ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ: ‘ಯುವಕರು ಜಾಗೃತರಾದರೆ ದೇಶ ಬಲಿಷ್ಠ’
ಬೆಂಗಳೂರು, ಜ. 25: ದೇಶದಲ್ಲಿ ಶೇ. 65ರಷ್ಟು ಮಂದಿ ಯುವಕರಾಗಿದ್ದಾರೆ. ಯುವಕರು ಜಾಗೃತರಾದರೆ, ದೇಶ ಬಲಿಷ್ಠಗೊಳ್ಳುತ್ತದೆ. ದೇಶದ ಅಭಿವೃದ್ಧಿ ಅವರ ಕೈಯಲ್ಲಿದೆ. ಆದ್ದರಿಂದ ತಪ್ಪದೆ ಮತ ಚಲಾಯಿಸಬೇಕು ಹಾಗೂ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ರಾಜ್ಯ ಚುನಾವಣಾ ಆಯೋಗ ನಗರದ ಪುರಭವನದಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಬೇಕಾದರೆ ದೇಶದ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತ ಮತದಾರನಾಗಬೇಕು. ಮತದಾನ ಮಾಡುವುದು ತನ್ನ ಹಕ್ಕು ಎಂದು ಭಾವಿಸಬೇಕು. ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿದೆ. ಆದ್ದರಿಂದ ಮತದಾನದ ದಿನಾಂಕದಂದು ಎಲ್ಲಿದ್ದರೂ ತಮ್ಮ ಕ್ಷೇತ್ರಕ್ಕೆ ತೆರಳಿ ಮತ ಚಲಾಯಿಸಬೇಕು ಹಾಗೂ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಶೇ. 100 ರಷ್ಟು ಮತದಾನವಾದರೆ, ದೇಶ ಬಲಿಷ್ಠಗೊಳ್ಳುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಕೇವಲ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಸಾಲದು. ಮತದಾನದ ಸಂದರ್ಭದಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆರಿಸಬೇಕು. ಮತದಾರ ಎಷ್ಟು ಜಾಗೃತನಾಗಿರುತ್ತಾನೊ ಅಷ್ಟೇ ಒಳ್ಳೆಯ ಪ್ರತಿನಿಧಿ ಚುನಾ ಯಿತನಾಗುತ್ತಾನೆ. ಚುನಾವಣಾ ಆಯೋಗ ಸ್ಥಾಪನೆಯಾಗಿ 66 ವರ್ಷ ಕಳೆದಿದ್ದರೂ ಇನ್ನೂ ಶೇ. 100 ರಷ್ಟು ಮತದಾನವಾಗುತ್ತಿಲ್ಲ. ಶೇ. 70, 75 ರಷ್ಟು ಮತದಾನವಾಗುತ್ತಿದೆ. ಶೇ. 25 ರಷ್ಟು ಜನ ಇನ್ನೂ ಮತದಾನ ಮಾಡುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗದ ಆಯುಕ್ತ ನಸ್ಸೀಂ ಜೈದಿ ಅವರ ಸಂದೇಶವನ್ನು ವೀಡಿಯೊ ಮೂಲಕ ಕೇಳಿಸಲಾಯಿತು. ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಉಪಸ್ಥಿತರಿದ್ದರು.