ಸಿಬಿಐ ಅಧಿಕಾರಿ ವೇಷದಲ್ಲಿ ಎಂಜಿನಿಯರ್‌ಗೆ ಬೆದರಿಕೆ: ಬಂಧನ
ಬೆಂಗಳೂರು, ಜ.19: ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯ ಹೆಸರಿನಲ್ಲಿ ಎಂಜಿನಿಯರ್‌ಗಳಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಶೋಕ್ ನಗರಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಅನೇಪಾಳ್ಯದ ಸೈಯದ್ ಮುಹಮ್ಮದ್(21) ಬಂಧಿತ ಆರೋಪಿ. ಈತ ವಿವಿಧ ಇಲಾಖೆಗಳ ಎಂಜಿನಿಯರ್‌ಗಳ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ, ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದನೆಂದು ಅಶೋಕ್‌ನಗರ ಠಾಣೆಯ ಪೊಲೀಸರು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಪಿಡ್ಲುಡಿ ಎಂಜಿನಿಯರ್ ಒಬ್ಬರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಸಾವಿರಾರು ಕೋಟಿ ರೂ. ವೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ವೀಡಿಯೊವನ್ನು ನೋಡಿದ ಆರೋಪಿ ಸೈಯದ್ ಮುಹಮ್ಮದ್ ಎಂಜಿನಿಯರ್‌ಗಳಿಗೆ ದೂರವಾಣಿ ಕರೆ ಮಾಡುತ್ತಿದ್ದ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಶೋಕ್‌ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ್ ಹಡಗಲಿ ತಿಳಿಸಿದ್ದಾರೆ.