ಬಿಬಿಎಂಪಿ ಅಧಿಕಾರಿಗಳು, ನೌಕರರಿಗೆ ಎರಡು ತಿಂಗಳಲ್ಲಿ ಸೇವಾ ಸೌಲಭ್ಯ
ಬೆಂಗಳೂರು, ಜ. 23: ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಬಹುದಿನಗಳ ಬೇಡಿಕೆಗಳಾದ ಮುಂಭಡ್ತಿ, ಖಾಲಿ ಹುದ್ದೆ ಭರ್ತಿ ಮತ್ತು ಆರೋಗ್ಯ ವಿಮೆ, ಸೇವಾ ನಿಯಮ ಮುಂತಾದ ಸೇವಾ ಸೌಲಭ್ಯಗಳನ್ನು ಇನ್ನು ಎರಡು ತಿಂಗಳಲ್ಲಿ ಜಾರಿಗೆ ತರುವುದಾಗಿ ಪಾಲಿಕೆ ಆಯುಕ್ತ ಜಿ.ಕುಮಾರ್ ನಾಯಕ್ ಭರವಸೆ ನೀಡಿದ್ದಾರೆ. ಶನಿವಾರ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲಿಕೆಯ ಅಧಿಕಾರಿ ಮತ್ತು ನೌಕರರ ಸಂಘದ ಪದಾಧಿಕಾರಿಗಳಿಗೆ ಅವರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಬಳಿಕ ಭರವಸೆ ನೀಡಿದ್ದಾರೆ.
ಸಂಘದ ಅಧ್ಯಕ್ಷರಾದ ಜಿ.ಎನ್.ಆನಂದ ಮಾತನಾಡಿ ಸೇವಾ ನಿಯಮ ಮತ್ತು ಸೇವಾ ಜೇಷ್ಠತೆಯನ್ನು ಅಂತಿಮಗೊಳಿಸಿ, ಎಲ್ಲ ವೃಂದದ ನೌಕರರಿಗೆ ಮುಂಭಡ್ತಿ ನೀಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಆಯುಕ್ತರು ನೇರ ನೇಮಕಾತಿ ಮೂಲಕ ಭರ್ತಿ ಮಾಡಬಹುದಾದ ಹುದ್ದೆಗಳನ್ನು ತುಂಬಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿ ಸುಬ್ರಮಣ್ಯ ಮಾತನಾಡಿ ಯಾವುದೇ ಕಾರಣವಿಲ್ಲದೆ ಚುನಾಯಿತ ಪ್ರತಿನಿಧಿಗಳು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೋಟಿಸ್ ಜಾರಿ ಮಾಡದೆ ಮತ್ತು ವಿಚಾರಣೆ ಮಾಡದೆ ಏಕಾಏಕಿ ಅಮಾನತು ಮಾಡುವುದು ಕಾನೂನು ಬಾಹಿರವಾದದ್ದು ಎಂದು ಖಂಡಿಸಿದರು. ಅಮಾನತುಗೊಂಡಿರುವ ಸಹಕಂದಾಯ ಅಧಿಕಾರಿ ವರಲಕ್ಷ್ಮೀ ಮತ್ತು ಕಂದಾಯ ಪರೀಕ್ಷಕರಾದ ನರಸಿಂಹಲು ಅವರನ್ನು ಕೂಡಲೇ ಸೇವೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.