ಇದ್ದ ಕಣ್ಣು ಕಳೆದುಕೊಂಡು ಇಲ್ಲದ ಕಣ್ಣಿಗಾಗಿ ತಪಸ್ಸು ಮಾಡಿದರು

Update: 2016-01-01 05:09 GMT

ಭಗವದ್ಗೀತೆ, ರಾಮಾಯಣಗಳು ಇಲ್ಲಿಯವರೆಗೆ ಅನೇಕ ರೀತಿಯ ಟೀಕೆಗೆ ಒಳಗಾಗಿದ್ದರೂ, ಪುರೋಹಿತಶಾಹಿ ಅದರದೇ ಆದ ಜಾಡಿನಲ್ಲೇ ಉಳಿಸಿಕೊಳ್ಳಲು ಬಯಸುತ್ತದೆ. ಕುವೆಂಪು ರಾಮಾಯಣವನ್ನ ಪುರೋಹಿತಶಾಹಿ ಮಾನ್ಯಮಾಡುತ್ತದೆಯೇ? ದೇವನೂರು ರಾಮಾಯಣ ಬರೆದರೂ ಅಷ್ಟೆ. ಅದು ಕಾಲಾನಂತರ ತೆರೆಯ ಮರೆಗೆ ಸರಿದುಬಿಡುತ್ತವೆ. ಇಲ್ಲಿ ಮುಖ್ಯವಾಗುವುದು ಅದನ್ನು ಪ್ರತಿಪಾದಿಸುವವರ ಮನಸ್ಸು. ಇವೆಲ್ಲ ಧರ್ಮದ ದೃಷ್ಟಿಕೋನದಿಂದ ಬಂದ ವೈರುಧ್ಯಗಳಲ್ಲ. ಅವು ಮೂಲತಃ ಸಾಮಾಜಿಕ ವೈರುಧ್ಯಗಳು. ಅವುಗಳನ್ನ ಧರ್ಮದೊಳಗಿನಿಂದ ಪ್ರತಿಪಾದಿಸುವುದು ಸುಲಭವಾದ್ದರಿಂದ ಅದು ಕಗ್ಗಂಟಾಗಿ ಪರಿಣಮಿಸಿದೆ. ವೈಜ್ಞಾನಿಕ ದೃಷ್ಟಿಯನ್ನು ಸಮಾಜದಲ್ಲಿ ಬೆಳೆಸಿದಂತೆ ಅವುಗಳ ಪ್ರಾಮುಖ್ಯತೆ ಕಡಿಮೆಯಾಗಿ ತಾವಾಗಿಯೇ ಪರದೆಯ ಹಿಂದೆ ಸರಿದುಬಿಡುತ್ತವೆ.

 ಆ ದೃಷ್ಟಿಯಿಂದ ಸಾಂಸ್ಕೃತಿಕ ಚಳವಳಿಯಾಗಿ ದಸಂಸ ನಿರ್ವಹಿಸಿದ ಪಾತ್ರ ಬಹಳ ಮುಖ್ಯವೆನಿಸಿಬಿಡುತ್ತದೆ. ವೈಜ್ಞಾನಿಕ ದೃಷ್ಟಿ, ಪ್ರಶ್ನಿಸದೆ ಒಪ್ಪದ ಮನಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ದಸಂಸದ ಬೆಳವಣಿಗೆ ಒಂದು ಕಾಲಘಟ್ಟದವರೆಗೆ ನಡೆದು ಸ್ತಬ್ಧವಾಗಿಬಿಡುತ್ತದೆ. ಹೋರಾಟಗಾರರಾಗಿ ಕ್ರಿಯಾಶೀಲರಾಗಿದ್ದಾಗ ದೇವನೂರು ಬಳಸುತ್ತಿದ್ದ ಭಾಷೆ ಈಗ ಅವರಿಗೆ ಹಳೆಯದಾಗಿ ಅಥವಾ ಅವರ ಭಾಷೆಯಲ್ಲಿಯೇ ಹೇಳಬೇಕೆಂದರೆ ಹಳೆಯ ಹತಾರವಾಗಿಬಿಟ್ಟಿದೆ. ಅಂದರೆ ನಡೆಯದ ಹತಾರವಾಗಿಬಿಟ್ಟಿದೆ. ಇವರ ಹೊಸ ಹತಾರ ಯಾವುದು ಎಂದು ತಿಳಿಯಲು ಜನ ಈ ತನಕ ಕಾಯಬೇಕಾಯಿತು. ಸಂಘಟನೆಯ ಚುಕ್ಕಾಣಿ ಹಿಡಿದಿದ್ದ ಇವರು ಮಾಡಿದ ತಪ್ಪಿನಿಂದಾಗಿ ಎಷ್ಟೆಲ್ಲಾ ಕೆಟ್ಟ ಬೆಳವಣಿಗೆಗಳಾದವು ಎಂಬುದನ್ನ ನೋಡುತ್ತಲೇ ಇವರು ಡಿ. 24ರ ಪ್ರಜಾವಾಣಿಯಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ರಾಜಕಾರಣದ ಹಳಿಯ ಮೇಲೆ ಸಂಘಟನೆಯನ್ನು ಅಡ್ಡಡ್ಡ ಇಟ್ಟ ನಂತರ ಅದರ ಮೇಲೆ ಉಳ್ಳವರ ಪಕ್ಷಗಳು ಹಾದುಹೋದವು. ಹೌದು ಈಗದು ಜರ್ಝರಿತವಾಗಿಹೋಗಿದೆ. ಕಾಂಗ್ರೆಸನ್ನ ಪ್ರಬಲವಾಗಿ ವಿರೋಧಿಸಿಕೊಂಡು ಜನತಾದಳವನ್ನು ಅಧಿಕಾರಕ್ಕೆ ತರುವಲ್ಲಿ ಇವರ ಪಾತ್ರ ಅಪಾರವಾಗಿತ್ತು. ಏಕೆಂದರೆ ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿದ್ದ ದಲಿತರು, ಆ ಪಕ್ಷ ಬಿಟ್ಟು ಮತ ಹಾಕಿದ್ದಿಲ್ಲ.

ಕಾಂಗ್ರೆಸ್‌ಗೆ ಅಂಟಿಕೊಂಡಿದ್ದ ಅವರ ಮನಸ್ಸನ್ನ ಕಿತ್ತು ದಳಕ್ಕೆ ಅಂಟಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದು ಸಾಧ್ಯವಾಗಬೇಕೆಂದರೆ ದಲಿತರಲ್ಲಿ ಬಹಳ ಆತ್ಮವಿಶ್ವಾಸವನ್ನು ಹುಟ್ಟಿಸಿರುವವರಷ್ಟೆ ಅವರನ್ನ ವಿಚಲಿತಗೊಳಿಲು ಸಾಧ್ಯ. ಅಂಥ ಶಕ್ತಿ ಆಗ ಇದ್ದದ್ದು ದಲಿತ ಸಂಘಟನೆಗೆ ಮಾತ್ರ. ಅಂಥ ಸಂಘಟನೆಯನ್ನು ಬಲಿ ತೆಗೆದುಕೊಳ್ಳುವಲ್ಲಿ ಜನತಾ ಪರಿವಾರದವರು ಯಶಸ್ವಿಯಾದರು. ದೇವನೂರ ಮಹಾದೇವ ಬಲಿ ಕಾರ್ಯಕ್ರಮದ ಕೇಂದ್ರ ವ್ಯಕ್ತಿಯಾಗುತ್ತಾರೆ. ಇಲ್ಲಿಂದ ಮುಂದೆ ಹೋರಾಟಕ್ಕೆ ತಾವೇ ಬಳಸಿದ ಭಾಷೆ ಹಳೆಯ ಹತಾರವಾಗಿಬಿಡುತ್ತದೆೆ. ಏಕೆಂದರೆ ಶೋಷಕರ ಜೊತೆ ಕೈ ಜೋಡಿಸಿ ಸಿದ್ಧಾಂತ ಪ್ರತಿಪಾದನೆಗಿಳಿಯುವುದು ಸಾತ್ವಿಕರಿಗೆಸೂಕ್ತವೆನಿಸದು. ರಾಜಕಾರಣಿ ಆಗಲು ಹೊರಟವರಿಗೆ ಅಷ್ಟೂ ದೂರದೃಷ್ಟಿ ಇಲ್ಲದಿದ್ದರೆ ಹೇಗೆ? ಎಲೆಕ್ಷನ್ ತುಂಬಾ ದೂರ ಇರುವಾಗಲೇ ಒಪ್ಪಂದಗಳಾಗುತ್ತವೆ. ಅಲ್ಲಿಂದ ಮುಂದೆ ಸಂಘಟನೆಯ ಕಾರ್ಯಕ್ರಮಗಳು ನಿಂತುಹೋಗುತ್ತವೆ. ನೆನ್ನೆ ಮೊನ್ನೆವರೆಗೂ ಮತ್ತೆ ಬಂತು ನೋಡಿರೋ ಮಾಯದಂಥ ಎಲೆಕ್ಷನ್ ಎಂದು ಹಾಡುತ್ತ ಎಲೆಕ್ಷನ್‌ನಿಂದ ಮೋಸ ಹೋಗಬೇಡಿ ಎಂದು ಎಚ್ಚರಿಸುತ್ತಿದ್ದ ಜನ, ಇದ್ದಕ್ಕಿದ್ದಂತೆ ಈ ಪಕ್ಷಕ್ಕೆ ಓಟು ಹಾಕಿ, ನಿಮ್ಮ ಬಾಳು ಬಂಗಾರವಾಗುತ್ತೆ ಅಂತ ಹೇಳಲು ಹೊರಟರೆ ಜನ ಏನನ್ನಬೇಕು. ಆದ್ದರಿಂದಲೇ ಎಲೆಕ್ಷನ್ ಬರುವುದು ವರ್ಷಗಳಿರುವಾಗಲೇ ಮಾತು ನಿಂತುಬಿಟ್ಟವು. ಜನರು ಸಾಧ್ಯವಾದಷ್ಟು ಇವರ ಪ್ರತಿಪಾದನೆಯ ದಿಕ್ಕನ್ನ ಮರೆತು ಬಿಡಲಿ ಎಂಬುದು ಇವರ ದೂರದ ಆಲೋಚನೆಯಾಗಿತ್ತು. ಬುದ್ಧಿಯನ್ನು (ಹತಾರ) ರಾಜಕಾರಣಿಗಳ ಕೈಗೆ ಕೊಟ್ಟು ತಾವು ಎಲ್ಲ ರೀತಿಯಿಂದಲೂ ಬರಿದಾದರು. ಅಕ್ಷರಶಃ ನಿರಾಯುಧರಾದರು. ಇವರ ಮಾತು ನಡೆಯದಾಯಿತು. ಬುಸುಗುಟ್ಟಿದರೂ ಪ್ರಯೋಜನಕ್ಕೆ ಬರುತ್ತಿರಲಿಲ್ಲ. ನೊಂದವರ ಪಾಲಿಗೆ ಅಸ್ತ್ರವಾಗಿದ್ದ ಸಂಘಟನೆ ಬಹುದೂರ ಸಾಗಿ ನಿಜದ ಅರ್ಥದಲ್ಲಿ ದೂರದ ಚಂದ್ರಾಯುಧವಾಗಿಹೋಯಿತು. ರಾಜಕೀಯ ನಾಯಕರ ಮನೆ ಕಾದಷ್ಟು ಸಂಘಟನೆಯ ಹತಾರ ಮೊಂಡಾಯಿತು. ಇವರು ಹತಾಶರಾದಾಗಲೆಲ್ಲ ದೂರದ ಚಂದ್ರಾಯುಧವನ್ನ ಬಳಸಲಾಗದೆ, ಹತ್ತಿರದ ಮೊಂಡ್ಗತ್ತಿಯನ್ನ ಎತ್ತಲು ಹೋದರೆ ಹಿಡಿಯೇ ಕಳಚಿಬೀಳುತ್ತಿತ್ತು.

ಕಾಂಗ್ರೆಸ್ಸು ವಿಷ. ಅದರ ಜುಟ್ಟು ವಿಷನಾಗರದೇವಿಯ ಕೈಯಲ್ಲಿದೆ ಎಂದವರು, ದಳವನ್ನು ಬೆಂಬಲಿಸಿ ಮತಹಾಕಿ ಎಂದವರು, ಈಗ ಕಾಲ ಚಕ್ರದ ಉರುಳಿನಡಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈಗ ದಳವನ್ನ ಪ್ರಬಲವಾಗಿ ವಿರೋಧಿಸುತ್ತಾ, ಕಾಂಗೈ ಅಪ್ಪಿಕೊಂಡಿದ್ದಾರೆ. ಈ ಸಾಹಸಕ್ಕೆ ಜನಪರವಾಗಿದ್ದ ಸಂಘಟನೆಯನ್ನು ಬಲಿಕೊಡಬೇಕಿತ್ತೆ? ಎಂಥ ವಿಪರ್ಯಾಸ. ಬೇರೆ ಬೇರೆ ಜಾತಿಯ ಹೂಗಳಿಂದ ಮಕರಂದವನ್ನು ಶೇಖರಿಸಿ ಜೇನು ತುಪ್ಪವಾಗಿಸಿದ (ಚಿಂತಕರನ್ನಾಗಿಸಿದ) ಜೇನುಗಳೆಲ್ಲಿ? ಪರಾಗ ಸ್ಪರ್ಶ ಕ್ರಿಯೆಯಲ್ಲಿ (ಪರ್ಯಾಯ ಚಿಂತನೆಗಾಗಿ ನಡೆದ ಕಾರ್ಯಕ್ರಮಗಳಲ್ಲಿ) ತೊಡಗಿ ಹೊಸ ಹೂಗಳನ್ನು (ಹೋರಾಟಗಾರರನ್ನು) ಕೊಡುಗೆಯಾಗಿ ನೀಡಿದ ಜೇನುಗಳೆಲ್ಲಿ? ಇವರು ರಾಜಕೀಯ ಕಲ್ಲನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ಅವೆಲ್ಲ ಚದುರಿ ಐಕ್ಯತೆಯ ಗೂಡಿನಿಂದ ಹಾರಿಬಿಟ್ಟವು. ಗೂಡು ಬರಿದಾದಷ್ಟು ಇವರು ತಬ್ಬಲಿಗಳಾದರು. ಸಿಕ್ಕ ಸಣ್ಣಪುಟ್ಟ ರಾಜಕೀಯ ಸಖ್ಯವನ್ನೇ ದೊಡ್ಡದೆಂದು ಬಗೆದರು. ಯಾವ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ ಅವರನ್ನ ಹಿಮ್ಮೆಟ್ಟಿಸಲಾಗಿತ್ತೋ ಅದೇ ಶಕ್ತಿಗಳು ಇವರಿಗೀಗ ಸವಾಲಾಗಿದ್ದಾರೆ. ವೈಜ್ಞಾನಿಕವಾಗಿ ಚಿಂತಿಸುವುದನ್ನೇ ಅಪರಾಧ ಎನ್ನುವಂತೆ ಮಾಡಿಬಿಟ್ಟಿದ್ದಾರೆ. ದುಷ್ಟಶಕ್ತಿಗಳು ಖಾಲಿಯಾದ ಜೇನುಗೂಡಿಗೆ ಹೆದರುತ್ತಿಲ್ಲ. ಏಕೆಂದರೆ ಅಲ್ಲಿ ಮಕರಂದ ಶೇಖರಣೆಯಾಗುತ್ತಿಲ್ಲ. ಜೇನುತುಪ್ಪ ಅಲ್ಲಿಲ್ಲ. ದುಷ್ಟಶಕ್ತಿಗಳೇ ಜೇನುಗಳಾಗಿ ತಮಗೆ ಬೇಕೆನಿಸಿದವರ ಮೇಲೆ ವ್ಯವಸ್ಥಿತ ಸಾಮೂಹಿಕ ದಾಳಿ ನಡೆಸುತ್ತಿವೆ. ವಿಚಾರವಂತರಿಗಿದು ಕಾಲವಲ್ಲ ಎಂಬಂತಾಗಿಬಿಟ್ಟಿದೆ. ದಾಬೋಲ್ಕರ್, ಕಲ್ಬುರ್ಗಿ, ಹುಚ್ಚಂಗಿ ಪ್ರಸಾದ್, ಭಗವಾನ್ ಅವರ ಪ್ರಕರಣಗಳು ಇವುಗಳನ್ನು ಸಾಂಕೇತಿಸುತ್ತಿವೆ.

ಇತ್ತೀಚೆಗೆ ದೇವನೂರರ ಅನುಯಾಯಿಗಳು ಅಥವಾ ಡಿ.ಎಸ್.ಎಸ್‌ನ ಫಲಾನುಗಭವಿಗಳು ಎಲ್ಲಾ ಬಣಗಳೂ ಒಂದಾಗುವ ಸಂಬಂಧ ಮೈಸೂರಿನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಿ ಎಲ್ಲರದ್ದು ಒಂದೇ ಮಾತು. ಹಿಂದಿನದನ್ನ ಕೆಣಕಬೇಡಿ. ಮುಂದೆ ಆಗಬೇಕಿರುವುದನ್ನು ನೋಡೋಣ.

 ಇದರಲ್ಲಿ ಎಂಥ ಮೋಸ ಅಡಗಿದೆ ಎಂಬುದನ್ನು ಕೆಲವರಾದರೂ ಅರ್ಥಮಾಡಿಕೊಂಡಿರುತ್ತಾರೆ. ಹಿಂದಿನದನ್ನು ಕೆಣಕಬೇಡಿ ಎಂದರೆ ಇವರು ಮಾಡಿರುವ ಘೋರ ತಪ್ಪುಗಳನ್ನ ಕೆಣಕಿ ಬಣ್ಣ ಬಯಲುಮಾಡಬೇಡಿ ಎಂದು ಅರ್ಥ. ಹಾಗೊಂದುವೇಳೆ ಇತಿಹಾಸ ಬಯಲಾದರೆ ಶೋಷಿತರು ಇವರನ್ನ ಕ್ಷಮಿಸಲಾರರು ಎಂಬುದೇ ಇವರಿಗಿರುವ ದಿಗಿಲು. ಇದನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರಾದಿಯಾಗಿ, ಫಲಾನುಭವಿಗಳು ಸಹ ಇದನ್ನ ಒತ್ತಿ ಒತ್ತಿ ಹೇಳುತ್ತಿದ್ದರು. ಅದನ್ನು ಎಷ್ಟುಸಾರಿ ಹೇಳಿದರೂ ಅವರಿಗೆ ಸಾಕೆನಿಸಿದಂತೆ ಕಾಣುತ್ತಿರಲಿಲ್ಲ. ಇದರ ಹಿಂದೆ ಯಾರ ಜಪ್ತಿಗೂ ಸಿಗದ ನವಿಲೊಂದರ ಕರಿನೆರಳು ಸ್ಪಷ್ಟವಾಗತೊಡಗಿತ್ತು. ಇಂಥ ವ್ಯವಸ್ಥಿತವಾದ ಸಂಚು ಹಿಂಬಾಲಕರಿಂದ ಹೊರಡುವಂತೆ ನೋಡಿಕೊಳ್ಳಲಾಗಿತ್ತು. ದಲಿತ ಸಂಘರ್ಷ ಸಮಿತಿಗೆ ಅಂಬೇಡ್ಕರರೇ ಪ್ರೇರಣೆ. ಇತಿಹಾಸವನ್ನ ಕುರಿತು ಬಹಳ ದೊಡ್ಡ ಕುತೂಹಲವನ್ನು ಇಟ್ಟುಕೊಂಡಿದ್ದ ಅವರು ಹೀಗೆ ಹೇಳುತ್ತಾರೆ: ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಅಂದರೆ ಇವರ ತತ್ವ ಚಿಂತನೆಗಳನ್ನೇ ಉಸಿರಾಡುವ ಸಂಘಟನೆಯ ಜನ ನಡೆಸಿದ ಕಾರ್ಯಕ್ರಮದ ಉದ್ದಕ್ಕೂ ತಪ್ಪದೇ ಹೇಳುತ್ತಿದ್ದ ಮಾತೆಂದರೆ ಸಂಘಟನೆಯ ಇತಿಹಾಸವನ್ನು ಕೆಣಕಬೇಡಿಎಂದು. ಹೀಗೆ ಹೇಳುವವರು ಅಂಬೇಡ್ಕರ್‌ವಾದಿಗಳಾಗಿರಲು ಸಾಧ್ಯವಿಲ್ಲ. ಅವರ ಹೆಸರಿನಲ್ಲಿ ಸ್ವಾರ್ಥ ಸಾಧನೆಗಿಳಿದ ಜನ ಇವರು. ಹೊಸ ತಲೆಮಾರು ಇವರನ್ನ ಮಾರ್ಗದರ್ಶಕರನ್ನಾಗಿ ತೆಗೆದುಕೊಂಡರೆ ಗತಿ ಏನು?

ಸಂಘಟನೆಯ ಇತಿಹಾಸವನ್ನ, ಅದು ಸಮಾಜದಲ್ಲಿ ಉಂಟುಮಾಡಿದ ಸಾಂಸ್ಕೃತಿಕ ಅಪ್ಯಾಯಮಾನತೆಯನ್ನ ಜನ ತಿಳಿಯಬೇಡವೆ. ಜನರನ್ನ ಮೋಸದಿಂದ ನಿಯಂತ್ರಿಸುತ್ತಿದ್ದ ಸಂಸ್ಕೃತಿಯೊಂದರ ಜಾಗದಲ್ಲಿ ಪ್ರತಿ ಸಂಸ್ಕೃತಿಯೊಂದನ್ನು ಬೇರೂರಿಸುವ ಅತ್ಯಂತ ಜವಬ್ದಾರಿಯುತ ಕೆಲಸವನ್ನ ನಿರ್ವಹಿಸಿದ ಸಂಘಟನೆಯೊಂದು ನೆಲ ಕಚ್ಚಿದ ಇತಿಹಾಸವನ್ನ ಜನ ತಿಳಿಯಬೇಡವೇ? ಸಮಾಜದಲ್ಲಿ ಒಂದು ವೈಜ್ಞಾನಿಕ ಚಿಂತನೆಯ ಸಂಚಲನವನ್ನುಂಟುಮಾಡಿದ ಜನರನ್ನೊಮ್ಮೆ ನೆನೆಯಬೇಡವೇ? ಅಂಥದ್ದೊಂದು ದೊಡ್ಡ ಜವಬ್ದಾರಿಯನ್ನ ನಿರ್ವಹಿಸಿದ ಸಂಘಟನೆಯ ನಿಜದ ಜಾಡನ್ನು ಅರಿಯಬೇಡವೆ? ಸಂಘಟನೆ ಹೊರಸೂಸಿದ ಸಾಂಸ್ಕೃತಿಕ ಪ್ರಭಾವಳಿಯೊಂದು ನಮ್ಮನ್ನ ಆವರಿಸಿ, ತಾಯ್ತನದ ಬೆಂಗಾವಲಿನಲ್ಲಿ ಇಡೀ ಸಮಾಜವನ್ನ ಮುನ್ನಡೆಸಿದ ಪರಿಯ ಯುವ ಜನಾಂಗಕ್ಕೆ ಪರಿಚಯಿಸಬೇಡವೆ? ಯಾವುದೇ ಮುಖ್ಯ ವಿಷಯವಿದ್ದರೂ ಉಡಾಫೆ ನೆಲೆಗೆ ನಾಜೂಕಾಗಿ ಸರಿಸುತ್ತಿದ್ದ ದೇವನೂರರ ಒಳಗನ್ನ ತೆರೆದಿಡಬೇಡವೆ? ರಾಜಕಾರಣ ಮಾಡುವವರಿಗೆ ಇಲ್ಲಿ ಏನು ಕೆಲಸ ಎಂದು ಕೇಳಬೇಡವೆ? ಪುಡಾರಿಗಳನ್ನ ಹತ್ತಿರಕ್ಕ್ಕೆ ಸುಳಿಯಗೊಡದ ಸಂಘಟನೆ ಅದಾಗಿದ್ದರಿಂದಲೇ ಅದು ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಇಲ್ಲದಿದ್ದಲ್ಲಿ ಹುಟ್ಟುವಾಗಲೇ ಸಾವನ್ನೂ ಜೊತೆಗೇ ಕಟ್ಟಿಕೊಂಡು ಬರುವುದು ನಿಶ್ಚಿತವಾಗುತ್ತಿತ್ತು. ಇಲ್ಲಿ ಬೇರೆ ರಾಜಕಾರಣಿಯೊಬ್ಬ ಸಂಘಟನೆಗೆ ಸೇರಿಕೊಂಡು ಹಾಳುಗೆಡುಗುವುದಿರಲಿ, ಸ್ವತಃ ಸಂಘಟಕರೇ ರಾಜಕಾರಣಿಗಳಾಗಿ ಪರಿವರ್ತಿತರಾಗಿ ಸಂಘಕ್ಕೆ ಕೊಳ್ಳಿ ಇಟ್ಟರು. ನಿರ್ಲಕ್ಷಿತ ಜನರ ಧ್ವನಿಯಾಗಿದ್ದ ಸಂಘಟನೆಗೆ ತಗಲಿಕೊಂಡ ರಾಜಕೀಯ ಗೆಡ್ಡೆಗಳನ್ನ ಆಪರೇಶನ್ ಮಾಡಿ ಹೊರತೆಗೆಯಬೇಡವೆ. ಹಾಗೆ ಮಾಡುವ ಮೂಲಕ ಅದನ್ನ ನೈಜ ಸಂಘಟನೆಯಾಗಿ ಉಳಿಸಿಕೊಳ್ಳಬೇಡವೆ. ಇತಿಹಾಸ ತಿಳಿದು, ತಪ್ಪು ಎಲ್ಲಿ ಆಗಿದೆ ಎಂದು ಅರಿಯದಿದ್ದರೆ ಆಪರೇಶನ್ ಮಾಡುವುದಾದರೂ ಹೇಗೆ? ಬಹಳ ಹಿಂದೆ ದೇವನೂರರ ಕುರಿತಾಗಿ ಲೇಖನವೊಂದನ್ನ ಓದಿದ ನೆನಪು ಅದರ ತಲೆಬರಹ: ಮೆಟ್ಟಲಿಲ್ಲದೆ ಮಹಡಿ ಹತ್ತಿದ ಮಹದೇವ ಎಂದು.

 ಇದ್ದ ಸಾಂಸ್ಕೃತಿಕ ಕಣ್ಣೊಂದನ್ನು ಕಳೆದುಕೊಂಡು, ಇಲ್ಲದ ಸಾಂಸ್ಕೃತಿಕ ಕಣ್ಣಿಗಾಗಿ ಒಂದು ತಪಸ್ಸುಮಾಡ ಹೊರಟಿದ್ದಾರೆ.

 ಇವರ ಮಾತಿಗೂ ಕೃತಿಗೂ ಸಂಬಂಧವಿದೆಯೇ? ಹಿಂದೆ ಪರ್ಯಾಯ ರಾಜಕಾರಣ ಮಾಡೋಣ ಎಂದು ನಾಲ್ಕೈದು ಹೊರಾಂಗಣ ಮೀಟಿಂಗ್‌ಗಳನ್ನು ನಡೆಸಲಾಗಿತ್ತು. ಆ ಮೀಟಿಂಗನ್ನು ನಿಭಾಯಿಸಲು ಎಲ್.ಐ.ಸಿ. ಲಕ್ಷ್ಮಣ್ ಹೊಸಕೋಟೆ ಅವರನ್ನು ನೇಮಿಸಲಾಗಿತ್ತು. ವಿಷಯ ಪ್ರಸ್ತಾಪಿಸುವಾಗ ಅವರು ಬಳಸುತ್ತಿದ್ದ ಭಾಷೆ ಕನ್ವಿನ್ಸಿಂಗ್ ಲಾಂಗ್ವೇಜ್ ಆಗಿತ್ತು. ಅವರು ಸಂಘಟನೆಯಿಂದ ಕಲಿತ ನವಿರಾದ ಭಾಷೆ, ಎಲ್.ಐ.ಸಿ. ವೃತ್ತಿಯಿಂದ ಕಲಿತ ವ್ಯಾಪಾರಿ ಭಾಷೆ ಎರಡನ್ನೂ ಬಳಸಿ ಎದುರಿಗಿದ್ದ ಹಳೆ ಕಾಮ್ರೆಡ್‌ಗಳನ್ನು ಒಪ್ಪಿಸಲು ಶ್ರಮಪಡುತ್ತಿದ್ದರು. ಲಕ್ಷ್ಮಣ್ ಅವರನ್ನ ಈ ಕೆಲಸಕ್ಕೆ ಸರಿಯಾಗಿಯೇ ಆಯ್ಕೆ ಮಾಡಲಾಗಿತ್ತು. ಕೊನೆಯ ಮೀಟಿಂಗ್‌ಗಳಿಗೆ ನನ್ನನ್ನ ಕರೆಯಲಿಲ್ಲ. ಯಾಕೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರಿಗೆ ಅಂತಿಮ ಸುತ್ತಿನ ಈ ಕಾರ್ಯಕ್ರಮದಲ್ಲಿ ಬಂದು ಕೂರಬೇಕಾಗಿದ್ದವರು ಹೌದಪ್ಪಗಳು. ಸ್ವಲ್ಪ ದಿನಗಳ ನಂತರ ಪತ್ರಿಕೆಯಲ್ಲಿ ಓದಿದೆ. ಮೈಸೂರಿನ ರೆಸಾರ್ಟ್‌ವೊಂದರಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಪರ್ಯಾಯ ರಾಜಕಾರಣ ಮಾಡಲು ಪಕ್ಷವೊಂದು ಬೇಕಿದ್ದು ಅದಕ್ಕೆ ಸರ್ವೋದಯ ಕರ್ನಾಟಕಎಂದು ಹೆಸರಿಡಲಾಗಿತ್ತು. ಅಂದುಕೊಂಡಂತೆ ಎಲ್ಲವೂ ಪೂರ್ವನಿಯೋಜಿತವಾಗಿತ್ತು. ಆ ಪಕ್ಷಕ್ಕೆ ದೇವನೂರರು ಅಧ್ಯಕ್ಷರಾಗಿ ಜಪ್ಪಂತ ಕುಂತಿದ್ರು. ಆಗ ನನಗೆ ತಿಳಿಯಿತು, ಇದರ ಹಿಂದಿನ ರೂವಾರಿಗಳು ಯಾರು ಎಂದು. ಇದು ಪರ್ಯಾಯ ರಾಜಕಾರಣ ಅಲ್ಲ, ಬದಲಿಗೆ ಪರದಾಡುವವರ ರಾಜಕಾರಣವಾಗಿತ್ತು. ಸಂಘಟಕರನ್ನೇ ಯಾಮಾರಿಸಿ ಕುರ್ಚಿ ಏರಬೇಕಿತ್ತೆ?

ಅಂದರೆ ಇವರಿಗೆ ಜನ ಪ್ರಶ್ನೆ ಮಾಡಿಬಿಟ್ರೆ ಅನ್ನೋ ಹೆದರಿಕೆ ಈಗಿನದಲ್ಲ. ಯಾರೂ ಪ್ರಶ್ನಿಸದಂತೆ ಮಾಡಲು ಇವರು ಮಾಡುವ ತಂತ್ರಗಳು ಹೇಗಿರುತ್ತವೆ ಎಂಬುದನ್ನು ತಿಳಿಸುವ ಒಂದು ಸಣ್ಣ ಉದಾಹರಣೆ ಅಷ್ಟೆ. ಇಂತಹವರು ಸಂಘಟನೆಯಲ್ಲಿ ಮತ್ತೆ ಉಳಿದುಬಿಟ್ಟರೆ ಸಂಘಟನೆಯ ಗತಿ ಏನಾಗಬಹುದು? ...ನಮ್ಮ ಮಾತಿನ ಆಶಯಗಳು ಏನಿದೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಹೆಚ್ಚುತ್ತಲೇ ಇವೆ. ಹಾಗಾದರೆ ಎಲ್ಲಿ ತಾಳ ತಪ್ಪುತ್ತಿದೆ ಎಂದು ದೇವನೂರು ಕೇಳುತ್ತಾರೆ. ಸಂಘಟನೆಯ ಕಾರ್ಯಕ್ರಮಗಳು ನಿಂತು, ಸಾಮಾಜಿಕ ಎಚ್ಚರಿಕೆಯ ವಿಸ್ಮತಿಗೆ ಇಡೀ ಕರ್ನಾಟಕ ತಳ್ಳಲ್ಪಡುತ್ತಿದ್ದಂತೆ ತಾಳ ತಪ್ಪುತ್ತಾ ಹೋಗುತ್ತದೆ. ವಿಚ್ಛಿದ್ರಕಾರಿ ಶಕ್ತಿಗಳು ಮನೆಮಾಡುತ್ತವೆ. ಇದು ಅವರಿಗೆ ಗೊತ್ತಿಲ್ಲ ಅಂತಲ್ಲ. ನಿದ್ರೆ ಮಾಡುವವನನ್ನ ಎಚ್ಚರಿಸಬಹುದು, ನಿದ್ರೆ ಮಾಡುವವನಂತೆ ನಟಿಸುವವನನ್ನು ಎಚ್ಚರಿಸಲು ಆಗುವುದಿಲ್ಲ.

Writer - ದಯಾನಂದಮೂರ್ತಿ ಮೈಸೂರು

contributor

Editor - ದಯಾನಂದಮೂರ್ತಿ ಮೈಸೂರು

contributor

Similar News