನದ ನೈಜ ಮೇಲುಗೈ ಇರುವುದು ಅದರ ಒಂದು ನಿರ್ದಿಷ್ಟ ಆಯುಧದಲ್ಲಿ. ಅದುವೇ ಗೈಡೆಡ್ ಬಾಂಬ್ ಯುನಿಟ್ 72 ಅಥವಾ ಜಿಬಿಯು-72. ಇದೇನು ಸಾಮಾನ್ಯವಾದ ಬಾಂಬ್ ಅಲ್ಲ. ಇದು ಅಂದಾಜು ಎರಡೂವರೆ ಟನ್ ತೂಕ ಹೊಂದಿದ್ದು, ಇದನ್ನು ವಿಶೇಷವಾಗಿ ಗಟ್ಟಿಗೊಳಿಸಲಾದ ಉಕ್ಕಿನಿಂದ ನಿರ್ಮಿಸಲಾಗಿದೆ. ಇದರ ಹಿಂದಿನ ಆಲೋಚನೆ ಸರಳವಾದರೂ, ಅಷ್ಟೇ ಭೀಕರವಾಗಿದೆ. ಭೂಮಿಯ ಮೇಲ್ಮೈಯಲ್ಲಿ ಸ್ಫೋಟಿಸುವ ಬದಲು, ಈ ಬಾಂಬ್ ಮಣ್ಣು, ಕಾಂಕ್ರಿಟ್ ಮತ್ತು ಕಲ್ಲುಗಳಿಗೆ ಮೊದಲ ಗುದ್ದು ನೀಡಿ, ನೆಲದಾಳವನ್ನು ಪ್ರವೇಶಿಸಿ, ಅಲ್ಲಿ ಸ್ಫೋಟಿಸುತ್ತದೆ. ವರದಿಗಳ ಪ್ರಕಾರ, ಇದು ಸ್ಫೋಟಗೊಳ್ಳುವ ಮುನ್ನ ನೆಲದಾಳದಲ್ಲಿ ಬಹುತೇಕ 150 ಅಡಿಗಳಷ್ಟು ಸಾಗಬಲ್ಲದು. ಅಷ್ಟರ ತನಕದ ಆಳದಲ್ಲಿ ಬಚ್ಚಿಟ್ಟಿರುವ ಯಾವುದೇ ವಸ್ತುವಾದರೂ ಇದನ್ನು ಎದುರಿಸಿ ಉಳಿಯುವ ಸಾಧ್ಯತೆಗಳು ಅತ್ಯಂತ ಕಡಿಮೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಹಿರಂಗವಾಗಿಯೇ ಪಿಕ್ಯಾಕ್ಸ್ ಮೌಂಟೇನ್ ಎಂಬ ಪ್ರದೇಶದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ ಬಳಿಕ ಇವೆಲ್ಲ ಚಟುಚಟಿಕೆಗಳು ಆರಂಭಗೊಂಡವು. ಒಂದು ವೇಳೆ ಇರಾನ್ ಏನಾದರೂ ತನ್ನ ಪರಮಾಣು ಸೆಂಟ್ರಿಫ್ಯೂಸ್‌ಗಳನ್ನು ಆ ಪರ್ವತಗಳಿಗೆ ವರ್ಗಾಯಿಸಿದೆಯೇ ಮತ್ತು ‘ನಮ್ಮ ಕೆಲಸ ಇನ್ನೂ ಮುಗಿದಿಲ್ಲ’ ಎಂದು ನೀವು ಹೇಳಿರುವುದರ ಅರ್ಥವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಇರಾನ್ ತನ್ನ ಪರಮಾಣು ಘಟಕಗಳನ್ನು ಅತ್ತ ಸಾಗಿಸಿರುವ ಸಾಧ್ಯತೆಗಳಿವೆ. ಆದರೆ, ವಾಶಿಂಗ್ಟನ್ ಬಳಿ ಅದರ ಸ್ಪಷ್ಟ ಪುರಾವೆಗಳಿಲ್ಲ. ಆದರೂ, ಅಮೆರಿಕ ಈ ಪ್ರದೇಶದ ಮೇಲೆ ಸದ್ಯದಲ್ಲೇ ಭಾರೀ ದಾಳಿ ನಡೆಸಲಿದೆ ಎಂದಿದ್ದರು. ಇದರ ಕುರಿತಂತೆ ಇರಾನ್ ಏನೂ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದು, ತಾನು ಸಾಮಾನ್ಯವಾಗಿ ಇಂತಹ ಯೋಜನೆಗಳನ್ನು ಬಹಿರಂಗವಾಗಿ ಘೋಷಿಸುವುದಿಲ್ಲ. ಆದರೆ, ಇರಾನ್‌ಗೆ ಇದನ್ನು ತಡೆಯಲು ಸಾಧ್ಯವಿಲ್ಲದ ಕಾರಣ ತಾನು ಇದನ್ನು ಬಹಿರಂಗವಾಗಿಯೇ ಹೇಳಿರುವುದಾಗಿ ಟ್ರಂಪ್ ವಿವರಿಸಿದ್ದಾರೆ. ಟ್ರಂಪ್ ನೀಡಿರುವ ಈ ಒಂದು ಹೇಳಿಕೆಯೇ ಇರಾನ್‌ನ ಮಧ್ಯದಲ್ಲಿರುವ, ಯಾರಿಗೂ ತಿಳಿದಿರದ ಪರ್ವತವೊಂದು ಈಗ ಭೂಮಿಯಲ್ಲಿ ಅತಿಹೆಚ್ಚು ಚರ್ಚೆಗೆ ಒಳಗಾದ ಪ್ರದೇಶವಾಗಿ ಮಾರ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಈ ಪಿಕ್ಯಾಕ್ಸ್ ಮೌಂಟೇನ್ ಎಂದರೇನು? ಇರಾನಿನ ಮಧ್ಯ ಭಾಗದಲ್ಲಿರುವ ಈ ಪರ್ವತ, ಇರಾನಿನ ಪ್ರಸಿದ್ಧ ನತಾಂಝ್ ಪರಮಾಣು ಕೇಂದ್ರದ ಸನಿಹದಲ್ಲಿದೆ. ಈ ಪರ್ವತ ಅತ್ಯಂತ ಒರಟು ಮತ್ತು ದುರ್ಗಮವಾಗಿದ್ದು, ಅಗೆಯುವಿಕೆ ಮತ್ತು ಬಾಂಬ್ ದಾಳಿಗೂ ಸುಲಭವಾಗಿ ಬಗ್ಗದ ಗಟ್ಟಿಯಾದ ಗ್ರಾನೈಟ್ ಶಿಲೆಗಳಿಂದ ನಿರ್ಮಾಣವಾಗಿದೆ. ಇದರ ಈ ಗುಣದಿಂದಲೇ ಪರ್ವತಕ್ಕೆ ಪಿಕ್ಯಾಕ್ಸ್ ಎನ್ನುವ ಹೆಸರು ಬಂದಿದೆ. ಅಮೆರಿಕನ್ ಮತ್ತು ಇಸ್ರೇಲಿ ಗುಪ್ತಚರ ಲೆಕ್ಕಾಚಾರಗಳ ಪ್ರಕಾರ, ಇರಾನ್ ಈ ಪರ್ವತದ ಒಳಗೆ ಅತ್ಯಾಧುನಿಕ ಪರಮಾಣು ವ್ಯವಸ್ಥೆಗಳನ್ನು ನಿರ್ಮಿಸಿದೆ. ಆದರೆ, ವಾಶಿಂಗ್ಟನ್ ಮುಂದಿರುವ ಸಮಸ್ಯೆ ಇರುವುದೇ ಇಲ್ಲಿ. ಈ ಪರ್ವತ ಒಳಗಿರುವ ಘಟಕಗಳು ಮೇಲ್ಮೈಯಿಂದ ಅಂದಾಜು 300 ಅಡಿಗಳಷ್ಟು ಆಳದಲ್ಲಿವೆ. ಇದು ಜಿಬಿಯು-72 ತಲುಪುವ ಆಳದ ಎರಡು ಪಟ್ಟು ಹೆಚ್ಚಾಗಿದೆ. ಇಂದಿನ ತನಕ, ಅಮೆರಿಕದ ಬತ್ತಳಿಕೆಯಲ್ಲಿ ಲಭ್ಯವಿರುವ ಯಾವ ಆಯುಧವೂ ಇಷ್ಟೊಂದು ಆಳದ ತನಕ ಒಂದೇ ಬಾರಿಗೆ ದಾಳಿ ನಡೆಸಲು ಸಾಧ್ಯವಿಲ್ಲ.

ಹಾಗಿದ್ದ ಮೇಲೆ, ಬಿ-1 ವಿಮಾನವನ್ನು ಕಳುಹಿಸುವುದು ಯಾಕೆ? ಇದಕ್ಕೆ ಉತ್ತರ ತಾಳ್ಮೆಯಲ್ಲಿದೆ. ಮಿಲಿಟರಿ ಯೋಜಕರು ಗುರಿಯನ್ನು ಮೃದುವಾಗಿಸುವ ಕುರಿತು ಮಾತನಾಡುತ್ತಾರೆ. ನಿರಂತರವಾಗಿ ಬಾಂಬ್ ದಾಳಿಗಳನ್ನು ನಡೆಸುವುದರಿಂದ, ಮೇಲ್ಪದರದ ಕಲ್ಲುಗಳು ಸಿಡಿದು, ಪರ್ವತದ ಚಿಪ್ಪನ್ನು ಬಿರಿದು, ಸುರಂಗಗಳ ಪ್ರವೇಶವನ್ನು ಕುಸಿಯುವಂತೆ ಮಾಡಿ, ಅಲ್ಲಿಗೆ ಗಾಳಿ ಮತ್ತು ವಿದ್ಯುತ್ ತಲುಪದಂತೆ ಮಾಡಬಹುದು. ಒಂದು ಬಾರಿ ಮೇಲ್ಪದರ ದುರ್ಬಲಗೊಂಡರೆ, ಆಗ ಬಿ-2 ಸ್ಟೆಲ್ತ್ ಬಾಂಬರ್ ವಿಮಾನಗಳು ಪ್ರಯೋಗಿಸುವ ಬಂಕರ್ ಬಸ್ಟರ್ ಬಾಂಬ್‌ಗಳು ಬಾಕಿ ಕೆಲಸವನ್ನು ಮುಗಿಸಬಹುದು ಎನ್ನುವುದು ಲೆಕ್ಕಾಚಾರ. ಆದ್ದರಿಂದ, ಬಿ-1 ಅಂತಿಮ ಹೊಡೆತ ನೀಡುವ ಆಯುಧವಲ್ಲ. ಇದು ಸುತ್ತಿಗೆಯ ಅಂತಿಮ ಹೊಡೆತಕ್ಕೆ ಸಿದ್ಧಪಡಿಸುವ ಉಳಿಯ ರೀತಿಯಲ್ಲಿದೆ.

ಸದ್ಯದ ಮಟ್ಟಿಗೆ ಪೆಂಟಗನ್ ನಿಖರ ಯೋಜನೆಯ ಕುರಿತು ಮೌನ ತಳೆದಿದೆ. ಬಾಂಬರ್‌ಗಳು ಈಗಾಗಲೇ ಆಗಮಿಸಿದ್ದು, ಗಾಳಿಸುದ್ದಿಗಳು ಹಬ್ಬುತ್ತಿವೆ. ಈ ಬಾಂಬರ್‌ಗಳು ಬಂದಿವೆ ಎಂದರೆ ಅರ್ಥವೇನು ಎನ್ನುವುದು ಟೆಹರಾನ್‌ಗೂ ಚೆನ್ನಾಗಿ ತಿಳಿದಿದೆ. ರಾಜಕಾರಣದ ಆಚೆಗೆ, ಈ ಯುದ್ಧ ಜಗತ್ತಿನ ಮುಂದೆ ಒಂದು ಗಂಭೀರವಾದ ಪ್ರಶ್ನೆಯನ್ನು ಇಟ್ಟಿದೆ. ಅದೇನೆಂದರೆ, ಒಂದು ದೇಶ ನಿಜಕ್ಕೂ ಜಗತ್ತಿನ ಅತ್ಯಂತ ಪ್ರಬಲ ವಾಯು ಸೇನೆಗೂ ಹಾನಿ ಮಾಡಲು ಸಾಧ್ಯವಿಲ್ಲದಂತಹ ಪ್ರಬಲ ಕಲ್ಲುಗಳ ಪರ್ವತದ ಕೆಳಗೆ ಆಳವಾದ ಬಂಕರ್‌ಗಳನ್ನು ನಿರ್ಮಿಸಲು ಸಾಧ್ಯವೇ? ಪಿಕ್ಯಾಕ್ಸ್ ಪರ್ವತ ಇದಕ್ಕೆ ನಮಗೆ ಉತ್ತರ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಿರೀಶ್ ಲಿಂಗಣ್ಣ

contributor

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Similar News

ವಿರೇಚನ