ಮಕ್ಕಳಿಗೆ ‘ಪೋಲಿಯೊ’ ಲಸಿಕೆ ಹಾಕಿಸಲು ಡಿಸಿ ವಿ.ಶಂಕರ್ ಮನವಿ
ಬೆಂಗಳೂರು, ಜ. 14: ರಾಷ್ಟ್ರೀಯ ಪಲ್ಸ್‌ಪೋಲಿಯೊ ಕಾರ್ಯಕ್ರಮ ಜ.17ರಿಂದ 20ರ ವರೆಗೆ ನಡೆಯಲಿದ್ದು, ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ 5ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮನವಿ ಮಾಡಿದ್ದಾರೆ. ಪಲ್ಸ್‌ಪೋಲಿಯೊ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 1,996 ಬೂತ್‌ಗಳ ಕಾರ್ಯಾಚರಣೆಯ ಸ್ಥಳಗಳನ್ನು ಗುರುತಿಸಲಾಗಿದ್ದು, 7,984 ಲಸಿಕೆ ಹಾಕುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಶಂಕರ್ ಇದೇ ವೇಳೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಶಿಕ್ಷಣ, ಮಕ್ಕಳ ಕಲ್ಯಾಣ, ಸಾರಿಗೆ, ರೋಟರಿ, ಐಎಂಎ, ಐಎಪಿ ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ನಡೆಯಲಿದ್ದು, ಸದರಿ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಸರಿ ಸುಮಾರು 6.20ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.
ಜ.17ರಂದು ಬೂತ್‌ಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಜ.18ರಂದು ಲಸಿಕೆ ಹಾಕಿಸದೆ ಬಿಟ್ಟುಹೋದ ಮಕ್ಕಳಿಗೆ ಮನೆ-ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಪೋಲಿಯೊ ನಿರ್ಮೂಲನೆಯಲ್ಲಿ ಭಾರತ ದೇಶು ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದರು.
2011ರಿಂದ ಯಾವುದೇ ಹೊಸ ಪೋಲಿಯೊ ಪ್ರಕರಣ ಕಂಡು ಬಂದಿರುವುದಿಲ್ಲ. ಹಾಗೂ ಭಾರತ ದೇಶವು ಈಗ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ‘ಪೋಲಿಯೊ ಮುಕ್ತ ರಾಷ್ಟ್ರ’ ಎಂಬ ಪೋಲಿಯೊ ನಿರ್ಮೂಲನೆಯ ಪ್ರಮಾಣ ಪತ್ರವನ್ನು 2014 ಮಾರ್ಚ್ 27ರಂದು ಪಡೆದಿದೆ ಎಂದು ವಿ.ಶಂಕರ್ ತಿಳಿಸಿದರು.