×
Ad

ಮಡಿಕೇರಿ: ಅಕ್ರಮ ಮನೆಗಳ ವಿರುದ್ಧ ದಿಢೀರ್ ಕಾರ್ಯಾಚರಣೆ: ಆರು ಕುಟುಂಬಗಳ ಮನೆ ತೆರವು

Update: 2016-01-15 23:51 IST

ಮಡಿಕೇರಿ, ಜ.15: ಮಡಿಕೇರಿ ನಗರದಂಚಿನ ಕೆ.ನಿಡುಗಣೆ ಗ್ರಾಮ ಪಂಚಾಯತ್‌ಗೆ ಒಳಪಡುವ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ನೆಲೆಸಿದ್ದ 16 ಕುಟುಂಬಗಳಲ್ಲಿ ಆರು ಕುಟುಂಬಗಳ ಮನೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಮಕರ ಸಂಕ್ರಾಂತಿಯ ದಿನವಾದ ಶುಕ್ರವಾರ ಬೆಳಗ್ಗಿನ ಜಾವ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆಗಮಿಸಿದ ಅಧಿಕಾರಿಗಳ ತಂಡ ದಿಢೀರ್ ಕಾರ್ಯಾಚರಣೆ ನಡೆಸಿ ನಿವಾಸಿಗಳಿಗೆ ಆಘಾತವನ್ನುಂಟು ಮಾಡಿತು.

ಮುಂಜಾನೆಯ ಅವಧಿಯಲ್ಲಿ ಏಕಾಏಕಿ ಹಿಟಾಚಿ ಯಂತ್ರದೊಂದಿಗೆ ಸ್ಥಳಕ್ಕಾಗಮಿಸಿದ ಕಂದಾಯ ಅಧಿಕಾರಿಗಳು ಸ್ಥಳೀಯರ ಮನವಿ ಮತ್ತು ವಿರೋಧಗಳ ನಡುವೆಯೆ ಮನೆಗಳನ್ನು ಕೆಡವಿದರು.ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಆದೇಶದ ಅನ್ವಯ ಉಪ ವಿಭಾಗಾಧಿಕಾರಿ ನಂಜೇಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಮುಂಜಾನೆ ಸುಮಾರು ಆರು ಗಂಟೆಯಿಂದ ದಿಢೀರ್ ಕಾರ್ಯಾಚರಣೆ ಆರಂಭಗೊಂಡಿತು. ಮಲಗಿದ್ದ ಮಂದಿಯನ್ನು ಎಬ್ಬಿಸಿ, ಮನೆಯ ಸಾಮಗ್ರಿಗಳನ್ನು ಹೊರ ಹಾಕಿಸಿ ಮನೆಗಳನ್ನು ಕೆಡವಲಾಯಿತು.

ನೂರಾರು ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಮನೆ ಕೆಡಹುವ ಸಂದರ್ಭ ನಿವಾಸಿಗಳು ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಗೋಗರೆದರು ಯಾವುದೇ ಪ್ರಯೋಜನವಾಗಲಿಲ್ಲ. ವಿಧವೆ ಹಾಗೂ ರೋಗಿಯೊಬ್ಬರಿದ್ದ ಮನೆ ಕೆಡಹುವ ಸಂದರ್ಭ ಆಕ್ರಂದನ ಮುಗಿಲು ಮುಟ್ಟಿತು.

ಮಹಿಳೆಯೊಬ್ಬರು ಕಾರ್ಯಾಚರಣೆಯನ್ನು ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು. ಇದ್ಯಾವುದಕ್ಕೂ ಮಣಿಯದ ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಕೂಡ ಆತಂಕದ ವಾತಾವರಣದ ನಡುವೆಯೆ ಮನೆಯ ಸಾಮಗ್ರಿಗಳನ್ನು ಹೊರಗಿಡುತ್ತಿದ್ದ ದೃಶ್ಯ ಕಂಡು ಬಂತು.

ಶಾಸಕರ ತರಾಟೆ: ನಿಡುಗಣೆ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಜಮಾಯಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಅಕ್ರಮ ಸಕ್ರಮದಡಿ 94(ಸಿ) ಅರ್ಜಿಯನ್ನು ನಿವಾಸಿಗಳು ಸಲ್ಲಿಸಿದ್ದರೂ ಅದನ್ನು ವಿಲೇವಾರಿ ಮಾಡದೆ ತೆರವು ಕಾರ್ಯಾಚರಣೆ ಯಾಕೆ ಕೈಗೊಂಡಿದ್ದೀರಿ ಎಂದು ಶಾಸಕ ಕೆ.ಜಿ.ಬೋಪಯ್ಯ ಪ್ರಶ್ನಿಸಿದರು. ಅಕ್ರಮ ಸಕ್ರಮದಡಿ ರಾಜ್ಯದೆಲ್ಲೆಡೆ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಸುಮಾರು 3 ಸಾವಿರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ. ನೂರಾರು ಎಕರೆ ಅತಿಕ್ರಮಣವನ್ನು ತೆರವುಗೊಳಿಸದೆ ಬಡವರ ಜಾಗವನ್ನು ತೆರವು ಗೊಳಿಸುವುದು ಕಾನೂನು ಬಾಹಿರ ಕ್ರಮವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ ಕೆ.ಜಿ. ಬೋಪಯ್ಯ ಸಂಕ್ರಾಂತಿ ಹಬ್ಬದಂದು ಅಧಿಕಾರಿಗಳು ಅಮಾನವೀಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಜಿಲ್ಲೆಯ ಶಾಸಕರುಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಕಾರ್ಯಾಚರಣೆ ನಡೆಸಿರುವುದು ಖಂಡನೀಯ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ ಅವರು, ಜಿಲ್ಲಾ ಪಂಚಾಯತ್ ಕಚೇರಿ ನಿರ್ಮಾಣಕ್ಕೆ ಇದು ಸೂಕ್ತ ಜಾಗವಲ್ಲವೆಂದು ಅಭಿಪ್ರಾಯಪಟ್ಟರು.

ಈ ಹಿಂದೆ ತಾಪಂ ಕಚೇರಿ ಬಳಿ ಜಿಪಂ ಕಚೇರಿಗಾಗಿ ಭೂಮಿ ಪೂಜೆ ನೆರವೇರಿಸಲಾಗಿದ್ದು, ಅಲ್ಲಿಯೆ ಕಟ್ಟಡವನ್ನು ನಿರ್ಮಿಸುವಂತೆ ಒತ್ತಾಯಿಸಿದರು. ತೆರವು ಕಾರ್ಯಾಚರಣೆಯಿಂದ ನಿವಾಸಿಗಳು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದು, ಇವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಂದರ್ಭ ಶಾಸಕದ್ವಯರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾರ್ಯಾಚರಣೆ ಕುರಿತು ವಿರೋಧ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ತಕ್ಷಣ ಸ್ಥಗಿತಗೊಳಿಸಲು ಆದೇಶ ನೀಡುವಂತೆ ಕೇಳಿ ಕೊಂಡರು. ಸಂಕ್ರಾಂತಿ ಹಬ್ಬದ ದಿನ ಕಾರ್ಯಾಚರಣೆ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲವೆಂದರು.

ನಂತರ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಶಾಸಕದ್ವಯರೊಂದಿಗೆ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಮಾತುಕತೆಯ ಮೂಲಕ ಒಂದು ನಿರ್ಧಾರಕ್ಕೆ ಬರಬೇಕು ಮತ್ತು ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತದ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳ ಬಳಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಅಕ್ರಮ ಒತ್ತುವರಿ ತೆರವಿಗೆ ನ್ಯಾಯಾಲಯದ ಆದೇಶವಿದ್ದು, ಟೈಮ್ ಟೇಬಲ್ ಪ್ರಕಾರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

 ಪೂರ್ವಯೋಜಿತ ಕಾರ್ಯಾಚರಣೆ: ಗುರುವಾರವೇ ಅಧಿಕಾರಿಗಳ ತಂಡ ಈ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿತ್ತು. ಸ್ಥಳೀಯ ನಿವಾಸಿಗಳು ಸರ್ವೆ ಕುರಿತು ಪ್ರಶ್ನಿಸಿದಾಗ ತೆರವು ಕಾರ್ಯಾಚರಣೆಯ ಯಾವುದೇ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿರಲಿಲ್ಲ. ದಿಢೀರ್ ಆಗಿ ಮುಂಜಾನೆ ಸೂರ್ಯ ಮೂಡುವ ಹೊತ್ತಿನಲ್ಲೆ ಸಂಕ್ರಾಂತಿಯ ಸಂಭ್ರಮವನ್ನು ಬರಮಾಡಿಕೊಳ್ಳುವ ಬದಲು ತಮ್ಮ ನೆಲೆಯನ್ನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರಿಗೆ ಆಘಾತವನ್ನು ಉಂಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News