ಸಮ-ಬೆಸ ಸೂತ್ರಕ್ಕೆ ಚಿಂತನೆ: ಪರಮೇಶ್ವರ್

Update: 2016-01-02 18:14 GMT

ಬೆಂಗಳೂರು, ಜ.2: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ದಿಲ್ಲಿ ಮಾದರಿಯಯಲ್ಲಿ ‘ಸಮ-ಬೆಸ’ ಸಂಖ್ಯಾಸೂತ್ರ ಅಳವಡಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಸುಬ್ರಹ್ಮಣ್ಯ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ದಿಲ್ಲಿಯ ‘ಸಮ-ಬೆಸ’ ಸೂತ್ರ ಯಶಸ್ವಿಯಾದರೆ ಅದನ್ನೇ ದೇಶದ ಪ್ರಮುಖ ನಗರಗಳಲ್ಲಿ ಅಳವಡಿ ಸಿಕೊಳ್ಳುವ ಸಾಧ್ಯತೆಗಳಿವೆ ಎಂದರು. ಬೆಂಗಳೂರು ನಗರದಲ್ಲಿಯೂ ಸಂಚಾರ ದಟ್ಟಣೆ ಸಮಸ್ಯೆ ಗಂಭೀರ ಸ್ವರೂಪದಲ್ಲಿದ್ದು, ವಾಯುಮಾಲಿನ್ಯವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದ ಅವರು, ಸಮ-ಬೆಸ ಸಂಖ್ಯಾಸೂತ್ರವೂ ಪ್ರಾಯೋಗಿಕ ಯೋಜನೆಯಾಗಿದೆ ಎಂದರು.

 ‘ಸಮ-ಬೆಸ’ ಸಂಖ್ಯಾಸೂತ್ರವನ್ನು ಬೆಂಗಳೂರು ನಗರದಲ್ಲಿ ಅಳವಡಿಸುವ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚಿಸಲಾಗುತ್ತಿದೆ. ವಾಹನ ಮಾಲಕರ ಜತೆ ಚರ್ಚಿಸಿ ಸಮ-ಬೆಸ ಸೂತ್ರವನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News