×
Ad

ಕಸ ವಿಲೇವಾರಿ ಗ್ರಾಮಸ್ಥರಿಂದ ಪಂಚಾಯತ್ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Update: 2016-01-25 23:51 IST

ಬೆಂಗಳೂರು, ಜ. 25: ನಗರದ ಕಸವನ್ನು ತಂದು ಸುರಿಯುವುದನ್ನು ಪ್ರತಿಭಟಿಸಿರುವ ಕನ್ನಹಳ್ಳಿ, ಸೀಗೆಹಳ್ಳಿ ಸೇರಿದಂತೆ 4 ಹೋಬಳಿಗಳ 8 ತಾಲೂಕು ಪಂಚಾಯತ್ ವ್ಯಾಪ್ತಿಯ ಸಾವಿರಾರು ಗ್ರಾಮಸ್ಥರು ಕಸ ವಿಲೇವಾರಿ ಘಟಕಗಳನ್ನು ತಕ್ಷಣವೇ ಸ್ಥಗಿತಗೊಳಿಸದಿದ್ದಲ್ಲಿ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೀಗೇಹಳ್ಳಿ ಗೇಟ್ ಬಳಿ ಇಂದು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸಮಾವೇಶಗೊಂಡು ಸೀಗೇಹಳ್ಳಿ ಮತ್ತು ಕನ್ನಹಳ್ಳಿ ಬಳಿ ನಿರ್ಮಾಣಗೊಂಡಿರುವ ಕಸ ವಿಲೇವಾರಿ ಘಟಕಗಳನ್ನು ಮುಚ್ಚುವಂತೆ ಆಗ್ರಹಪಡಿಸಿದರು.

ಕಸ ವಿಲೇವಾರಿ ಘಟಕಗಳನ್ನು ಮುಚ್ಚುವಂತೆ ಸರಕಾರ ಮತ್ತು ಬಿಬಿಎಂಪಿಗೆ ಅಂತಿಮ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪ್ರತಿಭಟನೆ ಅನಿವಾರ್ಯ ಹಾಗೂ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿನಿತ್ಯ ರಾತೋರಾತ್ರಿ ನೂರಕ್ಕೂ ಹೆಚ್ಚು ಲಾರಿಗಳಲ್ಲಿ ಕಸ ತಂದು ಸುರಿಯಲಾಗುತ್ತಿದೆ. ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಗ್ರಾಮಸ್ಥರು ವಾಸನೆಯ ನಡುವೆಯೇ ಕಾಲ ಕಳೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್‌ಗಳ ಕಸವನ್ನು ತಂದು ಸುರಿಯಲಾಗುತ್ತಿದೆ. ಹಸಿ ಮತ್ತು ಒಣಕಸ ಎಂದು ವಿಂಗಡಿಸುತ್ತಿಲ್ಲ. ಕಸ ಸಂಸ್ಕರಣೆ ಮಾಡದೇ ಇರುವುದರಿಂದ ಸಹಜವಾಗಿಯೇ ಕಸದ ರಾಶಿ ಬೆಟ್ಟದಂತಾಗಿದೆ ಎಂದು ಅವರು ದೂರಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಕಸ ವಿಲೇವಾರಿ ನಿಲ್ಲಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ. ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ನಂತರ ಘಟಕಗಳಿಗೆ ಬೀಗ ಜಡಿಯುವಂತೆ ಆಗ್ರಹಪಡಿಸಿದರು.

 ಮನೆ ಮುಂದೆ ಕಸ; ಎಚ್ಚರಿಕೆ

ಹಲವಾರು ಬಾರಿ ಬಿಬಿಎಂಪಿ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿದ್ದ ವೇಳೆ ಘಟಕ ಮುಚ್ಚುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಯಾವುದೇ ಭರವಸೆ ಈವರೆಗೆ ಈಡೇರಿಲ್ಲ. ಮುಚ್ಚುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಮೇಯರ್, ಉಪಮೇಯರ್ ಹಾಗೂ ಆಯುಕ್ತರ ಮನೆಗಳ ಮುಂದೆಯೇ ಕಸ ತಂದು ಸುರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News