ಡಾ.ಅಂಬೇಡ್ಕರ್ ನಾಮಫಲಕ ಧ್ವಂಸ, ದಲಿತರ ಮೇಲೆ ಹಲ್ಲೆ: ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲು ಆಗ್ರಹ

Update: 2015-12-31 18:18 GMT

ಬೆಂಗಳೂರು, ಡಿ.31: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕವನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿ, ದಲಿತರ ಮೇಲೆ ಹಲ್ಲೆ ನಡೆಸಿದ ಸವರ್ಣೀಯರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದಲಿತ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ಗುರುವಾರ ಇಲ್ಲಿನ ಪುರಭವನದ ಮುಂಭಾಗದಲ್ಲಿ ಧರಣಿ ನಡೆಸಿದ ದಲಿತಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಸವರ್ಣೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿ.24ರ ಸಂಜೆ 5ಗಂಟೆ ಸುಮಾರಿಗೆ ರಾಯಚೂರಿನ ಸಿಂಧನೂರು ತಾಲೂಕಿನ ತುರವಿಹಾಳ ಗ್ರಾಮದ ವೃತ್ತದಲ್ಲಿದ್ದ ಅಂಬೇಡ್ಕರ್ ನಾಮಫಲಕವನ್ನು ಹಾನಿಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನು ಪ್ರಶ್ನಿಸಿದ ದಲಿತ ಮುಖಂಡ ಶಿವಪುತ್ರಪ್ಪ ಸೇರಿದಂತೆ ಇನ್ನಿತರರಿಗೆ ಪ್ರಾಣ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ ಸವರ್ಣೀಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜೊತೆಗೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.

 ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ದಲಿತ ಕಾಲನಿಯ ಮೇಲೆ ಅಮಾನವೀಯ ದೌರ್ಜನ್ಯ ನಡೆದಿದ್ದರೂ ರಕ್ಷಣೆ ಕಲ್ಪಿಸಬೇಕಾದ ಪೊಲೀಸರು ಮೂಕಪ್ರೇಕ್ಷಕರಾಗಿದ್ದು, ಕೃತ್ಯಕ್ಕೆ ಬೆಂಬಲ ನೀಡಿದ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

ಜಾತಿವಾದಿಗಳ ದೌರ್ಜನ್ಯದಿಂದ ನೊಂದ ದಲಿತರ ವಿರುದ್ಧ ದಾಖಲಿಸಿರುವ ಪ್ರತಿದೂರನ್ನು ಕೂಡಲೇ ಕೈಬಿಡಬೇಕು. ತುರುವಿಹಾಳ್ ಗ್ರಾಮದ ದಲಿತರಿಗೆ ಸೂಕ್ತ ರಕ್ಷಣೆ ಕಲ್ಪಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಅಗತ್ಯ ಪರಿಹಾರ ನೀಡಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.

ಆ ಬಳಿಕ ಮುಖಂಡರ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿತು. ಧರಣಿಯಲ್ಲಿ ದಸಂಸ ರಾಜ್ಯಾಧ್ಯಕ್ಷ ಬಾಲಕೃಷ್ಣ, ರಾಜ್ಯ ಸಂಚಾಲಕ ಅಣ್ಣಯ್ಯ, ವಕೀಲ ಬಿ.ಟಿ.ವೆಂಕಟೇಶ್, ಅನಂತ ನಾಯಕ್, ಫಾ.ರೆ.ಪ್ರಸಾದ್, ವೈ.ಮರಿಸ್ವಾಮಿ, ರಂಗನಾಥ್ ಮನೋಹರ್ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News