ಪಾರ್ಶ್ವವಾಯು ಪೀಡಿತ ನಮ್ಮ ಸಮಾಜ

Update: 2016-01-01 22:10 GMT

ಹೆಣ್ಣೊಬ್ಬಳು ವಿದ್ಯೆ ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಬಳಕೆಯಲ್ಲಿದೆ. ‘ಬೇಟಿ ಬಚಾವೋ ಬೇಟಿ ಪಢಾವೋ’ ಆಂದೋಲನದ ಒಂದು ಭಾಗವಾಗಿ ಆಕೆಯನ್ನು ವಿದ್ಯಾವಂತಳಾಗಿಸುವ ಹೊಣೆಗಾರಿಕೆಯನ್ನೂ ಸರಕಾರ ತೆಗೆದುಕೊಂಡಿದೆ. ಆದರೆ ಇಂದಿಗೂ ಮಹಿಳೆ ಶಿಕ್ಷಣದಿಂದ ದೂರವೇ ಉಳಿದಿದ್ದಾಳೆ ಎನ್ನುವುದು ಇತ್ತೀಚಿನ ಜನಗಣತಿ ವರದಿಯಲ್ಲಿ ಬೆಳಕಿಗೆ ಬಂದಿದೆ. ಭಾರತೀಯ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದೂ ಮತ್ತು ಮುಸ್ಲಿಮ್ ಮಹಿಳೆಯರಲ್ಲಿ ಅರ್ಧದಷ್ಟು ಭಾಗ ಇನ್ನೂ ನಿರಕ್ಷರಕುಕ್ಷಿಗಳಾಗಿದ್ದಾರೆ ಎಂದು ಈ ಅಂಕಿಅಂಶ ಹೇಳುತ್ತದೆ. ಅಂದರೆ ನಮ್ಮ ಸಮಾಜದ ಅರ್ಧದಷ್ಟು ಭಾಗಕ್ಕೆ ಪಾರ್ಶ್ವವಾಯು ಬಡಿದಿದೆ. ದೇಹದ ಒಂದು ಭಾಗ ಮಾತ್ರ ಕೆಲಸ ಮಾಡಿ ಉಳಿದರ್ಧ ಭಾಗ ನಿಷ್ಕ್ರಿಯವಾದರೆ ಆ ದೇಹದಿಂದ ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಈ ನಿಟ್ಟಿನಲ್ಲಿ ಭಾರತದ ಇಂದಿನ ದಯನೀಯ ಸ್ಥಿತಿಗೆ ಏನು ಕಾರಣ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ಅಂಕಿಅಂಶದ ಪ್ರಕಾರ ಶೇ. 48ರಷ್ಟು ಮುಸ್ಲಿಮ್ ಮಹಿಳೆಯರಿಗೆ ಶೇ. 44ರಷ್ಟು ಹಿಂದೂ ಮಹಿಳೆಯರಿಗೆ ತಮ್ಮ ಹೆಸರನ್ನೂ ಬರೆಯಲು ಬರುವುದಿಲ್ಲ ಮತ್ತು ಹಿಂದೂಗಳಲ್ಲಿ ಅನಕ್ಷರಸ್ಥರಾಗಿ ಮತ್ತೆ ಗುರುತಿಸಲ್ಪಡುವವರು ಹಿಂದುಳಿದವರ್ಗ ಮತ್ತು ದಲಿತರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ನಗರ ಪ್ರದೇಶದಲ್ಲಿ ಮಹಿಳೆಯರು ಶಿಕ್ಷಣದ ಕಡೆಗೆ ಆಸಕ್ತರಾಗಿದ್ದಾರೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಾಕ್ಷರತೆಯ ವಾಸ್ತವ ಅತ್ಯಂತ ಭೀಕರವಾಗಿದೆ. ಈ ದೇಶದಲ್ಲಿ ಮುಸ್ಲಿಮ್ ಮಹಿಳೆಯರಲ್ಲಿ ಶೇ. 54ರಷ್ಟು ಮಂದಿಗೆ ಹಾಗೂ ಹಿಂದೂ ಮಹಿಳೆಯರ ಪೈಕಿ ಶೇ. 51 ಮಹಿಳೆಯರಿಗೆ ಬರೆಯುವ ಅಥವಾ ಓದುವ ಸಾಮರ್ಥ್ಯವಿಲ್ಲ. ಬಡತನ ಮತ್ತು ಸಾಮಾಜಿಕ ಸ್ಥಿತಿಯೇ ಮಹಿಳೆಯರನ್ನು ಈ ಗತಿಗೆ ತಂದಿಟ್ಟಿದೆ. ವಿಪರ್ಯಾಸವೆಂದರೆ ಶಿಕ್ಷಣ ಖಾಸಗೀಕರಣವಾದ ದಿನದಿಂದ ಮಹಿಳೆಗೆ ಕಲಿಕೆಯೆನ್ನುವುದು ಇನ್ನಷ್ಟು ದುಬಾರಿಯಾಗಿದೆ. ಖಾಸಗೀಕರಣ ಮತ್ತು ಕಾನ್ವೆಂಟ್ ಶಾಲೆಗಳ ಹಾವಳಿಗಳಿಂದಾಗಿ ಸರಕಾರಿ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಸರಕಾರಿ ಶಾಲೆಗಳು ಮುಚ್ಚುವುದೆಂದರೆ ಗ್ರಾಮೀಣ ಪ್ರದೇಶದ ಬಡ, ಹಿಂದುಳಿದವರ್ಗಗಳಿಗೆ ಕಲಿಯುವ ಅವಕಾಶ ಮುಚ್ಚಲ್ಪಟ್ಟಂತೆ ಮತ್ತು ಅದರಲ್ಲೂ ನೇರ ಪರಿಣಾಮವನ್ನು ಅನುಭವಿಸುವವರು ಮಹಿಳೆಯರು. ಇದೇ ಸಂದರ್ಭದಲ್ಲಿ ದಲಿತ ಮತ್ತು ಮುಸ್ಲಿಮ್ ಮಹಿಳೆಯರ ಕಲಿಕೆಗೆ ಹಲವು ರೀತಿಯಲ್ಲಿ ಸವಾಲುಗಳು ಎದುರಾಗುತ್ತಿವೆ.

ಒಂದೆಡೆ, ಆರ್ಥಿಕ ಸ್ಥಿತಿ ಮುಸ್ಲಿಮ್ ಮಹಿಳೆಯರನ್ನು ಕಲಿಯದಂತೆ ತಡೆಯುತ್ತಿದ್ದರೆ ಇನ್ನೊಂದೆಡೆ ಸಾಮಾಜಿಕ ವ್ಯವಸ್ಥೆಯೂ ಅವರಿಗೆ ಬೇರೆ ಬೇರೆ ರೀತಿಯಲ್ಲಿ ಅಡ್ಡಿ ಮಾಡುತ್ತಿದೆ. ಒಂದು ಕಾಲದಲ್ಲಿ ‘ಮುಸ್ಲಿಮ್ ಮಹಿಳೆಯರು ಯಾಕೆ ಶಾಲೆಗೆ ಹೋಗುತ್ತಿಲ್ಲ?’ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದರು. ಇಂದು ಅವರ ಬದುಕಿನಲ್ಲಿ ಆಮೂಲಾಗ್ರವಾಗಿ ಬದಲಾವಣೆಯಾಗುತ್ತಿದೆ. ಮುಸ್ಲಿಮ್ ಮಹಿಳೆಯರು ತಮ್ಮದೇ ಸಾಮಾಜಿಕ, ಧಾರ್ಮಿಕ ಚೌಕಟ್ಟಿನೊಳಗೆ ಶಾಲೆ, ಕಾಲೇಜುಗಳನ್ನು ಪ್ರವೇಶಿಸಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗಳನ್ನು ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಮತ್ತೆ ಬೇರೆ ಬೇರೆ ನೆಪಗಳನ್ನು ಒಡ್ಡಿ ಶಾಲೆಗೆ ಹೋಗದಂತೆ ತಡೆಯುವ ಪ್ರಯತ್ನವೊಂದು ನಡೆಯುತ್ತಿದೆ. ‘ತಲೆವಸ್ತ್ರ’ವನ್ನು ಧರಿಸುತ್ತಾರೆ ಎಂದು ಅವರಿಗೆ ಮಾನಸಿಕವಾಗಿ ಕಿರುಕುಳಗಳನ್ನು ನೀಡುವ ಪ್ರಯತ್ನವನ್ನು ಕೆಲವು ಶಾಲಾಸಂಘಟಕರು, ಶಿಕ್ಷಕರು ಮಾಡುತ್ತಿದ್ದಾರೆ. ‘ತಲೆವಸ್ತ್ರ ತೆಗೆದರೆ ಮಾತ್ರ ಶಾಲೆಯೊಳಗೆ ಪ್ರವೇಶ’ ಎಂಬಂತಹ ಧೋರಣೆಗಳನ್ನು ತಳೆದು, ಮಹಿಳೆಯರು ಶಾಲೆ ಕಲಿಯದೇ ಇರಲು ಪರೋಕ್ಷ ಕಾರಣವಾಗುತ್ತಿದ್ದಾರೆ. ಮನೆಯೊಳಗಿರುವ ಮಹಿಳೆಯರನ್ನು ಶಾಲೆಗೆ ಬರುವಂತೆ ಮಾಡುವುದು ಶಿಕ್ಷಕರ ಹೊಣೆಯಾಗಿದೆ. ಅವರ ಮನವೊಲಿಸಿ, ಅವರಿಗೆ ಧೈರ್ಯ ತುಂಬಿ ಶಾಲೆಗೆ ಬರುವಂತೆ ಮಾಡುವುದು ಅವರ ಕರ್ತವ್ಯ. ಆದರೆ ಕೆಲವು ಶಾಲೆಗಳು ಇದಕ್ಕೆ ವಿರುದ್ಧವಾದ ನೀತಿಯನ್ನು ತಳೆಯುತ್ತಿವೆ. ಮುಸ್ಲಿಮ್ ಮಹಿಳೆಯರಿಗೆ ಬೇರೆ ಬೇರೆ ನೆಪವೊಡ್ಡಿ, ಶಾಲೆಗೆ ಪ್ರವೇಶಿಸದಂತೆ ಮಾಡುವ ಸಂಚೊಂದು ರೂಪುಗೊಂಡಿದೆ. ಶಾಲೆಯಲ್ಲಿ ಸ್ಕಾರ್ಫ್ ಧರಿಸಬಾರದು, ತಲೆವಸ್ತ್ರ ಧರಿಸಬಾರದು, ಶಾಲೆಯ ಆವರಣದಲ್ಲಿ ಬುರ್ಖಾ ಧರಿಸಬಾರದು ಮೊದಲಾದ ನಿಯಮಗಳನ್ನು ಮುಂದಿಟ್ಟುಕೊಂಡು ಅವರನ್ನು ಶಾಲೆಯಿಂದ ದೂರ ಸರಿಯುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಸಂಘಪರಿವಾರ ಸಂಘಟನೆಗಳ ನೇರ ಕೈವಾಡವಿರುವುದು ಇನ್ನೊಂದು ಆತಂಕದ ವಿಷಯವಾಗಿದೆ.

ದಲಿತರ ವಿಷಯದಲ್ಲಂತೂ ಇದು ಇನ್ನಷ್ಟು ಭೀಕರವಾಗಿದೆ. ಅಸ್ಪಶ್ಯತೆ, ಜಾತೀಯತೆ, ಬಡತನ ಅವರನ್ನು ಶಾಲೆಗಳಿಂದ ದೂರ ಉಳಿಯುವಂತೆ ಮಾಡುತ್ತಿವೆ. ಶಿಕ್ಷಕರೇ ದಲಿತ ಮಕ್ಕಳ ಜೊತೆಗೆ ಜಾತೀಯತೆಯನ್ನು ಪ್ರದರ್ಶಿಸುವುದು ಆಗಾಗ ವರದಿಯಾಗುತ್ತಿದೆ. ಒಂದೆಡೆ ಸಮಾಜದ ಪ್ರಬಲ ಜಾತಿಯ ಜನರನ್ನು ಎದುರಿಸಿ ದಲಿತ ಮಕ್ಕಳು ಶಾಲೆ ಪ್ರವೇಶಿಸಬೇಕು. ಮಗದೊಂದೆಡೆ ಶಾಲೆಯಲ್ಲಿ ಉಳಿದ ಮಕ್ಕಳಿಂದ ಎದುರಾಗುವ ಅವಮಾನಗಳನ್ನು ಸಹಿಸಬೇಕು. ಜೊತೆಗೆ ಶಿಕ್ಷಕರಿಂದಲೂ ಜಾತೀಯತೆಯ ಬರೆ. ಇವೆಲ್ಲವನ್ನು ಎದುರಿಸಿ ಅವರು ಶಾಲೆಯಲ್ಲಿ ಮುಂದುವರಿಯುವುದು ಎಂದರೆ ಅದೊಂದು ಯುದ್ಧವೇ ಸರಿ. ಆ ಯುದ್ಧದಲ್ಲಿ ಬಾಲಕರೇನೋ ಜೀವ ಉಳಿಸಿಕೊಳ್ಳುತ್ತಾರೆ. ಆದರೆ ಬಾಲಕಿಯರೆಲ್ಲ ಅರ್ಧದಲ್ಲೇ ಶಾಲೆಯನ್ನು ತೊರೆಯಬೇಕಾಗುತ್ತದೆ.

ಈ ದೇಶದಲ್ಲಿ ಒಂದೆಡೆ ಮಹಿಳೆಯರಿಗೆ ಸಂಸತ್‌ನಲ್ಲಿ ಮೀಸಲಾತಿಯನ್ನು ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಮೀಸಲಾತಿ ಜಾರಿಗೊಂಡರೂ ಮೇಲಿನ ಅನಕ್ಷರಸ್ಥ ಮಹಿಳೆಯರಿಗೆ ಸಂಸತ್ ಪ್ರವೇಶ ಸಿಗುವುದು ಕಷ್ಟ. ಮಹಿಳೆಯರಲ್ಲೂ ಒಳಮೀಸಲಾತಿ ಮತ್ತು ಅನಕ್ಷರಸ್ಥರಿಗೆ ವಿಶೇಷವಾದ ಒತ್ತಾಸೆಯನ್ನು ನೀಡಿದಲ್ಲಿ ಮಾತ್ರ ಈ ಅನಕ್ಷರಸ್ಥ ಮಹಿಳೆಯರು ಸಂಸತ್ ಪ್ರವೇಶಿಸುವಂತಾಗಬಹುದು. ಆದರೆ ಇದೇ ಸಂದರ್ಭದಲ್ಲಿ, ನಮ್ಮ ಹೈಕೋರ್ಟ್ ‘‘ಚುನಾವಣೆಗೆ ಸ್ಪರ್ಧಿಸಲು’’ ವಿದ್ಯಾರ್ಹತೆಯನ್ನು ನಿಗದಿಪಡಿಸಿದೆ. ಇದು ಅಂತಿಮವಾಗಿ ಅನಕ್ಷರಸ್ಥರನ್ನು ಪ್ರಜಾಸತ್ತೆಯ ಮುಖ್ಯವಾಹಿನಿಯಿಂದಲೇ ದೂರವಿಡುತ್ತದೆ. ಅದರಲ್ಲೂ ಈ ದೇಶದ ಶೇ.50ರಷ್ಟು ಮಹಿಳೆಯರೇ ಮೊದಲ ಬಲಿಪಶುಗಳಾಗುತ್ತಾರೆ. ಕನಿಷ್ಠ ನಮ್ಮ ನ್ಯಾಯಾಲಯವಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಅವರ ಶಿಕ್ಷಣದ ಬಗ್ಗೆ ಸರಕಾರಕ್ಕೆ ಚಾಟಿಯೇಟನ್ನು ಬೀಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News