ಬಾಕ್ಸ್ ಆಫೀಸಿನಲ್ಲಿ ದಿಲ್ವಾಲೆ ಜಯಭೇರಿ
ಶಾರೂಕ್ ಖಾನ್-ಕಾಜಲ್, ತಾವು ಅತ್ಯಂತ ಜನಪ್ರಿಯ ತಾರಾಜೋಡಿಯೆಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಹೌದು. ಬಹಳ ವರ್ಷಗಳ ಬಳಿಕ ಇವರಿಬ್ಬರೂ ಜೊತೆಯಾಗಿ ನಟಿಸಿರುವ ದಿಲ್‌ವಾಲೆ ಬಾಕ್ಸ್‌ಆಫೀಸಿನಲ್ಲಿ ಜಯಭೇರಿ ಬಾರಿಸಿದೆ.
ಡಿಸೆಂಬರ್ 18ರಂದು ಬಿಡುಗಡೆಯಾದ ಚಿತ್ರವು ಜನವರಿ ಮೊದಲ ವಾರದವರೆಗೆ ಬರೋಬ್ಬರಿ 338.75 ಕೋಟಿ ರೂ.ಗಳಿಸಿದೆ. ಭಾರತದಲ್ಲೇ ದಿಲ್‌ವಾಲೆ, 187.25 ಕೋಟಿ ರೂ.ಸಂಪಾದಿಸಿದ್ದರೆ, ವಿದೇಶದಲ್ಲಿ ಅದರ ಗಳಿಕೆ 151.50 ಕೋಟಿ ರೂ. ಆಗಿದೆ. ಭಾರತೀಯರು ಗಣನೀಯ ಸಂಖ್ಯೆಯಲ್ಲಿರುವ ಮಲೇಶ್ಯ, ಕುವೈತ್ , ಇಂಡೋನೇಶ್ಯಗಳಲ್ಲಿಯೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
ಬಜರಂಗಿ ಭಾಯಿಜಾನ್,ಪ್ರೇಮ್‌ರತನ್ ಧನ್ ಪಾಯೊ ಬಳಿಕ 2015ರಲ್ಲಿ ಅತ್ಯಧಿಕ ಬಾಕ್ಸ್‌ಆಫೀಸ್ ಗಳಿಕೆಯನ್ನು ಕಂಡಿರುವ ಚಿತ್ರವೆಂಬ ಹೆಗ್ಗಳಿಕೆಯನ್ನೂ ದಿಲ್‌ವಾಲೆ ತನ್ನದಾಗಿಸಿಕೊಂಡಿದೆ. ಸಿಂಗಂ. ಚೆನ್ನೈ ಎಕ್ಸ್‌ಪ್ರೆಸ್ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದ ದಿಲ್‌ವಾಲೆಯಲ್ಲಿ ವರುಣ್ ಧವನ್ ಹಾಗೂ ಕೃತಿ ಸನೂನ್ ಸಹ ನಟಿಸಿದ್ದಾರೆ.