ವಿವಿಧ ಬೆಳೆ ಬೆಳೆದು ಯಶಸ್ವಿಯಾದ ‘ಪಾಲಿ ಹೌಸ್’!

Update: 2016-01-11 15:39 GMT

50 ವರ್ಷ ಪ್ರಾಯದ ರಾಮ ಕಿಶೋರ್‌ರವರೇ ಆ ಮಾದರಿ ಕೃಷಿಕ. ತೋಟಗಾರಿಕೆಯಲ್ಲಿ ಬಿಎಸ್ಸಿ ಪದವೀಧರನಾಗಿರುವ ರಾಮ ಕಿಶೋರ್, ಪಿತ್ರಾರ್ಜಿತವಾಗಿ ಬಂದಿರುವ ಸುಮಾರು 14 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವಯೊಂದಿಗೆ ಅಡಿಕೆ, ಬಾಳೆ, ಕೊಕ್ಕೋ, ಕರಿಮೆಣಸು, ಜಾಯಿಕಾಯಿ, ಪಪ್ಪಾಯ ಬೆಳೆದಿದ್ದಾರೆ. ಅಲ್ಲದೆ, ತನ್ನ ಜಮೀನಿನಲ್ಲಿ ಪಾಲಿ ಹೌಸ್ ಒಂದನ್ನು ನಿರ್ಮಾಣ ಮಾಡಿ, ಅದರೊಳಗೆ ವಿವಿಧ ಬೆಳೆಗಳನ್ನು ಬೆಳೆದು ಕೃಷಿಲೋಕವನ್ನೇ ಬೆರಗಾಗುವಂತೆ ಮಾಡಿದ್ದಾರೆ.

ಎಂ.ಇಮ್ತಿಯಾಝ್, ತುಂಬೆ

ಮಾರುಕಟ್ಟೆಯಲ್ಲಿ ಲಭ್ಯವಿರುವ ತರತರದ ರಸಗೊಬ್ಬರ, ರಾಸಾಯನಿಕ, ಕ್ರಿಮಿ ಕೀಟಗಳನ್ನು ಉಪಯೋಗಿಸಿಯೂ ಬೆಳೆ ಸರಿಯಾಗಿ ಬಂದಿಲ್ಲ ಎಂದು ಕೃಷಿಯನ್ನೇ ತ್ಯಜಿಸುವ ಕೃಷಿಕರ ಸಂಖ್ಯೆಗೇನು ಕಡಿಮೆಯಿಲ್ಲ. ಇನ್ನು ಕೃಷಿಗೆ ಸಾಲ ಸೂಲ ಮಾಡಿದವರಂತೂ ಆತ್ಮಹತ್ಯೆಯ ಹಾದಿ ಹಿಡಿದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ. ಆದರೆ, ಇಲ್ಲೊಬ್ಬ ಕೃಷಿಕ ರಸಗೊಬ್ಬರ, ರಾಸಾಯನಿಕ, ಕ್ರಿಮಿ ಕೀಟಗಳ ಸಹವಾಸಕ್ಕೆ ಹೋಗದೆ ಸಂಪೂರ್ಣ ಸಾವಯವದಿಂದ ಉತ್ತಮ ಬೆಳೆ ಬೆಳೆದು ಕೈ ತುಂಬಾ ಆದಾಯವನ್ನೂ ಪಡೆದು ಸುದ್ದಿಯಾಗುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಜೆ ಎಂಬ ಊರಿನ ಶಿವರಾಮ ಭಟ್ ಮತ್ತು ಸುಮತಿ ದಂಪತಿಯ ಪುತ್ರನಾಗಿರುವ 50 ವರ್ಷ ಪ್ರಾಯದ ರಾಮ ಕಿಶೋರ್‌ರವರೇ ಆ ಮಾದರಿ ಕೃಷಿಕ.

ತೋಟಗಾರಿಕೆಯಲ್ಲಿ ಬಿಎಸ್ಸಿ ಪದವೀಧರನಾಗಿರುವ ರಾಮ ಕಿಶೋರ್, ಪಿತ್ರಾರ್ಜಿತವಾಗಿ ಬಂದಿರುವ ಸುಮಾರು 14 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವಯೊಂದಿಗೆ ಅಡಿಕೆ, ಬಾಳೆ, ಕೊಕ್ಕೋ, ಕರಿಮೆಣಸು, ಜಾಯಿಕಾಯಿ, ಪಪ್ಪಾಯ ಬೆಳೆದಿದ್ದಾರೆ. ಅಲ್ಲದೆ, ತನ್ನ ಜಮೀನಿನಲ್ಲಿ ಪಾಲಿ ಹೌಸ್ ಒಂದನ್ನು ನಿರ್ಮಾಣ ಮಾಡಿ, ಅದರೊಳಗೆ ವಿವಿಧ ಬೆಳೆಗಳನ್ನು ಬೆಳೆದು ಕೃಷಿಲೋಕವನ್ನೇ ಬೆರಗಾಗುವಂತೆ ಮಾಡಿದ್ದಾರೆ. ರಾಮ ಕಿಶೋರ್ ತನ್ನ ಜಮೀನಿನಲ್ಲಿ ಸಿಮೆಂಟ್ ಕಂಬಗಳನ್ನು ನೆಟ್ಟು, ಅಡಿಕೆ ಮರದ ಸಲಾಕೆಗಳನ್ನು ಉಪಯೋಗಿಸಿ, ಟರ್ಪಾಲ್ ಹಾಗೂ ಸೂಕ್ಷ್ಮ ತೂತಿನ ಬಿಳಿ ಬಣ್ಣದ ಬಲೆಯನ್ನು ಬಳಸಿ 40 ಫೀಟ್ ಅಗಲ, 80 ಫೀಟ್ ಉದ್ದದ ಪಾಲಿ ಹೌಸ್ ನಿರ್ಮಾಣ ಮಾಡಿದ್ದಾರೆ. ಪಾಲಿ ಹೌಸ್‌ನ ಒಳಗೆ ಹಗಲುಹೊತ್ತಲ್ಲಿ ಹೊರಗಡೆಗಿಂತ 4ರಿಂದ 5 ಡಿಗ್ರಿ ತಾಪ ಹೆಚ್ಚಿರುತ್ತದೆ. ಬಿಸಿ ಗಾಳಿ ಹೊರ ಹೋಗಲು ಪಾಲಿ ಹೌಸ್‌ನ ಮೇಲ್ಭಾಗದ ಎರಡು ಕಡೆಗಳಲ್ಲಿ ಸೂಕ್ಷ್ಮ ರಂದ್ರದ ಬಳೆಗಳನ್ನು ಅಳವಡಿಸಿದ್ದಾರೆ. ಪಾಲಿ ಹೌಸ್ ನಿರ್ಮಾಣದ ಉದ್ದೇಶ ಕೀಟಗಳು ಮತ್ತು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡುವುದು.

ವಿಜ್ಞಾನಿಗಳ ಪ್ರಕಾರ ಒಂದು ಪಾಲಿ ಹೌಸ್‌ನಲ್ಲಿ ಯಾವುದಾದರೂ ಒಂದು ಬೆಳೆ ಮಾತ್ರ ಬೆಳೆಯಬೇಕು. ಒಂದಕ್ಕಿಂತ ಹೆಚ್ಚು ಬೆಳೆ ಬೆಳೆದರೆ ಉತ್ತಮ ಫಸಲು ಕೈ ಸೇರುವುದಿಲ್ಲ. ಆದರೆ, ರಾಮ ಕಿಶೋರ್ ತನ್ನ ಪಾಲಿ ಹೌಸ್‌ನಲ್ಲಿ ಬಸಳೆ, ನೆಲ ಬಸಳೆ, ಹರಿವೆ, ಅಲಸಂಡೆ, ಬದನೆ, ಬೆಂಡೆ, ಮುಳ್ಳು ಸೌತೆ, ಹಾಗಲ, ಪಡುವಳ, ತೊಂಡೆ, ಬೀನ್ಸ್, ಸೌತೆ, ಪಟಕಿಲ, ಮೂಲಂಗಿ, ಮೆಣಸು ಹಾಗೂ ಹತ್ತಾರು ಬಗೆಯ ನರ್ಸರಿ ಗಿಡಗಳನ್ನು ಬೆಳೆದು ಯಶಸ್ವಿಯಾಗುವ ಮೂಲಕ ಕೃಷಿ ಲೋಕಕ್ಕೆ ಮಾದರಿಯಾಗಿದ್ದಾರೆ. ಬಳ್ಳಿಗಳನ್ನು ಬೆಳೆಯಬೇಕಾದರೆ ಚಪ್ಪರ ಹಾಕಲೇಬೇಕು. ಆದರೆ, ರಾಮ ಕಿಶೋರ್ ತನ್ನ ಪಾಲಿ ಹೌಸ್‌ನಲ್ಲಿ ಸ್ಥಳದ ಕೊರತೆ ಇರುವುದರಿಂದ ಚಪ್ಪರ ಹಾಕದೆ ದೊಡ್ಡ ಗಾತ್ರದ ರಂಧ್ರಗಳಿರುವ ಬಳೆಗಳನ್ನು ಲಂಬವಾಗಿ ಕಟ್ಟಿ ಬಳ್ಳಿಗಳನ್ನು ಬೆಳೆಸಿದ್ದಾರೆ.

ಪಾಲಿ ಹೌಸ್‌ನ ಮೇಲ್ಭಾಗವನ್ನು ಸಂಪೂರ್ಣ ಟರ್ಪಾಲ್‌ನಿಂದ ಮುಚ್ಚಿರುವುದರಿಂದ ಲಂಬವಾಗಿ ಕಟ್ಟಿರುವ ಬಲೆಯಲ್ಲಿ ಎತ್ತರಕ್ಕೆ ಬೆಳೆದ ಬಳ್ಳಿಗಳ ಚಿಗುರೆಲೆಗಳು ಮಧ್ಯಾಹ್ನದ ಬಿಸಿಲಿಗೆ ಕರಚಿ ಹೋಗುವುದನ್ನು ತಪ್ಪಿಸಲು ಮೇಲ್ಭಾಗದಲ್ಲಿ ಸೂಕ್ಷ್ಮ ರಂಧ್ರದ ಹಸಿರು ಬಣ್ಣದ ಬಲೆಯನ್ನು ಹಾಕಿದ್ದಾರೆ. ಈ ಬಲೆ ಬಿಸಿಲು ಕಡಿಮೆ ಇದ್ದ ವೇಳೆ ಹಗ್ಗ ಎಳೆಯುವುದರ ಮೂಲಕ ಮಡಚಿಡಲಾಗುವುದು. ಬಿಸಿಲು ಏರಿದಾಗ ಹಗ್ಗದ ಇನ್ನೊಂದು ತುದಿಯನ್ನು ಎಲೆಯುವ ಮೂಲಕ ಬಳ್ಳಿಗಳಿಗೆ ನೆರವಾಗುವಂತೆ ಬಲೆಯನ್ನು ಹಾಸಲಾಗುತ್ತದೆ. ಪಾಲಿ ಹೌಸ್‌ನಲ್ಲಿ ಬೆಳೆದ ಬೆಳೆಗಳ ಬುಡವನ್ನು ಟರ್ಪಾಲ್‌ಗಳಿಂದ ಮುಚ್ಚಲಾಗಿದೆ. ಈ ರೀತಿ ಮುಚ್ಚುವುದರಿಂದ ಎರಡು ರೀತಿಯ ಉಪಯೋಗವಿದೆ ಎಂದು ರಾಮ ಕಿಶೋರ್ ಹೇಳುತ್ತಾರೆ. ಮೊದಲನೆಯದು ಹನಿ ನೀರಾವರಿಯಿಂದ ಬುಡಕ್ಕೆ ಬೀಳುವ ನೀರು ಆವಿಯಾಗುವುದಿಲ್ಲ. ಎರಡನೆಯದು ಟರ್ಪಾಲ್ ಬಳಸುವುದರಿಂದ ಮಣ್ಣು ಇನ್ನಷ್ಟು ಬಿಸಿಯಾಗಿ ಗಿಡಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಅಲ್ಲದೆ, ಮಣ್ಣು ಬಿಸಿಯಾಗುವುದರಿಂದ ಮಣ್ಣಿನ ಮೂಲಕ ಬರುವ ಕ್ರಿಮಿಗಳು ನಾಶ ಹೊಂದುತ್ತದೆ ಎಂದು ಅವರು ತಿಳಿಸಿದ್ದಾರೆ.

‘‘ಪಾಲಿ ಹೌಸ್ ನಿರ್ಮಾಣಕ್ಕೆ ಸರಕಾರದಿಂದ ನೆರವು ಲಭಿಸುತ್ತದೆ. 25 ಸೆಂಟ್ಸ್ ಜಾಗದಲ್ಲಿ ಕಬ್ಬಿಣದ ಸಲಾಕೆಗಳನ್ನು ಬಳಸಿ ಪಾಲಿ ಹೌಸ್ ನಿರ್ಮಾಣಕ್ಕೆ 9 ಲಕ್ಷ ರೂ. ಖರ್ಚು ನಿಲ್ಲುತ್ತದೆ. ಖರ್ಚಿನ ಶೇ. 50 ಸರಕಾರ ಸಬ್ಸಿಡಿಯಾಗಿ ಕೊಡುತ್ತದೆ. ಆದರೆ, ಆ ಪಾಲಿ ಹೌಸ್‌ನಲ್ಲಿ ಯಾವುದಾದರೂ ಒಂದೇ ಜಾತಿಯ ಬೆಳೆಯನ್ನು ಮಾತ್ರ ಬೆಳೆಯಬೇಕು. ತಾನು ಅದನ್ನೆಲ್ಲಾ ತಿರಸ್ಕರಿಸಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಸಿಮೆಂಟ್ ಕಂಬಗಳು, ಅಡಿಕೆ ಮರದ ಸಲಾಕೆ ಬಳಸಿ ಪಾಲಿ ಹೌಸ್ ಮಾಡಿರುವೆನು. ಒಂದು ಪಾಲಿ ಹೌಸ್‌ನಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಫಲ ಪಡೆಯುವ ಬಗ್ಗೆ ಕೃಷಿ ವಿಜ್ಞಾನಿಗಳು ಕೂಡಾ ಗ್ಯಾರಂಟಿ ಕೊಡುವುದಿಲ್ಲ. ನಾನು ಯಾವುದೇ ಲಾಭದ ಉದ್ದೇಶವನ್ನಿಟ್ಟು ಪಾಲಿ ಹೌಸ್ ನಿರ್ಮಿಸಿ ಬೆಳೆ ಬೆಳೆದಿಲ್ಲ.

ಒಂದು ಪಾಲಿ ಹೌಸ್‌ನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲವೇ ಎಂಬುದನ್ನು ಪ್ರಯೋಗ ಮಾಡಿ ನೋಡುವ ಎಂದು ದೃಢ ಮನಸ್ಸು ಮಾಡಿ ಶುರುಮಾಡಿದ್ದೇನೆ. ಮೊದನೆ ಬಾರಿಗೆ ಉತ್ತಮ ಬೆಳೆ ಬೆಳೆದು ಇದೀಗ ಎರಡನೆ ಸುತ್ತಿನ ಪ್ರಯೋಗ ನಡೆಸುತ್ತಿದ್ದೇನೆ’’ ಎಂದು ಅವರು ಹೇಳುತ್ತಾರೆ. ರಾಮ ಕಿಶೋರ್‌ರದ್ದು ಪಾಲಿ ಹೌಸ್ ಮಾತ್ರ ಮಾದರಿಯಲ್ಲ. ತನ್ನ 14 ಎಕರೆ ಜಮೀನಿನಲ್ಲಿ ಸುಮಾರು 8 ಎಕರೆಯಲ್ಲಿ ಅಡಿಕೆ ಬೆಳೆದಿದ್ದು, ಅಡಿಕೆಯೊಂದಿಗೆ ಕೊಕ್ಕೋ, ಬಾಳೆ, ಜಾಯಿಕಾಯಿ, ಕರಿಮೆಣಸುಗಳನ್ನು ಬೆಳೆದಿದ್ದಾರೆ. ಇವು ಸಂಪೂರ್ಣ ಸಾವಯವವನ್ನೇ ಅವಲಂಬಿಸಿವೆ. ಅಡಿಕೆ ತೋಟದಲ್ಲಿ ಶೇ. 95ರಷ್ಟು ಕದಲಿ ಬಾಳೆ ಬೆಳೆದರೆ, ಉಳಿದ ಶೇ. 5ರಷ್ಟು ಗಾಳಿ, ಬೋದಿ, ನೇಂದ್ರ, ಹಾವೊಂಡ ಬಾಳೆಗಳನ್ನು ಬೆಳೆಸಿದ್ದಾರೆ. ವರ್ಷಕ್ಕೆ 50 ಕ್ವಿಂಟಲ್ ಬಾಳೆ, 100 ಕ್ವಿಂಟಲ್ ಅಡಿಕೆ, 20 ಕ್ವಿಂಟಲ್ ಕೊಕ್ಕೋ, 5 ಕ್ವಿಂಟಲ್ ಕರಿ ಮೆಣಸು ಬೆಳೆದು ಉತ್ತಮ ಆದಾಯವನ್ನೂ ಪಡೆಯುತ್ತಾರೆ. ಅಲ್ಲದೆ, ಸುಮಾರು ಮುಕ್ಕಾಲು ಎಕರೆಯಲ್ಲಿ ‘ತೈವಾನ್ ರೆಡ್ ಲೇಡಿ’ ತಳಿಯ ಸುಮಾರು 300 ಪಪ್ಪಾಯ ಗಿಡಗಳನ್ನು ನೆಟ್ಟಿದ್ದಾರೆ. ಇದಕ್ಕೂ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಕೂಡಾ ಸಂಪೂರ್ಣ ಸಾವಯವ ಗೊಬ್ಬರವನ್ನೇ ಅವಲಂಬಿಸಿದೆ. ಈ ಪಪ್ಪಾಯ ಗಿಡಗಳು 3 ತಿಂಗಳಲ್ಲಿ ಕಾಯಿ ಬಿಡಲು ಶುರುಮಾಡುತ್ತವೆ.

ಸುಮಾರು 3 ವರ್ಷಗಳ ಕಾಲ ಫಲ ನೀಡುತ್ತದೆ. ತಲಾ ಒಂದು ಗಿಡಕ್ಕೆ 50 ರೂ.ಯಂತೆ ಖರ್ಚು ಮಾಡಿದ್ದಾರೆ. ತನ್ನ ಜಮೀನಲ್ಲಿ ಸುಂದರವಾದ ಹಾಗೂ ಸಕಲ ವ್ಯವಸ್ಥೆಗಳಿರುವ ಪ್ರತ್ಯೇಕ ಹಟ್ಟಿಯನ್ನು ನಿರ್ಮಿಸಿ ಹತ್ತು ದನಗಳನ್ನು ಹಾಗೂ 40 ಆಡುಗಳನ್ನು ಸಾಕುತ್ತಿದ್ದಾರೆ. ದನಗಳು ದಿನಕ್ಕೆ 60 ಲೀಟರ್ ಹಾಲು ನೀಡುತ್ತದೆ. ಹಾಲಿನಿಂದ ವರ್ಷಕ್ಕೆ ಒಂದೂವರೆ ಲಕ್ಷ ರೂ.ಗೂ ಅಧಿಕ ಆದಾಯ ಪಡೆಯುತ್ತಾರೆ. ಆದರೆ, ‘‘ತಾನು ಹಾಲಿಗಾಗಿ ದನಗಳನ್ನು ಸಾಕುತ್ತಿಲ್ಲ. ಹಾಲಿನಿಂದ ಬರುವ ಆದಾಯದಲ್ಲಿ ದನಗಳನ್ನು ಸಾಕುತ್ತಿದ್ದೇನೆ. ದನಗಳ ಸೆಗಣಿ ತೋಟಕ್ಕೆ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ’’ ಎಂದು ಹೇಳುತ್ತಾರೆ ರಾಮ ಕಿಶೋರ್. ದನದ ಹಟ್ಟಿಗೆ ತಾಗಿ ತೊಟ್ಟಿಯೊಂದನ್ನು ನಿರ್ಮಿಸಿದ್ದಾರೆ. ಮನೆಯ ಸ್ನಾನ ಗೃಹದ ನೀರು, ಪಾತ್ರೆ ತೊಳೆದ ನೀರು ಈ ತೊಟ್ಟಿಗೆ ಬಂದು ಬೀಳುವ ಹಾಗೆ ಪೈಪ್‌ಗಳನ್ನು ಅಳವಡಿಸಿದ್ದಾರೆ. ಅದರ ಪಕ್ಕದಲ್ಲೇ ಗೋಬರ್ ಗ್ಯಾಸ್ ಟ್ಯಾಂಕ್ ನಿರ್ಮಿಸಿದ್ದಾರೆ. ಗೋಬರ್ ಗ್ಯಾಸ್ ಟ್ಯಾಂಕ್ ಪಕ್ಕದಲ್ಲಿರುವ ಚಿಕ್ಕದಾದ ಹೊಂಡಕ್ಕೆ ದನದ ಸೆಗಣಿಯನ್ನು ಹಾಕಿ ಅದರಲ್ಲಿರುವ ಗಾನವನ್ನು ತಿರುಗಿಸಿದಾಗ ಸೆಗಣಿಯು ಕರಗಿ ತೊಟ್ಟಿಯ ನೀರಿನೊಂದಿಗೆ ಸೇರಿಕೊಲ್ಲುತ್ತದೆ.

ವಾರಕ್ಕೆ 20 ಸಾವಿರ ಲೀಟರ್‌ಗೂ ಅಧಿಕ ಸೆಗಣಿ ನೀರು ಸಿಗುತ್ತದೆ. ಅಲ್ಲದೆ ಗಾನ ತಿರುಗಿಸುವಾಗ ಟ್ಯಾಂಕ್‌ನಲ್ಲಿ ಗೋಬರ್ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇದೇ ಗ್ಯಾಸನ್ನು ಅವರು ಮನೆಯ ಅಡಿಗೆಗೆ ಹಾಗೂ ನೀರು ಕಾಯಿಸಲು ಬಳಸುತ್ತಾರೆ. ‘‘ಅಡುಗೆಗೆ ಹಾಗೂ ನೀರು ಕಾಯಿಸಲು ಗೋಬರ್ ಗ್ಯಾಸ್ ಇರುವುದರಿಂದ ಅಡಿಕೆ ಸಿಪ್ಪೆ, ಸೋಗೆಗಳನ್ನು ಬೆಳೆಗಳ ಬುಡಕ್ಕೆ ಹಾಕಲಾಗುವುದು ಇದರಿಂದ ಬೆಳೆ ಇನ್ನಷ್ಟು ಉತ್ತಮವಾಗಿ ಬರುತ್ತದೆ’’ ಎಂದು ಅವರು ಹೇಳುತ್ತಾರೆ. ಅಡಿಕೆ ಮರದ ಸಲಾಕೆಗಳನ್ನು ಹಾಸಿ ಆಡುಗಳು ಸಾಕಲು ಸುಂದರವಾದ ಹಟ್ಟಿಯನ್ನು ನಿರ್ಮಿಸಿದ್ದಾರೆ. ಹಟ್ಟಿ ಎತ್ತರವಾಗಿದ್ದು, ಕೆಲಗಡೆ ಖಾಲಿಯಾಗಿದೆ. ಸಲಾಕೆಗಳ ಎಡೆಗಳಿಂದ ಬೀಳುವ ಆಡುಗಳ ಇಕ್ಕೆಗಳು ಕೆಳಗಡೆ ಸಂಗ್ರಹವಾಗುತ್ತದೆ. 40 ಆಡುಗಳನ್ನು ಹೊಂದಿರುವ ಇವರು ವರ್ಷಕ್ಕೆ 2 ಲೋಡ್ ಆಡುಗಳ ಇಕ್ಕೆಗಳಿಂದ ಗೊಬ್ಬರವನ್ನು ಪಡೆಯುತ್ತಾರೆ. ಇವೆಲ್ಲವೂ ಕೃಷಿಗೆ ಬಳಸಲಾಗುವುದು. ಆಡುಗಳನ್ನು ಹಾಗೂ ದನಗಳನ್ನು ಹೊರಗಡೆ ಮೇಯಲು ಬಿಡುವುದಿಲ್ಲ. ದನಗಳನ್ನು ಹಟ್ಟಿಯಲ್ಲಿ ಕಟ್ಟಿ ಹಾಕಿದರೆ ಆಡುಗಳು ವಿಶಾಲವಾದ ಹಟ್ಟಿಯಲ್ಲಿ ಆರಾಮವಾಗಿ ನಡೆಯುತ್ತಾ, ಮಳಗುತ್ತಾ ಇರುತ್ತದೆ. ಆಡುಗಳಿಗೆ ಹಾಗೂ ದನಗಳಿಗೆ ಹುಲ್ಲು ಹಿಂಡಿಗಳನ್ನು ಕೊಡುತ್ತಾರೆ. ದೊಡ್ಡ ಆಡುಗಳನ್ನು ಮಾರಿ ಅದರಿಂದ ಬರುವ ಆದಾಯದಿಂದ ಆಡುಗಳನ್ನು ಅವರು ಸಾಕುತ್ತಾರೆ.

ಹೊಸದಾಗಿ ಆಡನ್ನಾಗಳೀ ದನಗಳನ್ನಾಗಲೀ ಅವರು ಖರೀದಿಸುವುದಿಲ್ಲ. ಮರಿ ಹಾಕಿದ್ದನ್ನೇ ಷೋಷಿಸಿ ಸಾಕುತ್ತಾರೆ. ಮನೆಯ ಊಟಕ್ಕೆಂದು ಬೇರೆಯೇ ಒಂದು ಗದ್ದೆ ಇದ್ದು, ಅದರಲ್ಲಿ ಭತ್ತ ಬೆಳೆಯಲಾಗುತ್ತಿದೆ. ಭತ್ತ ಕಟಾವು ಮಾಡಿದ ಬಳಿಕ ಗದ್ದೆಯಲ್ಲಿ ಬಕ್ ಹಗ್ಗ ತಯಾರಿಸುವ ‘ಜೂಟ್’ ಎಂಬ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಈ ಗಿಡಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಮಣ್ಣಿಗೆ ಸೇರಿಸುತ್ತದೆ. ಅಲ್ಲದೆ ಈ ಗಿಡಗಳ ಬೇರುಗಳು ಸಾರಜನಕವನ್ನು ಹೊಂದಿದ್ದು, ಮಣ್ಣಿನ ಫಲವತ್ತತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಮೀನಿನಲ್ಲಿ ಕೆರೆಯೊಂದಿದ್ದು, ಹೆಚ್ಚಿನ ನೀರಾವರಿಗಾಗಿ ಬೋರ್‌ವೆಲ್‌ವೊಂದನ್ನು ಕೊರೆಸಿದ್ದಾರೆ. ಒಟ್ಟಿನಲ್ಲಿ ಯಾವುದೇ ರಸಗೊಬ್ಬರ, ಕ್ರಿಮಿನಾಶಕಗಳ ಮೊರೆ ಹೋಗದೆ ಸಂಪೂರ್ಣ ಸಾವಯವವನ್ನೇ ಅವಲಂಬಿಸಿ ಉತ್ತಮ ಬೆಳೆ ಬೆಳೆಯುತ್ತಿರುವ ರಾಮ ಕಿಶೋರ್ ಇತರ ಬೆಳೆಗಾರರಿಗೆ ಮಾದರಿಯಂತಿದ್ದಾರೆ.

ಯಾವುದೇ ಕೆಲಸವಾಗಲಿ ಮೊದಲು ದೃಢವಾದ ಮನಸ್ಸು ಬೇಕು. ದೃಢ ಮನಸ್ಸಿನೊಂದಿಗೆ ಶ್ರಮ ಪಟ್ಟರೆ ಎಂಹವರಿಗೂ ಉತ್ತಮ ಬೆಳೆ ಬೆಳೆಯಬಹುದು. ತಾನು ಅದನ್ನೇ ಮಾಡಿ ಯಶಸ್ಸು ಕಂಡಿರುವೆ. ಯುವ ರೈತರು ತನ್ನ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆದು ಇದೇ ರೀತಿ ಕೃಷಿ ಮಾಡಿದರೆ ಖಂಡಿತಾ ಯಶಸ್ಸು ಕಾಣಬಹುದು. ಶಿಕ್ಷಕರು ಶಾಲಾ ಆಡಳಿತ ಮಂಡಳಿಯವರು ಶಾಲಾ, ಕಾಲೇಜಿನ ವಿದ್ಯಾರ್ಥಿಗಳನ್ನು ಬರೇ ಮನರಂಜನೆಯಂತಹ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದರ ಬದಲು ಇಂತಹ ಸ್ಥಳಗಳಿಗೆ ಕರೆ ತರುವ ಮೂಲಕ ಯುವ ಜನತೆಯಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಬಹುವುದು.

- ರಾಮ ಕಿಶೋರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News