ಬೆಂಗಳೂರು; ಪ್ರಾಟೆಸ್ಟೆಂಟ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯೆ ಕಲ್ಪಿಸುವಂತೆ ಆಗ್ರಹ,
ಬೆಂಗಳೂರು.ಜ.22: ಸರ್ಕಾರ ಮತ್ತು ಪಕ್ಷದ ಪದಾಧಿಕಾರಿಗಳ ನೇಮಕಾತಿಗಳಲ್ಲಿ ಪ್ರಾಟೆಸ್ಟೆಂಟ್ಸ್ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದ್ದು, ರೋಮನ್ ಕ್ಯಾಥೋಲಿಕ್ ಕ್ರೈಸ್ತರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಆಲ್ ಇಂಡಿಯಾ ಕ್ರಿಶ್ಚಿಯನ್ ಡೆಮೋಕ್ರೇಟಿಕ್ ಫ್ರೆಂಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ದೂರು ನೀಡಿದೆ.
ಶೇ 40 ರಷ್ಟಿರುವ ರೋಮನ್ ಕ್ಯಾತೋಲಿಕ್ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಸರ್ಕಾರದಲ್ಲಿ ಸಚಿವ ಸ್ಥಾನ, ವಿಧಾನಮಂಡಲದ ನೇಮಕಾತಿಯಲ್ಲಿ ಶೇ 95 ರಷ್ಟು ಕ್ಯಾಥೋಲಿಕ್ ಸಮುದಾಯಕ್ಕೆ ದೊರೆಯುತ್ತಿದೆ. ಪಕ್ಷದಲ್ಲೂ ಪ್ರಾಟೆಸ್ಟೆಂಟ್ಸ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯೆ ದೊರೆಯುತ್ತಿಲ್ಲ ಎಂದು ಆಪಾದಿಸಿದೆ.
ಆಲ್ ಇಂಡಿಯಾ ಡೆಮೋಕ್ರೇಟಿಕ್ ಫ್ರೆಂಟ್ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ಮಾಜಿ ಅಧ್ಯಕ್ಷ ಕೆ. ಸ್ಯಾಮುಯಲ್ ಚಾಕೋ ನೇತೃತ್ವದ ನಿಯೋಗ ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಅವರಲ್ಲದೇ ಗೃಹ ಸಚಿವ ಡಾ: ಜಿ. ಪರಮೇಶ್ವರ್ ಹಾಗೂ ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕಾಂಗ್ರೆಸ್ ಪಕ್ಷದ ಜತೆ ಅನಾದಿಕಾಲದಿಂದಲೂ ಗುರುತಿಸಿಕೊಂಡಿರುವ ಪ್ರಾಟೆಸ್ಟೆಂಟ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯೆ ಕಲ್ಪಿಸುವಂತೆ ಕೋರಿತು.
ಪಕ್ಷ ಮತ್ತು ಸರ್ಕಾರದಲ್ಲಿ ಪ್ರಾತಿನಿಧ್ಯವಿಲ್ಲದೇ ಇರುವ ಹಿನ್ನೆಲೆಯಲ್ಲಿ ಪ್ರಾಟೆಸ್ಟೆಂಟ್ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿಯೂ ತೀರ ಹಿಂದುಳಿದೆ. ಶಾಸನಸಭೆಗಳಿಗೆ ನೇಮಕಾತಿ ಮಾಡುವಾಗ ಸಂದರ್ಭದಲ್ಲೂ ಪ್ರಾಟೆಸ್ಟೆಂಟ್ ವರ್ಗಕ್ಕೆ ಮಾನ್ಯತೆ ದೊರೆಯುತ್ತಿಲ್ಲ.
ಈ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕಿದ್ದು, ಕ್ರೈಸ್ತ ಸಮುದಾಯದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಾಟೆಸ್ಟೆಂಟ್ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಿಕೊಡಬೇಕು. ಈ ವರ್ಗದಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಕೋರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಕ್ರೈಸ್ತ್ರರ ಅಭಿವೃದ್ಧಿ ಮಂಡಳಿ ರಚಿಸಿ, ಸಮುದಾಯದ ಶ್ರೇಯೋಭಿವೃದ್ಧಿಗಾಗಿ 100 ಕೋಟಿ ರೂ ಮೀಸಲಿಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸರ್ಕಾರ ಈ ಮಂಡಳಿಯನ್ನು ಕ್ರೈಸ್ತ್ರರ ಅಭಿವೃದ್ಧಿ ನಿಗಮ ಮಾಡಿ 300 ಕೋಟಿ ರೂ ಆರ್ಥಿಕ ನೆರವು ನೀಡಬೇಕು. ಸೂಕ್ತ ವ್ಯಕ್ತಿಯನ್ನು ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕಮಾಡಿ ಕ್ರೈಸ್ತ್ರರ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ನಿಯೋಗ ಮನವಿ ಮಾಡಿದೆ.