ಬೆಂಗಳೂರು : ಟಿಕೆಟ್‌ಗಾಗಿ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಹಾಗೂ ರಿಜ್ವಾನ್ ಪರಸ್ಪರ ಕಿತ್ತಾಟ

Update: 2016-01-25 18:26 GMT

ಬೆಂಗಳೂರು.ಜ.25: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಹಾಗೂ ರಿಜ್ವಾನ್ ಆರ್ಷದ್ ಪರಸ್ಪರ ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಗೃಹ ಸಚಿವ ಡಾ: ಜಿ. ಪರಮೇಶ್ವರ್, ಟಿಕೆಟ್ ವಿಷಯದಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಟಿಕೆಟ್ ಅನ್ನು ಯಾರಿಗೆ ಕೊಡಬೇಕು ಎಂಬ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ. ಹೀಗಾಗಿ ಬೇರೆ ಯಾರೂ ಮಾತನಾಡಕೂಡದು ಎಂದರು.
ಹಿರಿಯ ನಾಯಕರಾದ ಜಾಫರ್ ಷರೀಫ್ ಹಾಗೂ ರಿಜ್ವಾನ್ ಆರ್ಷದ್ ಅವರು ಹೆಬ್ಬಾಳ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಕಚ್ಚಾಡುತ್ತಿರುವುದು ಗಮನಕ್ಕೆ ಬಂದಿದೆ.ಆದರೆ ಇವೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಾದ ವಿಷಯ ಎಂದು ಹೇಳಿದರು.
ಜಾಫರ್ ಷರೀಫ್ ಹಾಗೂ ರಿಜ್ವಾನ್ ಆರ್ಷದ್ ಮಾತನಾಡುತ್ತಿರುವುದು ಸರಿಯಲ್ಲ.ಈ ಕುರಿತು ಉಭಯತ್ರರ ಜತೆ ಮಾತುಕತೆ ನಡೆಸುತ್ತೇನೆ.ಏನೇ ಆದರೂ ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದು ಕಾಂಗ್ರೆಸ್ ಇಚ್ಚೆ ಎಂದರು.
ಹೆಬ್ಬಾಳ ಚುನಾವಣೆ ಬಂದಾಗ ಜಾಫರ್ ಷರೀಫ್ ಪ್ರತ್ಯಕ್ಷರಾಗುತ್ತಾರೆ.ಆನಂತರ ಅವರು ಎಲ್ಲಿರುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ ಎಂದು ರಿಜ್ವಾನ್ ಆರ್ಷದ್ ಹೇಳಿದ್ದರೆ,ರಿಜ್ವಾನ್ ಆರ್ಷದ್ ಇನ್ನೂ ಬಚ್ಚಾ.ಅವನ ವಿರುದ್ಧ ಹೇಳಿಕೆ ನೀಡಿ ಅವನನ್ನು ದೊಡ್ಡವನನ್ನಾಗಿ ಮಾಡುವುದಿಲ್ಲ ಎಂದು ಗುಡುಗಿದ್ದರು.
ಇದೇ ಕಾಲಕ್ಕೆ ತಮ್ಮ ಮೊಮ್ಮೊಗ ರೆಹಮಾನ್ ಷರೀಫ್‌ಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದ್ದ ಜಾಫರ್ ಷರೀಫ್,ಯಾವುದೇ ಕಾರಣ್ಕೂ ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಬಾರದು.ಬದಲಿಗೆ ಪಕ್ಷ ನಿಷ್ಟರಿಗೆ ಟಿಕೇಟ್ ಕೊಡಬೇಕು ಎಂದಿದ್ದರು.
ಹೀಗೆ ಉಭಯ ನಾಯಕರ ಕಚ್ಚಾಟದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಪರಮೇಶ್ವರ್,ಇನ್ನು ಮುಂದೆ ಉಭಯ ನಾಯಕರು ಯಾವ ಕಾರಣಕ್ಕೂ ಮಾತನಾಡಕೂಡದು.ಒಂದು ವೇಳೆ ಅವರು ಬಾಯಿ ಬಿಚ್ಚಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಮಧ್ಯೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್,ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಯಾರಿಗೆ ಟಿಕೇಟ್ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ.ಅಲ್ಲಿಯವರೆಗೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದರು.
ಹೆಬ್ಬಾಳ ಕ್ಷೇತ್ರದಿಂದ ಮುಸ್ಲಿಮರಿಗೆ ಟಿಕೇಟ್ ನೀಡಬೇಕು,ಅವರಿಗೆ ನೀಡಬೇಕು,ಇವರಿಗೆ ನೀಡಬೇಕು ಎಂದೆಲ್ಲ ಮಾತನಾಡುವುದು ಸರಿಯಲ್ಲ.ಗೆಲ್ಲುವ ಅಭ್ಯರ್ಥಿ ಯಾರೆಂಬುದನ್ನು ಗಮನಿಸಿ ಪಕ್ಷ ಅಂತವರಿಗೆ ಟಿಕೇಟ್ ನೀಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News