ಹೈದರಾಬಾದ್ ವಿವಿ ಕುಲಪತಿ ಬಂಧನಕ್ಕೆ ಆರ್‌ಪಿಐ ಆಗ್ರಹ
ಬೆಂಗಳೂರು, ಜ. 19: ಸಂಶೋಧನಾ ವಿದ್ಯಾರ್ಥಿ ರೋಹಿತ್ ಅವರ ಆತ್ಮಹತ್ಯೆಗೆ ಕಾರಣರಾದ ಹೈದರಾಬಾದ್ ವಿವಿ ಕುಲಪತಿಯನ್ನು ಕೂಡಲೇ ಬಂಧಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಉನ್ನತ ಶಿಕ್ಷಣ ವಿವಿಗಳಲ್ಲಿ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಜ.17ರಂದು ಹೋರಾಟನಿರತ ವಿದ್ಯಾರ್ಥಿ ವೇಮುಲ ರೋಹಿತ್ ಅವರನ್ನು ಎಬಿವಿಪಿಯ ಒತ್ತಡಕ್ಕೆ ಮಣಿದು ಕುಲಪತಿಯವರು ಹಾಸ್ಟೆಲ್‌ನಿಂದ ಹೊರಹಾಕಿದ್ದರು. ಇದೇ ಕಾರಣಕ್ಕೆ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆಲ್ಲ ಕುಲಪತಿಯವರೇ ನೇರ ಹೊಣೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಜ.26ರಿಂದ ಭಾರತ ಭೀಮ ರಥಯಾತ್ರೆ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ 125ನೆ ಜಯಂತಿ ಅಂಗವಾಗಿ ಜ.26ರಂದು ಕನ್ಯಾಕುಮಾರಿಯಲ್ಲಿ ಭಾರತ ಭೀಮ ರಥಯಾತ್ರೆಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಉದ್ಘಾಟಿಸಲಿದ್ದಾರೆ. ರಥಯಾತ್ರೆಯು ಜಾತಿ ತೋಡೋ, ಸಮಾಜ್ ಜೋಡೋ ಸಮತಾ ಅಭಿಯಾನ್ ಎಂಬ ಘೋಷವಾಕ್ಯದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಸಂಚಾರ ಮಾಡಲಿದೆ ಎಂದು ತಿಳಿಸಿದರು.
ಈ ರಥಯಾತ್ರೆಯು ಎ. 24ರಂದು ಅಂಬೇಡ್ಕರ್ ಹುಟ್ಟೂರಾದ ಮಧ್ಯಪ್ರದೇಶದ ಮಹುವಿನಲ್ಲಿ ಸಮಾರೋಪಗೊಳ್ಳಲಿದೆ. ಈ ಸಮಾರೋಪ ಸಮಾರಂಭಕ್ಕೆ ಪ್ರಧಾನ ಮಂತ್ರಿ ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.