×
Ad

ಸಮಾಜವಾದಿ ಪಕ್ಷದ ನೂತನ ಕಚೇರಿ ಉದ್ಘಾಟನೆ; ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ: ಮ್ಯಾಥ್ಯೂಸ್

Update: 2016-01-21 23:53 IST

 ಬೆಂಗಳೂರು, ಜ. 21: ಮುಂಬರಲಿರುವ ಮೂರು ವಿಧಾನಸಭಾ ಉಪ ಚುನಾವಣೆ ಮತ್ತು ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಸಲಾಗುವುದೆಂದು ಪಕ್ಷದ ರಾಜ್ಯಾಧ್ಯಕ್ಷ ರೋಬಿನ್ ಮ್ಯಾಥ್ಯೂಸ್ ತಿಳಿಸಿದ್ದಾರೆ.

 ನಗರದ ಗಾಂಧಿನಗರದಲ್ಲಿ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಭ್ರಷ್ಟಾಚಾರವನ್ನು ಬಂಡವಾಳ ಮಾಡಿಕೊಂಡವು. ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕಾಗಿ, ದೇಶದ ಜನರಿಗೆ ಪರ್ಯಾಯ ಸರಕಾರವನ್ನು ನೀಡಲಿಕ್ಕಾಗಿ ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ತಿಳಿಸಿದರು.

   ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಸಮಾಜವಾದದ ಮುಖ್ಯ ಗುರಿಯಾದ ಸಮಾನತೆಯನ್ನು ತರುವುದೇ ಸಮಾಜವಾದಿ ಪಕ್ಷದ ಗುರಿ. ಈ ನಿಟ್ಟಿನಲ್ಲಿ ಸಮಾಜವಾದಿಗಳಾದವರೆಲ್ಲರೂ ಲೋಹಿಯಾ ಮತ್ತು ಅಂಬೇಡ್ಕರ್‌ರವರ ವಿಚಾರಗಳನ್ನು ಪಾಲಿಸಬೇಕಾಗಿದೆಯೆಂದು ತಿಳಿಸಿದರು.

ರಾಜ್ಯ ಮತ್ತು ದೇಶದಲ್ಲಿ ಬರಗಾಲ ಎದುರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಪರಿಹಾರ ನೀಡಬೇಕಾದ ಸರಕಾರಗಳು ತಮ್ಮ ಕರ್ತವ್ಯವನ್ನು ಮರೆತಿವೆ. ಬದಲಾಗಿ ಸ್ಮಾರ್ಟ್ ಇಂಡಿಯಾ, ಡಿಜಿಟಲ್ ಇಂಡಿಯಾ ತುಂಬಲು ಹೊರಟಿದ್ದಾರೆ. ಇದರ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕು ಎಂದ ಅವರು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರಕಾರ 5 ಲಕ್ಷ ರೂ. ಪರಿಹಾರವನ್ನು ಆದಷ್ಟು ಬೇಗ ವಿತರಿಸಬೇಕಾಗಿದೆ ಎಂದು ತಿಳಿಸಿದರು.

 ನಂತರ ಮಾತನಾಡಿದ ಮಹಿಳಾ ಘಟಕದ ಮುಖಂಡರಾದ ಡಾ.ಪ್ರಫುಲ್ಲಾ ಶ್ರೀನಿವಾಸ್, ದೇಶದಲ್ಲಿಂದು ಧರ್ಮದ ಹೆಸರಲ್ಲಿ, ಮೂಢನಂಬಿಕೆಗಳಿಗಾಗಿ ಅಮಾಯಕ ಹೆಣ್ಣು ಮಕ್ಕಳನ್ನು ಬಲಿಕೊಡಲಾಗುತ್ತಿದೆ. ಇದರ ವಿರುದ್ಧ ಮಹಿಳೆಯರು ಸಂಘಟಿತರಾಗಬೇಕೆಂದು ತಿಳಿಸಿದರು.

ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ನೇರ ಹೊಣೆಗಾರರಾಗಿರುವ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾನಿಯನ್ನು ಕೇಂದ್ರ ಸಚಿವ ಸಂಪುಟದಿಂದ ಕೈ ಬಿಡಬೇಕು.

ರೋಬಿನ್ ಮ್ಯಾಥ್ಯೂಸ್, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News