×
Ad

ಜಾನಪದ ಸಂಸ್ಕೃತಿಯಲ್ಲಿ ಭಾರತೀಯತೆ: ಶಂಕರ ಬಿದರಿ; ಸಿಲಿಕಾನ್ ಸುಗ್ಗಿ-2016 ಕಾರ್ಯಕ್ರಮ

Update: 2016-01-14 23:47 IST

ಬೆಂಗಳೂರು, ಜ.14: ಆಧುನಿಕ ಜೀವನ ಶೈಲಿಯಿಂದಾಗಿ ನಮ್ಮ ದೇಶೀಯ ಸಂಸ್ಕೃತಿ ಮರೆಯಾಗುತ್ತಿದೆ. ಆದರೆ, ನಾವು ಎಷ್ಟೇ ಆಧುನಿಕತೆಯತ್ತ ಆಕರ್ಷಿತರಾದರು ನಮ್ಮ ಸಂಪ್ರದಾಯದ ಬೇರುಗಳು ಜಾನಪದ ಸಂಸ್ಕೃತಿಯಲ್ಲಿ ಅಡಗಿದೆ ಎಂಬುದನ್ನು ಮರೆಯಬಾರದು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ ಬಿದರಿ ತಿಳಿಸಿದ್ದಾರೆ. ಗುರುವಾರ ಕೆ.ಆರ್.ಪುರದ ಸಿಲಿಕಾನ್‌ಸಿಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಿಲಿಕಾನ್ ಸುಗ್ಗಿ-2016(ಜನಪದ ಕಲಾ ವೈಭವ ಸಂಭ್ರಮಾಚರಣೆ)ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದದಲ್ಲಿ ಅಡಗಿರುವ ಭಾರತೀಯ ಸಂಪ್ರದಾಯ, ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವುದು ಸ್ವಾಗತಾರ್ಹ ಎಂದರು.

ಜಾನಪದ ಸೊಗಡು, ರೈತರ ಪರಿಶ್ರಮದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಜನಪದ ಕಲಾ ವೈಭವ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ. ನಮ್ಮ ಸಂಪ್ರದಾಯ, ಆಚಾರ, ವಿಚಾರಗಳನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಐದು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ನಾವು ಜಾತಿ, ಮತ, ಧರ್ಮ, ಭಾಷೆ, ಪ್ರದೇಶದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಕೊಂಡ ಪರಿಣಾಮ ಗುಲಾಮಗಿರಿಗೆ ತಲೆಬಾಗಬೇಕಾಯಿತು. ಹಿರಿಯರ ಪರಿಶ್ರಮದಿಂದ ಸಿಕ್ಕಿರುವ ಸ್ವಾತಂತ್ರ ಹಾಗೂ ಗಣತಂತ್ರವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಮೈ.ಚ.ಜಯದೇವ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸವನ್ನು ಮೂಡಿಸಿಕೊಂಡು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕು. ನಮ್ಮ ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಂಡು ಮೌಲ್ಯಯುತವಾದ ಶಿಕ್ಷಣವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ದಾನ, ಧರ್ಮ, ಸತ್ಯ, ನಿಷ್ಠೆಯನ್ನು ಬದುಕಿನ ಮೌಲ್ಯಗಳನ್ನಾಗಿ ರೂಪಿಸಿಕೊಳ್ಳಬೇಕು. ಭಾರತದ ಮಣ್ಣಿನಲ್ಲಿ ಈ ಅಂಶಗಳು ಅಡಗಿವೆ. ಗುರುಗಳು, ಪೋಷಕರು, ಹಿರಿಯರನ್ನು ಗೌರವಿಸುವ ಗುಣವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಲಿಕಾನ್ ಸಿಟಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್, ನಿರ್ದೇಶಕ ಎಚ್.ಎಂ.ಮುಕುಂದ, ಪ್ರಾಂಶುಪಾಲರಾದ ಟಿ.ಆದಿಲಕ್ಷ್ಮೀ, ಸಿ.ಜ್ಞಾನೇಶ್, ಶೈಕ್ಷಣಿಕ ನಿರ್ದೇಶಕ ಡಾ.ಆರ್.ಕರುಣಾಮೂರ್ತಿ, ಹಿರಿಯರಾದ ಮುನಿತಾಯಪ್ಪ, ಜಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News