ತಮಿಳಿನಲ್ಲಿ ಮಮ್ಮುಟ್ಟಿ ದ್ವಿತೀಯ ಇನ್ನಿಂಗ್ಸ್
ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮುಮ್ಮುಟ್ಟಿ, ತಮಿಳು ಚಿತ್ರರಂಗದಲ್ಲಿ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾಮ್ ನಿರ್ದೇಶನದ ಪೇರಂಬು ತಮಿಳು ಚಿತ್ರದಲ್ಲಿ ಅವರು ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಶೂಟಿಂಗ್ ಈಗಾಗಲೇ ಕೊಡೈಕೆನಾಲ್‌ನಲ್ಲಿ ಆರಂಭಗೊಂಡಿದ್ದು, ಅಂಜಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಸಾಧನಾ ಎಂಬ ಬಾಲನಟಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆಯೆಂದು ಚಿತ್ರ ತಂಡದ ಮೂಲಗಳು ತಿಳಿಸಿವೆ. ನಿರ್ದೇಶಕ ರಾಮ್‌ರಿಂದ ಚಿತ್ರಕಥೆ ಕೇಳಿಯೇ ಉತ್ತೇಜಿತರಾದ ಮುಮ್ಮಟ್ಟಿ, ಕೂಡಲೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರೆನ್ನಲಾಗಿದೆ.
ಯುವನ್ ಶಂಕರ್ ರಾಜಾ ಸಂಗೀತ ನೀಡಲಿದ್ದು, ಚಿತ್ರದ ಉಳಿದ ಪಾತ್ರ ವರ್ಗದ ಬಗ್ಗೆ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ. ಮಮ್ಮಟ್ಟಿ ‘ವೌನಂ ಸಮ್ಮದಂ’ ಎಂಬ ಕ್ರೈಂ ಥ್ರಿಲ್ಲರ್ ಚಿತ್ರದ ಮೂಲಕ ತಮಿಳುಚಿತ್ರರಂಗ ಪ್ರವೇಶಿಸಿದ್ದರು. ಆನಂತರ ಅವರು 2010ರಲ್ಲಿ ಮಣಿರತ್ನಂ ನಿರ್ದೇಶನದ ದಳಪತಿ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸಿದ್ದರು. 2010ರಲ್ಲಿ ತೆರೆಕಂಡ ಟಿ.ಅರವಿಂದನ್ ನಿರ್ದೇಶನದ ‘ವಂದೇಮಾತರಂ ’ ಅವರು ಕೊನೆಯ ಬಾರಿಗೆ ಅಭಿನಯಿಸಿದ ತಮಿಳುಚಿತ್ರವಾಗಿತ್ತು.