×
Ad

ಜ.21ರಿಂದ ರಂಗಶಂಕರ ಲೋಕಸಂಚಾರ

Update: 2016-01-18 23:35 IST

ಬೆಂಗಳೂರು, ಜ. 18: ನಟ ಶಂಕರ್‌ನಾಗ್ ಅವರ ಕನಸು ನನಸು ಮಾಡಲು ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಭಾಗಕ್ಕೂ ರಂಗಶಂಕರ ವತಿಯಿಂದ ನಾಟಕ ಪ್ರದರ್ಶನಗಳನ್ನು ಕೊಂಡೊಯ್ಯಲಾಗುತ್ತಿದೆ ಎಂದು ಹಿರಿಯ ನಟಿ ಅರುಂಧತಿ ನಾಗ್ ತಿಳಿಸಿದ್ದಾರೆ.

ನಗರದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 21ರಿಂದ ರಂಗ ಶಂಕರ ಲೋಕಸಂಚಾರ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ತಾಲೂಕುಗಳು, ಜಿಲ್ಲಾ ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು

ಜ.21ರಂದು ದಾವಣಗೆರೆಯ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಮುಲ್ಲಾ ನಾಸಿರುದ್ದೀನ್, ಜ.22ರಂದು ದ್ವೀಪ, ಜ.23ರಂದು ಗುಮ್ಮ ಬಂದ ಗುಮ್ಮ, ಜ.24ರಂದು ಮರ್ಯಾದೆ ಪ್ರಶ್ನೆ ನಾಟಕಗಳನ್ನು ಏರ್ಪಡಿಸಲಾಗಿದೆ. ಹಾವೇರಿ ಜಿಲ್ಲೆಯ ಶೇಷಗಿರಿಯ ಸಿಎಂ ಉದಾಸಿ ಕಲಾಕ್ಷೇತ್ರದಲ್ಲಿ ಜ.22 ರಂದು ಗುಮ್ಮ ಬಂದ ಗುಮ್ಮ ಹಾಗೂ 23ರಂದು ಮರ್ಯಾದೆ ಪ್ರಶ್ನೆ ನಾಟಕ ಪ್ರದರ್ಶನವನ್ನು 15 ಜನರ ಎರಡು ತಂಡ ನಾಟಕ ಪ್ರದರ್ಶನ ನೀಡಲಿದೆ. ಇವರಿಗೆ ರಂಗಶಂಕರ ವತಿಯಿಂದ ವೇತನ ನೀಡಲಾಗುತ್ತದೆ ಎಂದರು.

ಜ.22 ರಂದು ತುಮಕೂರಿನ ಎಸ್‌ಐಟಿ ಬಿರ್ಲಾ ರಂಗಮಂದಿರದಲ್ಲಿ ಮರ್ಯಾದೆ ಪ್ರಶ್ನೆ, 23 ರಂದು ದ್ವೀಪ, 24ರಂದು ಗುಮ್ಮ ಬಂದ ಗುಮ್ಮ ನಾಟಕ ಪ್ರದರ್ಶನವಿದೆ. ಚಿತ್ರದುರ್ಗದ ನಾಗೇನಹಳ್ಳಿಯಲ್ಲಿ ಜ.21ರಂದು ಗುಮ್ಮ ಬಂದ ಗುಮ್ಮ ನಾಟಕ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಒಟ್ಟಾರೆ ಶಂಕರ್‌ನಾಗ್‌ರ ಆಶಯದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಂಗಭೂಮಿಯನ್ನು ಪಠ್ಯೇತರ ಚಟವಟಿಕೆಯಾಗಿ ಆಳವಡಿಸಲು ಶಿಕ್ಷಕರಿಗೆ ನಾಟಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಅರುಂಧತಿ ನಾಗ್ ಹೇಳಿದರು. ಗೋಷ್ಠಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್, ರಂಗಕರ್ಮಿ ಸುರೇಶ್, ನಿರ್ದೇಶಕ ಸುರೇಂದ್ರನಾಥ್ ಉಪಸ್ಥಿತರಿದ್ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News