ಟಿಪ್ಪು ಜಯಂತಿ ದಿನ ಕೋಮುಗಲಭೆ: ನಾಲ್ವರಿಗೆ ಶರತ್ತು ಬದ್ಧ ಜಾಮೀನು
ಬೆಂಗಳೂರು, ಜ.25: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಕೋಮುಗಲಭೆ ನಡೆದ ನಂತರ ನೆಲ್ಯಾಡಿಯಲ್ಲಿ ಮುಹಮ್ಮದ್ ಹ್ಯಾರಿಸ್ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿಗಳಾದ ಬಿ.ಗಣೇಶ್, ಕೆ.ಎನ್.ನಿತಿನ್, ಕೆ.ಎನ್.ಜಯಪ್ರಸಾದ್ ಮತ್ತು ಎನ್.ಪ್ರಸಾದ್ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ಏಕಸದಸ್ಯ ಪೀಠವು ತಲಾ 75 ಸಾವಿರ ವೈಯಕ್ತಿಕ ಬಾಂಡ್ ನೀಡಬೇಕು ಹಾಗೂ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ವಾರಕ್ಕೊಮ್ಮೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ತನಿಖಾಧಿಕಾರಿಗಳ ತನಿಖೆಗೆ ಸಹಕರಿಸಬೇಕು ಎಂದು ಶರತ್ತು ವಿಧಿಸಿ ನಾಲ್ವರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಅರ್ಜಿದಾರರ ಪರವಾಗಿ ವಕೀಲ ಅರುಣ್ ಶ್ಯಾಮ್ ವಾದಿಸಿದ್ದರು.
ಕೊಡುಗು ಜಿಲ್ಲೆಯ ಮಡಿಕೇರಿಯಲ್ಲಿ ಟಿಪ್ಪುಜಯಂತಿ ಆಚರಣೆ ವೇಳೆ ಕೋಮುಗಲಭೆ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ತದನಂತರ ಅರ್ಜಿದಾರರ ಆರೋಪಿಗಳು ನೆಲ್ಯಾಡಿಯಲ್ಲಿ ಮುಹಮ್ಮದ್ ಹ್ಯಾರೀಸ್ ಎಂಬ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಮುಹಮ್ಮದ್ ಅಶ್ರಫ್ ಎಂಬಾತ 2015ರ ನ.13ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಸಂಬಂಧ ಪೊಲೀಸರು ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದಕ್ಕೆ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.