×
Ad

ಇನ್ವೆಸ್ಟ್-ಕರ್ನಾಟಕ ಸಮಾವೇಶ: ಪ್ರವೇಶ-ನಿರ್ಗಮನ, ವಾಹನ ನಿಲುಗಡೆ ವ್ಯವಸ್ಥೆ

Update: 2016-02-01 23:52 IST

ಬೆಂಗಳೂರು, ಫೆ.1: ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಫೆ.3ರಿಂದ 5ರ ವರೆಗೆ ಅರಮನೆ ಮೈದಾನ ಪ್ರವೇಶ, ನಿರ್ಗಮನ ಮತ್ತು ವಾಹನ ನಿಲುಗಡೆಗೆ ಕೆಳಕಂಡಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

ಗಣ್ಯರು: ಪಾಸ್ ಹೊಂದಿರುವ ಎಲ್ಲ್ಲ ಗಣ್ಯ ವ್ಯಕ್ತಿಗಳು ಮತ್ತು ಅತಿಗಣ್ಯ ವ್ಯಕ್ತಿಗಳ ವಾಹನಗಳು ಅರಮನೆಯ ಮುಖ್ಯಪ್ರವೇಶದ ಗೇಟ್ ನಂ. 1ರ ಮೂಲಕ ಪ್ರವೇಶಿಸಿ ಸಮಾವೇಶದ ಸ್ಥಳಕ್ಕೆ ಹೋಗಿ ಗಣ್ಯರನ್ನು ಇಳಿಸಿದ ಮೇಲೆ ವಾಹನಗಳನ್ನು ತೆಗೆದು ಕೊಂಡು ಹೋಗಿ ಪಾರ್ಕಿಂಗ್-‘ಎ’ ಸ್ಥಳದಲ್ಲಿ ನಿಲುಗಡೆ ಮಾಡುವುದು.

ವಾಹನ ಪಾಸ್ ಹೊಂದಿರುವ ಎಲ್ಲ ಗಣ್ಯರು/ಸರಕಾರಿ ಅಧಿಕಾರಿಗಳ ವಾಹನಗಳು ಅರಮನೆಯ ಮುಖ್ಯದ್ವಾರದ ಗೇಟ್ ನಂ.2ರ ಮೂಲಕ ಪ್ರವೇಶಿಸಿ ಟೆನ್ನಿಸ್ ಪೆವಿಲಿಯನ್ ರಸ್ತೆಗೆ ಮುಂದುವರೆದು ಸಾಗಿ ಸಮಾವೇಶದ ಸ್ಥಳಕ್ಕೆ ತಲುಪಲು ಸಿದ್ಧಪಡಿಸಿರುವ ಅಡ್ಡ ರಸ್ತೆಯಲ್ಲಿ ಇಳಿಸಿದ ಬಳಿಕ ವಾಹನಗಳನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್-‘ಬಿ’ ಸ್ಥಳದಲ್ಲಿ ನಿಲುಗಡೆ ಮಾಡುವುದು.

 ಸಮಾವೇಶದಲ್ಲಿ ಭಾಗವಹಿಸುವ ಎಲ್ಲ್ಲ ಪ್ರತಿನಿಧಿಗಳು ಅರಮನೆ ಮುಖ್ಯಪ್ರವೇಶದ ಗೇಟ್ ನಂ.1ರ ಮೂಲಕ ಪ್ರವೇಶ ಪಡೆದು ಎಡ ತಿರುವು ಪಡೆದು ಸ್ಕಾರ್ಪಿಯೋ ಸೆಕ್ಯೂರಿಟಿ ಕಡೆಗೆ ಸಾಗಿ ಪ್ರತಿನಿಧಿಗಳಿಗಾಗಿಯೇ ಕಲ್ಪಿಸಿರುವ ಪಾರ್ಕಿಂಗ್-‘ಡಿ’ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಾಹನಗಳಿಂದ ಇಳಿದು ನೋಂದಣಿ ಸ್ಥಳಕ್ಕೆ ಪ್ರವೇಶ ಪಡೆಯಲು ಪಾರ್ಕಿಂಗ್-‘ಡಿ’ ಸ್ಥಳದಲ್ಲಿಯೇ ಇರುವ ಹಗುರ ಎಲೆಕ್ಟ್ರಿಕ್ ಗಾಡಿಗಳ ಸೇವೆಯನ್ನು ಪಡೆಯುವುದು. ಮಲ್ಲೇಶ್ವರಂ ಮತ್ತು ರಮಣ ಮಹರ್ಷಿ ರಸ್ತೆ ಕಡೆಯಿಂದ ಬರುವ ಪ್ರತಿನಿಧಿಗಳು ಅರಮನೆ ಮೈದಾನದೊಳಕ್ಕೆ ಪ್ರವೇಶ ಪಡೆಯಲು ಗೇಟ್ ನಂ.3 ಕಾಮಧೇನು ಗೇಟ್ ಮೂಲಕ ಪ್ರವೇಶಿಸಿ ಪಾರ್ಕಿಂಗ್-‘ಡಿ’ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಾಹನಗಳಿಂದ ಇಳಿದು ನೋಂದಣಿ ಸ್ಥಳಕ್ಕೆ ಪ್ರವೇಶ ಪಡೆಯಲು ಸ್ಥಳದಲ್ಲೇ ಇರುವ ಹಗುರ ಎಲೆಕ್ಟ್ರಿಕ್ ಗಾಡಿಗಳ ಸೇವೆಯನ್ನು ಪಡೆಯುವುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳ ಮಾರ್ಗವಾಗಿ ನೇರವಾಗಿ ಬರುವ ಪ್ರತಿನಿಧಿಗಳು ಮೇಖ್ರಿವೃತ್ತದ ಮೇಲ್ಸೇತುವೆಗೆ ತಲುಪಲು ಇರುವ ಸರ್ವೀಸ್ ರಸ್ತೆಯಲ್ಲಿ ಸಾಗಿ ಮೇಖ್ರಿವೃತ್ತದಲ್ಲಿ ಜಯಮಹಲ್ ರಸ್ತೆಗೆ ಎಡ ತಿರುವು ಪಡೆದು ಸಾಗಿ ಬಲ ತಿರುವು ಪಡೆದು ಗೇಟ್ ನಂ.4 ಮಾನವಿಕಾಯಿ ಮಂಡಿ ರಸ್ತೆಯ ಮೂಲಕ ಅರಮನೆ ಮೈದಾನಕ್ಕೆ ಪ್ರವೇಶ ಪಡೆದು ಪಾರ್ಕಿಂಗ್-‘ಡಿ’ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಾಹನಗಳಿಂದ ಇಳಿದು ನೋಂದಣಿ ಸ್ಥಳಕ್ಕೆ ಪ್ರವೇಶ ಪಡೆಯಲು ಹಗುರ ಎಲೆಕ್ಟ್ರಿಕ್ ಗಾಡಿಗಳ ಸೇವೆಯನ್ನು ಪಡೆಯುವುದು.

‘ಇನ್ವೆಸ್ಟ್ ಕರ್ನಾಟಕ’ ಸಮಾವೇಶಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ನಿಯೋಜನೆಗೊಂಡ ಎಲ್ಲ್ಲ ಅಧಿಕಾರಿಗಳು ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಬೆಳಗ್ಗೆ 8:45ಗಂಟೆಯೊಳಗಾಗಿ ಅರಮನೆ ಮೈದಾನದೊಳಕ್ಕೆ ಪ್ರವೇಶವನ್ನು ಪಡೆಯುವುದು. ಎಲ್ಲ್ಲ ಪ್ರದರ್ಶಕ ವಾಹನಗಳು ಜಯಮಹಲ್ ರಸ್ತೆ ಅಥವಾ ರಮಣ ಮಹರ್ಷಿ ರಸ್ತೆಯಲ್ಲಿರುವ ಪ್ರವೇಶ ದ್ವಾರಗಳಿಂದ ಬೆಳಗ್ಗೆ 8ಗಂಟೆ ಒಳಗಾಗಿ ಅರಮನೆ ಮೈದಾನದೊಳಕ್ಕೆ ಪ್ರವೇಶ ಪಡೆಯುವುದು. ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲ ಪ್ರತಿನಿಧಿಗಳು ಬೆಳಗ್ಗೆ 9:15ರ ಒಳಗಾಗಿ ಅರಮನೆ ಮೈದಾನಕ್ಕೆ ಪ್ರವೇಶವನ್ನು ಪಡೆಯುವುದು. ಪ್ರಸಾರದಲ್ಲಿ ತೊಡಗಿಸಿಕೊಳ್ಳುವ ಮಾಧ್ಯಮದ ವಾಹನಗಳಿಗೆ ಸಮಾವೇಶಕ್ಕೆ ಹೊಂದಿಕೊಂಡಂತೆ ಇರುವ ಸ್ಕಾರ್ಪಿಯೋ ಸೆಕ್ಯೂರಿಟಿ ಆಫೀಸ್ ಬಳಿ ಸಜ್ಜುಗೊಳಿಸಿರುವ ಪಾರ್ಕಿಂಗ್-‘ಓ’ ಸ್ಥಳದಲ್ಲಿ ನಿಲುಗಡೆಗೆ ಅನುವು ಮಾಡಿಕೊಡಲಾಗಿದೆ. ಎಲ್ಲ್ಲ ವಾಹನಗಳು ಗೇಟ್ ನಂ.3 ಮತ್ತು ಗೇಟ್ ನಂ.4ರ ಮೂಲಕವೇ ಅರಮನೆ ಮೈದಾನದಿಂದ ನಿರ್ಗಮಿಸಬೇಕೆಂದು ಕೋರಲಾಗಿದೆ.

ಸಮಾವೇಶ ನಡೆಯುವ ಫೆ.3ರಿಂದ 5ರವರೆಗೆ ಬೆಳಗ್ಗೆ 8ಗಂಟೆಯಿಂದ ಅಪರಾಹ್ನ 12ಗಂಟೆ ನಡುವೆ ರಮಣ ಮಹರ್ಷಿ ರಸ್ತೆ, ಚಕ್ರವರ್ತಿ ಲೇಔಟ್ ರಸ್ತೆ, ಜಯರಾಮನ್ ರಸ್ತೆ ಮತ್ತು ಜಯಮಹಲ್ ರಸ್ತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸದೇ, ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಸಹಕರಿಸಲು ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News