26ರಂದು ಬಹುಜನ್ ಸೋಶಿಯಲ್ ಫೌಂಡೇಶನ್ ಉದ್ಘಾಟನೆ
ಬೆಂಗಳೂರು, ಜ. 23: ಪುರೋಹಿತಶಾಹಿ ವರ್ಗದ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಲು ಮತ್ತು ಜಾತಿರಹಿತ ಸಮಾಜವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಬಹುಜನ್ ಸೋಶಿಯಲ್ ಫೌಂಡೇಶನ್(ಬಿಎಸ್‌ಎಫ್) ಸಂಘವನ್ನು ಕಟ್ಟಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಗೋಪಾಲ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಮೀಸಲಾತಿಯನ್ನು ತೆಗೆದು, ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಕಟ್ಟಲು ಮುಂದಾಗಿರುವ ಆರೆಸ್ಸೆಸ್ ವಿರುದ್ಧ ಹೋರಾಟ ಮಾಡಲು ರಾಷ್ಟ್ರ ಮಟ್ಟದಲ್ಲಿ ಒಂದು ಪ್ರಬಲವಾದ ಸಂಘಟನೆ ರೂಪುಗೊಂಡಿದೆ, ಈ ಸಂಘಟನೆಯನ್ನು ಜ. 26ರಂದು ನಗರದ ಜ್ಞಾನಭಾರತಿ ಸಭಾಂಗಣದಲ್ಲಿ ನಿವೃತ್ತ ಮುಖ್ಯನ್ಯಾಯಮೂರ್ತಿ ಎಚ್.ಜಿ. ಬಾಲಕೃಷ್ಣ ಉದ್ಘಾಟಿಸಲಿದ್ದಾರೆ ಎಂದರು.
ದೇಶದಲ್ಲಿನ ಜಾತೀಯತೆಯ ಆಧಾರದಲ್ಲಿನ ತಾರತಮ್ಯ ಮತ್ತು ಮುಸ್ಲಿಂ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ತಲೆದೋರಿದೆ. ಪುನಃ ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ವರ್ಗ ಮತ್ತು ಜಾತಿರಹಿತ ಸಮಾಜವನ್ನು ರೂಪಿಸಬೇಕಿದೆ ಎಂದ ಅವರು, ನಮ್ಮ ಸಂಘಟನೆ ಯಾವುದೇ ಜಾತಿ, ಧರ್ಮ ಮತ್ತು ಪಕ್ಷದ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದಿಲ್ಲ. ಬಹುಜನರ ರಕ್ಷಣೆಯೇ ನಮ್ಮ ಮೊದಲ ಧ್ಯೇಯವಾಗಿದೆ ಎಂದು ಅವರು ತಿಳಿಸಿದರು.
ಪೆರಿಯಾರ್ ಅನುಯಾಯಿ ನ್ಯಾ. ಚೆಲ್ಲಯ್ಯ, ವಿಚಾರವಾದಿಗಳು ಮತ್ತು ವಿವಿಧ ರಾಜ್ಯಗಳಿಂದ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.