×
Ad

ಜ.20ರಿಂದ ರಾಷ್ಟ್ರ ಮಟ್ಟದ ‘ಇಂಡ್ ಎಕ್ಸ್‌ಪೊ ಪ್ರದರ್ಶನ

Update: 2016-01-17 00:05 IST

 ಬೆಂಗಳೂರು, ಜ.16: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಎಂಎಸ್‌ಎಂಇ ಸಚಿವಾಲಯ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಜ.20ರಿಂದ ಎರಡು ದಿನಗಳ ಕಾಲ ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಆವರಣದಲ್ಲಿ ರಾಷ್ಟ್ರ ಮಟ್ಟದ ‘ಇಂಡ್ ಎಕ್ಸ್‌ಪೊ’ ಆಯೋಜಿಸಲಾಗಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮೊಹಸಿನ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಇಂಡ್ ಎಕ್ಸ್‌ಪೊದಲ್ಲಿ ವ್ಯಾಪಾರಿಗಳ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಕೈಗಾರಿಕಾ ಪ್ರದರ್ಶನ ಏರ್ಪಡಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಿ, ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಇಂಡ್ ಎಕ್ಸ್‌ಪೊ ಆಯೋಜಿಸಲಾಗಿದೆ. ಜಾಗತೀಕರಣದಿಂದ ಸೂಕ್ಷ್ಮ, ಸಣ್ಣ ಉದ್ಯಮಗಳ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಎಕ್ಸ್‌ಪೊದಲ್ಲಿ ಚರ್ಚಿಸಲಾಗುತ್ತದೆ. ಇದಲ್ಲದೆ ಖರೀದಿ ನೀತಿಗಳು ಹಾಗೂ ವಿಧಾನ, ವ್ಯಾಪಾರಿಗಳ ನೋಂದಣಿ ಹಾಗೂ ಕ್ರಮಾಂಕ ಪ್ರಕ್ರಿಯೆ, ಗುಣಮಟ್ಟದ ಮಾಪನಗಳು, ಫೆಸಿಲಿಟೇಟಿಂಗ್ ಏಜೆನ್ಸಿಗಳ ಪಾತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಎಕ್ಸ್‌ಪೊದಲ್ಲಿ ಕೇಂದ್ರ ರಕ್ಷಣಾ ವಲಯ, ವಾಯುಯಾನ, ಯಂತ್ರೋಕರಣ ಸಾಧನಗಳು, ಸಿಎಸ್‌ಸಿ ಕ್ಲಸ್ಟರ್‌ಗಳು, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಬಯೊಟೆಕ್ನಾಲಜಿಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಇದಕ್ಕಾಗಿ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೋದ್ಯಮಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News