ಖಾಸಗಿ ಕ್ಷೇತ್ರದ ಮೀಸಲಾತಿಗೆ ಬೃಹತ್ ಹೋರಾಟ ಅಗತ್ಯ: ಅಮೀನ್ ಮಟ್ಟು

Update: 2016-01-06 06:16 GMT

ಬೆಂಗಳೂರು, ಜ.5: ಖಾಸಗಿ ಕ್ಷೇತ್ರದ ಮೀಸಲಾತಿಗಾಗಿ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದ್ದು, ಈ ವಿಷಯವನ್ನು ದಲಿತ ಸಂಘಟನೆಗಳು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.
ಮಂಗಳವಾರ ಸಮತಾ ಸೈನಿಕ ದಳ ನಗರದ ಪುರಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತ್ಯುತ್ಸವದ ಉದ್ಘಾಟನೆ ಹಾಗೂ ಸಮತಾ ವಾಯ್ಸಾ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾಗತೀಕರಣ ಹಾಗೂ ಆಧುನೀ ಕರಣದ ಪರಿಣಾಮ ಸರಕಾರಿ ಕ್ಷೇತ್ರದಲ್ಲಿದ್ದ ಹುದ್ದೆಗಳು ಖಾಸಗೀ ಕರಣಗೊಳ್ಳುತ್ತಿದೆ. ಸರಕಾರಿ ಶಾಲೆಗಳು ಒಂದೊಂದಾಗಿ ಕಣ್ಮುಚ್ಚಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿವೆ. ಒಟ್ಟಾರೆ ಎಲ್ಲ ಕ್ಷೇತ್ರದಲ್ಲೂ ಖಾಸಗೀಕರಣವೆ ಆವರಿಸಿದೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಯಾದರೆ ಮಾತ್ರ ದಲಿತ ಹಾಗೂ ಹಿಂದುಳಿದ ಸಮುದಾಯ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.
ಬದಲಾದ ಕಾಲಘಟ್ಟದಲ್ಲಿ ಅಸ್ಪಶ್ಯತಾ ಆಚರಣೆಯನ್ನು ಬಹಿರಂಗವಾಗಿ ತೋರುವುದಿಲ್ಲ. ಆದರೆ, ಮನಸ್ಸಿನಲ್ಲಿ ಅಡಗಿಸಿಟ್ಟಿಕೊಂಡಿರುತ್ತಾರೆ. ಬಹಿರಂಗ ವಾಗಿ ದಲಿತರೊಂದಿಗೆ ಸಭ್ಯತೆ ಯಿಂದ ಮಾತನಾಡಿದರೂ ಕೆಲಸಕ್ಕೆ ನೇಮಿಸಿ ಕೊಳ್ಳುವಾಗ, ಭಡ್ತಿ ಕೊಡುವಾಗ ವಂಚಿಸಿ ರುವಂತಹ ಪ್ರಕರಣಗಳು ನಡೆದಿವೆ. ಇದರಿಂದಾಗಿಯೆ ರಾಜ್ಯದಲ್ಲಿ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಇಂದಿಗೂ ಭಡ್ತಿ ಪಡೆಯದೆ ಉಳಿದಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
1991ರ ಬಾಬ್ರಿ ಮಸೀದಿ ಧ್ವಂಸ ಹಾಗೂ ಹೊಸ ಆರ್ಥಿಕ ನೀತಿಯ ಪರಿಣಾಮ ಹುಟ್ಟಿದ ಬಂಡವಾಳಶಾಹಿ ವರ್ಗ ದೇಶದ ಬಹುದೊಡ್ಡ ಪೆಡಂ ಭೂತಗಳು. ಇದರಿಂದಾಗಿ ದೇಶದ ಬಹುಸಂಖ್ಯಾತರು ತಮ್ಮ ಸ್ವಾಭಿ ಮಾನದ ಬದುಕನ್ನು ಕಳೆದುಕೊಂಡು ಬಂಡವಾಳ ಶಾಹಿಗಳಿಗೆ ಗುಲಾಮರಾಗುವ ಮಟ್ಟಕ್ಕೆ ಬಂದು ನಿಲ್ಲುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜನರ ಆಶಯದತ್ತ ದೇಶವನ್ನು ಮುನ್ನಡೆಸಬೇಕಾದರೆ ಅದು ಯುವಶಕ್ತಿ ಯಿಂದ ಮಾತ್ರ ಸಾಧ್ಯ. ದೇಶದ ಬಹುದೊಡ್ಡ ಸಂಖ್ಯೆಯಾಗಿರುವ ಯುವ ಜನತೆಗೆ ರಾಜಕೀಯ, ಸಾಮಾಜಿಕ ತಿಳಿವಳಿಕೆಯನ್ನು ನೀಡಬೇಕಾಗಿದೆ. ಈ ಕಾರ್ಯವನ್ನು ದಲಿತ ಸಂಘಟನೆಗಳು ಮಾಡಬೇಕೆಂದು ಅವರು ಆಶಿಸಿದರು.

ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ವಿದೇಶದ ಕೊಲಂಬಿಯಾ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಶ್ರೇಷ್ಠ ಚಿಂತಕರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಗ್ರಗಣ್ಯರೆಂದು ತಿಳಿಸಿದೆ. ಬಿಬಿಸಿ ಸುದ್ದಿವಾಹಿನಿಯು ಅಂಬೇಡ್ಕರ್ ಕುರಿತು ವಿಶೇಷ ವರದಿ ಗಳನ್ನು ಪ್ರಸಾರ ಮಾಡಿವೆ. ಆದರೆ, ಜಾತಿಯ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಭಾರತದ ಮಾಧ್ಯಮಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಜಾಣ ಕುರುಡುತನವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಲೋಲಾಕ್ಷ, ಬೆಂವಿವಿ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ, ಜಾನಪದ ಆಕಾಡಮಿಯ ಮಾಜಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಜಾನಪದ ಹಾಡುಗಾರ ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News