ಸಾವಿತ್ರಿ ಭಾಯಿ ಪುಲೆ, ಆಧುನಿಕ ಶಿಕ್ಷಣದ ಮಹಾತಾಯಿ

Update: 2015-12-19 13:08 GMT

ಜಾಗತಿಕ ಮನುಕುಲ, ಮಹಿಳಾ ವಿಮೋಚಕಿ; ಮಾನವ ಹಕ್ಕುಗಳ ಪ್ರವರ್ತಕಿ; ಜಗತ್ತಿನ ಮಹಾನ್ ಮಾನವತಾವಾದಿ ಸಾವಿತ್ರಿಭಾಯಿ ಫುಲೆಯವರ 184ನೆ ಜನ್ಮೋತ್ಸವವನ್ನು ಆಚರಿಸಲು ಹೊರಟಿದೆ. ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕನ್ನು ಎತ್ತಿ ಹಿಡಿದ ಮಲಾಲಾ ಯೂಸುಫ್ ಝಾಯ್ ಅವರ ಮೇಲೆ ತಾಲಿಬಾನಿಗಳು ದಾಳಿ ಮಾಡಿದಾಗ ನಾವೆಲ್ಲಾ ಆತಂಕಗೊಂಡಿದ್ದೆವು. ಈ ದೇಶದಲ್ಲಿ ಇಂದೇನಾದರೂ ಹೆಣ್ಣು ಮಕ್ಕಳು ಯಾವ ಭೀತಿ-ಆತಂಕಗಳಿಲ್ಲದೆ ಶಾಲೆಗಳತ್ತ ಹೋಗುತ್ತಿದ್ದರೆ ಅದಕ್ಕೆ ಮಲಾಲಾಳಂತಹ ಅನೇಕ ಹೆಣ್ಣು ಮಕ್ಕಳು ಅವರವರ ಕಾಲಘಟ್ಟದಲ್ಲಿ ಎಲ್ಲ ಅಡೆ ತಡೆಗಳನ್ನು ವಿರೋಧಿಸಿ ಶಿಕ್ಷಣಕ್ಕಾಗಿ ಹೋರಾಡಿದ್ದರ ಪರಿಣಾಮವಾಗಿದೆ. ಇದರಲ್ಲಿ ಸಾವಿತ್ರಿಭಾಯಿ ಫುಲೆ ಅತೀ ಮುಖ್ಯರು. ಇವರು ಕೇವಲ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಮಾತ್ರ ಹೋರಾಡಲಿಲ್ಲ, ಬದಲಾಗಿ ವಿಧವೆಯರ ಘನತೆಯ ಹಕ್ಕು, ಅವಿವಾಹಿತ ತಾಯಂದಿರ ಮತ್ತು ಅನವಶ್ಯಕ ಗರ್ಭಧಾರಣೆಯ ವಿರುದ್ಧದ ಹಕ್ಕುಗಳಿಗಾಗಿಯೂ ಹೋರಾಡಿದರು. ಇವರು ಭಾರತದ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯ ಮೊಟ್ಟ ಮೊದಲ ಶಿಕ್ಷಕಿ ಸಹ ಹೌದು. ಭೂಗೋಳದ ಭೌತಿಕ ಪ್ರಪಂಚವನ್ನು ಮಾರ್ಪಡಿಸಿದ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಸಂಪರ್ಕಕ್ರಾಂತಿ, ಜೈವಿಕ ಕ್ರಾಂತಿ ಇತ್ಯಾದಿಗಳಿಗೆ ಜಗತ್ತು ಸಾಕ್ಷಿಯಾಗಿದೆ. ವೈಜ್ಞಾನಿಕ, ಜಾತ್ಯತೀತ ಕ್ರಾಂತಿಗಳು, ಫ್ರೆಂಚ್ ಮತ್ತು ರಷ್ಯಾದ ಕ್ರಾಂತಿಗಳಂತಹ ವಿದ್ಯಮಾನಗಳಿಂದ ಅರಿವು ಪಡೆದ ಮಾನವ ಸಮುದಾಯ ಅಪಾರ ಬದಲಾವಣೆಗಳನ್ನು ಕಂಡಿದೆ. ಇನ್ನೊಂದು ಕಡೆ ಪೂರ್ವದ ಚೈನಾ ಕ್ರಾಂತಿಸಹ ಮಾನವ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದೆ. ಮಾನವ ನಾಗರಿಕತೆಯ ಇತಿಹಾಸದಲ್ಲಿ ಸಂಭವಿಸಿದ ಈ ಎಲ್ಲ ವಿದ್ಯಮಾನಗಳು ಮನುಕುಲದ ‘ಮಾನಸಿಕ ಮತ್ತು ಭೌತಿಕ ಬೆಳವಣಿಗೆ’ಯನ್ನು ವಿಸ್ತರಿಸಿವೆ. ಆದರೆ ಈ ಎಲ್ಲಾ ಕ್ರಾಂತಿಗಳು ಮನುಕುಲದ ಯಾತನೆಗಳನ್ನಾಗಲಿ-ಕೊನೆಯ ಸಮಸ್ಯೆಗಳನ್ನಾಗಲಿ ಪರಿಹರಿಸಲಾಗಲಿಲ್ಲ. ಹಾಗೂ ನಾವಂದುಕೊಂಡಂತೆ ಅತ್ತ ಈ ಕ್ರಾಂತಿ ಎಂಬುದು ಅನಗತ್ಯ ವೌಲ್ಯ, ನೀತಿಗಳನ್ನು ನಾಶಮಾಡಿ, ಅಗತ್ಯ ವೌಲ್ಯ-ನೀತಿಗಳನ್ನು ತರಲಿಲ್ಲ. ಅದರಿಂದ ಬಂದ ಅರಿವು ವಾಸ್ತವದಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ನ್ಯಾಯಶೀಲತೆಯನ್ನೂ ಕಲಿಸಲಿಲ್ಲ. ಆಗ ಸಾವಿತ್ರಿಭಾಯಿ ಫುಲೆ ಮತ್ತು ಅವರ ಪತಿ ಜ್ಯೋತಿಬಾ ಫುಲೆ ಅವರುಗಳು ಮಾಡಿದ ಕೆಲಸಗಳು ಎಲ್ಲಾ ಕ್ರಾಂತಿಗಳನ್ನೂ ಮೀರಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ನ್ಯಾಯಶೀಲತೆಗೆ ಸ್ವರ್ಣ ಸದೃಶವಾದ ತಾತ್ವಿಕ ತಳಹದಿಯನ್ನು ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದವು. ಅಂದಿನ ‘ಕತ್ತಲ ಯುಗ’ದಲ್ಲಿ ಶಿಕ್ಷಕಿಯಾಗುವ ಧೈರ್ಯತಾಳಿ ಶಿಕ್ಷಣದ ಘನತೆಯನ್ನು ಎತ್ತಿಹಿಡಿದ ಸಾವಿತ್ರಿ ಬಾಯಿ ಫುಲೆಯವರ ಮಹತ್ವದ ಬಗ್ಗೆ ಭಾರತೀಯ ಸಮಾಜಕ್ಕೆ ಹೆಚ್ಚು ತಿಳುವಳಿಕೆಯಿಲ್ಲ. ಯಾವ ಕಾಲಘಟ್ಟದಲ್ಲಿ ಮಹಿಳೆಯರನ್ನು ಕೇವಲ ವಸ್ತುಗಳಂತೆ ಪರಿಭಾವಿಸಲಾಗುತ್ತಿತ್ತೋ, ಮಹಿಳೆಯರಿಗೆ ಶಿಕ್ಷಣ ನೀಡುವುದು ಶಿಕ್ಷಾರ್ಹ ಅಪರಾಧವಾಗಿತ್ತೋ ಅಂತಹ ಕಾಲಘಟ್ಟದಲ್ಲಿ ಇವರು ಸ್ತ್ರೀ ಶಿಕ್ಷಣ, ಸಮಾನತೆಗಳ ಬಗ್ಗೆ ಧ್ವನಿ ಎತ್ತಿ, ಭಾರತೀಯ ಸಮಾಜದ ಕ್ರೂರ ಎಲ್ಲೆಕಟ್ಟುಗಳನ್ನು ಮುರಿದುಹಾಕಿ ಲಕ್ಷಾಂತರ ಹೃದಯಗಳಲ್ಲಿ ಶಿಕ್ಷಣ ಸಮಾನತೆಯ ಜ್ಯೋತಿ ಬೆಳಗಿದವರು. ಇದಕ್ಕಾಗಿ ಮಹಿಳೆಯರು ಮಾತ್ರವಲ್ಲ, ಎಲ್ಲರೂ ಆಕೆಗೆ ಆಭಾರಿಯಾಗಿರಬೇಕಿದೆ. ನನಗೆ ಅಚ್ಚರಿಯಾಗುತ್ತದೆ! ಏಕೆ ಈ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಶೋಷಿತ ಸಮುದಾಯಗಳಿಗಾಗಿ ಶಾಲೆ ತೆರೆದ ಹಾಗೂ ಈ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಭಾಯಿ ಫುಲೆ ಇವರ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿಲ್ಲ?! ಎಂದು.


 ಸಾವಿತ್ರಿಭಾಯಿ ಫುಲೆಯವರ ಆರಂಭಿಕ ಹೋರಾಟಗಳು
  ಸಾವಿತ್ರಿಭಾಯಿ ಫುಲೆ ಹುಟ್ಟಿದ್ದು 3ನೆ ಜನವರಿ, 1831ರಲ್ಲಿ. ಮಹಾರಾಷ್ಟ್ರ ರಾಜ್ಯ ಸತಾರ ಜಿಲ್ಲೆಯ ನಾಯ್ಗಿನ್ ಇವರ ಹುಟ್ಟೂರು. ಚಿಕ್ಕವಯಸ್ಸಿಗೇ ಹೆಣ್ಣು ಮಕ್ಕಳ ಮದುವೆ ಮಾಡುವುದು ಆಗಿನ ಕಾಲದಲ್ಲಿ ಪ್ರತಿಷ್ಠೆಯ ಮಾತಾಗಿತ್ತು. ಓದುವ ಆಸಕ್ತಿಯಿದ್ದರೂ ಅದನ್ನು ಲೆಕ್ಕಿಸದೆ ಆಕೆಗೆ ಮದುವೆ ಮಾಡಲಾಯಿತು. ಆಗ ಆಕೆಯ ವಯಸ್ಸು ಕೇವಲ 9 ವರ್ಷಮತ್ತು ಆಕೆಯ ಪತಿಯ ಹೆಸರು ಜ್ಯೋತಿರಾವ್ ಫುಲೆ. ಜ್ಯೋತಿರಾವ್ ಆಗಿನ ಕಾಲಕ್ಕೇ ದೂರದೃಷ್ಟಿಯುಳ್ಳ ಹಾಗೂ ಪ್ರತಿ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಬೇಕು ಎಂಬ ಖಚಿತ ಧ್ಯೇಯವುಳ್ಳವರಾಗಿದ್ದರು. ಹಾಗಾಗಿ ತಮ್ಮ ಪತ್ನಿಗೆ ಮನೆಯಲ್ಲಿಯೇ ಶಿಕ್ಷಣ ಆರಂಭಿಸಿದರು. ಶಿಕ್ಷಣ ಕುರಿತ ಇವರ ಬದ್ಧತೆಯನ್ನು ಅರಿಯಬೇಕೆಂದರೆ ದ್ಯಾನನೋದಯ (15-09-1853) ಎಂಬ ಪತ್ರಿಕೆ ನೀಡಿದ ಸಂದರ್ಶನದಲ್ಲಿನ ‘‘ನನಗೆ ದೊರೆತಂತೆ, ಜ್ಞಾನ ತಾಯಿಯ ಮೂಲಕ ಮಕ್ಕಳಿಗೆ ಬರುವುದಾದರೆ ಅದು ಮುಖ್ಯ ಮತ್ತು ಉತ್ತಮ. ಹಾಗಾಗಿ ಯಾರು ಈ ದೇಶದ ಕಲ್ಯಾಣ ಮತ್ತು ಖುಷಿಯನ್ನು ಇಷ್ಟಪಡುತ್ತಾರೋ ಅವರೆಲ್ಲಾ ಖಂಡಿತವಾಗಿ ಇದರ ಕಡೆಗೆ ಗಮನ ಕೊಡಬೇಕು. ದೇಶದ ಆಭಿವೃದ್ಧಿಯನ್ನು ಬಯಸುವ ಪ್ರತಿಯೊಬ್ಬರೂ ಈ ಜ್ಞಾನಧಾರೆಗಳು ಮಹಿಳೆಯರನ್ನು ತಲುಪುವಂತೆ ನೋಡಿಕೊಳ್ಳಬೇಕು. ಹಾಗಾಗಿಯೇ ನಾನು ಮೊಟ್ಟಮೊದಲಿಗೆ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದಿದ್ದೇನೆ. ಆದರೆ ಇದು ನನ್ನ ಕುಲ ಬಾಂಧವರಿಗೇ ಇಷ್ಟವಿಲ್ಲ. ಇದಕ್ಕಾಗಿ ನನ್ನ ಸ್ವಂತ ತಂದೆಯೇ ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಶಾಲೆ ನಡೆಸಲು ಯಾರೂ ಜಾಗಕೊಡಲು ಸಿದ್ಧರಿಲ್ಲ, ಹೊಸದೊಂದನ್ನು ಕಟ್ಟಿಕೊಳ್ಳಲು ನಮ್ಮಲ್ಲಿ ಹಣವಿಲ್ಲ. ಜನರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ. ಆದರೆ ಲಾಹೂಜಿ ರಗ್, ರೌತ್ ಮಂಗ್ ಮತ್ತು ರನ್ಬಾ ಮೆಹರ್ ತಮ್ಮ ಮತಬಾಂಧವರಿಗೆ ಶಿಕ್ಷಣದ ಮಹತ್ವವನ್ನು ತಿಳಿಹೇಳಿ ಅವರನ್ನು ಶಾಲೆಗೆ ಬರಲು ಒಪ್ಪಿಸಿದ್ದಾರೆ ಎಂಬ ಅವರ ಹೇಳಿಕೆಯನ್ನು ಗಮನಿಸಬೇಕು.
 

    ಇವೆಲ್ಲದರಿಂದ ಪ್ರಭಾವಿತರಾದ ಸಾವಿತ್ರಿಭಾಯಿ ಫುಲೆ ಇಲ್ಲಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಶಿಕ್ಷಣ, ವಿಮೋಚನೆ ಹಾಗೂ ಸಾಂಸ್ಕೃತಿಕ ವಿನ್ಯಾಸಗಳ ಪರಿವರ್ತನೆಯನ್ನು ತಮ್ಮ ಬದುಕಿನ ಧ್ಯೇಯವಾಗಿ ಸ್ವೀಕರಿಸಿದರು. 14ನೆ ಜನವರಿ, 1848ರಂದು ಜ್ಯೋತಿರಾವ್ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದರು, ಸಾವಿತ್ರಿಭಾಯಿ ಆ ಶಾಲೆಯ ಮತ್ತು ಈ ದೇಶದ ಪ್ರಥಮ ಶಿಕ್ಷಕಿಯಾದರು. ಆದರೂ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭದ ಮಾತಾಗಿರಲಿಲ್ಲ, ಏಕೆಂದರೆ ಇಲ್ಲಿ ಇದನ್ನು ಪಾಪವೆಂದು ಪರಿಗಣಿಸಲಾಗಿತ್ತು. ಪ್ರತಿದಿನ ಇವರು ಶಾಲೆಯತ್ತ ಹೋಗುವಾಗ ಒಂದಷ್ಟು ಸಂಪ್ರದಾಯವಾದಿಗಳ ಒಂದು ಗುಂಪು ಇವರನ್ನು ತುಚ್ಚ ಭಾಷೆಯಲ್ಲಿ ಹೀಗಳೆಯುತ್ತಿತ್ತು ಮತ್ತು ಕಲ್ಲು, ಕೆಸರು, ಕಸ ಇತ್ಯಾದಿಗಳನ್ನು ಅವರ ಮೇಲೆ ಎಸೆಯುತ್ತಿತ್ತು. ಹೀಗಾಗಿ ಇವರು ನಿತ್ಯವೂ ತಮ್ಮ ಜೊತೆಯಲ್ಲಿ ಇನ್ನೊಂದು ಸೀರೆಯನ್ನು ತೆಗೆದುಕೊಂಡು ಹೋಗಿ, ಶಾಲೆ ತಲುಪಿದ ನಂತರ ಕೊಳೆಯಾದ ಸೀರೆಯನ್ನು ತೆಗೆದು ಹೊಸ ಸೀರೆಯನ್ನು ಉಡುತ್ತಿದ್ದರು. ಆದರೆ ಅವರು ಇದ್ಯಾವುದಕ್ಕೂ ಹೆದರಲಿಲ್ಲ. ಹೆಣ್ಣು ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಮತ್ತು ಮನದಟ್ಟು ಮಾಡಿಸುವ ಸಲುವಾಗಿ ಪಾಠಗಳನ್ನು ಕಥೆಯ ರೂಪದಲ್ಲಿ ಹೇಳುವುದು, ತಾವೇ ಬರೆದ ಪದ್ಯಗಳನ್ನು ಮಕ್ಕಳ ಮುಂದೆ ವಾಚಿಸುವುದು, ಕ್ರೀಡಾ ಚಟುವಟಿಕೆಗಳನ್ನು ನಡೆಸುವುದೂ ಸೇರಿದಂತೆ ಬೋಧನೆಗೆ ಹೊಸ ಆಯಾಮ ನೀಡಿದರು. 1854ರಲ್ಲಿ ಪ್ರಕಟವಾದ ಇವರ ಮೊದಲ ಕವನ ಸಂಕಲನ ‘ಕಾವ್ಯಫುಲೆ’ ಶಿಕ್ಷಣ ಮತ್ತು ಇಂಗ್ಲಿಷ್‌ಕಲಿಕೆಯ ಅಗತ್ಯವನ್ನು ಹೇಳುತ್ತಿತ್ತು. ಇವರ ಈ ಬದ್ಧತೆಯನ್ನು ಗಮ ನಿಸಿದ ಅನೇಕರು ಸ್ವಯಂಪ್ರೇರಣೆಯಿಂದ ತಮ್ಮ ಮಕ್ಕಳನ್ನು ಇವರ ಶಾಲೆಗೆ ಕಳುಹಿಸಲು ಆರಂಭಿಸಿದರು. ಹೀಗಾಗಿ 1949ರಲ್ಲಿ 25 ಇದ್ದ ವಿದ್ಯಾರ್ಥಿನಿಯರ ಸಂಖ್ಯೆ 1950ರ ಹೊತ್ತಿಗೆ 75ಕ್ಕೇರಿತು. ಇವರ ಉದ್ದೇಶ ಕೇವಲ ಅಕ್ಷರಗಳನ್ನು ಕಲಿಸುವುದಾಗಿರಲಿಲ್ಲ. ಜೊತೆಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮನದಲ್ಲಿ ಹೊಸಬೆಳಕಿನ ದೊಂದಿ ಹಚ್ಚುವುದು ಅವರ ಉದ್ದೇಶವಾಗಿತ್ತು. ಇವರ ಕಲಿಸುವ ಕ್ರಮ ಸರಳವಾ ಗಿದ್ದು ಅನೇಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ಒಳಗೊಂಡು ಸಾಗುತ್ತಿತ್ತು. ಇಂದು ನಾವು ಶಿಕ್ಷಣದ ತಾತ್ವಿಕತೆಯ ವಿಷಯ ಬಂದಾಗ ಗಾಂಧಿ ಮಾದರಿ, ಝಾಕಿರ್ ಹುಸೇನ್ ವರದಿಗಳನ್ನು ಮಂದಿಟ್ಟು ಕೊಂಡು ಚರ್ಚಿಸುತ್ತೇವೆ. ಆದರೆ ನಮ್ಮ ಯಾವ ಬುದ್ಧಿಜೀವಿಗಳೂ ಈ ದಂಪತಿಗಳು ಅನುಸರಿಸಿದ ವಾಸ್ತವಿಕ ವಿಶ್ವ ಮಾದರಿಯ ಬಗ್ಗೆ ಮಾತನಾಡುವುದೇ ಇಲ್ಲ. ಇಂದು ನಾವು ಶಿಕ್ಷಣಕ್ಕೆ ಆದ್ಯತೆ ನೀಡುವ ಹೆಸರಿನಲ್ಲಿ ಶಿಕ್ಷಣ ಹಕ್ಕು, ಮಧ್ಯಾಹ್ನದ ಊಟ ಇತ್ಯಾದಿಗಳನ್ನು ಕಾಣುತ್ತೇವೆ. ಆದರೆ ಇಲ್ಲಿಗೆ 184 ವರ್ಷಗಳ ಹಿಂದೆಯೇ ಸಾವಿತ್ರಿಭಾಯಿ ಮಕ್ಕಳು ಬಡತನದ ಕಾರಣದಿಂದ ಶಾಲೆ ತೊರೆಯುವುದನ್ನು ಗಮನಿಸಿ ಅಂತಹ ವರಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದರು. ತಮಗೆ ದೊರೆಯುವ ಗೌರವ-ಸನ್ಮಾನಗಳ ಸಂದರ್ಭದಲ್ಲಿ ಬೇರೆ ವಸ್ತುಗಳನ್ನು ನೀಡುವ ಬದಲಿಗೆ ಪುಸ್ತಕಗಳನ್ನು ಕೊಡಿ ಎಂದು ಕೇಳುವ ಮೂಲಕ ಶಾಲೆಯಲ್ಲಿ ಗ್ರಂಥಾಲಯ ಕಟ್ಟಿದ್ದಲ್ಲದೆ, ಈ ಮೂಲಕ ತಮ್ಮ ಶಿಷ್ಯರಿಗೂ ಸ್ಫೂರ್ತಿಯಾದರು. ಕಾಲಕಾಲಕ್ಕೆ ಪೋಷಕರ ಸಭೆೆ ನಡೆಯುವ ಮೂಲಕ ಶಿಕ್ಷಣದ ಮಹತ್ವ; ಇದು ಅವರ ಮಕ್ಕಳಿಗೆ ದೊರೆಯುವಲ್ಲಿ ಅವರ ಜವಾಬ್ದಾರಿ ಹಾಗೂ ಅವರನ್ನೂ ಒಳಗೊಳ್ಳುವ ಪ್ರಕ್ರಿಯೆ ಆರಂಭಿಸಿದರು. ಮಕ್ಕಳ ಬಗ್ಗೆ ಮುಂಗಾಣ್ಕೆ ಉಳ್ಳವರಾದ ಸಾವಿತ್ರಿಭಾಯಿ ಪೌಷ್ಟಿಕಾಂಶಗಳ ಕೊರತೆ ಮತ್ತು ಕಲಿಕೆಯ ನಡುವಿನ ಸಂಬಂಧಗಳನ್ನು ಅರಿತಿದ್ದರು. ಹಾಗಾಗಿ ಪ್ರತೀ ಮಕ್ಕಳ ಆರೋಗ್ಯದತ್ತ ವೈಯಕ್ತಿಕ ಕಾಳಜಿವಹಿಸುತ್ತಿದ್ದರು. ಆದರೆ ಇಂದು ಶೇ.46ರಷ್ಟು ಶಾಲಾ ಮಕ್ಕಳು ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ ಹಾಗೂ ಒಂದು ಕೋಟಿ ಮಕ್ಕಳು ಶಾಲೆಯಿಂದ ಹೊರಗಿವೆ. 2015ರ ಹೊತ್ತಿಗೆ ಜಾಗತಿಕವಾಗಿ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ವಿಶ್ವಸಂಸ್ಥೆಯ ಆಶಯದ ಭಾಗವಾಗಿ ಚಾಲ್ತಿಗೆ ಬಂದ ಶಿಕ್ಷಣಹಕ್ಕು ಕಾಯ್ದೆ ಒಂದರ್ಥದಲ್ಲಿ ಒತ್ತಾಯದ ಕ್ರಮವಾಗಿದೆ. ಹಾಗಾಗಿ ಇದರ ಉದ್ದೇಶ ಪ್ರಶ್ನಾರ್ಹವಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಕೋನದ ಬಗ್ಗೆ ಯಾವ ಬದ್ಧತೆಯೂ ಇಲ್ಲದ ಸರಕಾರಗಳು ಕೇವಲ ವಿಶ್ವಸಂಸ್ಥೆಯ ಒತ್ತಡಕ್ಕೆ ಕಟ್ಟುಬಿದ್ದು ಮಾಡುತ್ತಿರುವ ಕೆಲಸ ಇದಾಗಿದೆ. ನಮ್ಮ ಸಾಕ್ಷರತಾ ದರವನ್ನು ಕೇಳಿದರೆ ಯಾರಿಗಾದರೂ ಸಂತೋಷವಾಗಬಹುದು. ಆದರೆ ಆ ಪ್ರಮಾಣವನ್ನು ವಿವರವಾಗಿ ಪರಿಶೀಲಿಸಿದಾಗ ವಾಸ್ತವದಲ್ಲಿ ಕೆಲಸಕ್ಕೆ ಬರುವ ಪ್ರಮಾಣವೆಷ್ಟು ಎಂದು ನೋಡಿದರೆ ಗಾಬರಿಯಾಗುತ್ತದೆ.

 ಇತರ ಸಾಮಾಜಿಕ ಸುಧಾರಣೆಗಳು 
 ಆಗಿನ ಕಾಲದಲ್ಲಿ ವಿಧವಾ ಸಮಸ್ಯೆ ತುಂಬಾ ಕಠೋರವಾಗಿತ್ತು. ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರಲ್ಲಿ ಇದು ಪಿಡುಗಿನ ರೂಪದಲ್ಲಿತ್ತು. ಈ ವಿಧವೆಯನ್ನು ತಮ್ಮ ದೈಹಿಕ ತೃಷೆಗೆ ಬಳಸಿಕೊಂಡ ಪುರುಷರು ನಂತರದಲ್ಲಿ ಅವರನ್ನು ತೊರೆದು ಹೋಗುತ್ತಿದ್ದರು. ಹೀಗಾಗಿ ಅಪಮಾನ ಮತ್ತು ಆಸರೆ ಇಲ್ಲದೆ ಬೀದಿಪಾಲಾಗುವ ಸ್ಥಿತಿಯಲ್ಲಿ ಅಂತಹ ಮಹಿಳೆಯರು ಆತ್ಮಹತ್ಯೆಗೆ ಮೊರೆಹೋಗುತ್ತಿದ್ದರು. ಸುಲಭ ಲಭ್ಯವಾದ ಯಾವುದೇ ಸಂತಾನ ನಿಯಂತ್ರಣ ಕ್ರಮಗಳಿಲ್ಲದ ಆಕಾಲದಲ್ಲಿ ಮಹಿಳೆಯರು ಬಲಿಪಶುಗಳಾಗುತ್ತಿದ್ದುದು ಸಾಮಾನ್ಯವಾಗಿತ್ತು. ಇಂತಹ ಸಮಯದಲ್ಲಿ ಫುಲೆ ದಂಪತಿಗಳು ಇಂತಹ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಆಸರೆ ನೀಡುವಂತಹ ‘‘ಬಾಲಹತ್ಯಾ ಪ್ರಬಂಧಕ ಗೃಹ’’ ಎಂಬ ಆಶ್ರಯಧಾಮವನ್ನು ಅವರ ಮನೆಯಲ್ಲಿಯೇ ಆರಂಭಿಸಿದರು. ಇದರ ಬಗ್ಗೆ ಸುತ್ತಮುತ್ತಲ ನಗರಗಳ ಪ್ರಮುಖ ಸ್ಥಳಗಳು ಮತ್ತು ಯಾತ್ರಾಸ್ಥಳಗಳಲ್ಲಿ ಪ್ರಕಟಣಾ ಪತ್ರಗಳನ್ನು ಅಂಟಿಸಿ ಅಪಾರ ಪ್ರಚಾರ ನೀಡಿದರು. ಹೀಗಾಗಿ 1873ರಲ್ಲಿ ಇವರ ಆಶ್ರಯಧಾಮದಲ್ಲಿ ವಿವಿಧ ಭಾಗಗಳ 66 ಮಂದಿ ಬ್ರಾಹ್ಮಣ ಮಹಿಳೆಯರು ಆಶ್ರಿತರಾಗಿದ್ದರು. ಹಾಗೆಯೇ ಇಂತಹ ಒಬ್ಬ ಬ್ರಾಹ್ಮಣವಿಧವೆಯ ಮಗುವೊಂದನ್ನು ದತ್ತು ಪಡೆದು ಅದಕ್ಕೆ ಕಾಶಿ ಬಾಯಿ ಎಂದು ಹೆಸರಿಟ್ಟು ಸಾಕಿದರು. ಅವಳು ಬೆಳೆದು ದೊಡ್ಡವಳಾಗಿ ಇವರ ಧ್ಯೇಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋದಳು.


ಆಗಿನ ಕಾಲದ ಇನ್ನೊಂದು ಸಮಸ್ಯೆಯೆಂದರೆ ಬಾಲ್ಯವಿವಾಹ. ಆದರೆ ಇಲ್ಲಿ ಗಂಡುಹೆಣ್ಣು ಇಬ್ಬರೂ ಬಾಲ್ಯದಲ್ಲಿದ್ದಾಗ ಮಾಡುವುದು ಬೇರೆ. ಈವಿವಾಹಗಳಲ್ಲಿ ಹೆಣ್ಣು ಮಾತ್ರ ಚಿಕ್ಕ ವಯಸ್ಸಿನ ಹುಡುಗಿಯಾಗಿದ್ದು,ಗಂಡು ತುಂಬಾ ವಯಸ್ಸಾದವನಾಗಿರುತ್ತಿದ್ದ. ಹಾಗಾಗಿ ಹೆಣ್ಣು ಚಿಕ್ಕವಳಿ ದ್ದಾಗಲೇ ಗಂಡ ವಯಸ್ಸಾಗಿಯೋ ಇಲ್ಲಾ ಕಾಯಿಲೆ ಬಂದೋ ಮೃತನಾಗಿ ಹೋಗುತ್ತಿದ್ದ. ಆಗ ಅವರ ಮನೆಯವರು ಆ ಬಾಲೆಯನ್ನು ವಿಧವೆಯಾ ಗಿಸಿ, ಅವಳ ತಲೆಬೋಳಿಸಿ ಮೂಲೆಗೆ ಕೂರಿಸುತ್ತಿದ್ದರು. ಈ ಹೆಣ್ಣು ಮಕ್ಕಳ ಸಂಕಷ್ಟವನ್ನರಿತ ಸಾವಿತ್ರಿಭಾಯಿಯವರು ಎಲ್ಲೆಡೆ ಸುತ್ತಿ ಅಂತಹ ವಿಧವೆಯರು ಮತ್ತು ಕ್ಷೌರಿಕರನ್ನು ಸಂಘಟಿಸಿ ಒಂದು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸಂಘಟಿಸಿದರು. ಈ ಮೂಲಕ ಕ್ಷೌರಿಕರು ಅಂತಹ ವಿಧವೆಯರ ಕೂದಲು ಬೋಳಿಸಲು ನಿರಾಕರಿಸುವಂತೆ ಪ್ರೇರೇಪಿಸಿದರು. ಇದು ಅಂದಿಗೆ ತೀರಾ ಹೊಸ ಪರಿಕಲ್ಪನೆಯಾಗಿತ್ತು.
ಅಂದಿನ ಸಮಾಜವನ್ನು ಕಾಡುತ್ತಿದ್ದ ಇನ್ನೊಂದು ಮಹಾ ಪಿಡುಗೆಂದರೆ ಅಸ್ಪಶ್ಯತೆ. ಮೇಲ್ಜಾತಿಯ ಜನರು ಇವರಿಗೆ ನೀರು ಮುಟ್ಟಲು ಬಿಡುತ್ತಿರಲಿಲ್ಲ. ಇದನ್ನು ಅರಿತ ಸಾವಿತ್ರಿಭಾಯಿಯವರು ಅವರ ಕೆರೆಯನ್ನೇ ದಲಿತರಿಗೆ ತೆರೆದಿಟ್ಟರು.

 
  ಹಾಗೆಯೇ ಮಹಿಳೆಯರ ನಡುವೆಯೂ ಆಚರಣೆಯಲ್ಲಿದ್ದ ಜಾತಿಭೇದವನ್ನರಿತ ಸಾವಿತ್ರಿಭಾಯಿ ಮಹಿಳೆಯರನ್ನು ಸಂಘಟಿಸಿದರು ಮತ್ತು ತಿಲ್‌ಗುರ್ ಎಂಬ ಹಬ್ಬದ ಆಚರಣೆಯನ್ನು ಆರಂಭಿಸಿದರು. ಈ ಸಭೆೆಗಳು ಮತ್ತು ಹಬ್ಬಗಳಲ್ಲಿ ಯಾವ ಜಾತಿಯ ಮಹಿಳೆಯರು ಬೇಕಾದರೂ ಭಾಗವಹಿಸಬಹುದಿತ್ತು. ಇದು ವಿವಿಧ ಜಾತಿ ಸಮುದಾ ಯಗಳ ಮಹಿಳೆಯರು ತಮ್ಮ ತಮ್ಮ ಸಮಸ್ಯೆಗಳು, ದೃಷ್ಟಿಕೋನಗಳನ್ನು ಪರಸ್ಪರ ಹಂಚಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿತ್ತು. ಆ ನಂತರ ಸಾವಿತ್ರಿಭಾಯಿಯವರಿಗೆ ಅನಿಸಿದ್ದೇನೆಂದರೆ ಮಹಿಳೆಯರನ್ನು ಮಾತ್ರ ಸಂಘಟಿಸುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಮಹಿಳೆಯರ ಇಂದಿನ ದುಃಸ್ಥಿತಿಗೆ ಪುರುಷಪ್ರಾಧಾನ್ಯ ವ್ಯವಸ್ಥೆ ಮತ್ತು ಇದನ್ನೇ ಆಧರಿಸಿದ ಮನಃಸ್ಥಿತಿಗಳು ಕಾರಣವಾಗಿವೆ. ಆದ್ದರಿಂದ ಮಹಿಳೆ ಯರು ಸಂಘಟಿತರಾಗಿ ತನ್ನ ಶೋಷಣೆಯ ವಿರುದ್ಧ ಧ್ವನಿ ಎತ್ತುವುದರ ಮೂಲಕ ಮಾತ್ರ ಇದನ್ನು ಎದುರಿಸಬಹುದಾಗಿದೆ ಎಂಬುದನ್ನು ಕಂಡು ಕೊಂಡರು. ಇದರ ಮುಂದಿನ ಹೆಜ್ಜೆಯಾಗಿ ಮಹಿಳೆಯರ ಸಂಘಟನೆ ಮತ್ತು ವಿಮೋಚನೆಯ ಉದ್ದೇಶ ಹೊಂದಿದ್ದ ಮಹಿಳಾ ಮಂಡಳಿ ಎಂಬ ಸಂಘಟನೆಯನ್ನು 1852ರಲ್ಲಿ ಪುಣೆಯಲ್ಲಿ ಸ್ಥಾಪಿಸಿದರು.
 ಶೈಕ್ಷಣಿಕ ಫಲಪ್ರಮಾಣವಾದಿ
     ಸಾವಿತ್ರಿಭಾಯಿರವರು ಸಾರ್ವಜನಿಕ ಶಿಕ್ಷಣದ ಅಭಿವೃದ್ಧಿಯನ್ನು ಪ್ರಾಯೋಗಿಕ ದೃಷ್ಟಿಕೋನದಿಂದ ನೋಡಿದವರು. ಈ ದೇಶದ ಬಡಜನರ ಹಿಂದುಳಿದಿರುವಿಕೆಗೆ ಶಿಕ್ಷಣ ಒಂದು ಮಹತ್ವದ ಕಾರಣ ಎಂಬುದನ್ನು ಕಂಡುಕೊಂಡರು. ಹಾಗಾಗಿ ಜನರಿಗೆ ಊಟ, ವಸತಿ, ಬಟ್ಟೆ ಮತ್ತು ಔಷಧಗಳಷ್ಟೇ ಅತ್ಯಗತ್ಯವಾದ ಇನ್ನೊಂದಿದ್ದರೆ ಅದು ಶಿಕ್ಷಣ ಎಂದು ಹೇಳಿದರು. ಶಿಕ್ಷಣದ ಅರ್ಥ ಕೇವಲ ಜ್ಞಾನಾರ್ಜನೆ ಮತ್ತು ಪದವಿ ಮಾತ್ರವಲ್ಲ, ಅದು ಸ್ವತಂತ್ರ ಮನಸ್ಸು ಮತ್ತು ಸ್ವತಂತ್ರ ಆಲೋಚನೆಯನ್ನೂ ಹೊಂದುವಂತಿರಬೇಕು. ಈ ಉದ್ದೇಶದಿಂದಲೇ ಅವರು ಎಲ್ಲ ಭಾರತೀಯರಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನ ಶಿಕ್ಷಣ ದೊರೆಯುವಂತೆ ಮಾಡಲು ತಮ್ಮ ಎಲ್ಲಾ ಶಕ್ತಿಸಾಮರ್ಥ್ಯಗಳನ್ನು ವಿನಿಯೋಗಿಸಿದರು. ಆದರೆ ಈಗ ನಮ್ಮದೇಶದಲ್ಲಿರುವ ಶಿಕ್ಷಣ ನೀತಿಯನ್ನು ನೋಡಿದರೆ ಇದು ನಿಜಕ್ಕೂ ಒಂದು ಪ್ರಜಾತಂತ್ರದ ವ್ಯವಸ್ಥೆಗೆ ಸೂಕ್ತವಾಗಿದೆಯೇ ಎಂಬ ಸಂದೇಹ ಬರುತ್ತಿದೆ. ಇದರಿಂದ ಸ್ವಾಭಿಮಾನಿ ಮತ್ತು ಸಮರ್ಥ ಭಾರತವನ್ನು ಕಟ್ಟಲು ಸಾಧ್ಯವೇ? ಈಗಿರುವ ನೀತಿಯಲ್ಲಿ ಅದನ್ನು ಸಾಧಿಸಲು ಸಾಧ್ಯವಿಲ್ಲ ಅನಿಸುತ್ತದೆ.
    ಇತ್ತೀಚಿನ ಅಂದರೆ 2014ರ ಎಎಸ್‌ಇಆರ್ ವರದಿಯ ಪ್ರಕಾರ ಶಾಲೆಗಳಲ್ಲಿ ಮೂಲತಃ ಓದುವ ಮಟ್ಟ ತೀರಾ ನಿರಾಶಾದಾಯಕವಾಗಿದೆ. 3ನೆ ತರಗತಿಯ ನಾಲ್ಕನೆ ಒಂದು ಭಾಗ ವಿದ್ಯಾರ್ಥಿಗಳು ಮಾತ್ರ ಎರಡನೆ ತರಗತಿ ಪಠ್ಯವನ್ನು ಸರಾಗವಾಗಿ ಓದಬಲ್ಲರು. ಇದು 5ನೆ ತರಗತಿಯಲ್ಲಿ ಅರ್ಧ ಭಾಗದಷ್ಟು ಹೆಚ್ಚಿದೆ. ಇನ್ನೂ ಆಶ್ಚರ್ಯವೆಂದರೆ ಎಂಟನೆ ತರಗತಿಯ ಶೇ.75 ಭಾಗ ಮಕ್ಕಳು ಮಾತ್ರ 2ನೆ ತರಗತಿ ಪಠ್ಯವನ್ನು ಸರಾಗವಾಗಿ ಓದಬಲ್ಲರು, ಅಂದರೆ ಉಳಿದ 25 ಭಾಗ ಮಕ್ಕಳಿಗೆ ಇದು ಬರುವುದಿಲ್ಲ. 6-14ವಯೋಮಾನದೊಳಗಿನ ಒಟ್ಟು ಮಕ್ಕಳಲ್ಲಿ ಶೇ.20ರಷ್ಟು ಮಕ್ಕಳು ಈಗಲೂ ಶಾಲೆಗೆ ಹೋಗಲಾಗುತ್ತಿಲ್ಲ. ಅದೊಂದು ಕಾಲವಿತ್ತು ವಿಶ್ವದಾದ್ಯಂತ ವಿದ್ಯಾರ್ಥಿಗಳು ಭಾರತದ ನಳಂದ ವಿಶ್ವವಿದ್ಯಾನಿಲಯಕ್ಕೆ ಬಂದು ಕಲಿಯುತ್ತಿದ್ದರು. ಆದರೆ ಇಂದು ಜಗತ್ತಿನ ಅತ್ಯುನ್ನತ ಎನ್ನುವಂಥ 200 ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಭಾರತದ ಯಾವ ವಿಶ್ವವಿದ್ಯಾನಿಲಯಗಳೂ ಸ್ಥಾನ ಪಡೆಯುವುದಿಲ್ಲ. ‘‘ಪ್ರಜಾತಂತ್ರ ಮತ್ತು ಶಿಕ್ಷಣ ಎಂಬ ತಮ್ಮ ಕೃತಿಯಲ್ಲಿ ಪ್ರೊ. ಜಾನ್ ದೆವೆ ಹೇಳುತ್ತಾರೆ... ‘‘ಸಾಮಾಜಿಕ ಅನುಭವಗಳನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವಹಿಸುತ್ತದೆ. ಇದರಲ್ಲಿ ಸಂಸ್ಕೃತಿ, ಜ್ಞಾನ, ಭಾಷೆ, ನಂಬಿಕೆ ಇತ್ಯಾದಿಗಳೂ ಸೇರಿರುತ್ತವೆ. ಮತ್ತು ಇವುಗಳ ಬೆಳವಣಿಗೆ ಹಾಗೂ ಬಿಕ್ಕಟ್ಟುಗಳೂ ತಲೆಮಾರಿನಿಂದ ತಲೆಮಾರಿಗೆ ತಲುಪುತ್ತವೆ. ಕುಟುಂಬ, ಸಮುದಾಯ, ಧರ್ಮ, ಆರ್ಥಿಕತೆ, ರಾಜಕಾರಣ ಇವೆಲ್ಲವನ್ನೂ ಮುಂದಿನ ತಲೆಮಾರಿಗೆ ಸಾಗಿಸುವಲ್ಲಿ ಶಾಲೆಗಳು ಮಾಧ್ಯಮಗಳಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದು ಭಾರತದಲ್ಲಿ ಆಗುತ್ತಿಲ್ಲ ಎಂದೆನಿಸುತ್ತಿದೆ. ಭಾರತದಲ್ಲಿ ಶಿಕ್ಷಣವನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಮತ್ತು ಕಾರ್ಪೊರೇಟೀರಕಣಕ್ಕೆ ಒಳಪಡಿಸಲಾಗುತ್ತಿದೆ. ಖಾಸಗೀಕರಣ ಕೇವಲ ಶಿಕ್ಷಣವನ್ನು ವ್ಯಾಪಾರವಾಗಿ ಮಾತ್ರ ಪರಿವರ್ತಿಸುತ್ತಿಲ್ಲ. ಜೊತೆಗೆ ದೇವರು ಮತ್ತು ದೇವಮಾನವರಿಗೂ ವ್ಯಾಪಾರದ ದಿಡ್ಡಿಬಾಗಿಲನ್ನು ತೆರೆದಿದೆ ಎಂದು ಮೀರಾ ನಂದ ಹೇಳುತ್ತಾರೆ. ಇವರ ಪ್ರಕಾರ ‘‘ಪ್ರಭುತ್ವಗಳು ಖಾಸಗಿ ಕ್ಷೇತ್ರದ ನೆರವಿನೊಂದಿಗೆ ಹಿಂದುತ್ವ ವಿಸ್ತರಣೆಗೆ ಅನುವು ಮಾಡಿಕೊಡುತ್ತಿವೆ. ಇದಕ್ಕೆ ಧಾರ್ಮಿಕ ಪ್ರವಾಸೋದ್ಯಮ, ಉನ್ನತ ಶಿಕ್ಷಣಕ್ಕೆ ಧಾರ್ಮಿಕ ಸಂಸ್ಥೆಗಳಿಗೆ ಅಪಾರ ಅವಕಾಶ ನೀಡುವ ಮೂಲಕ ಈ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಧಾರ್ಮಿಕ ಟ್ರಸ್ಟ್ ಗಳ ಹೆಸರನ್ನು ಬಳಸಿ, ವೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿ ಅನುಮತಿ ಪಡೆದುಕೊಂಡು, ಆ ವೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಅತ್ಯಂತ ಕಡಿಮೆ ಬೆಲೆಗೆ ಸಾವಿರಾರು ಎಕರೆ ಜಮೀನುಗಳನ್ನು ಪಡೆದು ಅಲ್ಲಿ ಹಿಂದುತ್ವವನ್ನು ಪ್ರೊಮೋಟ್ ಮಾಡಲಾಗುತ್ತಿದೆ. ಇದರ ಪರಿಣಾಮವೇ ಈಗ 15ಲಕ್ಷ ಶಾಲೆಗಳು ಮತ್ತು 75,000 ಆಸ್ಪತ್ರೆಗಳಿದ್ದರೆ 25 ಲಕ್ಷ ದೇವಾಲಯಗಳನ್ನು ಈ ದೇಶ ಹೊಂದಿದೆ. ಉತ್ತರ ಪ್ರದೇಶ ಮತ್ತು ದಿಲ್ಲಿ ಸರಕಾರಗಳು ಅಕ್ಷರಧಾಮಗಳನ್ನು ಕಟ್ಟಲು 100 ಎಕರೆ ಜಮೀನುಗಳನ್ನು ನೀಡಿವೆ. ಕರ್ನಾಟಕದಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿಯವರು 99 ಎಕರೆ ಭೂಮಿ ಹೊಂದಿದ್ದಾರೆ. ಇದು ನಮ್ಮನ್�

Writer - ರಾಹುಲ್ ಚಿಮೂರ್ಕರ್

contributor

Editor - ರಾಹುಲ್ ಚಿಮೂರ್ಕರ್

contributor

Similar News