ಅಂದುಕೊಂಬುವರು ನಾವು; ನಡೆಸುವವ ನೀವು !

Update: 2015-12-29 11:32 GMT

ನೀವು ಓಡಿಯಾಡುವ ಜಾಗ, ಪರಿಸರಗಳಲ್ಲಿ, ಎಲ್ಲೋ, ಹೇಗೋ, ಒಟ್ಟು ಬಹುತೇಕ ಎಲ್ಲ ಕಡೆ ಒಂದು ಪರಿಚಿತ ಚಹರೆ ಕಣ್ಣಿಗೆ ಬೀಳುತ್ತದಾದರೆ ಅದು ಬಸ್ ನಿರ್ವಾಹಕರದ್ದು; ವಿಶೇಷವಾಗಿ, ನೀವು ಬಾಲ್ಯದಿಂದ ನಡುವಯಸ್ಸಿನವರೆಗೆ, ಇನ್ನೂ ಹಿಗ್ಗಲಿಸಿ ಹೇಳುವುದಾದರೆ, ಜನ್ಮತಃ-ಸಾಯುವನಕ ಬಸ್ ಪ್ರಯಾಣವನ್ನೇ ನೆಚ್ಚಿಕೊಂಡಿರುವವರಾದರೆ. ಜಾಮಿಟ್ರಿ ಬಾಕ್ಸ್ ನಲ್ಲಿದ್ದ ಹತ್ತಿಪ್ಪತ್ತು ಪೈಸೆಗೆ ಎರಡು ಕಿ.ಮೀ ದೂರದ ಶಾಲೆ ತಲುಪಿಸುತ್ತಿದ್ದ ಕಂಡಕ್ಟರಣ್ಣ, ಬರಬರುತ್ತಾ ಡ್ರಾಪ್ ಕೊಟ್ಟದ್ದು ಎಲ್ಲೆಲ್ಲಿಗೆ?...ಮಾರುಕಟ್ಟೆ, ಮಾಲ್, ಊರಾಚೆಯ ನೆಂಟರಮನೆ, ಆಫೀಸು, ತಡರಾತ್ರಿಯ ಸಂಗೀತ ಕಛೇರಿ, ಎದ್ದುಬಿದ್ದು ಹೋಗಿ ನೋಡಿಬಂದ ಪ್ರಸಿದ್ಧ ನಾಟಕ...ಹುಹ್! ಅಸಂಖ್ಯ ಸ್ಥಳಗಳಿಗೆ. ಹಾಗೆ ನಾವು ನಮ್ಮ ಜೀವನದ ಗಣನೀಯ ಗಂಟೆಗಳನ್ನು ಈ ಸಿಟಿ ಬಸ್ ಕಂಡಕ್ಟರ್‌ಗಳ ಜೊತೆ ಕಳೆದಿರುತ್ತೇವೆ.

ಬಿಟಗಣ್ಣುಬಿಟಕೊಂಡು ನೋಡಲು, ನಿರೀಕ್ಷಣೆ ಮಾಡಲು, ಮಾತು, ಅದಿಲ್ಲದಿದ್ದರೆ, ಕೈ-ಬಾಯಿ-ದೇಹಭಾಷೆಗಳಲ್ಲಿ ಸಂವಹನ ಮಾಡಲು, ಸಣ್ಣ ಕ್ರಷ್ ಬೆಳೆಸಿಕೊಳ್ಳಲು, ಅಂಗಭಂಗಿ, ಮಾತು-ವಾದ ಅನುಕರಿಸಲು, ಗೊತ್ತಾದರೆ ಬಸ್‌ನಿಂದ ಹೊರಹಾಕುತ್ತಾರೆ ಎಂಬ ಎಚ್ಚರಿಕೆಯಲ್ಲೇ (ಅವರೊಂದಿಗೆ) ಕುಪಿತರಾಗಲು ಲಾಯಕ್ಕಾಗಿ ಒದಗುವ ಜನಾಂಗ ಇದು. ಬಸ್ ಡ್ರೆವರ್‌ಗಳ ಜೊತೆ ಇವೆಲ್ಲ ನಡೆಯೋಲ್ವ? ಎಂಬ ಅಡ್ಡ ಪ್ರಶ್ನೆಗೆ ಇಲ್ಲ ಎಂಬುದೇ ನನ್ನ ಖಚಿತ ಉತ್ತರ. ಭುಸುಗುಡುವ ಎಂಜಿನ್ ಪಕ್ಕದಲ್ಲಿ, ಎತ್ತರದ ಬಿಸಿ ಸೀಟ್ ಏರಿ ಕೂತಿರುವಾತನಿಗೆ ಒಳ ಆವರಣದ ರಂಗ್‌ಬಿರಂಗಿ ಘಟನೆಗಳೆಲ್ಲ ದೂರ ಮತ್ತು ಪರಕೀಯ. ನೂರು ಚಿಲ್ಲರೆ ಜನರನ್ನು ಗಮ್ಯ ಮುಟ್ಟಿಸುವ ಜವಾಬ್ದಾರಿ ಹೊತ್ತಿರುವ ಈ ಕಪ್ತಾನನಿಗೆ ನೂರೆಂಟು ತಲೆನೋವು: ವ್ಹೀಲ್, ಆಕ್ಸೆಲ್, ಮುಂಗನ್ನಡಿ, ಹಿಂಗನ್ನಡಿ, ಪಂಚರ್ರು, ಬ್ರೇಕು, ವೈಪರ್ರು ವಗೈರೆ ವಗೈರೆ. ಹೀಗಿರುವಾಗ, ಹತ್ತುತ್ತ, ಇಳಿಯುತ್ತ ಅಂತರ್ಧಾನರಾಗುವ ಪ್ರಯಾಣಿಕರನ್ನು ಮಾತಾಡಿಸಿ, ಸ್ನೇಹ ಬೆಳೆಸಲು ಎಲ್ಲಿದೆ ವ್ಯವಧಾನ? ಅವರೇನಿದ್ದರೂ, ಪತ್ತೇದಾರರ ಗೂಢ ಕಣ್ಣುಗಳಿಂದ ಕೆಲ ಖಾಯಂ ಕಮ್ಯುಟಿಗರನ್ನು ನಿಮಿಷಾರ್ಧ ನಿಮಿಷ ನಿರುಕಿಸಿರುತ್ತಾರೆ, ಅಷ್ಟೆ.

ಇದಕ್ಕೆ ಅಪವಾದಗಳೂ ಇರುತ್ತವೆನ್ನಿ. ಕ್ಯುಟಿಕುರದ ಘಮ ಬೀರುತ್ತ, ಸೀಟಿದ್ದರೂ ಕುಳಿತುಕೊಳ್ಳದೆ, ಆಪ್ತವಾಗಿ ಮೆಲುದನಿ ಯಲ್ಲಿ ಸಂಭಾಷಿಸುತ್ತ ಹಿಂದೆ ನಿಲ್ಲುವ ಹಿತೈಷಿ ಲಲನೆಯರ ಜತೆ ಕೆಲ ಡ್ರೆವರ್‌ಗಳು ಅಷ್ಟಿಷ್ಟು ಮೈತ್ರಿ ಬೆಳೆಸಿರುತ್ತಾರೆ. ಆದರೆ, ಸಂಬಂಧಪಟ್ಟ ಸೀಯರ ಅರ್ಜುನಗುರಿ ಎಂದರೆ, ಆಫೀಸಿನ ಮೆಟ್ಟಿಲ ಹತ್ತಿರವೇ ಇಳಿಯುವ ಹಾಗೆ, ವೇಳೆ ಮೀರಿತು ಎಂದು ರಸ್ತೆಯಲ್ಲಿ ಧಡಗುಟ್ಟುತ್ತಾ ಸಾಗುವಾಗ ಹತ್ತಿರ ಬಸ್ ನಿಲ್ಲಿಸಿ ಹತ್ತಿಸಿಕೊಳ್ಳುವ ಹಾಗೆ ಈ ಸಖ್ಯವನ್ನು ರೂಪಿಸಿಕೊಳ್ಳುವುದು. ಈಗಿನ ಮೊಬೈಲ್ ಯುಗದಲ್ಲಿ ಇದು, ತಂತಮ್ಮ ನಿಲ್ದಾಣಗಳಲ್ಲಿ ಸಮಾಧಾನವಾಗಿ ಕಾಯುವ ಬದಲು, ಐದ್ಹತ್ತು ನಿಮಿಷಕ್ಕೊಂದು ಕರೆ ಮಾಡುತ್ತ ಮೆಜೆಸ್ಟಿಕ್ ಬಿಟ್ರಾ? ಮೈಸೂರ್ ಬ್ಯಾಂಕ್ ಹತ್ರ ಇದೀರಾ? ಅಂತ ಕಿರಿಕಿರಿ ಮಾಡುವಷ್ಟು ವಿಸ್ತಾರಗೊಂಡಿದೆ.

ಅರೆ, ಬಸ್ ಹತ್ತಿದವರು, ಅಲ್ಲೇ ಕಂಬಿಹಿಡಿದು ದಾರಿಗಡ್ಡ ನಿಂತುಬಿಟ್ರಾ? ಸರಿಹೋಯ್ತು! ಮುಂದೆ ಬನ್ನಿ, ಮುಂದೆ ಬನ್ನಿ...ಇನ್ನಾದರೂ ಜೀವನದಲ್ಲಿ ಡೈಲಾಗ್ ಹೊಡೆಯೋ ಆ ಹಸನ್ಮುಖ ಕಂಡಕ್ಟರ್ ರೂಟ್‌ನಲ್ಲಿದ್ದಾರೆ: ಬಜರಂಗಿ ಬಾಯಿಜಾನ್ ಥರ ಬೈಸೆಪ್ಸ್ ಕಾಣುವಷ್ಟು ತೋಳು ಮಡಚಿದ ಖಾಕಿ ಅಂಗಿ, ಎಣ್ಣೆ ಸೀಟಿ ಒಪ್ಪವಾಗಿ ಬಾಚಿದ ಕಪ್ಪು ಕ್ರಾಪ್, ಹುಬ್ಬಿನ ಮಧ್ಯೆ ಕುಂಕುಮ. ಹ್ಹ ಚೀಟಿ, ಸೀಟಿ, ಯಾರ್ನೋಡ್ರೀ ಚೀಟಿ ಅಂತ ಗಟ್ಟಿ ಚಿಟಿಕೆ ಹೊಡೆದುಕೊಂಡು ರಾಗವಾಗಿ ಕೇಳುತ್ತ, ಶೋಕಿಯಾಗಿ ಮುಂಬಾಗಿಲಿನಿಂದ ಹಿಂಬಾಗಿಲಿಗೆ ಮತ್ತು ವೈಸ್‌ವರ್ಸಾ ನಡೆವ ವೈಖರಿ...ಯಾರನ್ನು ನೆನಪಿಸುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

  ಮಾತುಕತೆ, ನಡಾವಳಿಗೆ ಮುಂಚೆ ನಾನು ಗಮನಿಸುವುದು ನಿರ್ವಾಹಕ ಮಹಾಶಯರ ಮುಖಚಹರೆ, ಮುಖಭಾವ. ಅದರ ಬಗ್ಗೆ ವಿಶೇಷ ಆಸ್ಥೆ. (ಮುಖಗಳಲ್ಲಿ ಆಸಕ್ತಿ-ಇಂಟೆರೆಸ್ಟೆಡ್ ಇನ್ ಪೇಸಸ್ ಅಂತ ಛಾಯಾಚಿತ್ರಗ್ರಾಹಕರು ಹೇಳ್ಕೊಳ್ತಾರಲ್ಲ, ಹಾಗೆ). ಸಿವಿಲ್ ಡ್ರೆಸ್‌ನಲ್ಲಿ ಅವರು ಕಣ್ಣಿಗೆ ಬಿದ್ದಾಗ ನನ್ನ ಮೆದುಳು ಬೇರೆಲ್ಲ ನರವ್ಯೆಹಾಂಗ ವಿದ್ಯುತ್ಕಾಂತೀಯ ಅಲೆಗಳನ್ನು ಸ್ಥಗಿತಗೊಳಿಸಿ, ಯಾವ ರೂಟಿನ, ಯಾವ ಪಾಳಿಯವರು? ಅಂತ ಡಾಟಾ ಶೋಸಲು ನಿಂತುಬಿಡುತ್ತದೆ. ಇದರ ಹಿಂದೆ ಒಂದು ಕಲಿಕೆ ಇದೆ: ಬಸ್‌ನಲ್ಲಿ ಸಂಚರಿಸದೆ, ಅರೆ ಪ್ರಜ್ಞಾವಸ್ಥೆಯಲ್ಲಿ (ಅಂದರೆ ಮನಸ್ಸನ್ನು ಎಲ್ಲೆಲ್ಲಿಯೋ ತಿರುಗಬಿಟ್ಟು) ಬೀದಿಗಳಲ್ಲಿ ಓಡಾಡುವಾಗ, ಸ್ಕೂಟರ್‌ನಲ್ಲಿ ಮಗಳನ್ನು ಕೂರಿಸಿಕೊಂಡು ಶಾಲೆ/ಕಾಲೇಜಿಗೆ ಸಾಗುತ್ತಿರುವವರನ್ನು, ಗೋಧೂಳಿಯಲ್ಲಿ, ಹೆಂಡತಿ-ಕೈಮಗು-ಮತ್ತಿನ್ನೊಬ್ಬ ಬಾಲಕ/ಬಾಲಕಿ ಇರುವ ಸ್ತಬ್ಧ ಚಿತ್ರಗಳಲ್ಲಿ ದೇವಸ್ಥಾನ, ಬಜಾರುಗಳಲ್ಲಿ ಚಲಿಸುತ್ತಿರುವವರನ್ನು, ಒಂದು ವಾರದ ದಿನ ಬೆಳಬೆಳಗ್ಗೆಯೇ ಮದ್ಯದಂಗಡಿ ಮುಂದೆ ನಿಂತವರನ್ನು, ತರಕಾರಿ ಕೊಳ್ಳುತ್ತಿರುವವರನ್ನು ಎಲ್ಲೋ ನೋಡಿದಂತಿದೆಯಲ್ಲ? ಎಂದು ಬೆರಗುಗೊಳ್ಳುವುದು ಜಾಯಮಾನವಾಗಿತ್ತು. ಪ್ರತಿ ಸಾರಿ, ಟ್ಯೂಬ್‌ಲೈಟ್ ಆರಿ-ಹೊತ್ತಿಕೊಂಡು, ಆರಿ-ಹೊತ್ತಿಕೊಂಡು ಅವರು ಬಸ್ ಕಂಡಕ್ಟರಲ್ಲವೆ ಎಂದು ಹೊಳೆಸುತ್ತಿತ್ತು.

ಹಾಗಾಗಿ ಈಗೀಗ ಯಾವ ಚಹರೆ ಪರಿಚಿತ ಎನಿಸಿದರೂ ಅದು ನಿರ್ವಾಹಕರದ್ದು ಎಂಬ ಸುಲಭ ನಿರ್ಣಯಕ್ಕೆ ಬರುವುದಾಗಿದೆ. ಬಸ್ ಕಂಡಕ್ಟರ್‌ಗಳದ್ದೇ ಅಂತಲ್ಲ, ಒಟ್ಟಾರೆ, ಮನುಷ್ಯ ಚಹರೆಯ ಅಧ್ಯಯನ ನಾನು ಗುಪ್ತವಾಗಿ ಬೆಳೆಸಿಕೊಂಡು ಬಂದಿರುವ, ಇಷ್ಟಪಟ್ಟು ಕಾಪಾಡಿಕೊಂಡಿರುವ ಖಯಾಲಿ; ಬರಿದೇ ಸ್ವಸಂತೋಷಕ್ಕೆ. ಚಿಕ್ಕ ಹಣೆ, ದೊಡ್ಡ ಹಣೆ, ಅದು ಸಪಾಟೇ, ಉಬ್ಬಿದೆಯೆ? ಒಳಮುಖವಾಗಿ ಏರಿದ ಹುಬ್ಬು, ಹೊರಮುಖವಾಗಿ ಏರಿರುವ ಹುಬ್ಬು ಅಥವ ಶಾರುಕ್ ಖಾನ್‌ಗಿರುವಂತೆ ಎರಡೂ ಕಡೆ ಏರಿರುವುದು, ಹತ್ಹತ್ತಿರ ಅಥವಾ ದೂರದೂರ ಕಣ್ಣು, ಅವು ಆಳದಲ್ಲಿವೆಯೆ, ಮೇಲ್ಮೆನಲ್ಲಿದೆಯೆ? ಎಳಸು ತೆಳು ಮಾಟದ ಮೂಗು, ದೊಣ್ಣೆ ಮೆಣಸಿನಕಾಯಿಯಂಥ ಆಕಾರರಹಿತ ದಪ್ಪದು. ಚಿಕ್ಕ ಬಾಯಿ, ದೊಡ್ಡ ಬಾಯಿ. ದವಡೆ ಮುಂಚಾಚಿದೆಯೆ ಅಥವ ಮುಗುಮ್ಮಾಗಿ ಅಳತೆಗೆ ಸರಿಯಾಗಿ ಮುಗಿದಿದೆಯೆ? ಮೂಗು ಮತ್ತು ಮೇಲ್ತುಟಿಯ ನಡುವಣ ಅಂತರ ಸಾಮಾನ್ಯಕ್ಕಿಂತ ಒಂದಿಷ್ಟೇ ಇಷ್ಟು ಹೆಚ್ಚಿರುವ (ಮಲ್ಲಿಕಾ ಶೆರಾವತ್ ಉದಾಹರಣೆ) ಅಪರೂಪದ ಕೇಸು. ಗದ್ದ, ಅದರ ವಿ, ಯು ಆಕಾರ. ಕೆನ್ನೆಯ ಎಲುಬುಗಳು ಕಣ್ಣಿನ ಹತ್ತಿರವೇ ಇವೆಯೆ ಅಥವ ತುಸು ಹಿಂದೆ ಸರಿದಿವೆಯೆ...ಎಂದೆಲ್ಲ ಗಮನಿಸುತ್ತ ಹೋದಂತೆ ಇದು ಹೀಗಿದ್ದರೆ...ಅದು ಹಾಗಿರುತ್ತದೆ ಎಂಬ ವಿಭಾಗೀಕರಣದ ಪ್ರಮೇಯವನ್ನು ರೂಪಿಸಿಕೊಂಡಿರುವೆನಾದ್ದರಿಂದ, ಅದಕ್ಕೆ ಎಷ್ಟು ಪುಷ್ಟಿ ದೊರಕುತ್ತದೆಯೋ ಅಷ್ಟನ್ನೂ ಕಲೆಹಾಕುವ ಉಮೇದು. ಬಸ್ ನಿರ್ವಾಹಕರು, ಪಾಪ, ನಿತ್ಯ ಕಣ್ಣಿಗೆ ಬೀಳುವವರಾದ್ದರಿಂದ, ಅವರಿಗರಿವಿಲ್ಲದಂತೆ, ನನ್ನ ಪ್ರಯೋಗ ಪಯಗಳು! ಹೀಗೆಲ್ಲ ವಿಭಾಗೀಕರಣ, ಮರುವಿಭಾಗೀಕರಣ ಮಾಡುವುದರೊಂದಿಗೆ, ನೋಡಿ ನೋಡಿ ಮನದಲ್ಲಿ ಅಚ್ಚಾಗಿರುವ ಪ್ರಸಿದ್ಧರ ಚಹರೆಯ ಅಂಶಗಳನ್ನೂ ಮಾಮೂಲಿ ಜನರಲ್ಲಿ (ಕಂಡಕ್ಟರುಗಳಲ್ಲಿ ಎಂದು ಓದಿಕೊಳ್ಳಬೇಕು) ಮನಸ್ಸು ಹುಡುಕ ಹೊರಡುತ್ತದೆ: ಓಹ್! ಈತ ಚೆಗೆವಾರ ಥರ ಇದಾನೆ (ಸಮುದ್ರದ ಉಪ್ಪು, ಬೆಟ್ಟದ ನೆಲ್ಲಿ?), ಅವಗೆ ಅಣ್ಣಾವ್ರದ್ದೇ ಮೂಗು, ಈ ಸಮ್ಮರ್ ಕ್ರಾಪ್‌ನಾತ ಸ್ವಲ್ಪ ನಟ ಕಿಶೋರ್ ಹಾಗೆ ಕಾಣೋಲ್ಲವ?, ಸಾಲ್ಟ್ ಪೆಪ್ಪರ್ ತಲೆಗೂದಲು, ಒಳ್ಳೇ ಹುಲ್ಲುಗಾವಲಿನ ಹುಲ್ಲಿನಷ್ಟು ಉದ್ದವಾಗಿ, ಎತ್ತರವಾಗಿದ್ದು, ಬಿಡಿ ಬಿಡಿಯಾಗಿ ಗಾಳಿಗೆ ತೊನೆಯುವ ಈ ಮಾರಾಯ ಯಾವುದೋ ಇಂಗ್ಲಿಷ್-ಅಮೆರಿಕನ್ ನಟನನ್ನು ಹೋಲುತ್ತಿದ್ದಾನಲ್ಲ!, ಈತನ ಕ್ರಾಪ್ ಮುಂಚಾಚು ಅನಂತನಾಗ್‌ರದಷ್ಟೆ ಅಗಲವಾಗಿದೆಯಲ್ಲವೆ?, ಹೊಸದಾಗಿ ರೂಟ್‌ಗೆ ಬಂದ ಹರೆಯದ ಹೊಸಬನ ಗಾಢಕಂದುಬಣ್ಣದ ಸಾಂದ್ರ ಕಣ್ಣು ಯಾರದರಂತಿದೆ? ಸುಪರ್ ಸ್ಟಾರ್ ಸೂರ್ಯ?, ಎಂದೆಲ್ಲ ತಾಳೆ ಹಾಕುತ್ತಿರುತ್ತದೆ. ಕಣ್ಣುಕಪ್ಪು ಹಚ್ಚಿಕೊಂಡಿದ್ದ, ಬಾಲಮುಖದ, ಕಿರುಚು ದನಿಯಲ್ಲಿ ಮಾತನಾಡುವ ಒಬ್ಬ ಕಂಡಕ್ಟರ್, ಬಾಲ್ಯದಲ್ಲಿ ಆಡಿದ ಟಿಪ್ಪು ಸುಲ್ತಾನ್ ನಾಟಕದ ಸೈನಿಕ ಪಾತ್ರದಂತಿದ್ದಾನಲ್ಲ?! ಎಂಬಂತಹ ಅಪೂರ್ವ ಹೊಳಹುಗಳನ್ನೂ ಮನವೆಂಬ ಮರ್ಕಟ ಚೆಲ್ಲಿ ಬಿಸಾಡುತ್ತಿರುತ್ತದೆ.

 ಕೆಲ ನಿರ್ವಾಹಕರುಗಳ ಜನ ಮ್ಯಾನೇಜ್‌ಮೆಂಟ್ ಕೌಶಲ ಉನ್ನತ ಮಟ್ಟದ್ದಾಗಿರುವುದು ಕಂಡು ನಿಜಕ್ಕೂ ಪ್ರಭಾವಿತಳಾಗಿದ್ದೇನೆ: ಎಷ್ಟೇ ಒತ್ತಡದಲ್ಲೂ ನಗೆ ಧರಿಸಿ ಕಾರ್ಯನಿರ್ವಹಿಸುವ ಸದಾನಂದರು, ರೂಟಿನ ಸುಂದರ ಹುಡುಗಿಯರು, ಆಕರ್ಷಕ ವ್ಯಕ್ತಿತ್ವದವರು ನಿಗದಿತ ಸ್ಟಾಪ್‌ನಲ್ಲಿ ಬಸ್‌ಹೊಕ್ಕಿದ್ದನ್ನು ಯಾವ ಮೂಲೆಯಲ್ಲಿದ್ದರೂ ಗ್ರಹಿಸಿಬಿಡುವ, ಆದರೆ ಲಕ್ಷ್ಮಣರೇಖೆಯನ್ನು ಎಂದೂ ಅತಿಕ್ರಮಿಸದ ಸಭ್ಯ ಜವ್ವನಿಗರು, ಲಾಂಗ್‌ರೂಟ್‌ನಲ್ಲಿ ಇಡೀ ಸೀಟ್ ಆಕ್ರಮಿಸಿ ಪೊಗದಸ್ತಾಗಿ ನಿದ್ದೆಹೊಡೆಯುತ್ತಿರುವವರು ಕೊನೇ ಸ್ಟಾಪ್‌ನಲ್ಲೂ ಅದೇ ಅವಸ್ಥೆಯಲ್ಲಿದ್ದರೆ, ಯೇ ಎಬ್ಬುಸ್ರಪ್ಪಾ ಅನ್ನುವ ಭೂತದಯೆಯವರು ಇವರಲ್ಲಿದ್ದಾರೆ. ಸೊಕ್ಕಿನಿಂದ ವರ್ತಿಸುವವರಿಗೆ ಖಡಕ್ ಉತ್ತರ ಕೊಡುವುದು, ಅಷ್ಟೇನೂ ಧೈರ್ಯವಿಲ್ಲದಿದ್ದರೂ ಕಿರುಚಾಡುವ ಟೆನ್ಷನ್ ಪಾರ್ಟಿಗಳ ಕಿರಿಕ್ ನಕ್ಕು ತಳ್ಳಿಹಾಕುವುದು, ಯಾವುದೋ ಮನೋವಿಜ್ಞಾನಿಯ ಪ್ರಯೋಗದಲ್ಲಿ ಪದೇಪದೆ ಹೋಗಿ ಬಾಗಿಲಿಗೆ ಢಿಕ್ಕಿ ಹೊಡೆಯುವ ಇಲಿಗಳಂತೆ, ತಿಳಿದೂ ತಿಳಿದೂ ಮಹಿಳೆಯರ ಮೀಸಲು ಸ್ಥಾನ ಆಕ್ರಮಿಸಲು ಹವಣಿಸುವವರನ್ನು ಪ್ರತಿ ಬಾರಿಯೂ ನಿರುತ್ತೇಜನಗೊಳಿಸುವುದು, ಅಸಹಾಯಕ ವೃದ್ಧರು, ಮಕ್ಕಳೊಂದಿಗೆ ಮಹಿಳೆಯರಿಗೆ ಸಹಾಯಕ್ಕೆ ಮುಂದಾಗುವುದು, ಪಾಸು-ಟಿಕೆಟ್ ಅವ್ಯವಹಾರ ಅಭ್ಯಾಸ ಮಾಡಿಕೊಂಡಿರುವವರಿಗೆ ಮುಲಾಜಿಲ್ಲದೆ ಸಂದೇಶ ಮುಟ್ಟಿಸುವುದು, ವಿಷಯ ಮಿತಿ ಮೀರಿದಾಗ ಪೊಲೀಸ್ ಠಾಣೆಗೆ ಬಸ್ ತಿರುಗಿಸಲು ಚುರುಕು ನಿರ್ಧಾರ ತೆಗೆದುಕೊಳ್ಳುವುದು...ಎಲ್ಲ ಅವರಿಗೆ ಅಪ್ರಯತ್ನವಾಗಿ ಸಿದ್ಧಿಸಿರುತ್ತದೆ. ಕಂಡಕ್ಟರ್ ಟಿಕೆಟ್ ಕೇಳಿದಾಗ, ಹಣ ಕೈಲಿಟ್ಟು, ಪದ್ಮಾವತಿ ಅನ್ನುವ ಹುಡುಗಿ, ಅದು ಸ್ಟಾಪ್ (ಮುಂಬೈ) ಹೆಸರು, ಅವಳದಲ್ಲ ಎಂದು ನಂತರ ವಿಷಯ ಗೊತ್ತಾಗುವುದು...ಮುಂತಾದ ಸಂಗತಿ ಒಂದು ಮಾಸಪತ್ರಿಕೆಯ ಜೀವ, ಜೀವನ ಅಂತೇನೋ ಇರುವ ಅಂಕಣಗಳಲ್ಲಿ ಪ್ರಕಟವಾಗುತ್ತಿದ್ದುದು ನೆನಪಲ್ಲಿದೆ. ಗಂಡು ಹೆಣ್ಣೆನ್ನದೆ ಪ್ರಯಾಣಿಕರನ್ನು ಶಿವಾ, ಗುರೂ ಎಂದು ಸಂಬೋಸುವುದು ಕೆಲ ನಿರ್ವಾಹಕರುಗಳ (ಬೇರೆಯವರಿಗೆ ವಿನೋದವೆನಿಸುವ) ಶೈಲಿ! ವರ್ತಮಾನ ಪತ್ರಿಕೆಗಳಲ್ಲಿ ವಾಚಕರ ವಾಣಿ ಗೆ ಹಕ್ಕುದಾರರಾಗಿರುವ ಮಹಾಶಯರುಗಳಲ್ಲಿ ಒಬ್ಬ ನಿರ್ವಾಹಕರು ಸಹ ತಮ್ಮ ಗುರುತನ್ನು ಈ ರೂಟ್ ನಂಬರ್ ಕಂಡಕ್ಟರ್ ಎಂದು ಪದೇಪದೆ ಛಾಪಿಸಿ, ಸಂಬಂಧಪಟ್ಟ ಸಿಬ್ಬಂದಿಗೆ, ಓದುಗರಿಗೆ ಚಿರಪರಿಚಿತರಾದರು. ಆ ಮೂಲಕ ನಿರ್ವಾಹಕರುಗಳ ವಾಚನಾಭಿರುಚಿಯನ್ನೂ ಸಾಬೀತುಪಡಿಸಿದರು. ಮಾತಾಡಿಸಿದಾಗ ಚಿತ್ರವಿಚಿತ್ರ ಮುಖ, ಸನ್ನೆ ಮಾಡುವವರನ್ನು ಕನ್ನಡ ಬರೋಲ್ವೇನ್ರೀ? ಎಂದು ಗದರಿಸುವ ಕನ್ನಡಾಭಿಮಾನಿಗಳೂ, .....ಹೋಗಲಿ ಎಂದು ಅವರ ಭಾಷೆಯಲ್ಲೇ ಮಾತಾಡಿ ವ್ಯವಹರಿಸುವವ ಬಹುಭಾಷಾ ಕೋವಿದರೂ ಈ ಬಳಗದಲ್ಲಿದ್ದಾರೆ. ಬಾಗಿಲಿಗೆ ಅಡ್ಡ ನಿಂತು, ಒಂದು ಕಾಲು ಮೇಲೇರಿಸಿ ಬ್ಯಾಲೆನ್ಸ್ ಮಾಡುತ್ತ, ರಶ್ ಅವರ್‌ನಲ್ಲಿ ರಾಶಿ ಹುಡುಗಿಯರನ್ನು ವೀರ ಯೋಧರಂತೆ ಅವರು ಕಾಯುವುದಂತೂ ಒಂದು ಅಪೂರ್ವ ದೃಶ್ಯ! ಸದ್ಯ, ಈಗಿತ್ತಲಾಗಿ ಸ್ವಯಂಚಾಲಿತ ಬಾಗಿಲು ಬಂದು ಅಕ್ರೋಬ್ಯಾಟಿಕ್ಸ್ ಕಾಣಸಿಗುವುದಿಲ್ಲ. ಎಂಜಲುಹಚ್ಚದೆ, ಒಂದೈವತ್ತು ಮಿಲಿ.ಲೀ. ನೀರನ್ನು, ಸ್ಪಾಂಜನ್ನು ಇಟ್ಟುಕೊಂಡು, ಟಿಕೀಟು ಹರಿದುಕೊಡುವ ಅಭ್ಯಾಸ ಮನಕ್ಕೊಂದು ಮುಗುಳು ತರುತ್ತದೆ. ತುಂಡು ಹೈಕ್ಳು ಇತ್ಯಾದಿ ಪರಿಕಲ್ಪನೆಗಳಿಂದ ಪ್ರೇರಿತರಾಗಿ ತರ್ಕ-ತಥ್ಯರಹಿತವಾಗಿ ಬಾಯಿ ಚಾಲನೆಯಲ್ಲಿಡುವ ಫಿಲ್ಮೀ ಪೈಕಿ ಇರುವರಾದರೂ ತುಟಿ ಎರಡು ಮಾಡದೆ ಎಲ್ಲವನ್ನೂ ವೀಕ್ಷಿಸುತ್ತ, ಅಗತ್ಯಬಿದ್ದಾಗ ಮಾತ್ರ ಮಾತಾಡುವವರೂ ಇದ್ದಾರೆ. ಸರಿಯಾಗಿ ಟಿಕೆಟ್/ಚಿಲ್ಲರೆ ಕೊಡುವುದು, ಎಲ್ಲ ಪಾಸ್ ಕೈಲಿಟ್ಟುಕೊಳ್ಳಿ ಎಂದು ಶಿಸ್ತು ಮಾಡುವುದು, ಚುರುಕಾಗಿ ಎಂಟ್ರಿ ಹಾಕುವುದು, ಚೆಕಿಂಗ್ ಬಂದಾಗ ಏನಂತೆ? ಎಂಬ ಸ್ಥಿರತೆಯಿಂದ ವರ್ತಿಸುವುದು, ಪಿಕ್‌ಪಾಕೆಟ್ ನಮೂನೆಗಳನ್ನು ಹುಷಾರಾಗಿ ಗಮನಿಸುತ್ತಾ, ಪ್ರಯಾಣಿಕರನ್ನು ಅವರಿಂದ ರಕ್ಷಿಸುವುದು, ಸ್ಟಾಪ್ ಬಂದಾಗ ಹೇಳಿ ಎಂಬ ವಿನಂತಿಯನ್ನು ಮರೆಯದೆ ನೆರವೇರಿಸಿಕೊಡುವುದು, ತಮ್ಮ ಬಸ್ ಕೈಕೊಟ್ಟಾಗ, ರಸ್ತೆಯಲ್ಲಿ ಲೀಡರ್ ಆಗಿ ನಿಂತು, ಬದಲಿ ಬಸ್‌ಗೆ ಜನರನ್ನು ಜವಾಬ್ದಾರಿಯಿಂದ ಹತ್ತಿಸುವುದು...ಇವೆಲ್ಲ ಅವರ ವ್ಯಕ್ತಿತ್ವ, ಕರ್ತೃತ್ವಶೀಲತೆಯನ್ನೂ ಬಿಟ್ಟುಕೊಡುತ್ತವೆ. ಒಂದು ಕ್ಷೇಮಭಾವನೆಯನ್ನು ಸವಾರಿಗಳಲ್ಲಿ ಮೂಡಿಸುತ್ತದೆ. ತಾನು ಓಡಾಡುವ ಪ್ಯಾಸೇಜ್‌ನಲ್ಲಿದ್ದ ಒಂದು ಹುಳುವನ್ನು ಹುಷಾರಾಗಿ ಎತ್ತಿ, ಚಾಲಕನ ಮುಂದಿರುವ ಕಟ್ಟೆಯ ಮೇಲೆ, ಒಂದು ಕಾಗದದ ಚೂರಿನ ಮೇಲಿಟ್ಟು ರಕ್ಷಿಸಿದ, ಇದ್ದಕ್ಕಿದ್ದಂತೆ ಸುಸ್ತಾದ ಪ್ರಯಾಣಿಕ ಅಜ್ಜಿಗೆ ಬಸ್ ನಿಲ್ಲಿಸಿ, ಅಂಗಡಿಯಿಂದ ಚಾಕೊಲೇಟ್ ತಂದುಕೊಟ್ಟ ನಿರ್ವಾಹಕರುಗಳನ್ನೂ ನೋಡಿದ್ದೇನೆ.

ಇಂತಹವರಿಗೆ ತಮ್ಮ ಸಹೋದ್ಯೋಗಿಯಾದ ಚಾಲಕರ ಜತೆ ಸಾಮರಸ್ಯ ಸಾಸುವುದು ಸುಲಭದ ಮಾತೇ. ಉಳಿದಂತೆಯೂ ಬಹುತೇಕ ಹೊಂದಾಣಿಕೆಯ ಜೋಡಿಯೇ ಬಸ್‌ನಲ್ಲಿರುತ್ತದೆ. ಅಕಸ್ಮಾತ್ ಇಬ್ಬರಲ್ಲಿ ವೈಮನಸ್ಯ ಬಂದಿತೋ, ಪ್ರಯಾಣಿಕರಿಗೆ ಥಟ್ಟನೆ ಪತ್ತೆಯಾಗುತ್ತದೆ. ವಿಷಮ ದಾಂಪತ್ಯಕ್ಕೆ ಸನಿಹದಲ್ಲೇ ಸಾಕ್ಷಿಯಾಗಿರುವುದು ಕಸಿವಿಸಿ ಮೂಡಿಸುತ್ತದೆ: ಈತ ಶಿಳ್ಳೆ ಹೊಡೆಯುತ್ತಾನೆ, ಆತ ಮಾರುದೂರ ಹೋಗಿ ನಿಲ್ಲಿಸುತ್ತಾನೆ. ಎಂಜಿನ್ ಗುರುಗುರುಗುಡಿಸುತ್ತ ಅವಸರ ಮಾಡುವುದು ಅವಗೆ ಖುಷಿ, ಹುಬ್ಬುಗಂಟಿಕ್ಕಿ ಎಂಟ್ರಿಾರಂ ತುಂಬುತ್ತಿರುವ ಇವ ಎಷ್ಟುಹೊತ್ತಿಗೂ ಮುಗಿಸಲೊಲ್ಲ...ಥೋ ಬ್ಯಾಡಪ್ಪಾ ಬ್ಯಾಡ. ಎ್ಎಂ ರೇಡಿಯೊ ಹಚ್ಚಿ, ಒಂದಿಗೆ ತಾವೂ ಹಾಡಿಕೊಳ್ಳುತ್ತ, ಬಾಲ್ಡ್ ಆಗುತ್ತಿರುವ ತಲೆ, ಉಪಯೋಗಿ ತೈಲದ ಕುರಿತು ಚರ್ಚಿಸುತ್ತ, ಬೋನಸ್, ಪೇಹೈಕ್ ಲೆಕ್ಕಹಾಕುತ್ತ, ಅದೆಷ್ಟು ಹಾಯಾಗಿ ಓವರ್‌ಟೈಮ್ ಮಾಡಿಬಿಡುತ್ತೇನೆಂದು ಕೊಚ್ಚಿಕೊಳ್ಳುತ್ತ, ಒಂದು ವಾರ ಪ್ರವಾಸ ಹೋಗಿಬರಬೇಕೆನಿಸಿದೆ ಎಂದು ತಲೆ ಕೊಡವುತ್ತ, ಪ್ರಯಾಣಿಕರನ್ನು ತುಸು ಪಕ್ಕಕ್ಕಿಟ್ಟು ತಮ್ಮ ಸಖ್ಯದಲ್ಲೇ ಮಗ್ನವಾಗಿದ್ದರೆ ಅದೊಂದು ಬಹುಕಾಲ ಬಾಳುವ ಜೋಡಿ. ಗಣೇಶೋತ್ಸವ, ರಾಜ್ಯೋತ್ಸವ, ಅಣ್ಣಮ್ಮ ದೇವಿ ಪೂಜೆಗಳಲ್ಲಿ ನಾಯಕತ್ವ ವಹಿಸುವ, ಮೆರೆಯುವ ಸಾರ್ವಜನಿಕ ವ್ಯಕ್ತಿತ್ವವೂ ಕೆಲವರಿಗಿದೆ. ಹೇಗೆ ತಾವು ಮುಂಬೈ ತಂಡಗಳನ್ನು- ಶಂಕರ ಮಹಾದೇವನ್, ಕವಿತಾ ಕೃಷ್ಣಮೂರ್ತಿ ಇತ್ಯಾದಿ ಹೆಸರು ಉದುರಿಸುತ್ತ- ರಸಸಂಜೆ ಕಾರ್ಯಕ್ರಮಕ್ಕೆ ಕರೆಸುತ್ತಿದ್ದೇವೆ ಮತ್ತು ಆ ಮೂಲಕ ಇತರ ಸಂಘಟನೆಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ ಎಂಬುದನ್ನು ಬಹಿರಂಗವಾಗಿ ಚರ್ಚಿಸುತ್ತಿರುತ್ತಾರೆ.

ದೇಶ, ನಾಗರಿಕರಿಗೆ ನೀಡುವ ಅಗತ್ಯ ಸೇವೆಗಳಲ್ಲಿ ಸಾರ್ವಜನಿಕ ಸಾರಿಗೆಯೂ ಒಂದು. ಬೆಳ್ಳಂಬೆಳಗ್ಗೆ ಟ್ರಿಪ್‌ಗೆ ಠೀಕುಠಾಕಾಗಿ ಬಂದು ಎಷ್ಟೆಲ್ಲ ಜನರಿಗೆ ದಿನದ ಶುಭಾರಂಭ ಮಾಡಿಸುವ, ಐದ್ಹತ್ತು ನಿಮಿಷ ಪ್ರಯಾಣಿಕರಿಗೆ ಕಾದು, ತಡ ರಾತ್ರಿಯ ಕಡೆಯ ಟ್ರಿಪ್ ಹೊಡೆಯುವ, ಹಬ್ಬಹುಣ್ಣಿಮೆಗಳಲ್ಲೂ ಕರ್ತವ್ಯ ಪಾರಾಯಣ ರಾಗುವ ಈ ಬಸ್ ಬಂಧುಗಳೊಂದಿಗೆ ನಮ್ಮ ಋಣಾನುಬಂಧ ಆಗಾಗ ಸ್ಮರಿಸಿಕೊಳ್ಳಲು ಯೋಗ್ಯವಾದುದು. ಅಲ್ಲವೆ?

Writer - ವಿ.ಎನ್. ವೆಂಕಟಲಕ್ಷ್ಮೀ

contributor

Editor - ವಿ.ಎನ್. ವೆಂಕಟಲಕ್ಷ್ಮೀ

contributor

Similar News