‘ಸ್ವಚ್ಛಗೃಹ’ ಆಂದೋಲನ ಆರಂಭ
ಬೆಂಗಳೂರು, ಜ.25: ಹಸಿ ತ್ಯಾಜ್ಯ ನಿರ್ವಹಣೆ ಕುರಿತು ಮನೆಮನೆಗೂ ಜಾಗೃತಿ ಮೂಡಿಸಲು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ರೌಂಡ್ ಟೇಬಲ್ ‘ಸ್ವಚ್ಛಗೃಹ’ ಆಂದೋಲನವನ್ನು ಇಂದಿನಿಂದ ಪ್ರಾರಂಭಿಸಿದೆ ಎಂದು ಸಂಸ್ಥೆಯ ಸದಸ್ಯೆ ಸಂಧ್ಯಾ ನಾರಾಯಣ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯ ಒಂದು ವಾರದ ಹಸಿಕಸವನ್ನು ಹೊರಗೆ ವಿಲೇವಾರಿ ಮಾಡದೆ ಮನೆಯಲ್ಲಿಯೇ ಉಳಿಸಿಕೊಂಡು ಮಾರುಕಟ್ಟೆಯಲ್ಲಿ ಸಿಗುವ ಕಾಂಪೋಸ್ಟಿಂಗ್ ಕಿಟ್ಗಳ ಸಹಾಯದಿಂದ ಅದನ್ನು ಗೊಬ್ಬರ ಮಾಡುವ ಮೂಲಕ ಮನೆಯಲ್ಲೊಂದು ಹಸಿರು ತಾಣವನ್ನು ಸೃಷ್ಟಿಸಬಹುದು ಎಂದು ತಿಳಿಸಿದರು.
‘ಗೊಬ್ಬರ ಮಾಡಿ, ತರಕಾರಿ ಬೆಳೆಸಿ, ಆರೋಗ್ಯಕರ ಅಡುಗೆ ಮಾಡಿ’ಎಂಬ ಮೂರು ಅಂಶಗಳೊಂದಿಗೆ ಆಂದೋಲನ ಪ್ರಾರಂಭಿಸಿದ್ದು ಒಂದು ವಾರ ಕಾಲ ಆಂದೋಲನ ನಡೆಯಲಿದೆ. ಜ.25ರಿಂದ ನಗರದ ಪ್ರತಿ ಮನೆಗಳು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳಿಗೆ ತೆರಳಿ ಹಸಿತ್ಯಾಜ್ಯದ ಬಳಕೆ ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಡಿಡಿಡಿ.ಡಿಚ್ಚಜ್ಟ.ಜ್ಞಿ ನಲ್ಲಿ ಎಲ್ಲ ವಿಧಾನಗಳ ಮಾಹಿತಿ ಲಭ್ಯವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಾಣಿ ಮೂರ್ತಿ ಮಾತನಾಡಿ, ನಾವು ಮನೆಯಿಂದ ಹೊರಹಾಕುವ ತ್ಯಾಜ್ಯದಲ್ಲಿ ಶೇ.60ರಷ್ಟು ಸಜೀವ ಸಾವಯವ ತ್ಯಾಜ್ಯವಾಗಿರುತ್ತದೆ, ನಾಲ್ಕು ಜನರ ಒಂದು ಕುಟುಂಬ ಪ್ರತಿ ದಿನ ಅರ್ಧ ಕೇಜಿಯಷ್ಟು ಸಾವಯವ ಕಸವನ್ನು ಹೊರಗೆಸೆಯಲಾಗುತ್ತದೆ. ಅದರಿಂದ ಅಪಾಯಕಾರಿ ಅನಿಲಗಳು ಗಾಳಿಯಲ್ಲಿ ಸೇರಿಕೊಳ್ಳುತ್ತದೆ, ಅದನ್ನು ತಡೆಯಬೇಕಿದೆ ಎಂದು ಹೇಳಿದರು.