ನಾಯಕರು ಸೋಲಲಿ ರಾಜ್ಯ ಗೆಲ್ಲಲಿ : ಇದೇ ಇಂದಿನ ತುರ್ತು

Update: 2024-04-25 08:55 GMT

ಕರ್ನಾಟಕದ ರಾಜಕಾರಣ ಒಂದು ಕಾಲಕ್ಕೆ ಇಡೀ ದೇಶಕ್ಕೇ ಮಾದರಿಯಾಗಿತ್ತು. ‘ಆಪರೇಷನ್ ಕಮಲ’ ಎಂಬ ಅನಿಷ್ಠ ಶುರುವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ರಾಜಕಾರಣದ ಗುಣಮಟ್ಟ ಕುಸಿಯಲಾರಂಭಿಸಿತು. ಈಗ ಲೋಕಸಭಾ ಚುನಾವಣೆಯಲ್ಲಿ ಪಾತಾಳವನ್ನೇ ಸೇರಿದೆ.

ಮೊದಲನೆಯದಾಗಿ ಹೆಸರಿನಲ್ಲೇ ‘ಜಾತ್ಯತೀತ’ ಎನ್ನುವ ಪದ ಹೊಂದಿರುವ ಜೆಡಿಎಸ್ ಕೋಮುವಾದಿ ಪಕ್ಷ ಎಂದೇ ಹೇಳಲಾಗುವ ಬಿಜೆಪಿ ಜೊತೆ ಕೈ ಜೋಡಿಸಿತು. ಒಮ್ಮೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದೆ ವಚನಭ್ರಷ್ಟರಾಗಿದ್ದರು. ಇನ್ನೊಮ್ಮೆ ಎಚ್.ಡಿ ಕುಮಾರಸ್ವಾಮಿ ಅವರ ಸರಕಾರವನ್ನು ‘ಆಪರೇಷನ್ ಕಮಲ’ದ ಮೂಲಕ ಯಡಿಯೂರಪ್ಪ ಅವರು ಕತ್ತು ಹಿಸುಕಿ ಕೊಂದುಹಾಕಿದ್ದರು. ಪರಸ್ಪರರ ದೃಷ್ಟಿಯಲ್ಲಿ ಪಾಪಿಗಳಾಗಿದ್ದವರು ಈ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪ್ರೀತಿಪಾತ್ರರಾಗಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು 11-10-9-8 ಸೀಟುಗಳಿಗೆ ಪಟ್ಟು ಹಿಡಿದು, ರಂಪಾಟಮಾಡಿ ಕಡೆಗೆ ಸಿಕ್ಕ 6 ಕ್ಷೇತ್ರಗಳಲ್ಲೇ ಒಂದೆರಡು ಕಡೆ ಅಭ್ಯರ್ಥಿಗಳಿಲ್ಲದೆ ಪರದಾಡಿದ್ದರು. ಅಂತಿಮವಾಗಿ ಗೆದ್ದದ್ದು ಒಂದೇ. ಈ ಸಲ ಮೂರು-ಮತ್ತೊಂದು (ಮತ್ತೊಂದು- ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಚಿಹ್ನೆಯಡಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ) ಸೀಟು ಪಡೆಯಲು ದೇವೇಗೌಡ ಮತ್ತು ಕುಮಾರಸ್ವಾಮಿ ಕನಿಷ್ಠ ಐದಾರು ಬಾರಿ ದಿಲ್ಲಿಗೆ ಹೋಗಿಬರಬೇಕಾಯಿತು. ಮಂಡ್ಯ ಕ್ಷೇತ್ರವನ್ನು ಪಡೆಯಲು ಕುಮಾರಸ್ವಾಮಿ ಇನ್ನಿಲ್ಲದಂತೆ ತಿಣುಕಾಡಬೇಕಾಯಿತು (ಸುಮಲತಾ ಪಟ್ಟು ಹಿಡಿದಿದ್ದರಿಂದ). ಬಿಜೆಪಿ ಇವರನ್ನು ಇಷ್ಟು ನಿಕೃಷ್ಟವಾಗಿ ನಡೆಸಿಕೊಂಡರೂ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ ಯಾವ ಹಂತದಲ್ಲೂ ಸಿಡಿದೇಳುವ-ಹಕ್ಕು ಪ್ರತಿಪಾದಿಸುವ ಪ್ರಯತ್ನವನ್ನು ಮಾಡಲಿಲ್ಲ. ಒಂದು ಹಂತದಲ್ಲಿ ಇದು ‘ದೇವೇಗೌಡ-ಕುಮಾರಸ್ವಾಮಿ ಅವರಿಗೂ ಈಡಿ-ಸಿಬಿಐ ಬೆದರಿಕೆ ಬಂದಿರಬಹುದು’ ಎಂದು ಮಾತನಾಡಿಕೊಳ್ಳುವಂತಾಗಿತ್ತು.

ತಮಗೆ ಸಿಕ್ಕ ಮೂರು ಕ್ಷೇತ್ರಗಳ ಪೈಕಿ ಕೋಲಾರ ಮೀಸಲು ಕ್ಷೇತ್ರವಾಗಿದ್ದರಿಂದ ಅಲ್ಲಿ ಅನಿವಾರ್ಯವಾಗಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯನ್ನು ಕಣಕ್ಕಿಳಿಸಿದ್ದಾರೆ. ಇನ್ನುಳಿದ ಎರಡೂ ಕ್ಷೇತ್ರಗಳಲ್ಲಿ ಕುಟುಂಬದವರೇ ಅಭ್ಯರ್ಥಿಗಳಾಗಿದ್ದಾರೆ. ಈ ಮೂಲಕ ಜೆಡಿಎಸ್ ನೂರಕ್ಕೆ ನೂರರಷ್ಟು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾದುದು ಎಂಬ ಮೊಹರು ಒತ್ತಿದ್ದಾರೆ.

ರಾಜಕೀಯದಲ್ಲಿ ಅದರಲ್ಲೂ ಚುನಾವಣಾ ಸಮಯದಲ್ಲಿ ಬೇರೆಯವರು ಕೆಸರು ಎರಚುವುದು ಸಾಮಾನ್ಯ. ಆದರೆ ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ದೇವೇಗೌಡ ಮತ್ತು ಕುಮಾರಸ್ವಾಮಿ ತಾವೇ ಖುದ್ದಾಗಿ ಕೆಸರನ್ನು ಮೈ ಮೇಲೆಲ್ಲಾ ದಂಡಿಯಾಗಿ ಸುರಿದುಕೊಂಡಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ತೆರಿಗೆ ಹಂಚಿಕೆ, ಬರ ಪರಿಹಾರ ಬಿಡುಗಡೆ, ಮೇಕೆದಾಟು ಯೋಜನೆ ಜಾರಿಗೆ ಅನುಮತಿ ಮತ್ತಿತರ ವಿಷಯಗಳಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಕುಮಾರಸ್ವಾಮಿ ಅತ್ಯಂತ ನಿರ್ಲಜ್ಜ ವಾಗಿ ಕೇಂದ್ರ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರಕಾರದಿಂದ ಅನ್ಯಾಯವನ್ನು ಖಂಡಿಸಿ ರಾಜ್ಯದ ಪ್ರತಿನಿಧಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ ಎನ್ನುವ ಕಾರಣಕ್ಕೆ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರೆ ದೇವೇಗೌಡರು ‘ಕನಿಷ್ಠ 6 ಕೋಟಿ ಜನರ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿ 140 ಕೋಟಿ ಜನರ ಪ್ರತಿನಿಧಿಯಾದ ಪ್ರಧಾನ ಮಂತ್ರಿಯನ್ನು ಪ್ರಶ್ನಿಸಬಾರದು ಎಂದು ಷರಾ ಬರೆಯುತ್ತಾರೆ.

ಇದೇ ಕೇಂದ್ರ ಬಿಜೆಪಿ ಸರಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ವಿಷಯ ಇಟ್ಟುಕೊಂಡು ಕಾಂಗ್ರೆಸ್ ‘ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಸಿಕ್ಕಿರುವುದು ಚೊಂಬು’ ಎಂಬರ್ಥದ ಜಾಹೀರಾತು ನೀಡಿದರೆ, ಅದನ್ನು ಬಿಜೆಪಿಯ Fringe Elements ರೀತಿಯವರನ್ನೂ ಮೀರಿಸುವಂತೆ ದೇವೇಗೌಡರು ‘ಕಾಂಗ್ರೆಸ್ ಬಿಟ್ಟು ಹೋಗಿದ್ದ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದ್ದಾರೆ’ ಎಂದು ರಾಜ್ಯದ ಹಿತವನ್ನು ಬಿಜೆಪಿ ನಾಯಕರಿಗೆ ಅಡವಿಟ್ಟು ಸಮರ್ಥಿಸಿಕೊಂಡಿದ್ದಾರೆ. ದೇವೇಗೌಡರ ಈ ವರಸೆ ಕಂಡು ಬಿಜೆಪಿಯವರೇ ಬೆಚ್ಚಿ ಬಿದ್ದಿದ್ದಾರೆ.

ಇನ್ನು ಹಾಸನದ ‘ವೀಡಿಯೊ ವೀರ’ನ ಲೈಂಗಿಕ ಕ್ರೀಡೆ-ಕೃತ್ಯ-ಕುಕೃತ್ಯ ಎನ್ನಲಾದ ವೀಡಿಯೊ ರಾಜ್ಯಾದ್ಯಂತ ಹರಿದಾಡುತ್ತಿದೆ. ಇದೇ ವ್ಯಕ್ತಿಯ, ಇದೇ ರೀತಿಯ ವೀಡಿಯೊಗಳ ಬಗ್ಗೆ ಕಳೆದ ವಿಧಾನಸಭಾ ಚುನಾವಣೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ (ಎಚ್. ಡಿ. ರೇವಣ್ಣ ವಿರುದ್ಧ) ಜಿ. ದೇವರಾಜೇಗೌಡ ಅವರು 2023ರ ಡಿಸೆಂಬರ್ 23ರಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಇದರಿಂದಾಗಿ ವಿಷಯ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೂ ತಿಳಿದಿತ್ತು. ಇದೇ ಕಾರಣಕ್ಕೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಬೇಕು ಎನ್ನುವ ಚರ್ಚೆಯೂ ನಡೆದಿತ್ತು. ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಹಾಸನದಲ್ಲಿ ಎಚ್.ಡಿ. ರೇವಣ್ಣ ಕುಟುಂಬಕ್ಕೆ ಟಿಕೆಟ್ ಕೊಡದೆ ಇದ್ದರೆ ಮನೆಯಲ್ಲಿ ಆಗಬಹುದಾದ ಅಲ್ಲೋಲ-ಕಲ್ಲೋಲವನ್ನು ಅಂದಾಜು ಮಾಡಿದ ದೇವೇಗೌಡರು ಮತ್ತೊಮ್ಮೆ ದಿಲ್ಲಿಗೆ ದಂಡಯಾತ್ರೆ ಹೋಗಿ ಬಿಜೆಪಿ ನಾಯಕರನ್ನು ಒಪ್ಪಿಸಿ ಅಂತಿಮವಾಗಿ ‘ವೀಡಿಯೊ ವೀರ’ನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ವೀಡಿಯೊ ವೀರ’ನ ಟಿಕೆಟ್ ಪ್ರಹಸನದಿಂದ ಒಂದು ಅಂಶ ಖಚಿತವಾಗಲಿದೆ. ಆತನ ವೀಡಿಯೊ ಸಾಹಸಗಾಥೆಗಳು ಮೊದಲೇ ದೇವೇಗೌಡ, ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆಲ್ಲಾ ಗೊತ್ತಿತ್ತು ಎಂಬುದು. ಇಷ್ಟೇಅಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ದೇವೇಗೌಡರ ಕುಟುಂಬದ ಯಾರೊಬ್ಬರೂ ‘ಈತ ಸಂಸದ ಆಗಲು ಅನರ್ಹ, ಈತನ ಕೃತ್ಯ ಅಸಹ್ಯ, ಈತನಿಗೆ ಟಿಕೆಟ್ ಕೊಟ್ಟು ಕುಟುಂಬದ ಮಾನವನ್ನು ಹಾರಾಜಿಗೆ ಹಾಕುವುದು ಬೇಡ’ ಎನ್ನಲಿಲ್ಲ. ಬೇರೆಯವರನ್ನು ಬಿಡಿ ‘ಹೃದಯವಂತ’ ಎಂಬ ಬಿರುದಾಂಕಿತರಾದ ಮಂಜುನಾಥ್ ಅವರಾದರೂ ಬೇಡ ಎನ್ನಬಹುದಿತ್ತು. ಬಹುಶಃ ಅವರು ವಿರೋಧಿಸಿದ್ದರೆ, ‘‘ಆತ ಅಭ್ಯರ್ಥಿಯಾಗುವುದಾದರೆ ನಾನು ಸ್ಪರ್ಧೆ ಮಾಡಲ್ಲ, ‘ವೀಡಿಯೊ ವೀರ’ ಮತ್ತು ನಾನು ಜೊತೆಯಾಗಿ ಕೂರಲು ಸಾಧ್ಯವಿಲ್ಲ’’ ಎಂದು ಮೆಲುದನಿಯಲ್ಲಿ ಹೇಳಿದ್ದರೂ ‘ವೀಡಿಯೊ ವೀರ’ ಹಾಸನದ ಕಣದಲ್ಲಿ ಇರುತ್ತಿರಲಿಲ್ಲ. ಆದರೆ ಮಂಜುನಾಥ್ ಮೌನವಾಗಿದ್ದುಕೊಂಡು ಒಂದು ಮಹಾಕ್ರೌರ್ಯಕ್ಕೆ ಸಮ್ಮತಿ ಸೂಚಿಸಿದ್ದಾರೆ.

ನೀವು ‘ಆತ ಹಿಂದೆ ನಡೆಸಿದ ಕುಕೃತ್ಯಕ್ಕೆ ಮಂಜುನಾಥ್ ಈಗ ಹೇಗೆ ಕಾರಣ? ದೇವೇಗೌಡ-ಕುಮಾರಸ್ವಾಮಿ ಹೇಗೆ ಕಾರಣ?’ ಎಂದು ಕೇಳಬಹುದು. ಇವರೆಲ್ಲರೂ ಕಾರಣರೇ... ಏಕೆಂದರೆ ‘ವೀಡಿಯೊ ವೀರ’ ಬೆಳೆದಿರುವುದು ಇವರೆಲ್ಲರ ನೆರಳಿನಲ್ಲಿ, ಇವರೆಲ್ಲರ ಬಲದಿಂದಲೇ ಆತನಿಗೆ ‘ನಾನು ಯಾರನ್ನು ಬೇಕಾದರೂ ಮಂಚಕ್ಕೆ ಕರೆಯಬಹುದು’ ಎಂಬ ಧೈರ್ಯ ಬಂದಿರುವುದು. ತಾಯಿ ವಯಸ್ಸಿನವರು, ಮನೆಗೆಲಸದವರು, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರನ್ನೂ ತನ್ನ ಭೋಗದ ವಸ್ತು ಎಂದು ಭಾವಿಸಲು ‘ವೀಡಿಯೊ ವೀರ’ನ ಕುಟುಂಬಕ್ಕಿರುವ ಅಧಿಕಾರ, ಪ್ರಭಾವ ಕಾರಣ. ಸುತ್ತ ಇದ್ದ ಜನರ ಬೆಂಬಲ ಕಾರಣ. ಇದೇ ಅಧಿಕಾರದ ಮದದಿಂದಲೇ, ಅಹಂಕಾರದಿಂದಲೇ ಭವಾನಿ ರೇವಣ್ಣ ಅವರು ತಮ್ಮ ಕಾರಿಗೆ ಢಿಕ್ಕಿ ಹೊಡೆದ ಸ್ಕೂಟರ್ ಸವಾರನನ್ನು ‘ಸುಟ್ಟಾಕಿ’ ಎಂದು ಅಬ್ಬರಿಸಿದ್ದು. ಸ್ಕೂಟರ್ ಸವಾರನಿಗೆ ಏನಾಯಿತು ಎಂದು ಕೇಳುವ ಕನಿಷ್ಠ ಕಾಳಜಿಯನ್ನೂ ತೋರದೆ ‘ಕೋಟಿ ರೂಪಾಯಿ ಕಾರು ಹಾಳಾಯ್ತು’ ಎಂದು ಬಾಯಿ ಬಡಿದುಕೊಂಡಿದ್ದರು.

ಇಲ್ಲಿನ ಇಷ್ಟೂ ಘಟನೆಗಳಲ್ಲಿ ‘ನಾವು ಏನು ಬೇಕಾದರೂ ಮಾಡಿ ಜಯಿಸಬಹುದು’, ‘ನಮ್ಮನ್ನು ಕೇಳುವವರು ಯಾರೂ ಇಲ್ಲ’ (ಯಾರನ್ನೂ ಕೇಳಿ ಅವರು ಬಿಜೆಪಿ ಜೊತೆ ಹೋಗಲಿಲ್ಲ), ‘ನಮ್ಮ ಕುಟುಂಬ ಇರುವುದೇ ಆಳಲು-

ಅಧಿಕಾರ ಚಲಾಯಿಸಲು’, ‘ಬೇರೆಯವರೆಲ್ಲರೂ ಜೀತದಾಳುಗಳು’, ‘ಎಲ್ಲೆಡೆ ನಮ್ಮ ಕುಟುಂಬ ಮಾತ್ರವೇ ಇರಬೇಕು’, ‘ಯಾರೂ ನಮ್ಮನ್ನು ಪ್ರಶ್ನಿಸಬಾರದು’, ‘ಯಾವುದೂ ನಮಗೆ ಅಸಹ್ಯವಲ್ಲ’ ಮತ್ತು ‘ನಾವು ಯಾರಿಗೂ ಉತ್ತರದಾಯಿಗಳಲ್ಲ’ ಎಂಬ ಧೋರಣೆಗಳೇ ಎದ್ದು

ಕಾಣುತ್ತಿವೆ. ಈ ಚುನಾವಣೆಯಲ್ಲಿ ಇಂಥ ಧೋರಣೆಗಳಿಗೆ ಪಾಠ ಕಲಿಸಿದರೆ ಯಾರೋ ನಾಯಕರು ಸೋಲಬಹುದು, ಆದರೆ ರಾಜ್ಯ ಗೆಲ್ಲುತ್ತದೆ. ರಾಜ್ಯ ಗೆಲ್ಲಬೇಕಾಗಿದೆ. ಇದು ಇವತ್ತಿನ ತುರ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಧರಣೀಶ್ ಬೂಕನಕೆರೆ

contributor

Similar News