×
Ad

ಮಲ್ಟಿ ಸ್ಟಾರ್: ಇದೀಗ ಪುನೀತ್-ಯಶ್ ಸರದಿ

Update: 2016-01-11 16:33 IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್, ಜೊತೆಯಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ, ಬಲವಾದ ವದಂತಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಸೂಪರ್‌ಸ್ಟಾರ್‌ಗಳು ಅಧಿಕೃತವಾಗಿ ದೃಢಪಡಿಸುವ ಮೊದಲೇ ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗಾಗಲೇ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ.

ಅಭಿಮಾನಿಗಳಂತೂ ಚಿತ್ರದ ಶೂಟಿಂಗ್ ಯಾವಾಗ ಆರಂಭಗೊಳ್ಳುತ್ತೇ, ಟೀಸರ್ ಯಾವಾಗ ರೆಡಿಯಾಗುತ್ತೇ ಎಂಬಿತ್ಯಾದಿ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳ ತೊಡಗಿದ್ದಾರೆ. ಒಂದಂತೂ ನಿಜ. ಇತ್ತೀಚಿನ ವರ್ಷ ಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಅನೂಪ್ ಭಂಡಾರಿ, ಪ್ರಶಾಂತ್ ನೀಲ್, ಸಂತೋಷ್ ಆನಂದಮ್, ಮಂಜು ಮಾಂಡವ್ಯ ಮತ್ತಿತರ ಪ್ರತಿಭಾವಂತ ನಿರ್ದೇಶಕರು, ಸ್ಯಾಂಡಲ್‌ವುಡ್‌ಗೆ ಹೊಸ ಚೈತನ್ಯ ತುಂಬಿದ್ದಾರೆ.

            ಇದೀಗ ಕನ್ನಡದ ಟಾಪ್ ಹೀರೋಗಳು ಕೂಡಾ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸಲು ಮುಂದೆ ಬರುತ್ತಿರುವುದು, ಒಂದು ಒಳ್ಳೆಯ ಬೆಳವಣಿಗೆಯೆಂದು ಹೇಳಬಹುದು. ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶನದ ಕಲಿ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಲ್ಟಿಸ್ಟಾರ್ ಟ್ರೆಂಡ್ ಶುರುವಾಗಿಬಿಟ್ಟಿದೆ. 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಲಿಯಲ್ಲಿ ಶಿವರಾಜ್‌ಕುಮಾರ್‌ಹಾಗೂಸುದೀಪ್ ಒಟ್ಟಾಗಿ ಅಭಿನಯಿಸಲಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್ ಚಿತ್ರ ಓಮೈ ಗಾಡ್‌ನ ಕನ್ನಡ ರಿಮೇಕ್‌ನಲ್ಲಿ ಉಪೇಂದ್ರ ಹಾಗೂ ಸುದೀಪ್ ನಟಿಸಲಿರುವ ಸುದ್ದಿ ಕೇಳಿಬಂದಿತ್ತು. ರನ್ನ ಖ್ಯಾತಿಯ ನಂದಕಿಶೋರ್ ನಿರ್ದೇಶಲಿರುವ ಈ ಚಿತ್ರ ಜನವರಿ ಅಂತ್ಯದಲ್ಲಿ ಶೂಟಿಂಗ್ ಆರಂಭಿಸಲಿದೆ. ಇಷ್ಟು ಮಾತ್ರವಲ್ಲ, ದರ್ಶನ್-ಯೋಗೀಶ್ ಹಾಗೂ ವಿಜಯ್-ಶಿವರಾಜ್‌ಕುಮಾರ್ ಅಭಿನಯದ ಮಲ್ಟಿಸ್ಟಾರ್ ಚಿತ್ರಗಳು ಕೂಡಾ ಶೀಘ್ರದಲ್ಲೇ ಸೆಟ್ಟೇರಲಿದೆಯೆಂಬ ವದಂತಿಗಳು ಕೇಳಿಬಂದಿವೆ. ಇದೀಗ ಪುನೀತ್-ಯಶ್ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಹೀಗೆ ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ಖಂಡಿತವಾಗಿಯೂ ಸ್ಯಾಂಡಲ್‌ವುಡ್‌ಗೆ ಒಳ್ಳೆಯ ದಿನಗಳು ಬರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News