ಬೆಂಗಳೂರು : ಹಿಂದೂಗಳ ಭಾವನೆಗೆ ಧಕ್ಕೆ ಆರೋಪ - ಯೋಗೇಶ್ ಮಾಸ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಂಗಳೂರು, ಜ.30: ಹಿಂದೂಗಳ ಭಾವನೆಗೆ ದಕ್ಕೆ ತರುವಂತ ಹೇಳಿಕೆ ಮತ್ತು ಪುಸ್ತಕಗಳನ್ನು ಪ್ರಕಟಿಸಿರುವ ಸಾಹಿತಿ ಯೋಗೇಶ್ ಮಾಸ್ಟರ್ ವಿರುದ್ಧ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಜಾದ್ ಸೇನೆ ಒತ್ತಾಯಿಸಿದೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುಭಾಷ್ ಮಾತನಾಡಿ, ಸಾಹಿತಿ ಯೋಗೇಶ್ ಮಾಸ್ಟರ್ ತಮ್ಮ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಇದರಿಂದಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗಿವೆ. ಈ ಹಿನ್ನೆಲೆಯಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯೋಗೇಶ್ ಮಾಸ್ಟರ್ ತಮ್ಮ ಪುಸ್ತಕದಲ್ಲಿ ಬ್ರಹ್ಮ ಮಾಂಸಾಹಾರಿ, ಶ್ರೀಕೃಷ್ಣ ರಾಕ್ಷಸ ಮತ್ತು ಶ್ರೀರಾಮನ ಕಾಟದಿಂದ ಲಕ್ಷ್ಮಣ ಮತ್ತು ಸೀತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚರಿತ್ರೆಯನ್ನು ತಪ್ಪಾಗಿ ಅರ್ಥೈಸಿ ತಿರುಚಿ ಬರೆದಿದ್ದಾರೆ. ಈ ಹೇಳಿಕೆಗೆ ಪೂರಕವಾದ ಸಾಕ್ಷಾಧಾರಗಳು ಅವರ ಬಳಿಯಿದ್ದರೆ ಸ್ಪಷ್ಟಪಡಿಸಲಿ ಎಂದು ಸವಾಲೆಸೆದ ಅವರು, ಹಿಂದೂ ಧಾರ್ಮಿಕ ಭಾವನೆಗಳನ್ನು ಕೆದುಕುವಂತಹ ಹೇಳಿಕೆ ನೀಡದಂತೆ ಸರಕಾರ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಹಾಗೂ ಆಗಮಿಕರ ಸಂಘದ ಅಧ್ಯಕ್ಷ ಜಾನಕಿರಾಮ್, ಕಾರ್ಯದರ್ಶಿ ಪಿ.ಸೂರ್ಯ ನಾರಾಯಣ ಭಟ್ ಉಪಸ್ಥಿತರಿದ್ದರು.