ಕಲಾವಿದರ ಆಶಾಕಿರಣ ‘ಈ ಮಾಸ ನಾಟಕ’ ಪತ್ರಿಕೆ; ಡಾ.ಮರುಳಸಿದ್ದಪ್ಪ
ಬೆಂಗಳೂರು, ಜ.10: ವೃತ್ತಿರಂಗಭೂಮಿಗೆ ‘ಈ ಮಾಸ ನಾಟಕ’ ಪತ್ರಿಕೆಯು ಬಹುದೊಡ್ಡ ಕೊಡುಗೆಯಾಗಿದ್ದು, ಕಡೆಗಣಿಸಲ್ಪಟ್ಟಿದ್ದ ಕಲಾವಿದರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಿಸಿದ್ದಾರೆ.
ರವಿವಾರ ಪ್ರತಿಮಾ ರಂಗಸಂಶೋಧನಾ ಪ್ರತಿಷ್ಠಾನ ನಗರದ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತ ಕೊಠಡಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಈ ಮಾಸ ನಾಟಕದ ಸುಭದ್ರಮ್ಮ ಮನ್ಸೂರು ವಿಶೇಷಾಂಕ’ ಬಿಡುಗಡೆ ಮಾಡಿ ಅವರು ಮಾತನಾಡಿದರು, ‘ಈ ಮಾಸ ನಾಟಕ’ ರಂಗಭೂಮಿಯ ತಿಂಗಳ ಪತ್ರಿಕೆ ಕಳೆದ ಹದಿನೇಳು ವರ್ಷಗಳಲ್ಲಿ ರಂಗಭೂಮಿ ನಿರ್ದೇಶಕರಾದ ಬಿ.ವಿ.ಕಾರಂತ, ಶ್ರೀರಂಗ, ಜಿ.ಬಿ.ಜೋಶಿ, ಬಿ.ಚಂದ್ರಶೇಖರ್, ಆರ್.ನಾಗೇಶ್ ಕುರಿತು ವಿಶೇಷ ಸಂಚಿಕೆ ಹೊರತಂದಿದೆ. ಈಗ ನಟಿಯಾದ ಸುಭದ್ರಮ್ಮ ಮನ್ಸೂರು ಅವರ ಕುರಿತು ವಿಶೇಷ ಸಂಚಿಕೆ ಹೊರತಂದಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಈ ಮಾಸ ನಾಟಕ’ ಪತ್ರಿಕೆಯ ಸಂಪಾದಕ ಗುಡಿಹಳ್ಳಿ ನಾಗರಾಜ ಕಾರ್ಯ ನಿರ್ವಹಿಸುತ್ತಿರುವುದು ಮತ್ತೊಂದು ವಿಶೇಷ ವಾಗಿದೆ. ಇವರು ಬಹುಕಾಲದಿಂದ ಗ್ರಾಮೀಣ ರಂಗಭೂಮಿಯ ವ್ಯಾಖ್ಯಾನಕಾರರಾಗಿ, ಲೇಖಕರಾಗಿ, ಶ್ರದ್ಧೆ, ನಿಷ್ಠೆ, ತನ್ನಯತೆಯಿಂದ ಬರೆಯುತ್ತ ಬಂದಿದ್ದಾರೆ. ಹೀಗಾಗಿಯೆ ಪತ್ರಿಕೆ ಸೊಗಸಾಗಿ ಮೂಡಿಬಂದಿದೆ ಎಂದು ಅವರು ತಿಳಿಸಿದರು.
ಇಪ್ಪತ್ತನೇ ಶತಮಾನದಲ್ಲಿ ಜನರ ಮನಸ್ಸನ್ನು ಹೆಚ್ಚು ಗೆದ್ದವರು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು. ರಂಗ ಕಲಾವಿದರು ಪರಕಾಯ ಪ್ರವೇಶ ಮಾಡುವ ಕ್ರಮ ವಿಸ್ಮಯಕಾರಿಯಾದುದು. ಈ ಕುರಿತ ಅಧ್ಯಯನ ನಡೆಯಬೇಕು. ನಟ ನಟಿಯರ ಕುರಿತ ಪುಸ್ತಕಗಳು ಇಂತಹ ವಿಸ್ಮಯವನ್ನು ವಿಶ್ಲೇಷಿಸಬೇಕು, ವ್ಯಾಖ್ಯಾನಿಸಬೇಕು ಎಂದು ಡಾ.ಮರುಳ ಸಿದ್ದಪ್ಪ ಬಯಸಿದರು.
‘ಈ ಮಾಸ ನಾಟಕ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಎಲ್.ಕೃಷ್ಣಪ್ಪ ಮಾತನಾಡಿ, ರಂಗ ಚಟುವಟಿಕೆಗಳನ್ನು ನಿಯತವಾಗಿ ದಾಖಲಿಸಲು 1970 ರ ದಶಕದಲ್ಲಿ ’ಮುಕ್ತಾ’ ಪತ್ರಿಕೆ ಆರಂಭಿಸಲಾಯಿತು. ಒಂದು ವರ್ಷದ ನಂತರ ಅದು ನಿಂತುಬಿಟ್ಟಿತು. ನಂತರ ’ಸೂತ್ರಧಾರ’, ’ಸಮುದಾಯ ವಾರ್ತಾ ಪತ್ರ’ ಮತ್ತಿತರ ಕೆಲವು ರಂಗ ಪತ್ರಿಕೆಗಳು ತಕ್ಕಮಟ್ಟಿಗೆ ಕಾರ್ಯ ನಿರ್ವಹಿಸಿದವು. ಬಿ.ವಿ.ಕಾರಂತರು ರಂಗಾಯಣದಲ್ಲಿ ’ಪರಿಕರ’ ಪತ್ರಿಕೆ ಆರಂಭಿಸಿ ಕೆಲಕಾಲ ನಡೆಸಿದರು. ಈಗ ‘ಈ ಮಾಸ ನಾಟಕ’ ಪತ್ರಿಕೆ ರಂಗಭೂಮಿಯನ್ನು ಪ್ರತಿನಿಧಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ರಂಗತಜ್ಞ ಡಾ. ಎಚ್.ಎ.ಪಾರ್ಶ್ವನಾಥ್ ಭಾಗವಹಿಸಿದ್ದರು. ಪತ್ರಿಕೆ ಸಂಪಾದಕ ಗುಡಿಹಳ್ಳಿ ನಾಗರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ರಂಗ ಸಂಘಟಕ ನಾಟಕಮನೆ ಮಹಾಲಿಂಗು ಮುಖ್ಯ ಅತಿಥಿಗಳಾಗಿದ್ದರು. ಲೇಖಕ ರುದ್ರೇಶ್ ಅದರಂಗಿ ಕಾರ್ಯಕ್ರಮ ನಿರ್ವಹಿಸಿದರು.