ದೇವನೂರ ಮಹದೇವರವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ

Update: 2016-01-01 06:09 GMT

 ದಿನಾಂಕ 24-12-2015 ಮತ್ತು 25-12-2015 ರಂದು ‘ವಾರ್ತಾಭಾರತಿ’ಯಲ್ಲಿ ಜನನುಡಿ ಸಮಾವೇಶದಲ್ಲಿ ದೇವನೂರ ಮಹದೇವರವರು ಆಡಿದ ವೌಲಿಕ ಮಾತುಗಳ ಮೂಲ ಆಶಯವನ್ನು ಗ್ರಹಿಸದೆ ಅವರ ಲೇಖನವನ್ನು ತಪ್ಪಾಗಿ ಅರ್ಥೈಸಿ ಶ್ರೀಧರ್ ಪ್ರಭು ಹಾಗೂ ಹಾರೋಹಳ್ಳಿ ರವೀಂದ್ರ ಅವರು ನೀಡಿರುವ ಪ್ರತಿಕ್ರಿಯೆ ಒರಟು ವಿಚಾರವಾದದ ಹಿನ್ನೆಲೆಯಿಂದ ಕೂಡಿದೆ. ದೇವನೂರರನ್ನು ಕುರಿತು ದಲಿತ ಆದಿಶಂಕರಾಚಾರ್ಯರಾಗಿ ಬಿಂಬಿಸಿರುವುದು ನಿಮಗೆ ಶೋಭೆ ತರುವುದಿಲ್ಲ. ಮಿತ್ರರೇ, ವೇದಗಳ ಕಾಲದಿಂದಲೂ ಚಾರ್ವಾಕರು, ಪುರೋಹಿತಶಾಹಿಗಳ ಆಚರಣೆಗಳನ್ನು ದೇವರ ಅಸ್ತಿತ್ವವನ್ನು ಕಡೆಗಣಿಸುತ್ತಲೇ ಹಿಂದಿನ ಬಾಗಿಲುಗಳಿಂದ ದೇವರುಗಳನ್ನು ಬರಮಾಡಿಕೊಂಡಿರುವ ಮರ್ಮವೇನು? ದ್ರಾವಿಡ ಚಳವಳಿ, ದಲಿತ ಚಳವಳಿಗಳು, ಪುರಾಣಗಳನ್ನು, ಕಾವ್ಯಗಳನ್ನು ಭಂಜಿಸುತ್ತಾ ಅದಕ್ಕೆ ಪರ್ಯಾಯವಾದ ಸಾಂಸ್ಕೃತಿಕ ನಡೆಯ ಬಗ್ಗೆ ಚಿಂತಿಸದೆ ಇರುವುದು ಯಾಕೆ? ತಾವು ಪಡೆದಿರುವ ಚಿಂತನೆಗಳ ಮೂಲದಲ್ಲಿ ಕೊರತೆ ಇದೆಯಾ? ಚರಿತ್ರೆಯ ಉದ್ದಗಲಕ್ಕೂ ಕ್ರಾಂತಿಗಳನ್ನು ಮಣಿಸುತ್ತಾ, ಪ್ರತಿಕ್ರಾಂತಿ ತನ್ನ ಯಜಮಾನ್ಯ ನೆಲೆಗಳನ್ನು ವಿಸ್ತರಿಸುತ್ತಿರುವ ತಂತ್ರಗಳೇನು.? ದೇವನೂರರ ಆತಂಕವನ್ನು ಸಮಚಿತ್ತದಿಂದ ತಾವುಗಳು ಗ್ರಹಿಸಿದ್ದರೆ ನೀವಿಷ್ಟು ಆಕ್ರೋಶವಾಗಿ ಪ್ರತಿಕ್ರಿಯಿಸುತ್ತಿರಲಿಲ್ಲವೇನೊ?

‘‘ಶಂಕರಾಚಾರ್ಯಾರಾದಿಯಾಗಿ ಪುರೋಹಿತಶಾಹಿ ಗಳು ನಮ್ಮ ಮೂಲ ಸಂಸ್ಕೃತಿಯ ಸಾಂಸ್ಕೃತಿಕ ನೆಲೆಗಳನ್ನು ನಾಶಮಾಡಿ ವೈದಿಕ ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಪರಿವರ್ತಿಸಿರುವುದು ಎಂತಹ ಸೋಜಿಗ. ಅಂಬೇಡ್ಕರ್‌ರವರು ‘ಈ ಕರ್ಮಠ ಪುರೋಹಿತ ಶಾಹಿಗಳು ನಮ್ಮ ಆದಿ ಮೂಲ ಸಂಸ್ಕೃತಿಯನ್ನು ಅದೆಷ್ಟು ವಿಕೃತಗೊಳಿಸಿದ್ದಾರೆಂದರೆ ಸೂಕ್ಷ್ಮ ಗ್ರಹಿಕೆಯಿಂದ ಗ್ರಹಿಸದೇ ಇದ್ದರೆ ಗುರುತು ಸಿಗಲಾರದಷ್ಟು ವಿಕೃತಗೊಳಿಸಿದ್ದಾರೆ’ ಎಂದು ಆಶ್ಚರ್ಯ ಚಕಿತರಾಗುತ್ತಾರೆ. ಯಾವ ಚಳವಳಿ ಸಾಂಸ್ಕೃತಿಕ ನಡೆಯಾಗಬೇಕಾಗಿತ್ತೋ ಆ ಚಳವಳಿ ಒಂದು ಹೆಜ್ಜೆಯೂ ಕ್ರಮಿಸದೇ ಇರುವುದು ವಿಪರ್ಯಾಸ, ಪಟ್ಟಭದ್ರರಿಗೆ ಪ್ರತಿಕ್ರಿಯಿಸುತ್ತಾ ನಮ್ಮ ಆಯಸ್ಸು ವ್ಯಯ ಮಾಡುವುದರ ಬದಲು ಸಮುದಾಯದ ಮನಸ್ಸಿನೊಡನೆ ಕೂಡಿಕೆಯಾಗಿ ನಮ್ಮ ಮಾತು ಸಮುದಾಯದ ಮಾತು ಆಗುವಂತಾಗಲು ಏನೇನು ಅಂತ ಹುಡುಕಬೇಕಾಗುತ್ತದೆ ಆಗ ನಡೆಯೂ ಸಿಗಬಹುದು, ಅಂತಹ ನಡೆಗಾಗಿ ಕುವೆಂಪುದರ್ಶನದ ಪ್ರತಿಮಾ ದೃಷ್ಟಿ ಪಡೆದರೆ ನಮಗೆ ಸಾಧ್ಯವಾಗುತ್ತದೆ’’ ಎಂಬ ದೇವನೂರರ ವಿವೇಕವನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. 70ರ ದಶಕದಲ್ಲಿ ನಡೆದ ಕರ್ನಾಟಕ ಬರಹಗಾರರ ಹಾಗೂ ಕಲಾವಿದರ ಸಮ್ಮೇಳನದಲ್ಲಿ ಕುವೆಂಪು ಮಾತಾಡುತ್ತಾ, ‘‘ಈ ಪುರೋಹಿತಶಾಹಿಗಳು ಹುಲಿ ಇದ್ದಂತೆ ನೀವು ಜೋಡು ನಳಿಗೆ ತೋಟಾ, ಕೋವಿ ಇಟ್ಟುಕೊಂಡು ಗುರಿ ಕಟ್ಟಿ ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು ಆದರೆ ಈ ವಿಚಿತ್ರ ಬೇಟೆಯಲ್ಲಿ ಗುಂಡು ತಗಲಬೇಕಾಗಿದ್ದು ಹುಲಿಯ ತಲೆಗಲ್ಲ...... ನಿಮ್ಮ ತಲೆಗೆ! ತಲೆಗೆ ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು’’ (ದೇವಯ್ಯಹರವೆ ಲೇಖನ) ನಾವು ಅಂತಹ ಬೌದ್ಧಿಕತೆಯನ್ನು ಪಡೆಯಬೇಕೆನ್ನುತ್ತಾರೆ. ಆ ಹಿನ್ನೆಲೆಯಲ್ಲಿ ಪುರಾಣ ಕಾವ್ಯಗಳನ್ನು ಹಳೆಯ ಒಡವೆಗಳೆಂದು ಬಗೆದು ಬಿಸಾಕದಿರಿ ಅವುಗಳನ್ನು ಕರಗಿಸಿ ಹೊಸರೂಪ ಪಡೆಯಬೇಕಾಗಿದೆ ಆ ಪ್ರಯತ್ನ ವನ್ನು ಕವಿ ಕಲಾವಿದರು ಮಾಡಬೇಕೆನ್ನುತ್ತಾರೆ. ಅದರ ಫಲವೇ ಶೂದ್ರತಪಸ್ವಿ. ಶಂಭೂಕನನ್ನು ವಧಿಸಲು ಶ್ರೀರಾಮ ಬಾಣ ಬಿಟ್ಟಾಗ ಆ ಬಾಣ ಶಂಭೂಕನನ್ನು ಸುತ್ತಿ ಮತ್ತೆ ವಾಪಸ್ಸಾಗುವ ಪ್ರತಿಮಾ ದೃಷ್ಟಿ ರಚಿಸಿದರು. ಆ ನಾಟಕದ ಬಗ್ಗೆ ಮಾಸ್ತಿಆದಿಯಾಗಿ ಪುರೋಹಿತ ಶಾಹಿಗಳು ಬೊಬ್ಬೆ ಹೊಡೆಯುತ್ತಾರೆ, ಕುವೆಂಪು ಅದಕ್ಕೆ ಎದೆಗುಂದಲಿಲ್ಲ.

ಲೋಹಿಯಾರವರು ಹೇಳುತ್ತಾರೆ ‘‘ಪುರಾಣಗಳು ಶತಶತಮಾನಗಳ ಕಾಲದಿಂದ ಜನರ ಮನಸ್ಸನ್ನು ಅಖಂಡವಾಗಿ ಆಳುತ್ತಾ ಬಂದಿವೆ. ಹಾಗೆಯೇ ಪುನಶ್ಚರಣೆ ಮಾಡುವಲ್ಲಿ ದೊಡ್ಡ ದೊಡ್ಡಗಾಯಕರು, ಕವಿಗಳು ಅದನ್ನು ನಯಗೊಳಿಸಲು ತಮ್ಮ ಪ್ರತಿಭೆಯನ್ನು ಬಳಸಿದರು, ಇತಿಹಾಸದ ವ್ಯಕ್ತಿಗಳಾದ ಬುದ್ಧ, ಅಶೋಕ ಇವರ ಬಗ್ಗೆ ನಮ್ಮ ಜನರಲ್ಲಿ ಕಾಲುಭಾಗಕ್ಕೆ ಮಿಕ್ಕಿ ತಿಳಿದಿಲ್ಲ ರಾಮ, ಕೃಷ್ಣ, ಶಿವ ಎಲ್ಲ ವ್ಯಕ್ತಿಗಳಿಗೂ ಗೊತ್ತು’’

ಆದ್ದರಿಂದ ಪ್ರಗತಿಪರ ಚಿಂತಕರು ಪುರಾಣ ಕಾವ್ಯಗಳಲ್ಲಿರುವ ದೋಷಗಳನ್ನು ಪ್ರತಿರೋಧಿಸಿದ್ದು ಸಾಕು. ದೇವನೂರರು ಹೇಳಿದಂತೆ ‘‘ಸಮುದಾಯದ ಮನಸ್ಸಿನೊಡನೆ ನಾವು ಕೂಡಿಕೆಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ ನಾವು ಸಮುದಾಯ ದಿಂದಲೇ ಹೊರಹಾಕಲ್ಪಟ್ಟವರು ಆಗಿಬಿಡಬಹುದಾ? ಅದಕ್ಕಾಗಿ ನಾವು ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸುಮಾಡಬೇಕಾಗಿದೆ’’ ಈ ಬಗ್ಗೆ ಚಿಂತಿಸಬೇಕಾಗಿದೆ.

Writer - ವಿ. ಬಾಲಕೃಷ್ಣ, ಮಾಲೂರು

contributor

Editor - ವಿ. ಬಾಲಕೃಷ್ಣ, ಮಾಲೂರು

contributor

Similar News