ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಇಂಟಿಗ್ರೇಟೆಡ್ ಶಿಕ್ಷಣ ಸಹಕಾರಿ
ಬೆಂಗಳೂರು, ಜ. 19: ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯೇತರ ಶಿಕ್ಷಣವೂ ಆವಶ್ಯಕ. ಇದರ ಭಾಗವಾಗಿ ಇಂಟಿಗ್ರೇಟೆಡ್ ಶಿಕ್ಷಣ ಸಹಕಾರಿಯಾಗಲಿದೆ ಎಂದು ಪೊದಾರ್ ಇಂಟರನ್ಯಾಷನಲ್ ಶಾಲೆಯ ಪ್ರಾಂಶುಪಾಲ ಗಾಯಿತ್ರಿ ವಿಜೇಂದ್ರ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚಿಸುವ ವ್ಯಕ್ತಿತ್ವವನ್ನು ಜೀವನದ ಅನುಭವದೊಂದಿಗೆ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಪಠ್ಯೇತರ ಕಲಿಕೆಯೂ ಆವಶ್ಯಕವಾಗಿದೆ. ಆದ್ದರಿಂದ ಇಂಟಿಗ್ರೇಟೆಡ್ ಲರ್ನಿಂಗ್ ಅದಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪೊದಾರ್ ಇಂಟರ್‌ನ್ಯಾಷನಲ್ ಶಾಲೆ ಇಂಟಿಗ್ರೇಟೆಡ್ ಲರ್ನಿಂಗ್ ಮೂಲಕ ‘‘ನನ್ನ ದೇಹ’’ ಎಂಬ ವಿಷಯದಲ್ಲಿ ಇಂಗ್ಲಿಷ್, ಗಣಿತ, ವಿಜ್ಞಾನ, ಕಲೆ, ದೈಹಿಕ ಶಿಕ್ಷಣ, ಯೋಗ, ಜಾಗತಿಕ ಸಂಪರ್ಕಗಳ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗ್ರಹಿಕಾ ಶಕ್ತಿ, ಕಲಿಕಾ ಪ್ರೇಮ ಮತ್ತು ಒತ್ತಡರಹಿತ ಕಲಿಕಾ ಪ್ರವೃತ್ತಿ ಬೆಳೆಯುತ್ತದೆ ಮತ್ತು ಸೃಜನಶೀಲತೆಯನ್ನು, ಚಿಂತನಾ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ತಿಳಿಸಿದರು.