ನನಗೆ ಬೈಕ್ ಬೇಡ..!

Update: 2015-12-29 08:35 GMT

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಎಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ..?
ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ..


ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ‘ಪರ್ಸ್’ನ್ನು ತಗೊಂಡು ಬಂದೆ.ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.


ನಡೆಯುತ್ತಿದ್ದರೆ, ‘ಬೂಟ್’ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಆದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ‘ಬೂಟ್’ಗಳ ಒಳಗೆ ಒದ್ದೆಯಾದ ಅನುಭವವಾಯಿತು. ಎತ್ತಿ ನೋಡಿದೆ ಬೂಟ್’ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.


ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು.ಅಪ್ಪನ ‘ಪರ್ಸ್’ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, ಲ್ಯಾಪ್‌ಟಾಪ್ ಬಿಲ್ಲು. ಆ ಲ್ಯಾಪ್‌ಟಾಪ್ ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.


ಮತ್ತೆ ಅದರಲ್ಲಿ ಆಫೀಸ್’ಗೆ ಒಳ್ಳೆಯ ಬೂಟ್’ಗಳನ್ನು ಹಾಕಿಕೊಂಡು ಬರುವಂತೆ ಮೆನೇಜರ್ ಕೊಟ್ಟ ನೋಟಿಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.


‘ನಮ್ಮ ಈ ಎಕ್ಸ್‌ಚೇಂಜ್ ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ’ಎಂಬ ಭಿತ್ತಿಪತ್ರ ಕಾಣಿಸಿತ್ತು.


ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟರ್ ಕಾಣಿಸುತ್ತಿಲ್ಲವಲ್ಲ..?
ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ...
ಈಗ ‘ಬೂಟ್’ಗಳಿಂದ ನೋವಾಗುತ್ತಿಲ್ಲ..

ಮನೆಯಲ್ಲಿ ಅಪ್ಪ ಇಲ್ಲ.. ಸ್ಕೂಟರ್ ಇಲ್ಲ.. ನನಗೆ ಅರ್ಥವಾಯಿತು.ತಕ್ಷಣ ಎಕ್ಸ್ ಚೇಂಜ್ ಆಫರ್ ನೀಡುವ ಸ್ಥಳಕ್ಕೆ ಓಡಿಬಂದೆ.ಅಪ್ಪ ಅಲ್ಲಿದ್ದಾರೆ..!


ದುಃಖವನ್ನು ತಡೆದುಕೊಳ್ಳಲಾಗಲಿಲ್ಲ.ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ..!
ಬೇಡ ಅಪ್ಪ.. ನನಗೆ ಬೈಕ್ ಬೇಡ..! ಅಂದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News