×
Ad

ಖಾಸಗಿ ಸಹಭಾಗಿತ್ವದಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ: ಕೆ.ಜೆ.ಜಾರ್ಜ್

Update: 2016-01-19 23:50 IST

ಬೆಂಗಳೂರು, ಜ.19: ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಖಾಸಗಿ ಸಂಸ್ಥೆಗಳು ಮುಂದಾದರೆ ಅವರಿಗೆ ಒಪ್ಪಿಸಲು ಸರಕಾರ ಚಿಂತನೆ ನಡೆಸಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳು ಪದೇ ಪದೇ ಹಾಳಾಗುತ್ತಿರುವುದರಿಂದ ವಿಪರೀತ ದೂರುಗಳು ಬರುತ್ತಿವೆ. ಆದುದರಿಂದ, ಖಾಸಗಿ ಸಂಸ್ಥೆಗಳು ರಸ್ತೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಮುಂದಾದರೆ ಸರಕಾರ ಅವಕಾಶ ಕೊಡಲು ಚಿಂತನೆ ನಡೆಸಲಿದೆ ಎಂದರು.

ಖಾಸಗಿ ಸಂಸ್ಥೆಯವರು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವ ರಸ್ತೆಗಳಿಗೆ ಬೇರೆ ನಗರಗಳಲ್ಲಿ ಸರ್ ಚಾರ್ಜ್ ವಿಧಿಸಲಾಗುತ್ತದೆ. ಆದರೆ, ನಮ್ಮಲ್ಲಿ ಈ ವ್ಯವಸ್ಥೆ ಜಾರಿಗೆ ತರುವುದು ಕಷ್ಟಕರವಾಗಬಹುದು. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕವಷ್ಟೇ ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಜಾರ್ಜ್ ಹೇಳಿದರು.

 ಬಿಡಿಎಯಿಂದ ಕೆರೆ ಒತ್ತುವರಿಯಾಗಿಲ್ಲ: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ)ವು ಕೆರೆಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಲಕ್ಷ್ಮಣರಾವ್ ವರದಿಯಲ್ಲಿ ಯಾವ ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ ಎಂದು ಉಲ್ಲೇಖಿಸಿದ್ದಾರೊ ಅಂತಹ ಕೆರೆಗಳಲ್ಲಿ ಮಾತ್ರ ಬಿಡಿಎ ಬಡಾವಣೆಯನ್ನು ನಿರ್ಮಿಸಿದೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡಿಎ ಆಯುಕ್ತರು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಕಾನೂನು ಪ್ರಕಾರ ಈ ಅಂಶವನ್ನು ಕಂದಾಯ ಇಲಾಖೆ ಗುರುತಿಸಬೇಕಿತ್ತು. ಆದರೆ, ಈಗಲೂ ಕಂದಾಯ ಇಲಾಖೆಯ ದಾಖಲೆಗಳು ಅಸ್ತಿತ್ವ ಕಳೆದುಕೊಂಡಿರುವ ಕೆರೆಗಳನ್ನು ‘ಜೀವಂತ ಕೆರೆಗಳು’ ಎಂದೆ ಗುರುತಿಸಿವೆ. ಹೀಗಾಗಿ ನ್ಯಾಯಾಲಯವು ಅದನ್ನು ಕೆರೆ ಭೂಮಿ ಎನ್ನುತ್ತಿದೆ. ಬಿಡಿಎ ಯಾವುದೆ ಕೆರೆಯನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ಜಾರ್ಜ್ ಸ್ಪಷ್ಟೀಕರಣ ನೀಡಿದರು.

ಮಾರ್ಚ್ ವೇಳೆಗೆ ಮೆಟ್ರೋ: ಮೆಟ್ರೋ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಚಿಕ್ಕಪೇಟೆ ಸಮೀಪ ಬಲಿಷ್ಠವಾದ ಕಲ್ಲು ಸಿಕ್ಕಿದೆ. ಆದುದರಿಂದ, ಕಾಮಗಾರಿ ತಡವಾಗುತ್ತಿದೆ. ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿಯವರೆಗೆ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಮೆಟ್ರೊ ಮೊದಲ ಹಂತದ ಕಾಮ ಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಮೆಟ್ರೊ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚಿಕ್ಕಪೇಟೆ ಸಮೀಪ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಬಲಿಷ್ಠವಾದ ಕಲ್ಲು ಸಿಕ್ಕಿದೆ. ಹೀಗಾಗಿ ಕಾಮಗಾರಿ ತಡವಾಗಿದೆ. ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ನಡುವೆ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಫೆಬ್ರವರಿ ಅಥವಾ ಮಾರ್ಚ್‌ವೇಳೆಗೆ ಮೆಟ್ರೊ ಮೊದಲ ಹಂತ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗುತ್ತದೆ.

ಹೆಬ್ಬಾಳ: ಗೆಲ್ಲುವ ಅಭ್ಯರ್ಥಿಗೆ ಟಿಕೆಟ್

ಕಳೆದ ಬಾರಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗಿತ್ತು. ಹಾಗಂತ ಈ ಬಾರಿಯೂ ಕೊಡಲೇಬೇಕೆಂದೇನಿಲ್ಲ. ಗೆಲ್ಲುವ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ಕೊಡಲಾಗುತ್ತದೆ. ಒಂದೆರಡು ದಿನದಲ್ಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ.                                            ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News