ಹಾಲಿನ ಲಾಭ ರೈತರಿಗೆ ನೀಡಲು ಆಪ್ ಒತ್ತಾಯ
ಬೆಂಗಳೂರು, ಜ. 14: ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿದೆ. ಆದರೆ ಹಾಲಿನ ಮಾರಾಟದಿಂದ ಬರುವ ಲಾಭವನ್ನು ರೈತರಿಗೆ ನೀಡಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ಸಂಚಾಲಕ ಡಿ.ಕೆ. ಮಾನಸ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಳ್ಳಲು ನೆರೆ ರಾಜ್ಯಗಳ ಹಾಲಿನ ದರ ವಿವರ ನೀಡುವ ಸರಕಾರ, ಹಾಲಿನ ಮಾರಾಟದಿಂದ ಬರುವ ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸುವಲ್ಲಿ ನಿರ್ಲಕ್ಷ ಧೋರಣೆಯನ್ನು ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆರೆ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ ಒಂದು ಲೀಟರ್ ಹಾಲಿನ ಬೆಲೆ ರೂ. 34 ಇದ್ದು, ಅದರಲ್ಲಿ 27.34 ರೂ. ರೈತರಿಗೆ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ 34 ರೂ. ಇದ್ದು ಅದರಲ್ಲಿ 28 ರೂ. ರೈತರಿಗೆ ಸಿಗುತ್ತಿದೆ. ಕೇರಳದಲ್ಲಿ 38 ರೂ. ಹಾಲಿನ ದರವಿದ್ದು ಅದರಲ್ಲಿ 32.74 ರೂ. ರೈತರಿಗೆ ಸಿಗುತ್ತಿದ್ದು, ಶೇ.80-86 ರಷ್ಟು ಲಾಭ ರೈತರಿಗೆ ಸಿಗುತ್ತಿದೆ. ಆದರೆ ರಾಜ್ಯದಲ್ಲಿ ಕೇವಲ ಶೇ. 60ರಷ್ಟು ಸಿಗುತ್ತಿದೆ ಎಂದು ತಿಳಿಸಿದರು.
ನೆರೆ ರಾಜ್ಯಗಳಲ್ಲಿ ನೀಡುವ ಬೆಲೆಯನ್ನೇ ಕರ್ನಾಟಕದಲ್ಲಿಯೂ ರೈತರಿಗೆ ನಿಗದಿಪಡಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.