ಹಣ-ಆಭರಣಗಳಿಗಾಗಿ ಸ್ನೇಹಿತೆಯ ಕೊಲೆ: ಮಹಿಳೆ ಸೇರಿ ಮೂವರು ಆರೋಪಿಗಳ ಸೆರೆ
ಬೆಂಗಳೂರು, ಫೆ.1: ಹಣ ಮತ್ತು ಆಭರಣಗಳಿಗಾಗಿ ಪತಿಯೊಂದಿಗೆಸೇರಿ ಸ್ನೇಹಿತೆಯನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಠಾಣಾ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ 40 ಸಾವಿರ ನಗದು ಸೇರಿ 4ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೆಂಗೇರಿಯ ನಿವಾಸಿಗಳಾದ ಮುಖ್ತಿಯಾರ್ ಅಹ್ಮದ್, ಸುಲ್ತಾನಾ ಖಾನಮ್ ಮತ್ತು ಸೈಯ್ಯದ್ ಸಲೀಂ ಎಂದು ಗುರುತಿಸಲಾಗಿದೆ. ಜ.4ರಂದು ಕೆಂಗೇರಿ ನಿವಾಸಿ ಮೊಹ್ಸಿನ್ ಖಾನ್ ಎಂಬವರು ತನ್ನ ತಾಯಿ ನೀಲೋಫರ್ (46) ಎಂಬವರು ಕಾಣೆಯಾಗಿದ್ದಾರೆಂದು ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ತನಿಖೆಕೈಗೊಂಡು ನೀಲೋಫರ್ ಅವರ ಸ್ನೇಹಿತೆ ಸುಲ್ತಾನಾ ಎಂಬಾಕೆಯ ಬಗ್ಗೆ ಮಾಹಿತಿ ಕಲೆಹಾಕಿ ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಕೆಂಗೇರಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತೆ ಮನೆಯಲ್ಲಿ ಹಣ, ಆಭರಣ ಇರುವುದು ತಿಳಿದು ಅದನ್ನು ದೋಚುವ ಉದ್ದೇಶದಿಂದ ಜ.4 ರಂದು ಸ್ನೇಹಿತೆ ನೀಲೂಫರ್ ಅವರನ್ನು ಮಾತನಾಡಬೇಕೆಂದು ತಮ್ಮ ಮನೆಗೆ ಕರೆಸಿಕೊಂಡು ಮಧ್ನಾಹ್ನ ಮೂರು ಗಂಟೆಯಲ್ಲಿ ಪತಿ ಮುಖ್ತಿಯಾರ್ ಜೊತೆ ಸೇರಿ ಚಪಾತಿ ಲಟ್ಟಣಿಗೆಯಿಂದ ತಲೆಗೆ ಹೊಡೆದು ಎಲೆಕ್ಟ್ರಿಕ್ ವೈರ್‌ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.