ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಸೈಬರ್‌ಕಳ್ಳರ ಸೆರೆ ಬ್ಯಾಂಕ್ ಮ್ಯಾನೇಜರ್‌ನಿಂದಲೇ ಸಹಕಾರ!
ಬೆಂಗಳೂರು, ಜ.12: ಆಕ್ಸಿಸ್ ಹಾಗೂ ಭಾರತೀಯ ಸ್ಟೇಟ್‌ಬ್ಯಾಂಕ್‌ನ ವ್ಯಾಲೆಟ್ ಆ್ಯಪ್ಸ್‌ಗಳ ಮೂಲಕ ಗ್ರಾಹಕರ ಖಾತೆಗಳ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡಿ, ಅವರ ಹಣವನ್ನು ಅಜ್ಞಾತ ಖಾತೆಗಳಿಗೆ ವರ್ಗಾಯಿಸುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಜಾಲಕ್ಕೆ ಸಹಕರಿಸಿದ್ಲ ಆ್ಯಕ್ಸಿಸ್ ಬ್ಯಾಂಕ್‌ನ ಶಾಖೆಯೊಂದರ ಡೆಪ್ಯುಟಿ ಮ್ಯಾನೇಜರ್ ಒಬ್ಬನನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆ್ಯಕ್ಸಿಸ್ ಬ್ಯಾಂಕ್ ಹಾಗೂ ಎಸ್‌ಬಿಐನ ಸಹವರ್ತಿ ಬ್ಯಾಂಕೊಂದರ ‘‘ಲೈಮ್ ಆ್ಯಪ್ಲಿಕೇಶನ್’’ಅನ್ನು ಹ್ಯಾಕ್ ಮಾಡಿದ ಆರೋಪಿಗಳು, ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮೈಸೂರು ಹಾಗೂ ಮಂಗಳೂರಿನ ಹಲವಾರು ಅಮಾಯಕ ಗ್ರಾಹಕರ ಖಾತೆಗಳಿಂದ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ.
ಆಚ್ಚರಿಯೆಂದರೆ, ಈ ಸೈಬರ್ ಖದೀಮರು, ಖಾತೆಗಳ ಪಾಸ್‌ವರ್ಡ್ ಪಡೆಯಲು ಅಸಲಿ ಖಾತೆದಾರರ ಮೊಬೈಲ್ ಸಂಖ್ಯೆಗಳನ್ನೇ ತಾವಾಗಿಯೇ, ಬ್ಲಾಕ್ ಮಾಡಿ, ತಮ್ಮ ಹೆಸರಿನಲ್ಲಿ ಸಿಮ್‌ಕಾರ್ಡ್‌ಗಳನ್ನು ನೋಂದಣಿಗೊಳಿಸಲು ಸಫಲರಾಗಿದ್ದಾರೆ. ಈ ಪ್ರಕರಣದ ಹಿಂದೆ ಅಕ್ರಮ ಸಿಮ್ ಕಾರ್ಡ್ ನೋಂದಣಿ ಜಾಲದ ಕೈವಾಡವಿರುವುದೂ ಬೆಳಕಿಗೆ ಬಂದಿದೆ.