ಆರು ತಿಂಗಳ ನಿಷೇಧ ರದ್ದು: ಯುಎಇ ಕಾರ್ಮಿಕ ಸಚಿವಾಲಯ

Update: 2016-01-08 14:29 GMT

ಅಬುಧಾಬಿ: ಉದ್ಯೋಗದಾತ ಹಾಗೂ ಕಾರ್ಮಿಕರ ಪರಸ್ಪರ ಒಪ್ಪಿಗೆಯೊಂದಿಗೆ ಉದ್ಯೋಗ ಒಪ್ಪಂದ ಮುರಿದು ಬಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ, ಕಾರ್ಮಿಕನಿಗೆ ಇನ್ನೊಂದು ಉದ್ಯೋಗಕ್ಕೆ ಸೇರ್ಪಡೆಯಾಗಲು ಆರು ತಿಂಗಳ ನಿಷೇಧವನ್ನು ವಿಧಿಸಲಾಗುವುದಿಲ್ಲ ಎಂದು ಯುಎಇಯ ಕಾರ್ಮಿಕ ಸಚಿವಾಲಯ ವನ್ನುಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಒಂದು ವೇಳೆ ಕೆಲಸದ ಪರವಾನಿಗೆ ಹಾಗೂ ಉದ್ಯೋಗ ಒಪ್ಪಂದವು ಪರಸ್ಪರ ಸಮ್ಮತಿಯೊಂದಿಗೆ ಮುರಿದು ಬಿದ್ದಲ್ಲಿ ಮಾತ್ರ ಆರು ತಿಂಗಳ ಅವಧಿಯ ನಿಷೇಧವು ಜನವರಿಯಿಂದ ಅನ್ವಯಗೊಳ್ಳುವಂತೆ ರದ್ದುಗೊಳ್ಳಲಿದೆ ಎಂದು ಯುಎಇಯ ಕಾರ್ಮಿಕ ಸಚಿವಾಲಯ ಖಚಿತಪಡಿಸಿದೆ.ಹಾಗಾದಲ್ಲಿ ಮಾತ್ರ ಉದ್ಯೋಗಿಗಳಿಗೆ ಮತ್ತೊಂದು ಸೇವೆಗೆ ಸೇರಿಕೊಳ್ಳಲು ಹೊಸ ಪರವಾನಿಗೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಒಂದು ವೇಳೆ ಮೊದಲ ಉದ್ಯೋಗಕ್ಕೆ ಸಂಬಂಧಿಸಿ ಎರಡು ವರ್ಷಗಳ ನಿಗದಿತ ಅವಧಿ ಪೂರ್ಣಗೊಳ್ಳದಿದ್ದರೂ ಇದು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ ಒಂದುವೇಳೆ ಮೊದಲ ಉದ್ಯೋಗದಾತನಲ್ಲಿ ಕಾರ್ಮಿಕನು ಎರಡು ವರ್ಷಗಳನ್ನು ಪೂರೈಸದಿದ್ದರೂ ಆತನಿಗೆ ಮತ್ತೊಂದು ಉದ್ಯೋಗದಾತನ ಬಳಿ ಕೆಲಸಕ್ಕೆ ಸೇರಿಕೊಳ್ಳಲು ತಕ್ಷಣವೇ ಪರವಾನಿಗೆಗಳನ್ನು ನೀಡಲಾಗುತ್ತದೆ.

  ಆದಾಗ್ಯೂ, ದರ್ಜೆ-4 ಹಾಗೂ 5ರಡಿ ಸೇವೆ ಸಲ್ಲಿಸುವ ನೌಕರರು ಮೊದಲ ಉದ್ಯೋಗದಾತರ ಬಳಿ ಆರು ತಿಂಗಳ ಸೇವಾವಧಿ ಪೂರ್ಣಗೊಳಿಸದಿದ್ದಲ್ಲಿ ಈ ಹೊಸ ನಿಯಮ ಅನ್ವಯವಾಗದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.ಕಳೆದ ಸೆಪ್ಟಂಬರ್‌ನಲ್ಲಿ ಕಾರ್ಮಿಕ ಸಚಿವರು ಪ್ರಕಟಿಸಿರುವ ನೂತನ ನಿರ್ಣಯಗಳ ಭಾಗವಾಗಿ ಈ ಹೊಸ ನಿಯಮ ಜನವರಿಯಿಂದ ಅನುಷ್ಠಾನಗೊಳ್ಳಲಿದೆ. ನೂತನ ನಿರ್ಣಯದಡಿ, ಕಂಪೆನಿಗಳ ಜೊತೆ ತಮ್ಮ ಸೇವಾ ಒಪ್ಪಂದವನ್ನು ಕೊನೆಗೊಳಿಸಿದ ಹಾಗೂ ತಮ್ಮ ಕೆಲಸದ ಪರವಾನಿಗೆ(ವರ್ಕ್ ಪರ್ಮಿಟ್) ಯನ್ನು ರದ್ದುಪಡಿಸಿದವರು ಒಂದು ವೇಳೆ ತಮ್ಮ ಹಾಲಿ ಉದ್ಯೋಗದಲ್ಲಿ ಎರಡು ವರ್ಷಗಳನ್ನು ಪೂರ್ತಿಗೊಳಿಸದಿದ್ದರೂ ಕೂಡಾ ಅವರಿಗೆ ಇತರ ಕಂಪೆನಿಗಳಿಗೆ ಉದ್ಯೋಗಕ್ಕೆ ಸೇರಲು ಅನುಮತಿ ನೀಡಲಾಗುವುದು.

ಆದಾಗ್ಯೂ, ತಮ್ಮ ಮೊದಲ ಉದ್ಯೋಗದಲ್ಲಿ ಆರು ತಿಂಗಳ ಅವಧಿಯನ್ನು ಪೂರ್ಣಗೊಳಿಸದ ದರ್ಜೆ-4 ಹಾಗೂ 5ರ ಉದ್ಯೋಗಿಗಳನ್ನು ಈ ನಿಯ ಮದಿಂದ ಹೊರತುಪಡಿಸಲಾಗುವುದು ಎಂದವರು ಹೇಳಿದ್ದಾರೆ.

  ಪ್ರಸ್ತುತ ತಮ್ಮ ಸೇವೆಯನ್ನು ಉದ್ಯೋಗದಾತನ ಸಹಮತದೊಂದಿಗೆ ಮುಕ್ತಾಯಗೊಳಿಸಿದವರು ಹಾಗೂ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದವರಿಗೆ, ತಕ್ಷಣವೇ ಇನ್ನೊಂದು ಸಂಸ್ಥೆಗೆ ಉದ್ಯೋಗಕ್ಕೆ ಸೇರಲು ಅನುಮತಿಯಿಲ್ಲ. ಉದ್ಯೋಗದ ಪರ್ಮಿಟ್ ರದ್ದುಗೊಂಡ ದಿನಾಂಕದಿಂದ ಆರು ತಿಂಗಳ ಅವಧಿಯ ಬಳಿಕವೇ ಅವರಿಗೆ ಇನ್ನೊಂದು ಉದ್ಯೋಗಕ್ಕೆ ಸೇರ್ಪಡೆಗೊಳ್ಳಲು ಅನುಮತಿ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.

ನೂತನ ನಿರ್ಣಯ ಸಂಖ್ಯೆ 766ರ ಪ್ರಕಾರ, ಜನವರಿಯಿಂದ ಆರಂಭಗೊಂಡು ತಕ್ಷಣವೇ ಉದ್ಯೋಗಿಗಳಿಗೆ ನೂತನ ಉದ್ಯೋಗ ಪರವಾನಿಗೆಗಳನ್ನು ನೀಡಲಾಗುವುದೆಂದು ಅಲ್ ಸುವೈದಿ ವಿವರಿಸಿದ್ದಾರೆ. ಕಾರ್ಮಿಕ ಗುತ್ತಿಗೆ ಒಪ್ಪಂದದಡಿ ಉಲ್ಲೇಖಿಸಲ್ಪಟ್ಟ ಎಲ್ಲಾ ಶರತ್ತುಗಳನ್ನು ಇತ್ತಂಡಗಳೂ ಈಡೇರಿಸಿರುವುದರಿಂದ ಅವರಿಗೆ ಉದ್ಯೋಗದ ಪರ್ಮಿಟ್ ದೊರೆಯಲಿದೆಯೆಂದರು.

ಪ್ರತಿಭೆಗಳ ಆಕರ್ಷಣೆ

ನೂತನ ಸಚಿವಾಲಯ ಜಾರಿಗೊಳಿಸಿರುವ ಈ ನಿಯಮವು ಕಾರ್ಮಿಕ ಪ್ರತಿಭೆಗಳನ್ನು ಸೆಳೆಯುವ ಹಾಗೂ ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಜಾಗತಿಕ ಪ್ರತಿಭೆಯನ್ನು ಆಕರ್ಷಿಸುವ ಜ್ಞಾನಾಧಾರಿತ ಆರ್ಥಿಕತೆಯನ್ನು ಹೊಂದುವ ಸರಕಾರದ ಧ್ಯೇಯಕ್ಕೆ ಇದು ಅನುಗುಣವಾಗಿದೆ ಎಂದರು. ಸಚಿವಾಲಯವು ವಿದೇಶಗಳಿಂದ ಉದ್ಯೋಗಿಗಳನ್ನು ಕರೆತರುವ ಬದಲು, ದೇಶದೊಳಗಿನ ಉದ್ಯೋಗಿಗಳಿಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News