ದಲಿತರ ಭೂಮಿ ಕಬಳಿಸಲು ಹುನ್ನಾರ: ದಸಂಸ
ಹೊಸಕೋಟೆ ತಾಲೂಕಿನ ನಿವೇಶನ ರಹಿತ ದಲಿತರಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಸಲು ಬೆಂಗಳೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಮಂಜುನಾಥ್ ಮತ್ತು ಸಹಚರರು ಹುನ್ನಾರ ನಡೆಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಐ.ಆರ್.ನಾರಾಯಣಸ್ವಾಮಿ ಮಾತನಾಡಿ, ಹೊಸಕೋಟೆ ತಾಲೂಕಿನ ನಿವೇಶನ ರಹಿತ ದಲಿತ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಮೀಸಲಿಟ್ಟಿದ್ದ ತಾಲೂಕಿನ ಚೋಳಪ್ಪನಹಳ್ಳಿಯ ಸರ್ವೇ ನಂ. 87ರ 9 ಎಕರೆ 9 ಗುಂಟೆ ಗೋಮಾಳ ಭೂಮಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕಬಳಿಸಲು ಸ್ಥಳೀಯ ರಾಜಕೀಯ ವ್ಯಕ್ತಿಗಳು ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸ್ಥಳೀಯ ರಾಜಕಾರಣಿ ಮತ್ತು ಬೆಂಗಳೂರು ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಸಿ.ಮಂಜುನಾಥ್ ಈ ಗೋಮಾಳ ಭೂಮಿಯನ್ನು ಲಪಟಾಯಿಸುವ ಉದ್ದೇಶದಿಂದ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ವ್ಯವಸಾಯ ಸೇವಾ ಸಹಕಾರಿ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಕುರಿತು ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದಲಿತರಿಗೆ ಮೀಸಲಿಟ್ಟಿರುವ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿರುವ ಮತ್ತು ಈ ಅಕ್ರಮಕ್ಕೆ ಸಾಥ್ ನೀಡಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ಈ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.ೋಷ್ಠಿಯಲ್ಲಿ ಸಂಚಾಲಕರಾದ ಎ.ಮಂಜುನಾಥ್, ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.