ಬೆಂಗಳೂರು.ಜ.28: ದೇಶದ ನಗರ ಸ್ವರೂಪಕ್ಕೆ ಮಾದರಿಯಾಗುವ 20 ಸರ್ವಸಂಪನ್ನ ನಗರಿ - ಸ್ಮಾರ್ಟ್‌ಸಿಟಿ ಆಯ್ಕೆ
ಬೆಂಗಳೂರು.ಜ.28: ದೇಶದ ನಗರ ಸ್ವರೂಪಕ್ಕೆ ಮಾದರಿಯಾಗುವ 20 ಸರ್ವಸಂಪನ್ನ ನಗರಿ - ಸ್ಮಾರ್ಟ್‌ಸಿಟಿ ಆಯ್ಕೆಯನ್ನು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ಪ್ರಕಟಿಸಿದ್ದಾರೆ. ಭೌಗೋಳಿಕ ಆಧಾರ ಅಲ್ಲದೆ ಸ್ಪರ್ಧಾತ್ಮಕವಾಗಿ 20 ನಗರಗಳನ್ನು ಸರ್ವಸಂಪನ್ನ ನಗರಿಗಳನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆಮಾಡಲಾಗಿದೆ.
ಮೊದಲ ಸ್ಥಾನವನ್ನು ಭುವನೇಶ್ವರ, ಎರಡನೇ ಸ್ಥಾನವನ್ನು ಪುಣೆ ಪಡೆದುಕೊಂಡಿವೆ ಎಂದು ನವದೆಹಲಿಯಲ್ಲಿಂದು ಘೋಷಿಸಿದರು. ಕರ್ನಾಟಕದ ದಾವಣಗೆರೆ ಮತ್ತು ಬೆಳಗಾವಿ ಈ ಪಟ್ಟಿಯಲ್ಲಿ ಈ ಇಪ್ಪತ್ತು ಸರ್ವಸಂಪನ್ನ ನಗರಿಗಳಲ್ಲಿ ಸೇರಿವೆ. ಒಂದು ಕೋಟಿ 52 ಲಕ್ಷ ಜನರು ಸರ್ವಸಂಪನ್ನ ನಗರಿಗಳನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಯಾವುದೇ ಭೌಗೋಳಿಕ ನೆಲೆಕಟ್ಟನ್ನು ಈ 20 ನಗರಗಳ ಆಯ್ಕೆಗೆ ಅಳವಡಿಸಿಕೊಳ್ಳಲಾಗಿಲ್ಲ.
ಜೈಪುರ, ಸೂರತ್, ಕೊಚ್ಚಿ, ಸೋಲಾಪುರ್, ಇಂದೋರ್, ದೆಹಲಿ, ಅಹಮದಾಬಾದ್, ಜಬಲ್‌ಪುರ್, ಗುವಾಹತಿ, ವಿಶಾಖಪಟ್ಟಣಂ, ಚೆನ್ನೈ, ಲೂದಿಯಾನ, ಭೋಪಾಲ್, ಕೊಯಮತ್ತೂರು, ಕಾಕಿನಾಡ ಮತ್ತು ಉದಯಪುರ ಉಳಿದ 16 ಸ್ಮಾರ್ಟ್‌ಸಿಟಿ ಆಯ್ಕೆ ನಗರಿಗಳಾಗಿವೆ. ಸ್ಮಾರ್ಟ್ ನಗರ ಮತ್ತು ಪಟ್ಟಣಗಳ ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಗೆ 50 ಸಾವಿರದ 802 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಸಮಗ್ರ ಕಾರ್ಯಕ್ರಮ, ಪ್ರಸ್ತಾವನೆಗಳ ಮೂಲಕ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ವೆಂಕಯ್ಯ ನಾಯ್ಡು ತಿಳಿಸಿದರು. ವಿವಿಧ ಹಂತಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಒಂದು ಕೋಟಿ 52 ಲಕ್ಷ ಮಂದಿ ಪಾಲ್ಗೊಂಡಿದ್ದರು. ಈ ಪ್ರಕ್ರಿಯೆ ಕೇವಲ ನಗರಗಳ ಅಭಿವೃದ್ಧಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಬೇಕು ಎನ್ನುವ ಉದ್ದೇಶವನ್ನೊಳಗೊಂಡಿದೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ. ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಸವಾಲುಗಳನ್ನು ಎದುರಿಸಿ ಸ್ಮಾರ್ಟ್ ಸಿಟಿಗಳು ನಗರ ಭಾರತವಾಗಿ ರೂಪುಗೊಳ್ಳಲಿ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಸ್ಮಾರ್ಟ್ ಸಿಟಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.