ಕಮಲ್ ಚಿತ್ರದಲ್ಲಿ ಶ್ರುತಿ
ಶ್ರುತಿಹಾಸನ್, ಚಿತ್ರರಂಗ ಪ್ರವೇಶಿಸಿದಾಗಿನಿಂದ ಎಲ್ಲರೂ ನಿರೀಕ್ಷಿಸುತ್ತಿದ್ದೇನೆಂದರೆ, ಆಕೆ ಯಾವಾಗ ತನ್ನ ತಂದೆ ಕಮಲಹಾಸನ್ ಜೊತೆ ನಟಿಸಲಿದ್ದಾಳೆಂಬುದು. ಇದೀಗ ಚಿತ್ರಪ್ರೇಮಿಗಳ ಕಾತರ ಕೊನೆಗೊಳ್ಳುವ ದಿನಗಳು ಹತ್ತಿರವಾಗಿವೆ. ಇದೀಗ ಇವರಿಬ್ಬರೂ, ತಮಿಳು ಚಿತ್ರವೊಂದರಲ್ಲಿ ತಂದೆ,ಮಗಳ ಪಾತ್ರಗಳಲ್ಲಿ ನಟಿಸಲಿರುವುದು ಖಚಿತವಾಗಿದೆ.ನಿರ್ದೇಶಕ ರಾಜೀವ್ ಕುಮಾರ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಚಿತ್ರದ ಉಳಿದ ಪಾತ್ರವರ್ಗದ ಬಗ್ಗೆ ಯೂ ಯಾವುದೇ ವಿವರಗಳು ಲಭ್ಯವಾಗಿಲ್ಲ.
ಆದರೆ 2000ರಲ್ಲಿ ತೆರೆಕಂಡ ಕಮಲ್ ಅಭಿನಯದ ಹೇರಾಮ್ ಚಿತ್ರದಲ್ಲಿ ಶ್ರುತಿ ಬಾಲನಟಿಯಾಗಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದಳು. 2009ರಲ್ಲಿ ಆಕೆ ಪೂರ್ಣಪ್ರಮಾಣದ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಆಕೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ 20ಕ್ಕಿಂತಲೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಳು. ಆದರೆ, ತಂದೆಯ ಜೊತೆ ಅಭಿನಯಿಸುವ ಅವಕಾಶ ಮಾತ್ರ ಶ್ರುತಿಗೆ ದೊರೆತಿರಲಿಲ್ಲ. ಕಮಲ್ ಹಾಸನ್ ಕೂಡಾ ತನ್ನ ಪುತ್ರಿ ಸ್ವಂತ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಹಂಬಲವನ್ನು ಹೊಂದಿದ್ದರು.ಅವರ ಕನಸು ಈಡೇರಿದೆ. ಈಗ ಶ್ರುತಿ ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ನಟಿಯರ ಸಾಲಿಗೆ ಸೇರ್ಪಡೆಗೊಂಡಿದ್ದಾಳೆ ಮತ್ತು ತಾನೋರ್ವ ಪ್ರತಿಭಾವಂತ ನಟಿಯೆಂಬುದನ್ನು ನಿರೂಪಿಸಿದ್ದಾಳೆ. ಅಭಿನಯದ ಜೊತೆ ಉತ್ತಮ ಗಾಯಕಿಯಾಗಿರುವ ಶ್ರುತಿಹಾಸನ್ ಕೈಯಲ್ಲಿ ಈ ವರ್ಷವೂ ನಾಲ್ಕೈದು ಚಿತ್ರಗಳಿದ್ದು, ಬಿಡುವಿಲ್ಲದ ತಾರೆಯೆನಿಸಿಕೊಂಡಿದ್ದಾಳೆ.