ಬೆಂಗಳೂರಿನಲ್ಲಿ ವಿದೇಶಿ ವಿದ್ಯಾರ್ಥಿನಿಯನ್ನು ಅರೆನಗ್ನಗೊಳಿಸಿ ಥಳಿತ

Update: 2016-02-03 17:11 GMT

ಬೆಂಗಳೂರು, ಫೆ.3: ವಿದೇಶಿ ವಿದ್ಯಾರ್ಥಿನಿಯನ್ನು ಸಾರ್ವಜನಿಕವಾಗಿ ಅರೆನಗ್ನಗೊಳಿಸಿ ಹಾಗೂ ಆಕೆಯ ನೆರವಿಗೆ ಧಾವಿಸಿದ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿನ ಆಫ್ರಿಕ ರಾಯಭಾರಿ ಕಚೇರಿಯಲ್ಲಿ ದೂರು ದಾಖಲಾಗಿದೆ.

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಫ್ರಿಕಾದ ಟಾಂಜೇನಿಯಾ ಮೂಲದ ಸುಮಾರು 21 ವರ್ಷ ವಯಸ್ಸಿನ ಯುವತಿಗೆ ಬೆಂಗಳೂರಿನ ಹೆಸರುಘಟ್ಟ ಸಮೀಪ ಸಾರ್ವಜನಿಕರು ಅರೆನಗ್ನಗೊಳಿಸಿ ಥಳಿಸಿದ್ದಾರೆ. ಅಲ್ಲದೆ, ಆಕೆಗೆ ನೆರವು ನೀಡಲು ಯತ್ನಿಸಿದ ಸ್ನೇಹಿತರಿಗೆ ಮನಸೋ ಇಚ್ಛೆ ಹೊಡೆದಿರುವ ಘಟನೆ ರವಿವಾರ ಸಂಜೆ ಸಂಭವಿಸಿದೆ.


ಉದ್ರಿಕ್ತ ಗುಂಪಿನಿಂದ ತಪ್ಪಿಸಿಕೊಳ್ಳಲು ಬಿಎಂಟಿಟಿ ಬಸ್‌ಗೆ ಹತ್ತಿದ ಯುವತಿಯನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಹೊರದಬ್ಬಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಘಟನೆ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮಾತ್ರ ಮೂಕಪ್ರೇಕ್ಷಕರಾಗಿ ನಿಂತಿದ್ದರು ಎಂದು ಆಪಾದಿಸಲಾಗಿದೆ.
ಸಾರ್ವಜನಿಕವಾಗಿ ತನ್ನನ್ನು ನಗ್ನಗೊಳಿಸಿ ಥಳಿಸಿದ ಕುರಿತು ದೂರು ನೀಡಲು ಯುವತಿ ಪೊಲೀಸ್ ಠಾಣೆಗೆ ಹೋದರೆ, ಘಟನೆಗೆ ಕಾರಣವಾದ ನಿಜವಾದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚನೆ ನೀಡಿ, ದೂರು ಸ್ವೀಕರಿಸದೆ ಆಕೆಯನ್ನು ವಾಪಸ್ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ನಗರದ ಆಚಾರ್ಯ ಕಾಲೇಜಿನಲ್ಲಿ ಬಿಬಿಎ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತ ಯುವತಿ, ರವಿವಾರ ಸಂಜೆ ಸುಂದರೇಶನ್ ಎಂಬ ತಮ್ಮ ಕಾರು ಚಾಲಕನೊಂದಿಗೆ ಹೆಸರುಘಟ್ಟದತ್ತ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಓರ್ವ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಭಯಭೀತನಾದ ಸುಂದರೇಶನ್ ಕಾರನ್ನು ಅಪಘಾತ ನಡೆದ ಸ್ಥಳದಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ. ಘಟನೆಯನ್ನು ನೋಡಿದ ಸಾರ್ವಜನಿಕರು ಓಡಿ ಬಂದು ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿಯನ್ನು ಹೊರಗೆಳೆದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದಾರೆ ಎಂದು ದೂರಲಾಗಿದೆ.


ಈ ಸಂದರ್ಭದಲ್ಲಿ ಸ್ಥಳೀಯ ಯುವಕನೊಬ್ಬ ಆಕೆಗೆ ಬಟ್ಟೆ ನೀಡಲು ಮುಂದಾಗುತ್ತಿದ್ದಂತೆ ಉದ್ರಿಗ್ತ ಗುಂಪು ಆ ಯುವಕನನ್ನು ಹಿಡಿದು ಥಳಿಸಿದೆ. ಮಾಹಿತಿ ತಿಳಿದ ಆಕೆಯ ಆಫ್ರಿಕಾ ಮೂಲದ ಐವರು ಸ್ನೇಹಿತರು ಘಟನಾ ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಕ್ಷಣೆ ಮಾಡಲು ಮುಂದಾದರೆ, ಅವರ ಮೇಲೂ ಹಲ್ಲೆ ನಡೆಸಲಾಗಿದೆ.


 ಅಪಘಾತಕ್ಕೆ ಕಾರಣವಾದ ಯುವತಿಯ ಕಾರು ಹಾಗೂ ಆಕೆಯನ್ನು ರಕ್ಷಿಸಲು ಬಂದ ಸ್ನೇಹಿತರ ಕಾರಿಗೂ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದೆ. ಈ ಎಲ್ಲ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ವಿದ್ಯಾರ್ಥಿಗಳು ಆಲ್ ಆಫ್ರಿಕಾ ಸ್ಟುಡೆಂಟ್ಸ್ ಇನ್ ಬೆಂಗಳೂರು ಸಂಸ್ಥೆಯ ನೆರವಿನೊಂದಿಗೆ ನಗರದಲ್ಲಿರುವ ಆಫ್ರಿಕಾ ರಾಯಭಾರಿ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News